ಸಾಂಟಿಯಾಗೊದಲ್ಲಿರುವ ಚಿಲಿಯ ಪಾಂಟಿಫಿಕಲ್ ಕಥೊಲಿಕ ವಿಶ್ವವಿದ್ಯಾಲಯದಲ್ಲಿ ಧರ್ಮ ಸಭೆಯ ಸಂವಹನದ ಕುರಿತಾದ ಅಂತರರಾಷ್ಟ್ರೀಯ ವಿಚಾರ ಸಂಕಿರಣ. ಸಾಂಟಿಯಾಗೊದಲ್ಲಿರುವ ಚಿಲಿಯ ಪಾಂಟಿಫಿಕಲ್ ಕಥೊಲಿಕ ವಿಶ್ವವಿದ್ಯಾಲಯದಲ್ಲಿ ಧರ್ಮ ಸಭೆಯ ಸಂವಹನದ ಕುರಿತಾದ ಅಂತರರಾಷ್ಟ್ರೀಯ ವಿಚಾರ ಸಂಕಿರಣ. 

ಜಗದ್ಗುರು ಲಿಯೋರವರು: ತಂತ್ರಜ್ಞಾನವು ಸತ್ಯಕ್ಕೂ ಸರ್ವಸಾಮಾನ್ಯ ಹಿತಕ್ಕೂ ಸೇವೆ ಸಲ್ಲಿಸಬೇಕು.

ಚಿಲಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂವಹನ ಕ್ಷೇತ್ರದ ಕಾರ್ಯಕರ್ತರನ್ನು ಉದ್ದೇಶಿಸಿದ ಜಗದ್ಗುರು XIVನೇ ಲಿಯೋರವರು, "ತಾಂತ್ರಿಕ ಅಭಿವೃದ್ಧಿಯು ಒದಗಿಸುವ ಹೊಸ ಅವಕಾಶಗಳ ನಡುವೆಯೂ ಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವ ಸಂವಹನವನ್ನು ಉತ್ತೇಜಿಸಬೇಕು" ಎಂದು ಕರೆ ನೀಡಿದರು.

ವ್ಯಾಟಿಕನ್ ವರದಿ

ಕೃತಕ ಬುದ್ಧಿಮತ್ತೆ (ಎಐ) ಒದಗಿಸುತ್ತಿರುವ ಅವಕಾಶಗಳು ಮತ್ತು ಸವಾಲುಗಳ ಕುರಿತು ಚರ್ಚಿಸುತ್ತಿರುವ ಧರ್ಮ ಸಭೆಯ ಈ ಸಂದರ್ಭದಲ್ಲಿ, ಪ್ರತಿಯೊಂದು ತಾಂತ್ರಿಕ ಸಾಧನವನ್ನೂ "ಸತ್ಯ ಮತ್ತು ಸರ್ವಸಾಮಾನ್ಯ ಹಿತದ ಸೇವೆಗೆ ಬಳಸಬೇಕು" ಎಂದು ಜಗದ್ಗುರು XIVನೇ ಲಿಯೋರವರು ಸಂವಹನ ಕ್ಷೇತ್ರದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೆತ್ರೊ ಪರೋಲಿನ್ ರವರ ಸಹಿಯೊಂದಿಗೆ ಕಳುಹಿಸಲಾದ ಜಗದ್ಗುರುಗಳ ಸಂದೇಶವು, ಜುಲೈ 27 ಮತ್ತು 28ರಂದು ಸ್ಯಾಂಟಿಯಾಗೊದಲ್ಲಿರುವ ಚಿಲಿಯ ಪೊಂಟಿಫಿಕಲ್ ಕಥೊಲಿಕ ವಿಶ್ವವಿದ್ಯಾಲಯದಲ್ಲಿ ನಡೆದ ಏಳನೇ ಅಂತರರಾಷ್ಟ್ರೀಯ ಧರ್ಮ ಸಭೆಯ ಸಂವಹನ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರಿಗೆ ಉದ್ದೇಶಿಸಲಾಗಿತ್ತು.

"ಕೃತಕ ಬುದ್ಧಿಮತ್ತೆಯ ಸವಾಲುಗಳು" ಎಂಬ ಶೀರ್ಷಿಕೆಯಡಿ ನಡೆದ ಈ ವಿಚಾರ ಸಂಕಿರಣವು, ಜಗದ್ಗುರು XIVನೇ ಲಿಯೋರವರ ಅತ್ಯುನ್ನತ ಮಾನವೀಯತೆ ಪರಿಪತ್ರಿಕೆಯ ಬೆಳಕಿನಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಿಣಾಮಗಳನ್ನು ಪರಾಮರ್ಶಿಸಲು ಲ್ಯಾಟಿನ್ ಅಮೆರಿಕ ಹಾಗೂ ಕೆರಿಬಿಯನ್ ಪ್ರದೇಶದ ಸಂವಹನ ತಜ್ಞರು, ಧರ್ಮಾಧ್ಯಕ್ಷೀಯ ಕಾರ್ಯಕರ್ತರು, ಶಿಕ್ಷಣತಜ್ಞರು ಮತ್ತು ಧರ್ಮ ಸಭೆಯ ಪ್ರತಿನಿಧಿಗಳನ್ನು ಒಗ್ಗೂಡಿಸಿತು.

ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿವೇಕ ಮತ್ತು ಹೊಣೆಗಾರಿಕೆ

ಚಿಲಿ ಬಿಷಪ್‌ಗಳ ಸಮ್ಮೇಳನದ ಅಧ್ಯಕ್ಷರಾದ ಆರ್ಚ್‌ಬಿಷಪ್ ರೆನೆ ಓಸ್ವಾಲ್ಡೊ ರೆಬೊಲೇಡೊ ಸಲಿನಾಸ್ ರವರಿಗೆ ಉದ್ದೇಶಿಸಿದ ಸಂದೇಶದಲ್ಲಿ, ತಾಂತ್ರಿಕ ಅಭಿವೃದ್ಧಿಯು ನೀಡುತ್ತಿರುವ ಹೊಸ ಅವಕಾಶಗಳ ನಡುವೆಯೂ "ಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವ ಮತ್ತು ಪ್ರತಿಯೊಂದು ಸಾಧನವನ್ನೂ ಸತ್ಯ ಹಾಗೂ ಸರ್ವಸಾಮಾನ್ಯ ಹಿತದ ಸೇವೆಗೆ ಬಳಸುವ ಸಂವಹನವನ್ನು ಉತ್ತೇಜಿಸಲಿ" ಎಂದು ಜಗದ್ಗುರುಗಳ ಆಶಯ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಸಂಕಿರಣವನ್ನು ಪವಿತ್ರಾತ್ಮನ ಮಾರ್ಗದರ್ಶನಕ್ಕೆ ಸಮರ್ಪಿಸಿದ ಜಗದ್ಗುರಗಳು, ಅದರ ಭಾಗವಹಿಸುವವರು ಕೃತಕ ಬುದ್ಧಿಮತ್ತೆಯಿಂದ ಉದ್ಭವಿಸುವ ಸವಾಲುಗಳನ್ನು "ವಿವೇಕ ಮತ್ತು ಹೊಣೆಗಾರಿಕೆಯಿಂದ ಎದುರಿಸಿ, ಧರ್ಮ ಸಭೆಯ ಸಂವಹನವು ಜನರ ನಡುವೆ ಭೇಟಿಯನ್ನು ಉತ್ತೇಜಿಸಿ ಸುವಾರ್ತೆಯ ಘೋಷಣೆಗೆ ಕೊಡುಗೆ ನೀಡಲಿ" ಎಂದು ಪ್ರಾರ್ಥಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳು ಮಾನವೀಯತೆಯ ಅಭಿವ್ಯಕ್ತಿಯ ಸ್ಥಳಗಳು

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಚಿಲಿಯ ಸ್ಯಾಂಟಿಯಾಗೊದ ಆರ್ಚ್‌ಬಿಷಪ್ ಕಾರ್ಡಿನಲ್ ಫೆರ್ನಾಂಡೊ ನಟಾಲಿಯೊ ಚೋಮಾಲಿ ಗರಿಬ್ ಅವರು, ಸಾಮಾಜಿಕ ಮಾಧ್ಯಮಗಳು ಭಾವನೆಗಳು, ಸಂಬಂಧಗಳು ಮತ್ತು ಸಂಘರ್ಷಗಳನ್ನು ಪ್ರತಿಬಿಂಬಿಸುವುದರಿಂದ ಅವು "ನಿಜವಾದ ಮಾನವೀಯ ಸ್ಥಳಗಳು" ಎಂದು ಹೇಳಿದರು.

"ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸಂಗತಿಯೂ ಸಾಮಾಜಿಕ ಮಾಧ್ಯಮಗಳಲ್ಲಿಯೂ ನಡೆಯುತ್ತದೆ" ಎಂದು ಅವರು ಹೇಳಿ, ಸಂವಹನವು ನಾಲ್ಕು ಮೂಲಭೂತ ಮೌಲ್ಯಗಳಾದ ಸತ್ಯ, ಒಳಿತು, ಸೌಂದರ್ಯ ಮತ್ತು ಉಪಯುಕ್ತತೆಗಳ ಮೇಲೆ ಆಧಾರಿತವಾಗಿರಬೇಕು ಎಂದು ತಿಳಿಸಿದರು.

ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ಘನತೆಯನ್ನು ರಕ್ಷಿಸುವ ವಿಷಯಕ್ಕೆ ಸಮರ್ಪಿತವಾದ ಅತ್ಯುನ್ನತ ಮಾನವೀಯತೆ ಅತ್ಯುನ್ನತ ಮಾನವೀಯತೆ ಪರಿಪತ್ರಿಕೆಯನ್ನು ಕೇವಲ ತಾಂತ್ರಿಕ ದೃಷ್ಟಿಕೋನದಿಂದ ಮಾತ್ರ ಓದಬಾರದು ಎಂದು ಅವರು ಒತ್ತಿ ಹೇಳಿದರು.

"ಇಂದು ಕೃತಕ ಬುದ್ಧಿಮತ್ತೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಈ ಪರಿಪತ್ರಿಕೆಯು ಮುಖ್ಯವಾಗಿ ಮಾನವ ಘನತೆ ಮತ್ತು ಸತ್ಯದ ಕುರಿತು ಮಾತನಾಡುತ್ತದೆ" ಎಂದು ಅವರು ಹೇಳಿದರು.

ಬಾಬೆಲನ್ನು ಅಲ್ಲ, ಜೆರುಸಲೇಮನ್ನು ನಿರ್ಮಿಸೋಣ

ಈ ತತ್ವಗಳ ಆಧಾರದ ಮೇಲೆ ರೂಪುಗೊಳ್ಳುವ ಸಂವಹನವು ವ್ಯಕ್ತಿವಾದ ಹೆಚ್ಚುತ್ತಿರುವ ಸಮಾಜದಲ್ಲಿ ಸಮುದಾಯದ ಬದುಕನ್ನು ಬಲಪಡಿಸುತ್ತದೆ ಎಂದು ಕಾರ್ಡಿನಲ್ ಚೋಮಾಲಿ ಹೇಳಿದರು.

"ನಾವು ಸಂವಾದವನ್ನು ಉತ್ತೇಜಿಸುತ್ತೇವೆ; ನಾವು ಸಹೋದರತ್ವವನ್ನು ಬೆಳೆಸುತ್ತೇವೆ, ಅಂತಿಮವಾಗಿ ನಾವು ಬಾಬೆಲನ್ನು ಅಲ್ಲ, ಜೆರುಸಲೇಮನ್ನು ನಿರ್ಮಿಸುತ್ತೇವೆ" ಎಂದು ಅವರು ಹೇಳಿದರು.

ಈ ವಿಷಯಗಳನ್ನೇ ಅವರು ಬಳಿಕ ನಡೆದ ಪವಿತ್ರ ಬಲಿಪೂಜೆಯ ಪ್ರಭೋಧನೆಯಲ್ಲಿಯೂ ಪುನರುಚ್ಚರಿಸಿದರು. ಅತ್ಯುನ್ನತ ಮಾನವೀಯತೆ ಪರಿಪತ್ರಿಕೆಯನ್ನು "ಕ್ರಿಸ್ತಕೇಂದ್ರಿತ ಪರಿಪತ್ರಿಕೆ" ಎಂದು ಬಣ್ಣಿಸಿದ ಅವರು, ವಿವೇಚನೆಯಿಂದ ಕೂಡಿದ ಸಂವಹನಕ್ಕೆ ಕರೆ ನೀಡಿ, ಕೃತಕ ಬುದ್ಧಿಮತ್ತೆಯು ಸದಾ ಮಾನವ ಘನತೆಯ ಸೇವೆಯಲ್ಲಿಯೇ ಉಳಿಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಧರ್ಮ ಸಭೆಯ ಸಹಯಾತ್ರೆಯ ಸ್ಪಷ್ಟ ಅಭಿವ್ಯಕ್ತಿ

ಉದ್ಘಾಟನಾ ದಿನದ ಇತರ ಪ್ರಮುಖ ಭಾಷಣಕಾರರಲ್ಲಿ ಚಿಲಿಯ ಪೊಂಟಿಫಿಕಲ್ ಕಥೊಲಿಕ ವಿಶ್ವವಿದ್ಯಾಲಯದ ರೆಕ್ಟರ್ ಜುವಾನ್ ಕಾರ್ಲೋಸ್ ಡೆ ಲಾ ಲ್ಲೆರಾ ಹಾಗೂ ಆರ್ಚ್‌ಬಿಷಪ್ ರೆನೆ ರೆಬೊಲೇಡೊ ಸಲಿನಾಸ್ ರವರು ಸೇರಿದ್ದರು.

ಆರ್ಚ್‌ಬಿಷಪ್ ರೆಬೊಲೇಡೊರವರು ಈ ವಿಚಾರ ಸಂಕಿರಣವನ್ನು ಸಿನೋಡಾಲಿಟಿಯ ಆತ್ಮ ಮತ್ತು ಧರ್ಮ ಸಭೆಯ ಸಹಯಾತ್ರೆಯ ಸ್ಪಷ್ಟ ಅಭಿವ್ಯಕ್ತಿ ಎಂದು ಬಣ್ಣಿಸಿದರು.

ಅತ್ಯುನ್ನತ ಮಾನವೀಯತೆ ಪರಿಪತ್ರಿಕೆಯ ಪ್ರಕಟಣೆಯು ಹೊಸ ತಂತ್ರಜ್ಞಾನಗಳ ಕುರಿತು ಚರ್ಚಿನ ಧರ್ಮಾಧ್ಯಕ್ಷೀಯ ಚಿಂತನೆಗೆ ಹೊಸ ಆಳವನ್ನು ನೀಡಿದೆ ಎಂದು ಅವರು ಹೇಳಿದರು.

"ಮಾನವ ವ್ಯಕ್ತಿಯ ಉಲ್ಲಂಘಿಸಲಾಗದ ಘನತೆಯೇ ತಾಂತ್ರಿಕ ಅಭಿವೃದ್ಧಿ ಮತ್ತು ವೈಜ್ಞಾನಿಕ ಪ್ರಗತಿಯ ಮೂಲ ತತ್ವ, ಮಾರ್ಗದರ್ಶಕ ಮಾನದಂಡ ಹಾಗೂ ಅಂತಿಮ ಗುರಿಯಾಗಿರಬೇಕು" ಎಂದು ಅವರು ಒತ್ತಿ ಹೇಳಿದರು.

28 ಜುಲೈ 2026, 16:31