ಸ್ಪೇನಿನ ಆಗಸ್ಟಿನಿಯನ್‌ರಿಗೆ ಜಗದ್ಗುರುಗಳು: ಪರಸ್ಪರ ಐಕ್ಯತೆ ಮತ್ತು ಏಕತೆ ಇಂದಿನ ಜಗತ್ತಿಗೆ ನೀಡುವ ಮಹತ್ವದ ಸಾಕ್ಷಿಯಾಗಿದೆ.
ವ್ಯಾಟಿಕನ್ ವರದಿ
ಜೂನ್ 7, ಭಾನುವಾರದ ಮಧ್ಯಾಹ್ನ, ದಿನದ ಅಂತಿಮ ಕಾರ್ಯಕ್ರಮವಾಗಿ ಮ್ಯಾಡ್ರಿಡ್‌ನ ಮೊವಿಸ್ಟಾರ್ ಅರೆನಾದಲ್ಲಿ ಸಂಸ್ಕೃತಿ, ಕಲೆ, ಆರ್ಥಿಕತೆ ಮತ್ತು ಕ್ರೀಡಾ ಕ್ಷೇತ್ರಗಳ ಪ್ರತಿನಿಧಿಗಳನ್ನು ಭೇಟಿಯಾಗುವ ಮೊದಲು, ಜಗದ್ಗುರು XIVನೇ ಲಿಯೋರವರು ಮ್ಯಾಡ್ರಿಡ್‌ನಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಸುಮಾರು 220 ಮಂದಿ ಆಗಸ್ಟಿನಿಯನ್ ಧರ್ಮಗುರುಗಳು ಹಾಗೂ ಆಗಸ್ಟಿನಿಯನ್ ಕುಟುಂಬದ ಹಲವು ಸದಸ್ಯರನ್ನು ಭೇಟಿಯಾದರು.
"ಪ್ರಾಂತೀಯ ಮೇಲಾಧಿಕಾರಿಯ ಸ್ವಾಗತ ಭಾಷಣದ ನಂತರ, ಜಗದ್ಗುರುಗಳು ತಮ್ಮನ್ನು ಭೇಟಿಯಾಗುವ ಅವಕಾಶ ದೊರೆತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಅಲ್ಲಿದ್ದವರನ್ನು ಉದ್ದೇಶಿಸಿ ಮಾತನಾಡಿದರು. ಆಗಸ್ಟಿನಿಯನ್‌ರ ನಡುವಿನ ಹೃದಯಗಳ ಐಕ್ಯತೆ ಮತ್ತು ಏಕಮನಸ್ಸು ಇತಿಹಾಸದ ಈ ಮಹತ್ವದ ಘಟ್ಟದಲ್ಲಿ ಜಗತ್ತಿಗೆ ಒಂದು ಪ್ರಬಲ ಸಂದೇಶವಾಗಬಲ್ಲದು ಎಂಬುದನ್ನು ಅವರು ಒತ್ತಿಹೇಳಿದರು" ಎಂದು ಭಾನುವಾರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಂದುವರಿದ ಪ್ರಕಟಣೆಯಲ್ಲಿ, "ಈ ಸಂದೇಶವನ್ನು ಯುವಜನರೊಂದಿಗೆ ಹಂಚಿಕೊಳ್ಳಬೇಕಾಗಿದೆ. ಶನಿವಾರ ಸಂಜೆ ಪ್ಲಾಸಾ ದೆ ಲಿಮಾದಲ್ಲಿ ನಡೆದ ಪ್ರಾರ್ಥನಾ ಜಾಗರಣೆಯಲ್ಲಿ ಭಾಗವಹಿಸಿದ್ದ ಸುಮಾರು ಆರು ಲಕ್ಷ ಯುವಜನರು ತಮ್ಮ ಪ್ರಶ್ನೆಗಳು ಮತ್ತು ಆಧ್ಯಾತ್ಮಿಕ ಅನ್ವೇಷಣೆಯನ್ನು ವ್ಯಕ್ತಪಡಿಸಿದರು" ಎಂದು ಉಲ್ಲೇಖಿಸಲಾಗಿದೆ.
ಆಗಸ್ಟಿನಿಯನ್‌ರೊಂದಿಗಿನ ಭೇಟಿಯ ಸಂದರ್ಭದಲ್ಲಿ, ಅಲ್ಲಿದ್ದ ಧ್ಯಾನಮಗ್ನ ಸನ್ಯಾಸಿನಿಯರ ಉಪಸ್ಥಿತಿಯನ್ನು ಜಗದ್ಗುರು ಲಿಯೋರವರು ವಿಶೇಷವಾಗಿ ಪ್ರಸ್ತಾಪಿಸಿ, "ಮೌನ ಮತ್ತು ಮನುಷ್ಯನು ತನ್ನ ಅಂತರಂಗದೊಳಗೆ ಪ್ರವೇಶಿಸುವ ಸಾಮರ್ಥ್ಯವು ಕ್ಷೀಣಿಸುತ್ತಿರುವ ಈ ಕಾಲದಲ್ಲಿ, ಅವರ ಜೀವನವ್ರತವು ಸಾಮಾಜಿಕ ಸೇವೆಗೂ ಅರ್ಥ ಮತ್ತು ಆಳವನ್ನು ನೀಡುವ ಅಮೂಲ್ಯ ಸಾಕ್ಷಿಯಾಗಿದೆ" ಎಂದು ಹೇಳಿದರು.
ನಂತರ ಜಗದ್ಗುರುಗಳು ಅಲ್ಲಿದ್ದ ಎಲ್ಲರನ್ನು ಒಟ್ಟಾಗಿ ಪ್ರಭುವಿನ ಪ್ರಾರ್ಥನೆಯನ್ನು ಸಲ್ಲಿಸಲು ಆಹ್ವಾನಿಸಿ, ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು. ಬಳಿಕ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಭೇಟಿಯಾಗಿ ಶುಭಾಶಯ ಕೋರಿದರು.
ಜಗದ್ಗುರು XIVನೇ ಲಿಯೋರವರು ಜೂನ್ 6ರಿಂದ 12ರವರೆಗೆ ನಡೆಯುತ್ತಿರುವ ತಮ್ಮ ಸ್ಪೇನ್ ದೇಶದ ಪ್ರೇಷಿತರ ಯಾತ್ರೆಯ ಮೊದಲ ಹಂತದ ಅಂಗವಾಗಿ ಪ್ರಸ್ತುತ ಮ್ಯಾಡ್ರಿಡ್‌ನಲ್ಲಿ ಇದ್ದಾರೆ. ಈ ಯಾತ್ರೆಯ ಭಾಗವಾಗಿ ಅವರು ಬಾರ್ಸಿಲೋನಾ ಹಾಗೂ ಕ್ಯಾನರಿ ದ್ವೀಪಗಳಿಗೂ ಭೇಟಿ ನೀಡಲಿದ್ದಾರೆ.
