ಹುಡುಕಿ

Pope Leo XIV holds the weekly general audience in the Paul VI Hall at the Vatican

ಜಗದ್ಗುರುಗಳ ಆಗಸ್ಟ್ ತಿಂಗಳ ಪ್ರಾರ್ಥನಾ ಉದ್ದೇಶ: ‘ನಗರದಲ್ಲಿ ಸುವಾರ್ತಾ ಪ್ರಸಾರಕ್ಕಾಗಿ’.

ಜಗದ್ಗುರು ಲಿಯೋರವರು ಆಗಸ್ಟ್ ತಿಂಗಳ ತಮ್ಮ ಪ್ರಾರ್ಥನಾ ಉದ್ದೇಶವನ್ನು ಪ್ರಕಟಿಸಿದ್ದು, ‘ನಗರಗಳಲ್ಲಿ ಸುವಾರ್ತಾ ಪ್ರಸಾರಕ್ಕಾಗಿ’ ಪ್ರಾರ್ಥಿಸುವಂತೆ ಕಥೋಲಿಕರನ್ನು ಆಹ್ವಾನಿಸಿದ್ದಾರೆ. ಗದ್ದಲ ಮತ್ತು ಧಾವಂತದ ನಡುವೆ ಜೀವನದ ಅರ್ಥವನ್ನು ಹುಡುಕುತ್ತಿರುವ ಕೋಟ್ಯಂತರ ಜನರೊಂದಿಗೆ ಪ್ರಭು ಸದಾ ಇರಲೆಂದು ಪ್ರಾರ್ಥಿಸೋಣ ಎಂದು ಅವರು ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ 

ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣ ಸಿದ್ಧಪಡಿಸುವ ಮಾಸಿಕ “ಜಗದ್ಗುರುಗಳೊಂದಿಗೆ ಪ್ರಾರ್ಥಿಸಿ” ವಿಡಿಯೋವನ್ನು ಅವರು ಶುಕ್ರವಾರ ಬಿಡುಗಡೆ ಮಾಡಿದರು.

ತಮ್ಮ ಪ್ರಾರ್ಥನೆಯಲ್ಲಿ ಜಗದ್ಗುರು ಲಿಯೋರವರು, “ನಮ್ಮ ಬೀದಿಗಳು ಮತ್ತು ಚೌಕಗಳ ಮೂಲಕ ಸಂಚರಿಸುವ” “ಉತ್ತಮ ಕುರುಬ”ನನ್ನು ಉದ್ದೇಶಿಸಿ, “ಎತ್ತರದ ಕಟ್ಟಡಗಳಿಗೂ ವಿನಯಪೂರ್ಣ ಬಡಾವಣೆಗಳಿಗೂ ಪ್ರವೇಶಿಸಿ,” “ಗದ್ದಲ ಮತ್ತು ಧಾವಂತದ ನಡುವೆ ಜೀವನದ ಅರ್ಥವನ್ನು ಹುಡುಕುತ್ತಿರುವ” ಕೋಟ್ಯಂತರ ಜನರೊಂದಿಗೆ “ಮೌನವಾಗಿ ಜೊತೆಯಾಗಿ ನಡೆಯುವಂತೆ” ಪ್ರಾರ್ಥಿಸುತ್ತಾರೆ.

ಚಿಕಾಗೋದಲ್ಲಿ ಜನಿಸಿದ ಜಗದ್ಗುರುಗಳು, ನಗರಗಳು “ಸ್ವಾತಂತ್ರ್ಯ ಮತ್ತು ಅವಕಾಶಗಳ” ತಾಣಗಳಾಗಬೇಕಾದರೂ, ಅವು “ಅಪರಿಚಿತತೆ ಮತ್ತು ಏಕಾಂಗಿತನದ ಸ್ಥಳಗಳಾಗಿಯೂ” ಪರಿವರ್ತನೆಯಾಗಬಹುದು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಆದ್ದರಿಂದ, ನಗರ ಪರಿಸರಗಳು ಸುವಾರ್ತೆಯನ್ನು ಸಾರಲು “ಫಲವತ್ತಾದ ನೆಲ”ವಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ವಿಶ್ವಾಸಿಗಳು “ಸರಳವಾದ ಮತ್ತು ಪ್ರೀತಿಪೂರ್ಣ ಕಾರ್ಯಗಳನ್ನು” ಕೈಗೊಳ್ಳಲಿ, ಹಾಗೆಯೇ “ಮುಂದೆ ಸಾಗುವ” ಸಮುದಾಯವಾಗಿ ಒಟ್ಟಾಗಿ ಇಂತಹ ಕಾರ್ಯಗಳನ್ನು ಮಾಡಲಿ, ತಮ್ಮ ಸಾನ್ನಿಧ್ಯ ಮತ್ತು ಸಹೋದರತ್ವದ ಮೂಲಕ ನಿರ್ಲಕ್ಷ್ಯಭಾವ ಹಾಗೂ ಏಕಾಂಗಿತನವನ್ನು ಎದುರಿಸಲಿ ಎಂದು ಪವಿತ್ರ ಪಿತರೂ ಪ್ರಾರ್ಥಿಸಿದ್ದಾರೆ.

ಇಂದು ವಿಶ್ವದ ಜನಸಂಖ್ಯೆಯ ಸುಮಾರು 45 ಪ್ರತಿಶತದಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಜನಸಂಖ್ಯೆಯ ಬೆಳವಣಿಗೆಯಿಂದಾಗಿ ನಗರಗಳಲ್ಲಿ ಜನರ ಹೆಚ್ಚಿನ ಸಾಂದ್ರತೆ ಉಂಟಾಗಿದ್ದು, ಇದರಿಂದ ಸಾಮಾಜಿಕ ಮತ್ತು ಸಮುದಾಯದ ಹಲವು ಸವಾಲುಗಳು ಎದುರಾಗಿವೆ. ಅವುಗಳಲ್ಲಿ ಅನೇಕ ಜನರ, ವಿಶೇಷವಾಗಿ ಯುವಜನರ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಏಕಾಂಗಿತನವೂ ಪ್ರಮುಖವಾದುದಾಗಿದೆ.

ಜಗದ್ಗುರುಗಳು ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣ

1844ರಲ್ಲಿ “ಪ್ರೇಷಿತರ ಪ್ರಾರ್ಥನೆ” ಎಂಬ ಹೆಸರಿನಲ್ಲಿ ಸ್ಥಾಪಿತವಾದ ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣ, ಯೇಸುಸಭೆಗೆ ವಹಿಸಲ್ಪಟ್ಟಿರುವ ಒಂದು ಪಾಂಟಿಫಿಕಲ್ ಕಾರ್ಯವಾಗಿದೆ.

2020ರ ಡಿಸೆಂಬರ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಈ ಪಾಂಟಿಫಿಕಲ್ ಕಾರ್ಯವನ್ನು ವ್ಯಾಟಿಕನ್ ಪ್ರತಿಷ್ಠಾನವಾಗಿ ಸ್ಥಾಪಿಸಿದರು. 2024ರ ಜುಲೈನಲ್ಲಿ ಅದರ ಅಂತಿಮ ನಿಯಮಾವಳಿಗಳಿಗೆ ಅನುಮೋದನೆ ನೀಡಿದರು.

ಇದು 92ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ದೇವರ ಧ್ಯೇಯಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮನೋಭಾವದಿಂದ ಬದುಕಲು ಬಯಸುವ 2.2 ಕೋಟಿಗೂ ಅಧಿಕ ಜನರನ್ನು ಒಳಗೊಂಡ ಆಧ್ಯಾತ್ಮಿಕ ಸಮುದಾಯವನ್ನು ರೂಪಿಸಿದೆ.

ಈ ಜಾಲತಾಣದ ಧ್ಯೇಯದ ಕೇಂದ್ರಬಿಂದುವಾಗಿರುವುದು ಜಗದ್ಗುರುಗಳ ಮಾಸಿಕ ಪ್ರಾರ್ಥನಾ ಉದ್ದೇಶಗಳು. ಇವುಗಳ ಮೂಲಕ ಮಾನವಕುಲದ ಮುಂದಿರುವ ತುರ್ತು ಸವಾಲುಗಳು ಹಾಗೂ ಧರ್ಮ ಸಭೆಯ ಧ್ಯೇಯದ ಕುರಿತು ಗಮನಹರಿಸುವಂತೆ ಅದರ ಸದಸ್ಯರನ್ನು ಆಹ್ವಾನಿಸಲಾಗುತ್ತದೆ.

31 ಜುಲೈ 2026, 00:00