ಬೈರುತ್‌ನಲ್ಲಿ ಶಾಲೆಯಾಗಿ ಪರಿವರ್ತನೆಗೊಂಡ ಆಶ್ರಯದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ  ಸಹಾಯ ಸಾಮಗ್ರಿಗಳ ಪೆಟ್ಟಿಗೆಗಳು. ಬೈರುತ್‌ನಲ್ಲಿ ಶಾಲೆಯಾಗಿ ಪರಿವರ್ತನೆಗೊಂಡ ಆಶ್ರಯದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಸಹಾಯ ಸಾಮಗ್ರಿಗಳ ಪೆಟ್ಟಿಗೆಗಳು. 

ಜಗದ್ಗುರು ಲಿಯೋರವರು ರೋಮಿನಲ್ಲಿರುವ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ.

ಜಗದ್ಗುರುಗಳ ನಿವಾಸದ ಪ್ರಿಫೆಕ್ಚರ್ ಪ್ರಕಟಿಸಿದ ಮಾಹಿತಿಯ ಪ್ರಕಾರ, ಜಗದ್ಗುರು XIVನೇ ಲಿಯೋರವರು ಜೂನ್ 22ರಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯ ಕಚೇರಿಗೆ ಭೇಟಿ ನೀಡಲಿದ್ದಾರೆ.

ವ್ಯಾಟಿಕನ್ ವರದಿ

“ವಿಶ್ವ ಆಹಾರ ಕಾರ್ಯಕ್ರಮದ  ಕಾರ್ಯನಿರ್ವಾಹಕ ನಿರ್ದೇಶಕರ ಆಹ್ವಾನವನ್ನು ಸ್ವೀಕರಿಸಿರುವ ಜಗದ್ಗುರುಗಳು, ಜೂನ್ 22ರ ಸೋಮವಾರ ರೋಮಿನಲ್ಲಿರುವ ಸಂಸ್ಥೆಯ ಮುಖ್ಯ ಕಚೇರಿಗೆ ಭೇಟಿ ನೀಡಿ, ಕಾರ್ಯನಿರ್ವಾಹಕ ಮಂಡಳಿಯ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿರುವ ಸದಸ್ಯರು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದಾರೆ.”

ಜಗದ್ಗುರುಗಳ ನಿವಾಸದ ಪ್ರಿಫೆಕ್ಚರ್ ಹೊರಡಿಸಿದ ಈ ಪ್ರಕಟಣೆಯನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ಮಂಗಳವಾರ ಪ್ರಕಟಿಸಿತು.

ಕಳೆದ ತಿಂಗಳು, ಜಗದ್ಗುರು XIVನೇ ಲಿಯೋರವರು ಮೇ ತಿಂಗಳ ತಮ್ಮ ಪ್ರಾರ್ಥನಾ ಉದ್ದೇಶವಾಗಿ “ಪ್ರತಿಯೊಬ್ಬರಿಗೂ ಆಹಾರ ದೊರಕಲಿ” ಎಂಬ ಆಶಯವನ್ನು ಘೋಷಿಸಿದ್ದರು. ಜಗತ್ತಿನಾದ್ಯಂತದ ಕಥೋಲಿಕರನ್ನು ಈ ಉದ್ದೇಶಕ್ಕಾಗಿ ಪ್ರಾರ್ಥಿಸಲು ಮತ್ತು ಕಾರ್ಯನಿರ್ವಹಿಸಲು ಆಹ್ವಾನಿಸಿದ ಅವರು, ಅಪಾರ ಪ್ರಮಾಣದ ಆಹಾರ ವ್ಯರ್ಥವಾಗುತ್ತಿರುವಾಗಲೂ ಲಕ್ಷಾಂತರ ಸಹೋದರ-ಸಹೋದರಿಯರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಗಮನ ಸೆಳೆದಿದ್ದರು.

ವಿಶ್ವ ಆಹಾರ ಕಾರ್ಯಕ್ರಮದ 2026ರ ಜಾಗತಿಕ ಮುನ್ನೋಟ ವರದಿಯ ಪ್ರಕಾರ, ಈ ವರ್ಷ ಸುಮಾರು 318 ಮಿಲಿಯನ್ ಜನರು ಆಹಾರ ಬಿಕ್ಕಟ್ಟು ಅಥವಾ ಅದಕ್ಕಿಂತಲೂ ಗಂಭೀರ ಪರಿಸ್ಥಿತಿಗಳನ್ನು ಎದುರಿಸಲಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಪರಿಣಾಮವಾಗಿ, ಈ ವರ್ಷದ ಮಧ್ಯಭಾಗದೊಳಗೆ ಇನ್ನೂ 45 ಮಿಲಿಯನ್ ಜನರು ತೀವ್ರ ಹಸಿವಿನ ಸಂಕಷ್ಟಕ್ಕೆ ತಳ್ಳಲ್ಪಡುವ ಸಾಧ್ಯತೆಯಿದೆ ಎಂದು ಸಂಸ್ಥೆ ಎಚ್ಚರಿಸಿದೆ.

2025ರ ಅಕ್ಟೋಬರ್ 16ರಂದು, ವಿಶ್ವ ಆಹಾರ ದಿನಾಚರಣೆ ಹಾಗೂ ಸಂಸ್ಥೆಯ ಸ್ಥಾಪನೆಯ 80ನೇ ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರು ಲಿಯೋರವರು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಮುಖ್ಯ ಕಚೇರಿಗೆ ಭೇಟಿ ನೀಡಿದ್ದರು.

ಅಂದು ಎಫ್ಎಒನಲ್ಲಿ ಮಾಡಿದ ತಮ್ಮ ಭಾಷಣದಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳದ ಸಂಸ್ಥೆಯೊಂದಿಗಿನ ತನ್ನ ಆತ್ಮೀಯತೆಯನ್ನು ಪುನರುಚ್ಚರಿಸಿದ ಜಗದ್ಗುರುಗಳು, ಹಸಿವು ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನೆಗೊಳಿಸಲು ಜಾಗತಿಕ ಮಟ್ಟದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬದ್ಧತೆಯನ್ನು ತೋರಬೇಕೆಂದು ಕರೆ ನೀಡಿದ್ದರು.

16 ಜೂನ್ 2026, 16:32