ಕಾಸೆಲ್ ಗಾಂಡೋಲ್ಫೊದಲ್ಲಿ ಜಗದ್ಗುರು XIVನೇ ಲಿಯೋರವರು ಬಡವರ ಮಧ್ಯಾಹ್ನದ ಊಟದ 2025ರ ಕಾರ್ಯಕ್ರಮ. ಕಾಸೆಲ್ ಗಾಂಡೋಲ್ಫೊದಲ್ಲಿ ಜಗದ್ಗುರು XIVನೇ ಲಿಯೋರವರು ಬಡವರ ಮಧ್ಯಾಹ್ನದ ಊಟದ 2025ರ ಕಾರ್ಯಕ್ರಮ.  (ANSA)

ಬಡವರೊಂದಿಗೆ ಜಗದ್ಗುರುಗಳ ಭೋಜನ: ದುರ್ಬಲತೆಯೇ ಸಮುದಾಯಗಳ ಶಕ್ತಿಯ ಮೂಲ.

ಜಗದ್ಗುರುಗಳು ಶೀಘ್ರದಲ್ಲೇ 200 ಅಶಕ್ತ ಹಾಗೂ ಸಂಕಷ್ಟದಲ್ಲಿರುವ ಜನರೊಂದಿಗೆ ನಡೆಸಲಿರುವ ಭೋಜನದ ಹಿನ್ನೆಲೆಯಲ್ಲಿ, ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ಸಂವಹನ ಸಂಯೋಜಕರು, ಈ ಕಾರ್ಯಕ್ರಮವು ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಳ್ಳುವ ಧರ್ಮ ಸಭೆಯ ಮುಕ್ತ ಮನೋಭಾವದ ಸಂಕೇತವಾಗಿದ್ದು, ಅಗತ್ಯದಲ್ಲಿರುವವರಿಗೆ ಧರ್ಮ ಸಭೆಯ ಸುರಕ್ಷಿತ ಆಶ್ರಯವಾಗಿರುವುದನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ವ್ಯಾಟಿಕನ್ ನ್ಯೂಸ್‌ಗೆ ವಿವರಿಸಿದರು.

ವ್ಯಾಟಿಕನ್ ವರದಿ

ಭರವಸೆ, ಸ್ವಾಗತ ಮತ್ತು ಒಳಗೊಳ್ಳುವಿಕೆಯ ಸಂದೇಶ ಹೊತ್ತ ‘ಜಗದ್ಗುರುಗಳೊಂದಿಗೆ ಭೋಜನ’

ಜುಲೈ 11, ಶನಿವಾರ, ಕ್ಯಾಸ್ಟೆಲ್ ಗಾಂಡೋಲ್ಫೊದ ಜಗದ್ಗುರುಗಳ ತೋಟದಲ್ಲಿ ನಡೆಯಲಿರುವ "ಜಗದ್ಗುರುಗಳೊಂದಿಗೆ ಭೋಜನ" ಕಾರ್ಯಕ್ರಮದ ಹಿಂದಿನ ಸ್ಫೂರ್ತಿದಾಯಕ ಮೌಲ್ಯಗಳು ಭರವಸೆ, ಸ್ವಾಗತ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಮನೋಭಾವವಾಗಿದೆ.

ರೋಮಿನ ಧರ್ಮಪ್ರಾಂತ್ಯ ಹಾಗೂ ಅದರೊಂದಿಗೆ ಕಾರ್ಯನಿರ್ವಹಿಸುತ್ತಿರುವ ದತ್ತಿ ಸಂಸ್ಥೆಗಳ ಆರೈಕೆಯಲ್ಲಿರುವ, ಸಂಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿರುವ 35 ಮಕ್ಕಳನ್ನು ಒಳಗೊಂಡ 200 ಮಂದಿ, ಈ ಅಪೂರ್ವ ಪರಿಸರದ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಅನುಭವದ ನಡುವೆ ಒಂದು ದಿನವನ್ನು ಕಳೆಯಲಿದ್ದಾರೆ.

"ಈ ಸ್ಥಳವು ಅತ್ಯಂತ ಅಮೂಲ್ಯವಾದುದು. ಏಕೆಂದರೆ ಇದು ಸುಮಾರು 400 ವರ್ಷಗಳ ಕಾಲ ಜಗತ್ತಿಗೆ ಮುಚ್ಚಲ್ಪಟ್ಟಿತ್ತು. ಬಳಿಕ ಜಗದ್ಗುರು ಫ್ರಾನ್ಸಿಸ್ ರವರು ಅದನ್ನು ಎಲ್ಲರಿಗೂ ತೆರೆದರು ಈಗ ಜಗದ್ಗುರು ಲಿಯೋರವರು ಅದನ್ನು ಸಂಪೂರ್ಣವಾಗಿ ಎಲ್ಲರಿಗೂ ಮುಕ್ತಗೊಳಿಸಿದ್ದಾರೆ. ಇಂದು ಈ ಜನರನ್ನು ನಾವು ಗೌರವಾನ್ವಿತ ಅತಿಥಿಗಳಾಗಿ ಸ್ವಾಗತಿಸುತ್ತಿದ್ದೇವೆ," ಎಂದು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ಸಂವಹನ ಸಂಯೋಜಕಿ ಡೊನಟೆಲ್ಲಾ ಪಾರಿಸಿ ವ್ಯಾಟಿಕನ್ ನ್ಯೂಸ್‌ಗೆ ತಿಳಿಸಿದರು.

ಕಾರ್ಯಕ್ರಮವು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ಮಹಾನಿರ್ದೇಶಕರಾದ ಕಾರ್ಡಿನಲ್ ಫಾಬಿಯೊ ಬಾಜಿಯೋರವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಗಲಿದೆ. ದಾನಧರ್ಮ ಸೇವೆಯ ಡಿಕಾಸ್ಟರಿಯ ಪ್ರೀಫೆಕ್ಟ್ ಆರ್ಚ್‌ಬಿಷಪ್ ಲೂಯಿಸ್ ಮರಿನ್ ದೆ ಸಾನ್ ಮಾರ್ಟಿನ್ ಸಹಬಲಿದಾನ ಆಚರಿಸಲಿದ್ದಾರೆ.

ನಂತರ ಅತಿಥಿಗಳಿಗೆ ಉಪಾಹಾರ ನೀಡಲಾಗುವುದು. ಬಳಿಕ ಬೊರ್ಗೊ ಲೌದಾತೋ ಸಿ' ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಆ ಸ್ಥಳದ ಪರಿಚಯಾತ್ಮಕ ಪ್ರವಾಸ ಏರ್ಪಡಿಸಲಾಗಿದೆ.

ಧರ್ಮ ಸಭೆ ಎಲ್ಲರಿಗೂ ಮುಕ್ತವಾದ ಒಂದು ಕುಟುಂಬ

"ಲೌದಾತೋ ಸಿ' ಗ್ರಾಮವು ರೋಮಿನ ಇತಿಹಾಸವನ್ನು ತನ್ನೊಳಗೆ ಹೊತ್ತಿದೆ. ಇಲ್ಲಿ ಚಕ್ರವರ್ತಿ ಡೊಮಿಟಿಯನ್ ಅವರ ಅರಮನೆಯ ಅವಶೇಷಗಳಿವೆ. ಅಲ್ಲದೆ, 17ನೇ ಶತಮಾನದಿಂದ ಅನೇಕ ಜಗದ್ಗುರುಗಳು ವಿಶ್ರಾಂತಿಗಾಗಿ ಇಲ್ಲಿಗೆ ಆಗಮಿಸುತ್ತಿದ್ದರು," ಎಂದು ಪಾರಿಸಿ ಹೇಳಿದರು.

"ಇದು ಪ್ರಕೃತಿಯ ಅದ್ಭುತ ಸೌಂದರ್ಯದ ಮಧ್ಯೆ ನೆಲೆಗೊಂಡಿದ್ದು, 300ಕ್ಕೂ ಹೆಚ್ಚು ವಿವಿಧ ಜಾತಿಗಳಿಗೆ ಸೇರಿದ 4,000ಕ್ಕೂ ಅಧಿಕ ಸಸ್ಯಗಳನ್ನು ಒಳಗೊಂಡ ಸಸ್ಯೋದ್ಯಾನವನ್ನು ಹೊಂದಿದೆ."

ಈ ಸೌಂದರ್ಯ ಮತ್ತು ಸಾಮರಸ್ಯದ ಅಮೂಲ್ಯ ಸಂಪತ್ತು ಈಗ ಯಾವುದೇ ತಡೆಗೋಡೆಗಳಿಲ್ಲದ ಧರ್ಮ ಸಭೆಯ ಸಂಕೇತವಾಗಿ ತನ್ನ ಬಾಗಿಲುಗಳನ್ನು ತೆರೆದಿದೆ.

"ಧರ್ಮ ಸಭೆಯ ಯಾವಾಗಲೂ ಎಲ್ಲರಿಗೂ, ವಿಶೇಷವಾಗಿ ಸಮಾಜದ ಅಂಚಿನಲ್ಲಿರುವವರಿಗೆ ತೆರೆದಿರಬೇಕು ಎಂಬುದೇ ಇದರ ಸಂದೇಶ," ಎಂದು ಅವರು ವಿವರಿಸಿದರು.

"ಜಗದ್ಗುರು ಲಿಯೋರವರು ಈ ವಿಷಯವನ್ನು ಪದೇ ಪದೇ ಒತ್ತಿಹೇಳುತ್ತಾರೆ. ಈ ಕಾರ್ಯಕ್ರಮವು ಲಾಂಪೆಡುಸಾ ದ್ವೀಪಕ್ಕೆ ಅವರು ನಡೆಸಿದ ಭೇಟಿಯ ಮುಂದುವರಿದ ಹೆಜ್ಜೆಯಾಗಿದೆ ಎಂದು ನಾವು ನಂಬುತ್ತೇವೆ. ಅಲ್ಲಿ ಅವರು ಮೆಡಿಟರೇನಿಯನ್ ಸಮುದ್ರದ ಮಧ್ಯದಲ್ಲಿರುವ ಆ ಪುಟ್ಟ ದ್ವೀಪದತ್ತ ವಿಶ್ವದ ಗಮನ ಸೆಳೆದರು. ಉತ್ತಮ ಭವಿಷ್ಯದ ಹುಡುಕಾಟದಲ್ಲಿ, ಯುದ್ಧ, ಬಡತನ ಮತ್ತು ಸಾಮಾಜಿಕ ಅನ್ಯಾಯಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸಾವಿರಾರು ಜನರು ಸಮುದ್ರದಲ್ಲಿ ಪ್ರಾಣ ಕಳೆದುಕೊಂಡ ದುರಂತಗಳಿಗೆ ಆ ದ್ವೀಪವು ಮೌನ ಸಾಕ್ಷಿಯಾಗಿದೆ."

"ಆದ್ದರಿಂದ ಈ ಕಾರ್ಯಕ್ರಮದ ಮುನ್ನಾದಿನದಲ್ಲಿ, ಧರ್ಮ ಸಭೆ ಎಲ್ಲರಿಗೂ ಮುಕ್ತವಾಗಿದೆ ಅದು ಒಂದು ಕುಟುಂಬ, ಒಂದು ಸಮುದಾಯ ಮತ್ತು ಅತ್ಯಂತ ಅಗತ್ಯದಲ್ಲಿರುವವರಿಗೆ ಸುರಕ್ಷಿತ ಆಶ್ರಯವಾಗಿದೆ ಎಂಬುದನ್ನು ನಾವು ಮತ್ತೊಮ್ಮೆ ದೃಢಪಡಿಸುತ್ತಿದ್ದೇವೆ," ಎಂದು ಅವರು ಹೇಳಿದರು.

ಅಗತ್ಯದಲ್ಲಿರುವವರು ನಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತಾರೆ

ಈ ಕಾರ್ಯಕ್ರಮವು ಪ್ರತಿವರ್ಷ ಬೇರೆ ಬೇರೆ ಧರ್ಮಪ್ರಾಂತ್ಯಗಳ ಜನರನ್ನು ಸ್ವಾಗತಿಸಬೇಕೆಂಬುದು ಆಯೋಜಕರ ಆಶಯವಾಗಿದೆ.

ಕಳೆದ ವರ್ಷ ಭಾಗವಹಿಸಿದ್ದವರು ಕ್ಯಾಸ್ಟೆಲ್ ಗಾಂಡೋಲ್ಫೊ ಇರುವ ಅಲ್ಬಾನೊ ಧರ್ಮಪ್ರಾಂತ್ಯದವರು ಆಗಿದ್ದರೆ, ಈ ವರ್ಷ ಅವರು ರೋಮಿನ ಧರ್ಮಪ್ರಾಂತ್ಯದಿಂದ ಆಗಮಿಸುತ್ತಿದ್ದಾರೆ.

"ಈ ಬಾರಿ ನಿರಾಶ್ರಿತರು, ಮಕ್ಕಳೊಂದಿಗೆ ಏಕಾಂಗಿಯಾಗಿ ಬದುಕುತ್ತಿರುವ ತಾಯಂದಿರು, ಲೌದಾತೋ ಸಿ' ಗ್ರಾಮದಲ್ಲಿ ತರಬೇತಿ ಪೂರ್ಣಗೊಳಿಸಿ, ಹೊಸ ಆತ್ಮವಿಶ್ವಾಸದೊಂದಿಗೆ ಸಮಾಜದಲ್ಲಿ ಬೆರೆತು ಉದ್ಯೋಗದತ್ತ ಹೆಜ್ಜೆಯಿಡುತ್ತಿರುವವರು ಹಾಗೂ ಅಂಗವಿಕಲರು ಭಾಗವಹಿಸಲಿದ್ದಾರೆ. ಸಮಾಜ ಮತ್ತು ಧರ್ಮ ಸಭೆಯಲ್ಲಿ ಸಾಮಾನ್ಯವಾಗಿ 'ಸಹಾಯದ ಅಗತ್ಯವಿರುವವರು' ಎಂದು ಪರಿಗಣಿಸಲ್ಪಡುವ ವರ್ಗವನ್ನು ಅವರು ಪ್ರತಿನಿಧಿಸುತ್ತಾರೆ," ಎಂದು ಪಾರಿಸಿ ಹೇಳಿದರು.

"ಆದರೆ ವಾಸ್ತವವಾಗಿ, ಲೌದಾತೋ ಸಿ' ಗ್ರಾಮದಲ್ಲಿ ನಾವು ಪ್ರತಿದಿನ ಅನುಭವಿಸುವುದು ಬೇರೆ. ಕೊಡುವವರು ಇವರೇ. ತಮ್ಮೆಲ್ಲವನ್ನೂ ಅವರು ನೀಡುತ್ತಾರೆ. ತಮ್ಮ ಸಾನ್ನಿಧ್ಯದಿಂದ ಈ ಗ್ರಾಮವನ್ನು, ಅಲ್ಲದೆ ಇಡೀ ಧರ್ಮ ಸಭೆಯನ್ನೇ ಸಮೃದ್ಧಗೊಳಿಸುತ್ತಾರೆ. ಸಮಾಜವನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಅವರು ನಮ್ಮನ್ನು ಆಹ್ವಾನಿಸುತ್ತಾರೆ. ದುರ್ಬಲತೆಯನ್ನೇ ನಮ್ಮ ಸಮುದಾಯಗಳ ಹೊಸ ಶಕ್ತಿಯ ಮೂಲವಾಗಿ ಕಾಣುವ ದೃಷ್ಟಿಕೋನವನ್ನು ಅವರು ನಮಗೆ ನೀಡುತ್ತಾರೆ."

ಉದಾರತೆಯ ಸಾಕ್ಷಿ

ಮಧ್ಯಾಹ್ನದ ಭೋಜನವನ್ನು ರೋಮಿನ "ಎಲ್'ಇಸೋಲಾ ದೆಲ್ಲಾ ಪಿಜ್ಜಾ" ರೆಸ್ಟೋರೆಂಟ್ ಉದಾರವಾಗಿ ಪ್ರಾಯೋಜಿಸಿದೆ. ಬೆಳಗಿನ ಉಪಾಹಾರವನ್ನು ಅಲ್ಬಾನೊದ "ಬಾರ್ ಡುಒಮೊ" ಒದಗಿಸಿದ್ದು, ಈ ಸಂಸ್ಥೆ ಲೌದಾತೋ ಸಿ' ಗ್ರಾಮದ ಯೋಜನೆಯೊಂದಿಗೆ ನಿಕಟವಾಗಿ ಕೈಜೋಡಿಸಿದೆ.

"ಇಂತಹ ಒಂದು ಕಾರ್ಯಕ್ರಮಕ್ಕೆ ಅವರು ನೀಡಿರುವ ಉದಾರ ಬೆಂಬಲ ಮತ್ತು ಸಹಕಾರ ನಿಜಕ್ಕೂ ಸುಂದರವಾದ ಸಾಕ್ಷಿಯಾಗಿದೆ," ಎಂದು ಪಾರಿಸಿ ಹೇಳಿದರು.

ಅತಿಥಿಗಳ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯನ್ನು ಗೌರವಿಸುವ ರೀತಿಯಲ್ಲಿ ಇಟಾಲಿಯನ್ ಆಹಾರವನ್ನು ಒಳಗೊಂಡ ಮೆನು ಸಿದ್ಧಪಡಿಸಲಾಗಿದೆ.

ಸೃಷ್ಟಿಗಳ ನಡುವೆ ನಾವು ಸಹ ಒಂದು ಸೃಷ್ಟಿ

ಈ ಕಾರ್ಯಕ್ರಮವು ಕ್ಯಾಸ್ಟೆಲ್ ಗಾಂಡೋಲ್ಫೊ ಹಾಗೂ ಲೌದಾತೋ ಸಿ' ಗ್ರಾಮದ ಬಗ್ಗೆ ಜಗದ್ಗುರು ಲಿಯೋರವರು ಅವರ ಆಳವಾದ ಮೆಚ್ಚುಗೆಯನ್ನು ಪ್ರತಿಬಿಂಬಿಸುತ್ತದೆ.

"ಜಗದ್ಗುರುಗಳು ಅವರ ತೋಟಗಳನ್ನು ಅತ್ಯಂತ ಪ್ರೀತಿಸುತ್ತಾರೆ ಮತ್ತು ಈ ಯೋಜನೆಯ ಪ್ರಗತಿಯನ್ನು ಬಹಳ ನಿಕಟವಾಗಿ ಗಮನಿಸುತ್ತಿದ್ದಾರೆ," ಎಂದು ಪಾರಿಸಿ ಹೇಳಿದರು.

ಜೂನ್ 19ರಂದು ವ್ಯಾಟಿಕನ್‌ನಲ್ಲಿ ನಡೆದ 'ಬೊರ್ಗೊ ಲೌದಾತೋ ಸಿ' ಸಂವಾದ'ದ ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ್ದವರನ್ನು ಜಗದ್ಗುರುಗಳು ಭೇಟಿಯಾದ ಸಂದರ್ಭವನ್ನು ಅವರು ಸ್ಮರಿಸಿದರು.

ಆ ಸಭೆಯಲ್ಲಿ ಜಗತ್ತಿನ ವಿವಿಧ ದೇಶಗಳ ಕೈಗಾರಿಕೆಗಳು ಮತ್ತು ಉದ್ಯಮಗಳ ಪ್ರತಿನಿಧಿಗಳು ಭಾಗವಹಿಸಿ, ಉತ್ಪಾದನಾ ಪ್ರಕ್ರಿಯೆಗಳು ಮತ್ತು ಕೆಲಸದ ಸ್ಥಳಗಳನ್ನು ಇನ್ನಷ್ಟು ಸುಸ್ಥಿರವಾಗಿಸುವ ಕುರಿತು ಚರ್ಚಿಸಿದರು. ಇದರಿಂದ ಮಾನವರು "ಹೆಚ್ಚು ಹೆಚ್ಚು ಜವಾಬ್ದಾರಿಯುತರು ಮತ್ತು ಕಡಿಮೆ ಪ್ರಭುತ್ವ ಸಾಧಿಸುವವರಾಗಬೇಕು" ಎಂಬ ದೃಷ್ಟಿಕೋನವನ್ನು ಅವರು ಹಂಚಿಕೊಂಡರು.

ಈ ಪ್ರೇರಣೆ ಈಗಾಗಲೇ ಜಗದ್ಗುರು ಫ್ರಾನ್ಸಿಸ್ ರವರ ವಿಶ್ವಪತ್ರಿಕೆಗಳಲ್ಲಿ ವ್ಯಕ್ತವಾಗಿದ್ದು, "ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್" ವಿಶ್ವಪತ್ರಿಕೆಯಲ್ಲಿ ಮತ್ತೊಮ್ಮೆ ದೃಢೀಕರಿಸಲಾಗಿದೆ. ಅದರ ಮೂಲ ಸಂದೇಶ ಒಂದೇ "ಸೃಷ್ಟಿಗಳ ನಡುವೆ ನಾವು ಸಹ ಒಂದು ಸೃಷ್ಟಿ ಎಂಬುದನ್ನು ಗುರುತಿಸಿಕೊಳ್ಳುವುದು."

10 ಜುಲೈ 2026, 19:50