ಯುರೋಪಿನ ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ಜಗದ್ಗುರು XIVನೇ ಲಿಯೋರವರ ಪ್ರಾರ್ಥನೆ.
ವ್ಯಾಟಿಕನ್ ವರದಿ
ಜಗದ್ಗುರು ಲಿಯೋರವರು ಫ್ರಾನ್ಸ್ ಮತ್ತು ಸ್ಪೇನ್‌ನ ವಿವಿಧ ಭಾಗಗಳಲ್ಲಿ ವ್ಯಾಪಿಸಿರುವ ಭೀಕರ ಕಾಡ್ಗಿಚ್ಚಿನಿಂದ ಬಾಧಿತರಾದವರೊಂದಿಗೆ ತಮ್ಮ ಆತ್ಮೀಯ ಸಾನ್ನಿಧ್ಯವನ್ನು ವ್ಯಕ್ತಪಡಿಸಿದರು. ಅಲ್ಲದೆ, ಕಾಡ್ಗಿಚ್ಚಿನ ಸಂತ್ರಸ್ತರು ಹಾಗೂ ಅವಿರತವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ತುರ್ತು ಸೇವೆಗಳ ಸಿಬ್ಬಂದಿಗಾಗಿ ಪ್ರಾರ್ಥಿಸುವಂತೆ ಅವರು ವಿಶ್ವಾಸಿಗಳಿಗೆ ಕರೆ ನೀಡಿದರು.
ನೈಋತ್ಯ ಫ್ರಾನ್ಸ್ ಮತ್ತು ಮಧ್ಯ ಸ್ಪೇನಿನಲ್ಲಿ ವ್ಯಾಪಕವಾಗಿ ಹರಡಿರುವ ಕಾಡ್ಗಿಚ್ಚು ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಮಾಡಿದ್ದು, ಅನೇಕ ಸಮುದಾಯಗಳಿಗೆ ಭಾರಿ ಅಪಾಯವನ್ನುಂಟುಮಾಡಿ, ತುರ್ತು ರಕ್ಷಣಾ ಸೇವೆಗಳ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡಿದೆ. ಈ ದುರಂತದಿಂದ ಸಂಕಷ್ಟದಲ್ಲಿರುವ ಜನರ ಕಡೆಗೆ ಪೋಪ್ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.
ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಭಾನುವಾರದ ತ್ರಿಕಾಲ ಪ್ರಾರ್ಥನೆಯ ಬಳಿಕ ಮಾತನಾಡಿದ ಅವರು, "ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್ ಮತ್ತು ಸ್ಪೇನಿನ ವಿವಿಧ ಪ್ರದೇಶಗಳಿಗೆ ತೀವ್ರ ಹಾನಿಯನ್ನುಂಟುಮಾಡಿರುವ ಭೀಕರ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ, ಈ ದುರಂತದಿಂದ ಬಾಧಿತರಾದ ಎಲ್ಲರೊಂದಿಗೆ ನನ್ನ ಆತ್ಮೀಯ ಸಾನ್ನಿಧ್ಯವನ್ನು ವ್ಯಕ್ತಪಡಿಸುತ್ತೇನೆ. ಅಲ್ಲದೆ, ಸಂತ್ರಸ್ತರಿಗಾಗಿ ಮತ್ತು ದಣಿವರಿಯದೆ ಸೇವೆ ಸಲ್ಲಿಸುತ್ತಿರುವ ತುರ್ತು ರಕ್ಷಣಾ ಸಿಬ್ಬಂದಿಗಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ನಾನು ಆಹ್ವಾನಿಸುತ್ತೇನೆ," ಎಂದು ಹೇಳಿದರು.
ಕಳೆದ ಕೆಲವು ದಿನಗಳಲ್ಲಿ ತೀವ್ರ ಉಷ್ಣತೆ, ಬಲವಾದ ಗಾಳಿಗಳು ಮತ್ತು ದೀರ್ಘಕಾಲದ ಬರಗಾಲದಿಂದ ಉಲ್ಬಣಗೊಂಡಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಅವಿರತವಾಗಿ ಹೋರಾಡುತ್ತಿದ್ದು, ಇದರ ಪರಿಣಾಮವಾಗಿ ಲಕ್ಷಾಂತರ ಜನರು ತಮ್ಮ ನಿವಾಸಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ.
ವಿಶ್ವ ಅಜ್ಜ-ಅಜ್ಜಿಯರ ಮತ್ತು ವಯೋವೃದ್ಧರ ದಿನ
ಜುಲೈ 26ರಂದು ಆಚರಿಸಲಾದ ಆರನೇ ವಿಶ್ವ ಅಜ್ಜ-ಅಜ್ಜಿಯರ ಮತ್ತು ವಯೋವೃದ್ಧರ ದಿನವನ್ನು ಜಗದ್ಗುರು XIVನೇ ಲಿಯೋರವರು ಸ್ಮರಿಸಿದರು. ಈ ವರ್ಷದ ಆಚರಣೆಯ ಧ್ಯೇಯವಾಕ್ಯವು ಪ್ರವಾದಿ ಯೆಶಾಯನ ಗ್ರಂಥದಿಂದ ತೆಗೆದುಕೊಳ್ಳಲಾಗಿದೆ: "ನಾನು ನಿನ್ನನ್ನು ಎಂದಿಗೂ ಮರೆಯುವುದಿಲ್ಲ" (ಯೆಶಾಯ 49:15).
"ಧರ್ಮ ಸಭೆಗೂ ಸಮಾಜಕ್ಕೂ ವಯೋವೃದ್ಧರು ಅಮೂಲ್ಯ ಕೊಡುಗೆಯಾಗಿರುವುದಕ್ಕಾಗಿ ನಾವು ಎಲ್ಲರೂ ಒಟ್ಟಾಗಿ ಪ್ರಭುವಿಗೆ ಕೃತಜ್ಞತೆ ಸಲ್ಲಿಸೋಣ," ಎಂದು ಜಗದ್ಗುರುಗಳು ಹೇಳಿದರು.
ವಯೋವೃದ್ಧರ ಅಮೂಲ್ಯ ಪಾತ್ರವನ್ನು ಗೌರವಿಸಿ ಮೌಲ್ಯೀಕರಿಸುವಂತೆ ಅವರು ಎಲ್ಲರನ್ನು ಪ್ರೋತ್ಸಾಹಿಸಿದರು. ಅಲ್ಲದೆ, ಅಜ್ಜ-ಅಜ್ಜಿಯರು ಮತ್ತು ವಯೋವೃದ್ಧರು ಯಾವಾಗಲೂ ಅವರಿಗೆ ಸಲ್ಲಬೇಕಾದ ಕಾಳಜಿ, ಪ್ರೀತಿ ಮತ್ತು ಅಗತ್ಯ ಸಹಾಯವನ್ನು ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
