ಹುಡುಕಿ

ಜಗದ್ಗುರು XIVನೇ ಲಿಯೋರವರ ಪರಿಪತ್ರ ‘ಮ್ಯಾಗ್ನಿಫಿಕಾ ಹುಮಾನಿತಾಸ್’. ಜಗದ್ಗುರು XIVನೇ ಲಿಯೋರವರ ಪರಿಪತ್ರ ‘ಮ್ಯಾಗ್ನಿಫಿಕಾ ಹುಮಾನಿತಾಸ್’.  (AFP or licensors)

ಎಐ ಕುರಿತು ಜಗದ್ಗುರುಗಳು: ಸರ್ವಸಾಮಾನ್ಯ ಹಿತವನ್ನು ಉತ್ತೇಜಿಸಲು ಪ್ರತಿಯೊಬ್ಬರೊಂದಿಗೂ ಸಂವಾದ ನಡೆಸುವುದು ಅತ್ಯಂತ ಮಹತ್ವದ್ದು.

ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರ ಸಹಿಯೊಂದಿಗೆ ‘ಎಐ ಫಾರ್ ಗುಡ್ ಗ್ಲೋಬಲ್ ಸಮ್ಮಿಟ್’ ಗೆ ಕಳುಹಿಸಿದ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು‘ಮ್ಯಾಗ್ನಿಫಿಕಾ ಹುಮಾನಿತಾಸ್’ ಎಂಬ ತಮ್ಮ ಪರಿಪತ್ರವು ಕೃತಕ ಬುದ್ಧಿಮತ್ತೆ ಕುರಿತು ಅನೇಕ ಜನರ ಅಭಿಪ್ರಾಯಗಳನ್ನು ಆಲಿಸಿ ರೂಪುಗೊಂಡದ್ದಾಗಿದ್ದು, ಈ ತಂತ್ರಜ್ಞಾನದ ಬೆಳವಣಿಗೆಯಿಂದ ಉಂಟಾಗುತ್ತಿರುವ ಋಣಾತ್ಮಕ ಪರಿಣಾಮಗಳನ್ನೂ ಗಮನದಲ್ಲಿಟ್ಟುಕೊಂಡು ರಚಿಸಲ್ಪಟ್ಟಿದೆ ಎಂದು ಒತ್ತಿಹೇಳಿದ್ದಾರೆ.

ವ್ಯಾಟಿಕನ್ ವರದಿ

ಕೃತಕ ಬುದ್ಧಿಮತ್ತೆಯೊಂದಿಗೆ ಸಂವಹನ ನಡೆಸುವ ಹಾಗೂ ಅದರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವಿವಿಧ ಹಿನ್ನೆಲೆಯ ಅನೇಕ ಜನರ ಮಾತುಗಳನ್ನು ಆಲಿಸಿದ ಪರಿಣಾಮವಾಗಿಯೇ ಮ್ಯಾಗ್ನಿಫಿಕಾ ಹುಮಾನಿತಾಸ್ ಎಂಬ ಪರಿಪತ್ರವು ರೂಪುಗೊಂಡಿತು. ಆದರೆ, ಅಲ್ಗೋರಿದಮ್‌ಗಳ ದುರುಪಯೋಗದ ಸಾಧ್ಯತೆಗಳ ಕುರಿತ ಆತಂಕಕಾರಿ ವರದಿಗಳು ಮತ್ತು ನಿರ್ಣಾಯಕ ಕ್ಷೇತ್ರಗಳಲ್ಲಿ ಮಾನವನ ನಿರ್ಧಾರ ಸಾಮರ್ಥ್ಯ ಕ್ಷೀಣಿಸುತ್ತಿರುವ ವಾಸ್ತವಿಕತೆಯೂ ಈ ಪರಿಪತ್ರದ ರಚನೆಗೆ ಪ್ರೇರಣೆಯಾಯಿತು ಎಂದು ಜಗದ್ಗುರು XIVನೇ ಲಿಯೋರವರು ತಿಳಿಸಿದ್ದಾರೆ.

2026ರ ಜುಲೈ 8ರಂದು ಪ್ರಕಟಗೊಂಡ ಈ ಸಂದೇಶಕ್ಕೆ ಅವರ ಪರವಾಗಿ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು ಸಹಿ ಹಾಕಿದ್ದಾರೆ.

ಈ ಸಂದೇಶವನ್ನು ಜುಲೈ 7ರಿಂದ 10ರವರೆಗೆ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆಯುತ್ತಿರುವ ‘ಎಐ ಫಾರ್ ಗುಡ್ ಗ್ಲೋಬಲ್ ಸಮ್ಮಿಟ್’ ಅಂಗವಾಗಿ ಕಳುಹಿಸಲಾಗಿದೆ. ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು), ಇತರ ವಿಶ್ವಸಂಸ್ಥೆಯ ಸಂಸ್ಥೆಗಳು ಹಾಗೂ ಸ್ವಿಸ್ ಸರ್ಕಾರದ ಸಹಭಾಗಿತ್ವದಲ್ಲಿ ಆಯೋಜಿಸಲಾದ ಈ ಶೃಂಗಸಭೆಯು, ಕೃತಕ ಬುದ್ಧಿಮತ್ತೆ ಜಗತ್ತನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಜಾಗತಿಕ ಮಹತ್ವದ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಉದ್ದೇಶ ಹೊಂದಿದೆ.

“ಮಾನವಕುಲದ ಭವಿಷ್ಯಕ್ಕೆ ಸಂಬಂಧಿಸಿದ ನಮ್ಮ ಕಾಲದ ಅತ್ಯಂತ ಮಹತ್ವದ ಪ್ರಶ್ನೆಗಳನ್ನು ಎತ್ತಿಹಿಡಿಯುವ ಕೃತಕ ಬುದ್ಧಿಮತ್ತೆಯ ಕುರಿತು ನೀವು ಚಿಂತನೆ ನಡೆಸಲು ಒಂದಾಗಿ ಸೇರಿರುವ ಈ ಸಂದರ್ಭದಲ್ಲಿ, ಈ ಯುಗಾಂತರಕಾರಿ ತಿರುವಿನ ಘಟ್ಟದಲ್ಲಿ ವಿಶೇಷವಾಗಿ ಸಂವಾದಕ್ಕೆ ಜಗದ್ಗುರುಗಳ ಅಧಿಕಾರ ಸ್ಥಳ ಸದಾ ಸನ್ನದ್ಧವಾಗಿದ್ದು, ತನ್ನ ಉಪಸ್ಥಿತಿಯನ್ನು ನಿಮಗೆ ಭರವಸೆಯಾಗಿ ತಿಳಿಸಲು ಜಗದ್ಗುರುಗಳು ಬಯಸುತ್ತಾರೆ” ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವ ಕುರಿತು ತಮ್ಮ ಪರಿಪತ್ರವಾದ ಮ್ಯಾಗ್ನಿಫಿಕಾ ಹುಮಾನಿತಾಸ್ನಲ್ಲಿ ಜಗದ್ಗುರು XIVನೇ ಲಿಯೋರವರು, “ಸರ್ವಸಾಮಾನ್ಯ ಹಿತವನ್ನು ಸಾಧಿಸಲು ಹಾಗೂ ಪ್ರತಿಯೊಬ್ಬರಿಗೂ ಘನತೆಯುಳ್ಳ ಜೀವನವನ್ನು ಉತ್ತೇಜಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವ ಉದ್ದೇಶದಿಂದ ಎಲ್ಲ ವರ್ಗದ ಜನರೊಂದಿಗೆ ಸಂವಾದ ನಡೆಸಲು” ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸಂದೇಶವು ನೆನಪಿಸಿದೆ.

“ಅಪಾರವಾದ ದುಃಖವನ್ನು ನಿವಾರಿಸುವ ಸಾಮರ್ಥ್ಯವುಳ್ಳ ತಂತ್ರಜ್ಞಾನಗಳನ್ನು ಪ್ರಾಮಾಣಿಕ ಉತ್ಸಾಹದಿಂದ ಅಭಿವೃದ್ಧಿಪಡಿಸುತ್ತಿರುವ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಮಾತುಗಳನ್ನು, ನ್ಯಾಯಸಮ್ಮತ ನಿಯಮಗಳನ್ನು ರೂಪಿಸಲು ನಿರಂತರವಾಗಿ ಶ್ರಮಿಸುತ್ತಿರುವ ರಾಜಕೀಯ ನಾಯಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಅನುಭವಗಳನ್ನು, ಹಾಗೂ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಆಳವಾದ ಕಾಳಜಿ ಹೊಂದಿರುವ ಪೋಷಕರು ಮತ್ತು ಶಿಕ್ಷಕರ ಧ್ವನಿಯನ್ನು ಆಲಿಸಿದ ಪರಿಣಾಮವಾಗಿಯೇ ಮ್ಯಾಗ್ನಿಫಿಕಾ ಹುಮಾನಿತಾಸ್ ರೂಪುಗೊಂಡಿದೆ” ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಕೃತಕ ಬುದ್ಧಿಮತ್ತೆಯು ವ್ಯಕ್ತಿಗಳ ಮತ್ತು ಸಮಾಜದ ಮೇಲೆ ಉಂಟುಮಾಡಿರುವ ಋಣಾತ್ಮಕ ಪರಿಣಾಮಗಳೂ ಈ ಪರಿಪತ್ರದ ರಚನೆಗೆ ಪ್ರಮುಖ ಪ್ರೇರಣೆಯಾಗಿವೆ.

ಕೊನೆಯಲ್ಲಿ ಸಂದೇಶವು ಹೀಗೆ ಹೇಳುತ್ತದೆ: “ರಚನಾತ್ಮಕ ಹಾಗೂ ಪರಸ್ಪರ ಸಮೃದ್ಧಿಗೊಳಿಸುವ ಚರ್ಚೆಗಳಲ್ಲಿ ನೀವು ತೊಡಗಿಸಿಕೊಳ್ಳಲಿ ಎಂದು ಹಾರೈಸುತ್ತಾ, ‘ಮಾನವಕುಲದ ಸೇವೆ’ಗಾಗಿ ನೀವು ಕೈಗೊಂಡಿರುವ ಪ್ರಯತ್ನಗಳಿಗಾಗಿ ಜಗದ್ಗುರುಗಳು ತಮ್ಮ ಪ್ರಾರ್ಥನೆಗಳ ಭರವಸೆಯನ್ನು ಸಂತೋಷದಿಂದ ನೀಡುತ್ತಾರೆ.”

08 ಜುಲೈ 2026, 16:36