ಹುಡುಕಿ

ಪವಿತ್ರ ಭೂಮಿ, ಉಗಾಂಡಾ ಮತ್ತು ಇಟಲಿಯ 164 ಮಕ್ಕಳನ್ನು ಒಳಗೊಂಡ 'ಎಬಿಎಫ್ ವಾಯ್ಸಸ್' ಗಾಯನ ಮಂಡಳಿಯೊಂದಿಗೆ ಜಗದ್ಗುರು XIVನೇ ಲಿಯೋರವರು. ಪವಿತ್ರ ಭೂಮಿ, ಉಗಾಂಡಾ ಮತ್ತು ಇಟಲಿಯ 164 ಮಕ್ಕಳನ್ನು ಒಳಗೊಂಡ 'ಎಬಿಎಫ್ ವಾಯ್ಸಸ್' ಗಾಯನ ಮಂಡಳಿಯೊಂದಿಗೆ ಜಗದ್ಗುರು XIVನೇ ಲಿಯೋರವರು.  (ANSA)

ಜಗದ್ಗುರುಗಳು: ತನ್ನ ಮೂಲದತ್ತ ಹರಿಯುವ ಹೊಳೆಯಂತೆ, ಸಂಗೀತವೂ ನಮ್ಮನ್ನು ದೇವರತ್ತ ಕರೆದೊಯ್ಯುತ್ತದೆ.

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಪಾಂಟಿಫಿಕಲ್ ಉದ್ಯಾನವನಗಳಲ್ಲಿನ ಬೊರ್ಗೊ ಲೌದಾತೊ ಸಿಯಲ್ಲಿ ನಡೆದ ‘ಶಾಂತಿಯ ಗೀತಗಾನ’ ಎಂಬ ಪ್ರಾರ್ಥನಾ ಕೂಟದಲ್ಲಿ ಜಗದ್ಗುರು ಲಿಯೋರವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಆಂದ್ರಿಯಾ ಬೊಚೆಲ್ಲಿ ಹಾಗೂ ಉಗಾಂಡಾ, ಪವಿತ್ರ ಭೂಮಿ ಮತ್ತು ಇಟಲಿಯ ಮಕ್ಕಳ ಧ್ವನಿಗಳಿಂದ ಕೂಡಿದ ಎಬಿಎಫ್ ವಾಯ್ಸಸ್ ಗಾಯನ ವೃಂದದೊಂದಿಗೆ ಪ್ರಾರ್ಥನೆಯಲ್ಲಿ ಒಂದಾದರು.

ವ್ಯಾಟಿಕನ್ ವರದಿ

ಸಂಗೀತವು ರಹಸ್ಯದ ಅಂಚನ್ನು ದಾಟಿ ನಮ್ಮನ್ನು ಇನ್ನೊಂದು ಆಧ್ಯಾತ್ಮಿಕ ಅನುಭವದತ್ತ ಕರೆದೊಯ್ಯಬಲ್ಲದು. ಹೊಳೆಯೊಂದನ್ನು ಅದರ ಮೂಲದತ್ತ ಹಿಂಬಾಲಿಸಿದಂತೆ, ಹಾಡಿನ ಸೌಂದರ್ಯವೂ ನಮ್ಮನ್ನು ದೇವರತ್ತ ಮುನ್ನಡೆಸುತ್ತದೆ. ಜಗತ್ತು ತಣಿಸಲಾಗದ ಅರ್ಥ ಮತ್ತು ಸಂತೋಷದ ನಮ್ಮ ಆಂತರಿಕ ದಾಹವನ್ನು ದೇವರೇ ತಣಿಸಬಲ್ಲರು ಎಂಬ ಸಂದೇಶವನ್ನು ಜಗದ್ಗುರು XIVನೇ ಲಿಯೋರವರು ಜುಲೈ 29ರಂದು ಕ್ಯಾಸ್ಟೆಲ್ ಗಾಂಡೋಲ್ಫೊದ ಪಾಂಟಿಫಿಕಲ್ ಉದ್ಯಾನವನದಲ್ಲಿರುವ ಬೊರ್ಗೊ ಲೌದಾತೊ ಸಿಯಲ್ಲಿ ನಡೆದ ‘ಶಾಂತಿಯ ಗೀತಗಾನ’ ಪ್ರಾರ್ಥನಾ ಕೂಟದಲ್ಲಿ ನೀಡಿದರು.

ಪ್ರಾಚೀನ ‘ಮೆಥುಸಲೇಹ’ ಎಂಬ ಹೋಮ್ ಓಕ್ ಮರದ ನೆರಳಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕ ಆಂದ್ರಿಯಾ ಬೊಚೆಲ್ಲಿ ಮತ್ತು ಪವಿತ್ರ ಭೂಮಿ, ಉಗಾಂಡಾ ಹಾಗೂ ಇಟಲಿಯ 164 ಮಕ್ಕಳು ಮತ್ತು ಯುವಜನರಿಂದ ಕೂಡಿದ ಎಬಿಎಫ್ ವಾಯ್ಸಸ್ ಗಾಯನ ವೃಂದ ಭಾಗವಹಿಸಿತು. ಸಂಗೀತದ ಮೇಲಿನ ಪ್ರೀತಿಯಿಂದ ಒಂದಾದ ಈ ಮಕ್ಕಳು ಹಾಗೂ ಯುವಜನರಲ್ಲಿ ಅನೇಕರು ಯುದ್ಧ, ಬಡತನ ಮತ್ತು ಸಂಕಷ್ಟಗಳಿಂದ ಕೂಡಿದ ಜೀವನವನ್ನು ಅನುಭವಿಸುತ್ತಿದ್ದಾರೆ. ಅವರ ಸುಂದರ ಗಾಯನವು ವಿಭಿನ್ನ ಧ್ವನಿಗಳನ್ನು ಒಂದೇ ಸಾಮರಸ್ಯದಲ್ಲಿ ಒಗ್ಗೂಡಿಸುವ ಸಂಗೀತದ ಶಕ್ತಿಯನ್ನು ತೋರಿಸಿತು.

ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗುವ ದೇವದೂತರು ಮತ್ತು ಸಂತರ ‘ಗಾಯನ ವೃಂದ’ವನ್ನು ಸ್ಮರಿಸಿದ ಜಗದ್ಗುರುಗಳು, ಅವರ ಸಾಮರಸ್ಯವು ಕೇವಲ ನಿರಂತರವಾಗಿ ಹಾಡುವುದರಿಂದ ಉಂಟಾಗುವುದಲ್ಲ, ದೇವರ ಸಾನ್ನಿಧ್ಯದ ಮೇಲಿನ ಅವರ ಸಾಮೂಹಿಕ ಧ್ಯಾನದಿಂದ ಅದು ಮೂಡುತ್ತದೆ ಎಂದು ಹೇಳಿದರು. ಅದೇ ರೀತಿಯಲ್ಲಿ ಸಂಗೀತದ ಸೌಂದರ್ಯವೂ ನಮ್ಮನ್ನು  ಮೀರಿ, ನಮ್ಮಿಂದ ಒಬ್ಬರೇ ಸೃಷ್ಟಿಸಲು ಸಾಧ್ಯವಾಗದ ಯಾವುದೋ ಮಹತ್ತರ ಅನುಭವದತ್ತ ಕರೆದೊಯ್ಯುತ್ತದೆ. ಅದು ನಮ್ಮೊಳಗೆ ಹೊಸ ದಿಗಂತವನ್ನು ತೆರೆದು, ಅದರತ್ತ ಸಾಗಬೇಕೆಂಬ ಹಂಬಲವನ್ನು ಉಂಟುಮಾಡುತ್ತದೆ.

“ಹೊಳೆಯನ್ನು ಅದರ ಮೂಲದತ್ತ ಹಿಂಬಾಲಿಸಬಹುದಾದಂತೆ, ಸಂಗೀತದ ಸೌಂದರ್ಯವೂ ಸೌಂದರ್ಯದ ಸ್ವರೂಪವೇ ಆಗಿರುವ ದೇವರನ್ನು ಭೇಟಿಯಾಗಲು ನಮ್ಮನ್ನು ಆಹ್ವಾನಿಸುತ್ತದೆ,” ಎಂದು ಜಗದ್ಗುರುಗಳು ಹೇಳಿದರು. ಯುವಜನರು ದೇವರು ನೀಡಿರುವ ತಮ್ಮ ಪ್ರತಿಭೆಗಳನ್ನು ಬೆಳೆಸಿಕೊಂಡು, ಅವುಗಳ ಮೂಲಕ ದೇವರತ್ತ ಸಾಗಬೇಕು ಎಂದು ಅವರು ಪ್ರೋತ್ಸಾಹಿಸಿದರು. ಜಗತ್ತಿನ ಯಾವುದೇ ವಸ್ತುವೂ ಅರ್ಥ ಮತ್ತು ಸಂತೋಷಕ್ಕಾಗಿ ಮಾನವನಲ್ಲಿರುವ ದಾಹವನ್ನು ಸಂಪೂರ್ಣವಾಗಿ ತಣಿಸಲಾರದು, ಮನುಷ್ಯನು ಮಹತ್ತರ ಸಂಗತಿಗಳಿಗಾಗಿ ಸೃಷ್ಟಿಸಲ್ಪಟ್ಟಿದ್ದಾನೆ ಎಂದು ಅವರು ನೆನಪಿಸಿದರು. “ಪವಿತ್ರ ತಂದೆ ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ನಿಮಗಾಗಿ, ನಿಮ್ಮ ಕುಟುಂಬಗಳಿಗಾಗಿ ಹಾಗೂ ನಿಮ್ಮ ದೇಶಗಳಿಗಾಗಿ ಪ್ರಾರ್ಥಿಸುತ್ತಾರೆ,” ಎಂದು ಹೇಳಿದ ಅವರು, ಹಿಂಸೆಯಿಂದ ಬಳಲುತ್ತಿರುವ ವಿಶ್ವದ ಎಲ್ಲ ಭಾಗಗಳಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಮರಣದ 800ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸೃಷ್ಟಿಯ ಸಂರಕ್ಷಣೆ, ಜನರ ನಡುವಿನ ಸಾಮರಸ್ಯ, ಮಾನವ ಘನತೆ ಮತ್ತು ನಂಬಿಕೆ-ಏಕತೆ ಎಂಬ ನಾಲ್ಕು ಪ್ರಮುಖ ವಿಷಯಗಳನ್ನು ಸಂಗೀತ, ಪ್ರಾರ್ಥನೆ ಮತ್ತು ವಾಚನಗಳ ಮೂಲಕ ಪ್ರತಿಬಿಂಬಿಸಲಾಯಿತು. ಲೌದಾತೊ ಸಿ ಉನ್ನತ ಶಿಕ್ಷಣ ಕೇಂದ್ರ ಮತ್ತು ಆಂದ್ರಿಯಾ ಬೊಚೆಲ್ಲಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ಮೂಲಕ ಸಂಗೀತವು ಶಾಂತಿ, ಸಹೋದರತ್ವ ಮತ್ತು ಮಾನವ ಘನತೆಯನ್ನು ಬೆಳೆಸುವ ಶಕ್ತಿಯಾಗಿದೆ ಎಂಬ ಸಂದೇಶವನ್ನು ಸಾರಲಾಯಿತು. ಕಾರ್ಯಕ್ರಮವು ಪ್ರಭುವಿನ ಪ್ರಾರ್ಥನೆ, ಶಾಂತಿಯ ಸಂಕೇತ ವಿನಿಮಯ ಮತ್ತು ಪೋಪ್ ಅವರ ಪ್ರೇಷಿತರ ಆಶೀರ್ವಾದದೊಂದಿಗೆ ಮುಕ್ತಾಯಗೊಂಡಿತು. ಬಳಿಕ ಬೊಚೆಲ್ಲಿ ಮತ್ತು ಗಾಯನ ವೃಂದವು ‘ಅಮೇಜಿಂಗ್ ಗ್ರೇಸ್’ ಹಾಡನ್ನು ಪ್ರಸ್ತುತಪಡಿಸಿ, ಮಕ್ಕಳ ತಮ್ಮ ತಮ್ಮ ದೇಶಗಳಿಂದ ಸಿದ್ಧಪಡಿಸಿದ್ದ ಉಡುಗೊರೆಗಳನ್ನು ಜಗದ್ಗುರು XIVನೇ ಲಿಯೋರವರಿಗೆ ನೀಡಿದರು.

29 ಜುಲೈ 2026, 20:37