ಹುಡುಕಿ

2026.20.07 Il nuovo libro di Leone XIV “Disarmata e disarmante. La pace è un dono” (Libreria Editrice Vaticana)

"ಜಗದ್ಗುರು ಲಿಯೋರವರು: ಶಾಂತಿಯು ಅಣ್ವಸ್ತ್ರಗಳಿಂದಲ್ಲ, ನಿರಾಯುಧೀಕರಣದ ಮೂಲಕ ನಿರ್ಮಾಣವಾಗುತ್ತದೆ."

ವ್ಯಾಟಿಕನ್ ಪ್ರಕಾಶನ ಸಂಸ್ಥೆ ಜಗದ್ಗುರುಗಳ ನಿರಾಯುಧ ಮತ್ತು ನಿರಾಯುಧಗೊಳಿಸುವುದು: ಶಾಂತಿಯು ಒಂದು ವರ ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದೆ.ಅಲೆಸ್ಸಾಂದ್ರೋ ಬಾನ್‌ಫಿ ರವರ ಸಂಪಾದಕತ್ವದಲ್ಲಿ ಪ್ರಕಟವಾದ ಈ ಕೃತಿಯು, 2025ರ ಮೇ 8ರಂದು ಜಗದ್ಗುರುಗಳಾಗಿ ಆಯ್ಕೆಯಾದ ನಂತರ, ಶಾಂತಿಯ ಕುರಿತು ಜಗದ್ಗುರು XIVನೇ ಲಿಯೋರವರು ನೀಡಿದ ಭಾಷಣಗಳು, ಸಂದೇಶಗಳು ಮತ್ತು ಚಿಂತನೆಗಳನ್ನು ಒಟ್ಟುಗೂಡಿಸಿದೆ.ಪ್ರಸ್ತುತ ಈ ಪುಸ್ತಕವು ಇಟಾಲಿಯನ್ ಭಾಷೆಯಲ್ಲಿ ಪುಸ್ತಕ ಮಳಿಗೆಗಳಲ್ಲಿ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಇಂಗ್ಲಿಷ್ ಭಾಷೆಯಲ್ಲಿಯೂ ಲಭ್ಯವಾಗಲಿದೆ.

ವ್ಯಾಟಿಕನ್ ವರದಿ

"ನಿಮಗೆ ಶಾಂತಿ ಇರಲಿ" ಎಂಬ ಪುನರುತ್ಥಾನಗೊಂಡ ಯೇಸುಕ್ರಿಸ್ತರ ಮೊದಲ ಶುಭಾಶಯವೇ ಇಂದಿಗೂ ಮಾನವಕುಲಕ್ಕೆ ಅತ್ಯಂತ ಅಗತ್ಯವಾದ ಸಂದೇಶವಾಗಿದೆ. ಜಗದ್ಗುರುಗಳು ತಮ್ಮ ಚಿಂತನೆಗಳಲ್ಲಿ, ಶಾಂತಿಯು ಸುಲಭವಾಗಿ ದೊರೆಯುವ ವರವಲ್ಲ ಎಂದು ನೆನಪಿಸುತ್ತಾರೆ. ಯೇಸುಕ್ರಿಸ್ತರು ದ್ವೇಷ, ಹಿಂಸೆ ಮತ್ತು ಶಿಲುಬೆಯ ಮರಣವನ್ನು ಅನುಭವಿಸಿದರೂ, ನಿರಾಯುಧರಾಗಿಯೇ ಪ್ರೀತಿ, ಕ್ಷಮೆ ಮತ್ತು ಪುನರುತ್ಥಾನದ ಮೂಲಕ ಲೋಕಕ್ಕೆ ನಿಜವಾದ ಶಾಂತಿಯ ಮಾರ್ಗವನ್ನು ತೋರಿಸಿದರು. ಎರಡು ಸಾವಿರ ವರ್ಷಗಳ ಹಿಂದೆ ಹೇಗಿತ್ತೋ, ಇಂದಿಗೂ ಸುವಾರ್ತೆಯ ಈ ಸಂದೇಶವು ಅಷ್ಟೇ ಪ್ರಸ್ತುತವಾಗಿದೆ.

ಇಂದು ಜಗತ್ತಿನ ಅನೇಕ ರಾಷ್ಟ್ರಗಳು ಯುದ್ಧದ ಕತ್ತಲೆಯಲ್ಲಿವೆ. ಉಕ್ರೇನ್, ಮಧ್ಯಪ್ರಾಚ್ಯ, ಸುಡಾನ್, ಮ್ಯಾನ್ಮಾರ್, ಯೆಮೆನ್, ಕಾಂಗೋ ಸೇರಿದಂತೆ ಹಲವೆಡೆ ನಡೆಯುತ್ತಿರುವ ಸಂಘರ್ಷಗಳು ಲಕ್ಷಾಂತರ ಜನರ ಬದುಕನ್ನು ನಾಶಮಾಡುತ್ತಿವೆ. ಈ ಪರಿಸ್ಥಿತಿಯನ್ನು ಜಗದ್ಗುರು ಫ್ರಾನ್ಸಿಸ್ ರವರು "ತುಣುಕು-ತುಣುಕಾಗಿ ನಡೆಯುತ್ತಿರುವ ಮೂರನೇ ವಿಶ್ವಯುದ್ಧ" ಎಂದು ಬಣ್ಣಿಸಿದ್ದರು. ಈ ಹಿನ್ನೆಲೆಯಲ್ಲಿ ಜಗದ್ಗುರು XIVನೇ ಲಿಯೋರವರು, ಶಾಂತಿಯು ಕೇವಲ ರಾಜಕೀಯ ನಾಯಕರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಹೊಣೆಗಾರಿಕೆಯೂ ಆಗಿದೆ ಎಂದು ಒತ್ತಿ ಹೇಳುತ್ತಾರೆ.

ಶಾಂತಿಯು ನಮ್ಮ ದೈನಂದಿನ ಬದುಕಿನಿಂದಲೇ ಆರಂಭವಾಗುತ್ತದೆ. ಕುಟುಂಬದಲ್ಲಿ, ನೆರೆಹೊರೆಯಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಸಮಾಜದಲ್ಲಿ ಪರಸ್ಪರ ಗೌರವ, ಕ್ಷಮೆ, ಕರುಣೆ ಹಾಗೂ ಪ್ರೀತಿಯಿಂದ ನಡೆದುಕೊಳ್ಳುವಾಗ ಶಾಂತಿಯ ಅಡಿಪಾಯ ನಿರ್ಮಾಣವಾಗುತ್ತದೆ. ಒಂದು ನಗು, ಒಂದು ಕ್ಷಮೆ, ಒಂದು ಸಾಂತ್ವನದ ಮಾತು ಮತ್ತು ಒಂದು ಕರುಣೆಯ ಕಾರ್ಯವೂ ಶಾಂತಿಯ ಸಂಸ್ಕೃತಿಯನ್ನು ಬೆಳೆಸಬಲ್ಲವು. ಇತರರನ್ನು ದೂಷಿಸುವ ಅಥವಾ ದ್ವೇಷಿಸುವ ಮನೋಭಾವಕ್ಕಿಂತ, ಪ್ರೀತಿಯ ಮನೋಭಾವವೇ ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆ.

ಜಗದ್ಗುರುಗಳ ಪ್ರಕಾರ, ನಿಜವಾದ ಶಾಂತಿಯು ಸತ್ಯದ ಮೇಲೆ ನಿರ್ಮಾಣವಾಗಬೇಕು. ಅಣ್ವಸ್ತ್ರಗಳು ಅಥವಾ ಶಸ್ತ್ರಾಸ್ತ್ರಗಳ ಸಂಗ್ರಹವು ಶಾಂತಿಯನ್ನು ತರುವುದಿಲ್ಲ ನಿರಾಯುಧೀಕರಣವೇ ಶಾಂತಿಯ ನಿಜವಾದ ಮಾರ್ಗವಾಗಿದೆ. ಹಿರೋಷಿಮಾ ಮತ್ತು ನಾಗಾಸಾಕಿಯ ದುರಂತಗಳು ಯುದ್ಧದ ಭೀಕರ ಪರಿಣಾಮಗಳನ್ನು ಮಾನವಕುಲಕ್ಕೆ ನೆನಪಿಸುತ್ತವೆ. ಆದ್ದರಿಂದ ಸಂವಾದ, ರಾಜತಾಂತ್ರಿಕತೆ ಮತ್ತು ಪರಸ್ಪರ ವಿಶ್ವಾಸವೇ ರಾಷ್ಟ್ರಗಳ ಭವಿಷ್ಯವನ್ನು ಸುರಕ್ಷಿತಗೊಳಿಸಬಲ್ಲವು.

ಶಾಂತಿಗೆ ಸಾಕ್ಷಿಗಳ ಅಗತ್ಯವಿದೆ ಎಂದು ಜಗದ್ಗುರುಗಳು ನೆನಪಿಸುತ್ತಾರೆ. ಭ್ರಷ್ಟಾಚಾರವನ್ನು ತಿರಸ್ಕರಿಸಿದವರು, ಬಡವರ ಸೇವೆ ಮಾಡಿದವರು, ನ್ಯಾಯ ಮತ್ತು ಸೌಹಾರ್ದಕ್ಕಾಗಿ ಶ್ರಮಿಸಿದವರು ಹಾಗೂ ತಮ್ಮ ಆತ್ಮಸಾಕ್ಷಿಯ ಧ್ವನಿಯನ್ನು ಅನುಸರಿಸಿದ ಅನೇಕ ಮಹಿಳೆಯರು ಮತ್ತು ಪುರುಷರು ಶಾಂತಿಯ ನಿಜವಾದ ನಿರ್ಮಾತೃಗಳಾಗಿದ್ದಾರೆ. ಒಬ್ಬ ವ್ಯಕ್ತಿಯ ಜಾಗೃತ ಮನಸ್ಸು ಸಹ ಇಡೀ ಜಗತ್ತನ್ನು ವಿನಾಶದಿಂದ ರಕ್ಷಿಸಬಲ್ಲದು ಎಂಬುದನ್ನು ಇತಿಹಾಸವು ನಮಗೆ ಕಲಿಸುತ್ತದೆ.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ನಿರಾಶೆಗೆ ಬದಲಾಗಿ ಭರವಸೆಯನ್ನು ಅಪ್ಪಿಕೊಳ್ಳುವಂತೆ ಎಲ್ಲರನ್ನು ಆಹ್ವಾನಿಸುತ್ತಾರೆ. ಯೇಸುಕ್ರಿಸ್ತರ ಪ್ರೀತಿ, ದಾನಶೀಲತೆ ಮತ್ತು ಇತರರಿಗಾಗಿ ತನ್ನ ಜೀವವನ್ನೇ ಅರ್ಪಿಸುವ ಮನೋಭಾವವೇ ಹಿಂಸೆ, ದ್ವೇಷ ಮತ್ತು ಮರಣದ ಮೇಲೆ ವಿಜಯ ಸಾಧಿಸುತ್ತದೆ. ದೇವರು ನಮ್ಮನ್ನು ಅಹಿಂಸೆಯ ಮಾರ್ಗದಲ್ಲಿ ನಡೆಸಲಿ ವಿಶ್ವಾಸಿಗಳು ಹಾಗೂ ಸದ್ಭಾವನೆಯುಳ್ಳ ಪ್ರತಿಯೊಬ್ಬರೂ ಶಾಂತಿಯ ನಿರ್ಮಾತೃಗಳಾಗಿ ಕಾರ್ಯನಿರ್ವಹಿಸಲಿ ಮತ್ತು ಪ್ರತಿಯೊಬ್ಬರೂ ತಮ್ಮ ಜೀವನವನ್ನೇ ಶಾಂತಿಯ ಸೇವೆಗೆ ಸಮರ್ಪಿಸಲಿ ಎಂಬುದು ಅವರ ಪ್ರಾರ್ಥನೆಯಾಗಿದೆ.

21 ಜುಲೈ 2026, 16:32