ಹುಡುಕಿ

 Pope Leo XIV visits Spain

ಜಗದ್ಗುರುಗಳು ಸ್ಪೇನಿನ ಸಂಸತ್ತಿಗೆ: ನ್ಯಾಯಯುತ ಸಮಾಜವು ಪ್ರತಿಯೊಬ್ಬ ಮಾನವ ಜೀವ, ಶಾಂತಿ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ.

ಐತಿಹಾಸಿಕ ಮಹತ್ವದ ಮೊದಲ ಘಟನೆಯಾಗಿ, ಜಗದ್ಗುರು XIVನೇ ಲಿಯೋರವರು ಮ್ಯಾಡ್ರಿಡ್‌ನ ಸ್ಪೇನ್ ಸಂಸತ್ತಿನ ಕೆಳಮನೆಯಾದ ಕಾಂಗ್ರೆಸ್ ಆಫ್ ಡೆಪ್ಯುಟೀಸ್‌ನ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು, ನಿಜವಾದ ಪ್ರಜಾಪ್ರಭುತ್ವ ಸಮಾಜವು ಚಿಂತನೆ, ಅಂತಃಕರಣ ಮತ್ತು ಧರ್ಮಸ್ವಾತಂತ್ರ್ಯವನ್ನು ಉತ್ತೇಜಿಸಬೇಕು ಎಂದು ಹೇಳಿದರು. ಕುಟುಂಬಗಳಿಗೆ ಬೆಂಬಲ ನೀಡುವುದು ರಾಷ್ಟ್ರವನ್ನು ಬಲಪಡಿಸುತ್ತದೆ, ಗರ್ಭಧಾರಣೆಯ ಕ್ಷಣದಿಂದ ಸಹಜ ಮರಣದವರೆಗೆ ಪ್ರತಿಯೊಂದು ಮಾನವ ಜೀವವನ್ನು ರಕ್ಷಿಸಬೇಕು, ಪ್ರತಿಯೊಂದು ಯುದ್ಧವೂ ಮಾನವಕುಲಕ್ಕೆ ನೋವಿನ ಸೋಲಾಗಿದೆ ಎಂದರು.

ವ್ಯಾಟಿಕನ್ ವರದಿ

ಸ್ಪೇನಿನ ಸಂಸತ್ತಿನ ಸದಸ್ಯರನ್ನು ಉದ್ದೇಶಿಸಿ ಜಗದ್ಗುರು XIVನೇ ಲಿಯೋರವರು ಸೋಮವಾರ ಐತಿಹಾಸಿಕ ಭಾಷಣ ಮಾಡಿದರು. ಒಬ್ಬ ಜಗದ್ಗುರು ಮೊದಲ ಬಾರಿಗೆ ಈ ಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಇದಾಗಿತ್ತು. ತಮ್ಮ ಭಾಷಣದಲ್ಲಿ ಅವರು, ನಿಜವಾದ ಪ್ರಜಾಪ್ರಭುತ್ವ ಸಮಾಜವು ಚಿಂತನೆ, ಅಂತಃಕರಣ ಮತ್ತು ಧರ್ಮಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದು ಒತ್ತಿಹೇಳಿದರು. ಮಾನವನ ಸಹಜ ಮತ್ತು ಅಲಂಘನೀಯ ಘನತೆಯನ್ನು ಯಾವುದೇ ರಾಜ್ಯ ಅಥವಾ ಬಹುಮತದ ಅಭಿಪ್ರಾಯಕ್ಕಿಂತಲೂ ಮೇಲಾಗಿ ಪರಿಗಣಿಸಬೇಕೆಂದು ಅವರು ಹೇಳಿದರು.

ಪ್ರತಿಯೊಂದು ಮಾನವ ಜೀವವೂ ಗರ್ಭಧಾರಣೆಯ ಕ್ಷಣದಿಂದ ಸಹಜ ಮರಣದವರೆಗೆ ರಕ್ಷಿಸಲ್ಪಡಬೇಕು ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು. ಹುಟ್ಟಲಿರುವ ಶಿಶುಗಳು, ವೃದ್ಧರು, ರೋಗಿಗಳು ಮತ್ತು ಇತರರ ಆರೈಕೆಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವವರನ್ನು ಸಮಾಜ ಕಡೆಗಣಿಸಿದರೆ ಅದರ ಭವಿಷ್ಯ ಅಪಾಯಕ್ಕೆ ಸಿಲುಕುತ್ತದೆ ಎಂದು ಅವರು ಎಚ್ಚರಿಸಿದರು. ಕುಟುಂಬವು ಸಮಾಜದ ಮೂಲಾಧಾರವಾಗಿದ್ದು, ಅದನ್ನು ಬೆಂಬಲಿಸುವುದರಿಂದ ರಾಷ್ಟ್ರದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ಥಿರತೆಯೂ ಬಲಗೊಳ್ಳುತ್ತದೆ ಎಂದರು.

ವಲಸೆ ಮತ್ತು ನಿರಾಶ್ರಿತರ ಸಮಸ್ಯೆಯನ್ನು ಪ್ರಸ್ತಾಪಿಸಿದ ಜಗದ್ಗುರುಗಳು, ಯುದ್ಧ, ಬಡತನ, ಅಸಮಾನತೆ ಮತ್ತು ಹವಾಮಾನ ಬಿಕ್ಕಟ್ಟಿನಿಂದ ಅನೇಕ ಜನರು ತಮ್ಮ ತಾಯ್ನಾಡನ್ನು ತೊರೆಯಬೇಕಾಗುತ್ತಿದೆ ಎಂದು ವಿಷಾದಿಸಿದರು. ವಲಸಿಗರಿಗೆ ಸುರಕ್ಷಿತ ಮತ್ತು ಕಾನೂನುಬದ್ಧ ಮಾರ್ಗಗಳನ್ನು ಒದಗಿಸುವುದರ ಜೊತೆಗೆ, ಯಾರೂ ತಮ್ಮ ದೇಶವನ್ನು ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗದಂತೆ ಶಾಂತಿ ಮತ್ತು ಮಾನವೀಯ ಜೀವನ ಪರಿಸ್ಥಿತಿಗಳನ್ನು ನಿರ್ಮಿಸಬೇಕೆಂದು ಅವರು ಕರೆ ನೀಡಿದರು.

ಇಂದಿನ ಜಗತ್ತು ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿದ ಜಗದ್ಗುರುಗಳು, ಶಾಂತಿಯು ಕೇವಲ ರಾಜಕೀಯ ಗುರಿಯಲ್ಲ, ಅದು ನೈತಿಕ ಅಗತ್ಯವೂ ಹೌದು ಎಂದು ಹೇಳಿದರು. ಪ್ರತಿಯೊಂದು ಯುದ್ಧವೂ ಅಂತಿಮವಾಗಿ ಮಾನವಕುಲದ ಸಂವಾದ ಸಾಮರ್ಥ್ಯದ ನೋವಿನ ಸೋಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಶಸ್ತ್ರಾಸ್ತ್ರಗಳು ತಾತ್ಕಾಲಿಕ ಮೌನವನ್ನು ತರಬಹುದು, ಆದರೆ ಶಾಶ್ವತ ಶಾಂತಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.

ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನಗಳ ಬೆಳವಣಿಗೆಯು, ವಿಶೇಷವಾಗಿ ಸೇನಾ ಕ್ಷೇತ್ರದಲ್ಲಿ, ಕಟ್ಟುನಿಟ್ಟಾದ ನೈತಿಕ ಮೇಲ್ವಿಚಾರಣೆಗೆ ಒಳಪಟ್ಟಿರಬೇಕು ಎಂದು ಜಗದ್ಗುರುಗಳು ಹೇಳಿದರು. ಜೀವ ಮತ್ತು ಮರಣದ ಕುರಿತ ನಿರ್ಧಾರಗಳನ್ನು ಯಂತ್ರಗಳಿಗೆ ಬಿಟ್ಟುಕೊಡಬಾರದು ಎಂದು ಅವರು ಒತ್ತಿಹೇಳಿದರು. ಅದೇ ರೀತಿ, ಧರ್ಮಸ್ವಾತಂತ್ರ್ಯವು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದ್ದು, ನಂಬಿಕೆಯ ಕಾರಣಕ್ಕಾಗಿ ಯಾರೂ ಸಾರ್ವಜನಿಕ ಜೀವನದಿಂದ ದೂರವಾಗಬೇಕಾದ ಪರಿಸ್ಥಿತಿ ಬರಬಾರದು ಎಂದರು.

ತಮ್ಮ ಭಾಷಣದ ಕೊನೆಯಲ್ಲಿ, ಸಾರ್ವಜನಿಕ ಅಧಿಕಾರಿಗಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ನಿಜವಾದ ಮಾನವರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು ಎಂದು ಜಗದ್ಗುರುಗಳು ಸದಸ್ಯರಿಗೆ ನೆನಪಿಸಿದರು. ಸ್ಪೇನಿನ ತನ್ನ ಕ್ರೈಸ್ತ ಬೇರುಗಳನ್ನು ಮರೆಯದೆ, ಸಂಸ್ಕೃತಿ, ಐಕ್ಯತೆ, ಸಹಾನುಭೂತಿ ಮತ್ತು ಭರವಸೆಯ ನೆಲವಾಗಿ ಮುಂದುವರಿಯಲಿ ಎಂದು ಅವರು ಪ್ರಾರ್ಥಿಸಿದರು. ಅವರ ಭಾಷಣಕ್ಕೆ ಸಂಸತ್ ಸದಸ್ಯರು ಏಳು ನಿಮಿಷಗಳಿಗೂ ಹೆಚ್ಚು ಕಾಲ ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು.

 

08 ಜೂನ್ 2026, 18:15