ಹುಡುಕಿ

SPAIN-VATICAN-DIPLOMACY-RELIGION-POPE

ಸ್ಪೇನಿನಲ್ಲಿ ನಾಲ್ಕನೇ ದಿನ: ಮ್ಯಾಡ್ರಿಡ್‌ನಿಂದ ಬಾರ್ಸಿಲೋನಾಕ್ಕೆ ಜಗದ್ಗುರು XIVನೇ ಲಿಯೋರವರ ಪಯಣ.

ಸ್ಪೇನಿನ ಪ್ರೇಷಿತ ಪ್ರವಾಸದ ನಾಲ್ಕನೇ ದಿನ, ಜಗದ್ಗುರು XIVನೇ ಲಿಯೋರವರು ಮ್ಯಾಡ್ರಿಡ್‌ನಲ್ಲಿ ಸ್ವಯಂಸೇವಕರೊಂದಿಗೆ ಭೇಟಿಯಾಗಿ ತಮ್ಮ ಭೇಟಿಗಳನ್ನು ಪೂರ್ಣಗೊಳಿಸಿದ ನಂತರ, ದೇಶದ ಈಶಾನ್ಯ ಭಾಗದಲ್ಲಿರುವ ಬಾರ್ಸಿಲೋನಾಕ್ಕೆ ವಿಮಾನದಲ್ಲಿ ತೆರಳಿದರು.

ವ್ಯಾಟಿಕನ್ ವರದಿ

ಸ್ಪೇನಿನ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುವ ಮೊದಲು, ಜಗದ್ಗುರು XIVನೇ ಲಿಯೋರವರು ತಮ್ಮ ಕೊನೆಯ ಬೆಳಿಗ್ಗೆಯನ್ನು ಸ್ವಯಂಸೇವಕರೊಂದಿಗೆ ಕಳೆದರು. ತಮ್ಮ ಭೇಟಿಯ ಯಶಸ್ಸಿಗಾಗಿ ಸಮಯ, ಶ್ರಮ ಮತ್ತು ಪ್ರತಿಭೆಯನ್ನು ಸಮರ್ಪಿಸಿದ ಎಲ್ಲರಿಗೂ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಸಹಾಯಕ್ಕಾಗಿ ಕರೆ ಬಂದ ತಕ್ಷಣ ಉದಾರ ಮನಸ್ಸಿನಿಂದ ಸ್ಪಂದಿಸಿದ ಸ್ವಯಂಸೇವಕರನ್ನು ಶ್ಲಾಘಿಸಿದ ಜಗದ್ಗುರುಗಳು, “ನಿಮ್ಮಲ್ಲಿ ಪ್ರತಿಯೊಬ್ಬರೂ ತಮ್ಮಿಂದಾದುದನ್ನು ಕೊಟ್ಟಿದ್ದೀರಿ,ನಿಮ್ಮ ಹೃದಯ, ಕೈಗಳು, ಆಲೋಚನೆಗಳು, ಪ್ರತಿಭೆಗಳು ಮತ್ತು ನಗುವನ್ನು ಅರ್ಪಿಸಿದ್ದೀರಿ. ದೇವರು ಮಾತ್ರ ನೀಡಬಲ್ಲ ರೀತಿಯಲ್ಲಿ ನಿಮ್ಮನ್ನು ಪ್ರತಿಫಲಿಸಲಿ” ಎಂದು ಹೇಳಿದರು.

ಎಲ್ಲಾ ಕ್ರೈಸ್ತರೂ “ನಿಸ್ವಾರ್ಥತೆಯ ಹುಳಿಯನ್ನು” ಸಮಾಜದೊಳಗೆ ಹರಡಿಸಬೇಕು ಎಂದು ಅವರು ಕರೆ ನೀಡಿದರು. “ನಿಸ್ವಾರ್ಥತೆ ಎಂಬುದು ಸಮಾಜದ ಮಾನವೀಯ, ನೈತಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ವೃದ್ಧಿಸುವ ಹುಳಿಯಂತಿದೆ ಅದು ‘ದೇವರ ನಗರ’ದ ವಿಶಿಷ್ಟ ಲಕ್ಷಣವಾಗಿದೆ” ಎಂದು ಜಗದ್ಗುರುಗಳು ಹೇಳಿದರು.

ಪ್ರವಾಸದ ಎರಡನೇ ಹಂತ ಆರಂಭ

ಸುಮಾರು ಮಧ್ಯಾಹ್ನ ವೇಳೆಗೆ ಜಗದ್ಗುರು XIVನೇ ಲಿಯೋರವರು ತಮ್ಮ ಪ್ರೇಷಿತರ ಪ್ರವಾಸದ ಎರಡನೇ ತಾಣವಾದ ಬಾರ್ಸಿಲೋನಾಕ್ಕೆ ಆಗಮಿಸಿದರು. ನಗರದ ಪವಿತ್ರ ಶಿಲುಬೆ ಮತ್ತು ಸಂತ ಯೂಲಾಲಿಯಾ ಪ್ರಧಾನ ದೇವಾಲಯದಲ್ಲಿ, ರಸ್ತೆ ಬದಿಗಳಲ್ಲಿ ಸೇರಿದ್ದ ಜನರ ಉತ್ಸಾಹಭರಿತ ಸ್ವಾಗತದ ಮಧ್ಯೆ ಅವರು ಮಧ್ಯಾಹ್ನದ ಪ್ರಾರ್ಥನೆಯನ್ನು ನೆರವೇರಿಸಿದರು.

ಭಾಷೆಗಳ ಮೇಲಿನ ತಮ್ಮ ಪ್ರೀತಿ ಮತ್ತು ಪರಿಣತಿಯನ್ನು ಪ್ರದರ್ಶಿಸುತ್ತಾ, ಜಗದ್ಗುರುಗಳು ತಮ್ಮ ಪ್ರವಚನವನ್ನು ಕ್ಯಾಟಲಾನ್ ಮತ್ತು ಸ್ಪ್ಯಾನಿಷ್ ಭಾಷೆಗಳ ಮಿಶ್ರಣದಲ್ಲಿ ನೀಡಿದರು. “ವಧು” ಮತ್ತು “ಕ್ರಿಸ್ತನ ದೇಹ” ಎಂಬ ಬೈಬಲಿನ ಪ್ರತಿಮೆಗಳ ಕುರಿತು ಚಿಂತಿಸಲು ಅವರು ಎಲ್ಲರನ್ನೂ ಆಹ್ವಾನಿಸಿದರು. ವೈವಿಧ್ಯಮಯ ವರಗಳು, ಆತ್ಮದಾನಗಳು ಮತ್ತು ಜೀವನಕಥೆಗಳಿಂದ ಸಮೃದ್ಧವಾಗಿರುವ ಬಾರ್ಸಿಲೋನಾದ ಕಥೋಲಿಕ ಸಮುದಾಯವು “ವಧು” ಎಂಬ ಪ್ರತಿಮೆಯ ಸುಂದರ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ, ನಾವೆಲ್ಲರೂ ಕ್ರಿಸ್ತನಲ್ಲಿ ಒಂದೇ ದೇಹದ ಅಂಗಗಳಾಗಿದ್ದೇವೆ ಎಂದು ಜಗದ್ಗುರುಗಳು ನೆನಪಿಸಿದರು. ದೇಹದಲ್ಲಿ ಕೆಲವು ಅಂಗಗಳು ಹೆಚ್ಚು ಬಲಿಷ್ಠವಾಗಿದ್ದರೆ, ಕೆಲವು ದುರ್ಬಲವಾಗಿರುವಂತೆ, ಧರ್ಮ ಸಭೆಯಲ್ಲಿಯೂ ಕೆಲವರ ಸೇವೆ ಎಲ್ಲರಿಗೂ ಗೋಚರಿಸುತ್ತದೆ, ಇನ್ನೂ ಕೆಲವರ ಸೇವೆ ಮೌನವಾಗಿ ನಡೆಯುತ್ತದೆ. ಈ ಹಿನ್ನೆಲೆದಲ್ಲಿ ಅವರು, “ನಾವು ಒಂದಾಗಿರುವುದರಿಂದ ಬಲಿಷ್ಠರಾಗಿದ್ದೇವೆ,ಮತ್ತು ಒಂದಾಗಿರುವುದು ಒಂದೇ ಆತ್ಮದಿಂದ ಪ್ರೇರಿತರಾಗಿರುವುದರಿಂದ” ಎಂದು ಹೇಳಿ ಏಕತೆಯನ್ನು ಆದ್ಯತೆಯನ್ನಾಗಿಸಿಕೊಳ್ಳುವಂತೆ ಕರೆ ನೀಡಿದರು.

“ನಾವು ಅನಂತಕ್ಕಾಗಿ ಸೃಷ್ಟಿಸಲ್ಪಟ್ಟವರು”

ಬಾರ್ಸಿಲೋನಾದಲ್ಲಿ ತಮ್ಮ ಮೊದಲ ಸಂಜೆಯ ವೇಳೆ, ಜಗದ್ಗುರು ಲಿಯೋರವರು ಲ್ಲೂಯಿಸ್ ಕಂಪಾನ್ಸ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ಯುವಜನರನ್ನು ಭೇಟಿಯಾಗಿ, ಪರಿವರ್ತನೆ, ಮಾನಸಿಕ ಆರೋಗ್ಯ, ಹಿಂಸಾಚಾರ ಮತ್ತು ದುಃಖಕ್ಕೆ ಸಂಬಂಧಿಸಿದ ಮೂರು ಜೀವನಸಾಕ್ಷ್ಯಗಳನ್ನು ಆಲಿಸಿದರು.

ಲೌಕಿಕ ಯಶಸ್ಸಿನ ನಡುವೆಯೂ ತನ್ನೊಳಗಿನ ಶೂನ್ಯತೆಯನ್ನು ಅನುಭವಿಸುತ್ತಿದ್ದ ಫೆರಾನ್‌ಗೆ ಉತ್ತರಿಸುತ್ತಾ, “ನಾವು ಅನಂತಕ್ಕಾಗಿ ಸೃಷ್ಟಿಸಲ್ಪಟ್ಟವರು. ಅದಕ್ಕಾಗಿಯೇ ಪ್ರತಿಯೊಂದು ಸೀಮಿತ ಗುರಿ, ಪ್ರತಿಯೊಂದು ಹೆಜ್ಜೆ ಮತ್ತು ಪ್ರತಿಯೊಂದು ಸಾಧನೆಯೂ ನಮ್ಮನ್ನು ತೃಪ್ತಿಪಡಿಸಿದರೂ, ಮತ್ತಷ್ಟು ಹುಡುಕಾಟದತ್ತ ಮುನ್ನಡೆಸುತ್ತದೆ” ಎಂದು ಹೇಳಿದರು. ಜೀವನದ ವೇಗ ಮತ್ತು ಹೊರಗಿನ ಆಕರ್ಷಣೆಗಳಿಂದ ಮರುಳಾಗದೆ ತಮ್ಮ ಅಂತರಂಗವನ್ನು ಪರಿಶೀಲಿಸುವಂತೆ ಯುವಕರಿಗೆ ಅವರು ಕರೆ ನೀಡಿದರು.

ಖಿನ್ನತೆಯ ವಿರುದ್ಧದ ಹೋರಾಟವನ್ನು ಹಂಚಿಕೊಂಡ ಕಾರ್ಮಿನಾಳಿಗೆ ಉತ್ತರಿಸುತ್ತಾ, “ಮಾನವನ ಆರೋಗ್ಯಕರ ಸಮತೋಲನವನ್ನು ಹಾಳುಮಾಡುವ ಒತ್ತಡಗಳು, ನಿರೀಕ್ಷೆಗಳು ಮತ್ತು ಉದ್ವಿಗ್ನತೆಗಳನ್ನು ಉಂಟುಮಾಡುವ ಪ್ರಗತಿಯ ಕೆಲವು ಕಲ್ಪನೆಗಳಲ್ಲಿ ಗಂಭೀರ ದೋಷವಿದೆ ಎಂಬುದರ ಸಂಕೇತವೇ ಇದು” ಎಂದು ಹೇಳಿದರು. ಜೀವನದ ಕತ್ತಲೆಯ ಕ್ಷಣಗಳಲ್ಲಿ ಕ್ರಿಸ್ತನ ಯಾತನೆ ಮತ್ತು ಶಿಲುಬೆಯತ್ತ ದೃಷ್ಟಿ ಹರಿಸುವಂತೆ ಅವರು ಪ್ರೋತ್ಸಾಹಿಸಿದರು.

ಕುಟುಂಬ ಹಿಂಸಾಚಾರ, ವ್ಯಸನ ಮತ್ತು ಕುಟುಂಬದಿಂದ ದೂರವಾದ ನೋವಿನ ಅನುಭವಗಳನ್ನು ಹಂಚಿಕೊಂಡ ಸಿಸಿಲಿಯಾಗೆ ಉತ್ತರಿಸುತ್ತಾ, ಜಗದ್ಗುರುಗಳು ಕ್ಷಮೆಯ ವಿಷಯವನ್ನು ಪ್ರಸ್ತಾಪಿಸಿದರು. “ನಮ್ಮ ಅಂತರಂಗದ ಗಾಯಗಳನ್ನು ಗುಣಪಡಿಸುವ ದುಷ್ಟತೆಯ ವಿರುದ್ಧದ ಶಕ್ತಿಯುತ ಔಷಧವಾದ ಕ್ಷಮೆಯನ್ನು, ಒಂದು ಪ್ರಕ್ರಿಯೆ ಮತ್ತು ಪಯಣದ ಭಾಗವಾಗಿ ಕಾಣಲು ನಾವು ಕಲಿಯಬೇಕು” ಎಂದು ಅವರು ಹೇಳಿದರು.

ಇಂದಿನ ಸವಾಲುಗಳ ಬಗ್ಗೆ ಪ್ರಾಮಾಣಿಕ ಚಿಂತನೆ

ಯುವಜನರೊಂದಿಗೆ ಸಂವಾದದ ಬಳಿಕ ನೀಡಿದ ಪ್ರಭೊಧನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಇಂದಿನ ಸ್ಪೇನ್ ಎದುರಿಸುತ್ತಿರುವ ಬಡತನ, ಸಾಮಾಜಿಕ ವಿಭಜನೆ ಮತ್ತು ಸಾಂಸ್ಕೃತಿಕ ಬದಲಾವಣೆಗಳಂತಹ ಸವಾಲುಗಳ ಬಗ್ಗೆ ಪ್ರಾಮಾಣಿಕವಾಗಿ ಚಿಂತಿಸುವಂತೆ ಎಲ್ಲರನ್ನೂ ಆಹ್ವಾನಿಸಿದರು. ಒಟ್ಟಾಗಿ ಯಾವ ರೀತಿಯ ಭವಿಷ್ಯವನ್ನು ನಿರ್ಮಿಸಲು ಬಯಸುತ್ತೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ತಮ್ಮೊಳಗೆ ಕೇಳಿಕೊಳ್ಳಬೇಕು ಎಂದು ಅವರು ಹೇಳಿದರು.

ಆಗ ಈ ದೇಶವು ಎಲ್ಲರನ್ನೂ ಸ್ವಾಗತಿಸುವ ಸ್ಥಳವಾಗುತ್ತದೆ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗೌರವಿಸಲಾಗುತ್ತದೆ ಮತ್ತು ಪ್ರತಿಯೊಬ್ಬರೂ ಅವರು ಯಾರು ಎಂಬ ಕಾರಣಕ್ಕಾಗಿ ಪ್ರೀತಿಸಲ್ಪಡುತ್ತಾರೆ ಎಂದು ಜಗದ್ಗುರು XIVನೇ ಲಿಯೋರವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

10 ಜೂನ್ 2026, 17:39