ಹುಡುಕಿ

ಕ್ಯಾಸ್ಟೆಲ್ ಗ್ಯಾಂಡೊಲ್ಫೊದ ಪಾಂಟಿಫಿಕಲ್ ಉದ್ಯಾನವನದಲ್ಲಿರುವ 'ಬೋರ್ಗೊ ಲಾಡಾಟೊ ಸಿ'ಯ ಉದ್ಘಾಟನೆ ಮತ್ತು ಆಶೀರ್ವಾದ ಸಮಾರಂಭ. ಕ್ಯಾಸ್ಟೆಲ್ ಗ್ಯಾಂಡೊಲ್ಫೊದ ಪಾಂಟಿಫಿಕಲ್ ಉದ್ಯಾನವನದಲ್ಲಿರುವ 'ಬೋರ್ಗೊ ಲಾಡಾಟೊ ಸಿ'ಯ ಉದ್ಘಾಟನೆ ಮತ್ತು ಆಶೀರ್ವಾದ ಸಮಾರಂಭ. 

ತಮ್ಮ ಗೌರವಾರ್ಥವಾಗಿ ನಾಮಕರಣಗೊಂಡಿರುವ ಸುಸ್ಥಿರತಾ ಪದಕವನ್ನು ಜಗದ್ಗುರು XIVನೇ ಲಿಯೋರವರು ಪ್ರದಾನ ಮಾಡಲಿದ್ದಾರೆ.

ಸುಸ್ಥಿರತೆ ಹಾಗೂ ಸಮಗ್ರ ಮಾನವ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅತ್ಯುತ್ತಮ ನಾಯಕತ್ವವನ್ನು ಗುರುತಿಸಿ ಗೌರವಿಸಲು ಅಮೆರಿಕದ ವಿಲ್ಲನೋವಾ ವಿಶ್ವವಿದ್ಯಾಲಯವು ಸ್ಥಾಪಿಸಿರುವ ಹೊಸ ಅಂತರರಾಷ್ಟ್ರೀಯ ಗೌರವವಾದ "ಜಗದ್ಗುರು XIVನೇ ಲಿಯೋರವರು ಸುಸ್ಥಿರತಾ ಪದಕ"ವನ್ನು 2026ರ ವಿಲ್ಲನೋವಾ ಅಂತರರಾಷ್ಟ್ರೀಯ ಸುಸ್ಥಿರತಾ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುವುದು. ರೋಮ್ ಮತ್ತು ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ, ಈ ಪದಕವನ್ನು ಸ್ವತಃ ಜಗದ್ಗುರು XIVನೇ ಲಿಯೋರವರು ಪ್ರದಾನ ಮಾಡಲಿದ್ದಾರೆ.

ವ್ಯಾಟಿಕನ್ ವರದಿ

ಅಮೆರಿಕದ ವಿಲ್ಲನೋವಾ ವಿಶ್ವವಿದ್ಯಾಲಯ ಹಾಗೂ ಅದರ ಸುಸ್ಥಿರತಾ ಕಚೇರಿ, ಸುಸ್ಥಿರತೆ, ಪರಿಸರದ ಹೊಣೆಗಾರಿಕೆ ಹಾಗೂ ಸಮಗ್ರ ಮಾನವ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಅಸಾಧಾರಣ ನಾಯಕತ್ವ ತೋರಿದ ವ್ಯಕ್ತಿಗಳನ್ನು ಗೌರವಿಸಲು "ಜಗದ್ಗುರು XIVನೇ ಲಿಯೋರವರು ಸುಸ್ಥಿರತಾ ಪದಕ" ಎಂಬ ಹೊಸ ಅಂತರರಾಷ್ಟ್ರೀಯ ಗೌರವವನ್ನು ಸ್ಥಾಪಿಸಿವೆ.

ವಿಶ್ವವಿದ್ಯಾಲಯವು ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಪದಕವು "ಪರಿಸರದ ಕಾಳಜಿ, ಸಾಮಾಜಿಕ ನ್ಯಾಯ, ದುರ್ಬಲ ಮತ್ತು ಅಂಚಿನಲ್ಲಿರುವ ಜನರ ಬಗ್ಗೆ ಕಾಳಜಿ, ಹಾಗೂ ಆರ್ಥಿಕ ಮತ್ತು ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ನಿರ್ವಹಣೆ ಇವೆಲ್ಲವನ್ನೂ ಒಗ್ಗೂಡಿಸುವ ಸಮಗ್ರ ಸುಸ್ಥಿರತೆಯ ದೃಷ್ಟಿಕೋನವನ್ನು ತಮ್ಮ ಕಾರ್ಯದ ಮೂಲಕ ತೋರಿಸಿರುವವರನ್ನು ಗೌರವಿಸುವ ಉದ್ದೇಶ ಹೊಂದಿದೆ."

ವಿಶ್ವವಿದ್ಯಾಲಯವು, ಕೇವಲ ತಾಂತ್ರಿಕ ಮಾನದಂಡಗಳಿಗಿಂತ  ಸಮಗ್ರ ಪರಿಸರಶಾಸ್ತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ತಿಳಿಸಿದೆ.

ಯಾವುದೇ ಕ್ಷೇತ್ರ ಅಥವಾ ವೃತ್ತಿಯಿಂದ ಬಂದಿರುವ ವ್ಯಕ್ತಿಗಳು ಈ ಗೌರವಕ್ಕೆ ಪಾತ್ರರಾಗಬಹುದು. ಹೆಚ್ಚು ಸುಸ್ಥಿರ ಹಾಗೂ ನ್ಯಾಯಸಮ್ಮತ ಜಗತ್ತಿನ ನಿರ್ಮಾಣಕ್ಕೆ ನೀಡಿರುವ ಅವರ ಸ್ಪಷ್ಟ ಮತ್ತು ಪರಿಣಾಮಕಾರಿ ಕೊಡುಗೆಯನ್ನು ಆಧರಿಸಿ ಪದಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಅಕ್ಟೋಬರ್‌ನಲ್ಲಿ ಸುಸ್ಥಿರತಾ ಸಮ್ಮೇಳನ

2026ರ ಅಕ್ಟೋಬರ್ 12ರಿಂದ 15ರವರೆಗೆ ನಡೆಯಲಿರುವ "ವಿಲ್ಲನೋವಾ ಅಂತರರಾಷ್ಟ್ರೀಯ ಸುಸ್ಥಿರತಾ ಸಮ್ಮೇಳನ ಭೂಮಿಯ ಮತ್ತು ಬಡವರ ಮೊರೆಗಳಿಗೆ ಪ್ರತಿಕ್ರಿಯೆ" ಎಂಬ ಸಮ್ಮೇಳನದ ಸಂದರ್ಭದಲ್ಲಿ, ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿ ಜಗದ್ಗುರು XIVನೇ ಲಿಯೋರವರು ಮೊದಲ ಜಗದ್ಗುರು XIVನೇ ಲಿಯೋರವರು ಸುಸ್ಥಿರತಾ ಪದಕವನ್ನು ಪ್ರದಾನ ಮಾಡಲಿದ್ದಾರೆ.

ಈ ಸಮ್ಮೇಳನವು ಸುಮಾರು 300 ಮಂದಿ ಭಾಗವಹಿಸುವವರನ್ನು ಶೈಕ್ಷಣಿಕ ತಜ್ಞರು, ಸಂಶೋಧಕರು, ಧರ್ಮ ಸಭೆಯ ಪ್ರತಿನಿಧಿಗಳು, ಪ್ರತಿಷ್ಠಾನಗಳ ಸದಸ್ಯರು, ಸಾರ್ವಜನಿಕ ಹಾಗೂ ಖಾಸಗಿ ವಲಯದ ನಾಯಕರು ಒಂದೇ ವೇದಿಕೆಗೆ ತರಲಿದೆ. ಸಂವಾದವನ್ನು ಮೀರಿ, ನೈಜ ಹಾಗೂ ಸಹಕಾರಾತ್ಮಕ ಕಾರ್ಯಚಟುವಟಿಕೆಗಳಿಗೆ ದಾರಿ ಮಾಡಿಕೊಡುವ ಬಹುಶಾಖೀಯ ವೇದಿಕೆಯಾಗಿರುವುದು ಇದರ ವಿಶೇಷತೆ.

ಮೊದಲ ಪದಕದ ವಿಜೇತರ ಹೆಸರನ್ನು 2026ರ ಸೆಪ್ಟೆಂಬರ್‌ನಲ್ಲಿ, ಸಮ್ಮೇಳನ ಮತ್ತು ಕ್ಯಾಸ್ಟೆಲ್ ಗಾಂಡೋಲ್ಫೋದ  ಬೊರ್ಗೋ ಲೌದಾತೋ ಸಿ'ಯಲ್ಲಿ ನಡೆಯಲಿರುವ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಪ್ರಕಟಿಸಲಾಗುತ್ತದೆ.

ವಿಲ್ಲನೋವಾ ವಿಶ್ವವಿದ್ಯಾಲಯದ ಅಧ್ಯಕ್ಷರಾದ ವಂ.ಸ್ವಾಮಿ ಪೀಟರ್ ಎಂ. ಡೊನೋಹ್ಯೂ, ಒಎಸ್ಎ, ಪಿಎಚ್ಡಿ, ಹೀಗೆ ಹೇಳಿದರು:

"ಜಗದ್ಗುರು ಲಿಯೋರವರ ಸುಸ್ಥಿರತಾ ಪದಕವು ವಿಲ್ಲನೋವಾ ವಿಶ್ವವಿದ್ಯಾಲಯದ ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ: ನಮ್ಮ ಸಾಮಾನ್ಯ ಮನೆಯನ್ನು ಕಾಪಾಡುವುದು ಮತ್ತು ಪರಸ್ಪರರ ಬಗ್ಗೆ ಕಾಳಜಿ ವಹಿಸುವುದು ಒಂದಕ್ಕೊಂದು ಬೇರ್ಪಡಿಸಲಾಗದ ಸಂಗತಿಗಳಾಗಿವೆ."

ಅವರು ಮುಂದುವರಿದು ಹೇಳಿದರು:

"ಪರಿಸರದ ಜವಾಬ್ದಾರಿಯುತ ಸಂರಕ್ಷಣೆ ಮತ್ತು ಸಾಮೂಹಿಕ ಹಿತವನ್ನು ಮುನ್ನಡೆಸುವ ನಾಯಕರನ್ನು ಗೌರವಿಸುವ ಮೂಲಕ, ವಿಶ್ವದಾದ್ಯಂತದ ಸಮುದಾಯಗಳಲ್ಲಿ ಅರ್ಥಪೂರ್ಣ ಹಾಗೂ ಶಾಶ್ವತ ಪರಿಣಾಮವನ್ನು ಉಂಟುಮಾಡುವ ಪ್ರೇರಣೆಯನ್ನು ನೀಡಲು ನಾವು ಆಶಿಸುತ್ತೇವೆ."

ವಿಲ್ಲನೋವಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ

ಜಗದ್ಗುರು ಲಿಯೋರವರು, ಅಂದಿನ ರಾಬರ್ಟ್ ಎಫ್. ಪ್ರೆವೋಸ್ಟ್, 1977ರಲ್ಲಿ ವಿಲ್ಲನೋವಾ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ವಿಜ್ಞಾನ ಪದವಿ ಪಡೆದಿದ್ದರು. ಬಳಿಕ 2014ರಲ್ಲಿ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರ್ ಆಫ್ ಹ್ಯೂಮ್ಯಾನಿಟೀಸ್ ಪದವಿಯನ್ನು ಪ್ರದಾನಿಸಿತು.

ಈ ಪದಕವನ್ನು ವಿಲ್ಲನೋವಾ ವಿಶ್ವವಿದ್ಯಾಲಯವು ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರದಾನ ಮಾಡಲಿದ್ದು, ಜಾಗತಿಕ ಸುಸ್ಥಿರತಾ ಉಪಕ್ರಮಗಳನ್ನು ಉತ್ತೇಜಿಸುವ ಹಾಗೂ ಸಮಗ್ರ ಪರಿಸರಶಾಸ್ತ್ರವನ್ನು ಬೆಳೆಸುವ ತನ್ನ ಬದ್ಧತೆಯ ಭಾಗವಾಗಿ ಇದನ್ನು ನೀಡಲಾಗುತ್ತದೆ.

ಇದು ವಿಲ್ಲನೋವಾ ಅಂತರರಾಷ್ಟ್ರೀಯ ಸುಸ್ಥಿರತಾ ಸಮ್ಮೇಳನದ ಅಧಿಕೃತ ಕಾರ್ಯಕ್ರಮದ ಅಂಗವಾಗಿರುತ್ತದೆ.

2026ರ ಮೊದಲ ಪ್ರಶಸ್ತಿಗಾಗಿ ಅಭ್ಯರ್ಥಿಗಳನ್ನು ವಿಶ್ವವಿದ್ಯಾಲಯದ ಸುಸ್ಥಿರತಾ ನಾಯಕತ್ವ ಮಂಡಳಿ ಸದಸ್ಯರು ನಡೆಸಿದ ಪರಿಶೀಲನಾ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದೆ.

ಸೃಷ್ಟಿಯ ಸಂರಕ್ಷಣೆ ಮತ್ತು ಮಾನವ ಘನತೆಯ ಉತ್ತೇಜನದ ನಡುವಿನ ಅವಿಭಾಜ್ಯ ಸಂಬಂಧ

2026ರ ಅಂತರರಾಷ್ಟ್ರೀಯ ಸುಸ್ಥಿರತಾ ಸಮ್ಮೇಳನವು ರೋಮ್‌ನ ಪ್ಯಾಟ್ರಿಸ್ಟಿಕುಮ್  ಹಾಗೂ ಕ್ಯಾಸ್ಟೆಲ್ ಗಾಂಡೋಲ್ಫೋದ ಬೊರ್ಗೋ ಲೌದಾತೋ ಸಿಯ ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ನಡೆಯಲಿದೆ.

ಈ ಸಮ್ಮೇಳನವನ್ನು ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಇರುವ ಡಿಕಾಸ್ಟರಿ  ಹಾಗೂ ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರ ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಈ ಕೇಂದ್ರವನ್ನು ಜಗದ್ಗುರು ಫ್ರಾನ್ಸಿಸ್ ರವರು ಸಮಗ್ರ ಪರಿಸರಶಾಸ್ತ್ರದ ಶಿಕ್ಷಣ, ಸುಸ್ಥಿರತಾ ಶಿಕ್ಷಣ ಮತ್ತು ಲೌದಾತೋ ಸಿ'ಯಿಂದ ಪ್ರೇರಿತ ಉಪಕ್ರಮಗಳನ್ನು ಉತ್ತೇಜಿಸಲು ಸ್ಥಾಪಿಸಿದ್ದರು.

ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ಮಹಾನಿರ್ದೇಶಕರಾದ ಕಾರ್ಡಿನಲ್ ಫಾಬಿಯೊ ಬಾಜ್ಜಿಯೋ, ಸಿ.ಎಸ್.ಈ ಉಪಕ್ರಮವನ್ನು ಸ್ವಾಗತಿಸಿ ಹೀಗೆ ಹೇಳಿದರು:

"ಸುಸ್ಥಿರತಾ ಪದಕವು, ಸೃಷ್ಟಿಯ ಸಂರಕ್ಷಣೆ ಮತ್ತು ಮಾನವ ಘನತೆಯ ಉತ್ತೇಜನದ ನಡುವಿನ ಅವಿಭಾಜ್ಯ ಸಂಬಂಧಕ್ಕೆ ತಮ್ಮ ಜೀವನದ ಮೂಲಕ ಸಾಕ್ಷಿಯಾಗಿರುವ ವ್ಯಕ್ತಿಗಳನ್ನು ಗೌರವಿಸುತ್ತದೆ. ಈ ಸಂಬಂಧವು ನಮ್ಮ ನಂಬಿಕೆಯ ಬೆಳಕಿನಲ್ಲಿ ಆಳವಾಗಿ ಬೇರೂರಿದೆ."

ಅವರು ಮುಂದುವರಿದು ಹೇಳಿದರು:

ಈ ಅಸಾಧಾರಣ ಬದ್ಧತೆಯನ್ನು ಗುರುತಿಸುವ ಮೂಲಕ, ಭೂಮಿಯ ಮೊರೆಗೆ ಮತ್ತು ಬಡವರ ಮೊರೆಗೆ ಆಶಾಭಾವದಿಂದ ಪ್ರತಿಕ್ರಿಯಿಸುವ ಸಮಗ್ರ ಪರಿಸರಶಾಸ್ತ್ರವನ್ನು ಅಳವಡಿಸಿಕೊಳ್ಳಲು ಭವಿಷ್ಯದ ಪೀಳಿಗೆಗಳಿಗೆ ಸ್ಫೂರ್ತಿ ನೀಡುವ ನಾಯಕರನ್ನು ಈ ಪದಕ ಗೌರವಿಸುತ್ತದೆ ಎಂದರು

20 ಜುಲೈ 2026, 17:59