ಮೇ 23, 2026 ರಂದು ಇಟಲಿಯ ಅಸೆರಾಗೆ ಜಗದ್ಗುರು XIVನೇ ಲಿಯೋರವರು ಯಾಜಕರ ಭೇಟಿಯ ಫೈಲ್ ಫೋಟೋ. ಮೇ 23, 2026 ರಂದು ಇಟಲಿಯ ಅಸೆರಾಗೆ ಜಗದ್ಗುರು XIVನೇ ಲಿಯೋರವರು ಯಾಜಕರ ಭೇಟಿಯ ಫೈಲ್ ಫೋಟೋ.  (AFP or licensors)

"ಸುವಾರ್ತೆಯ ಪ್ರಸಾರ ಮತ್ತು ವಲಸಿಗರೊಂದಿಗಿನ ನಿಕಟತೆ: ಯುರೋಪಿನ ಹೃದಯಭಾಗದತ್ತ ಒಂದು ಪಯಣ".

ಪೂಜ್ಯನೀಯ ಆಂಟೋನಿ ಗೌಡಿರವರ ನಿಧನದ ಶತಮಾನೋತ್ಸವದ ಅಂಗವಾಗಿ ನಡೆಯಲಿರುವ ಜಗದ್ಗುರು XIVನೇ ಲಿಯೋರವರ ಸ್ಪೇನ್ ದೇಶದ ಪ್ರೇಷಿತರ ಪ್ರವಾಸದ ಸವಾಲುಗಳ ಕುರಿತು ನಮ್ಮ ಸಂಪಾದಕೀಯ ನಿರ್ದೇಶಕರು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಈ ಪ್ರವಾಸದಲ್ಲಿ ಜಗದ್ಗುರುಗಳು ಮ್ಯಾಡ್ರಿಡ್, ಬಾರ್ಸಿಲೋನಾ ಹಾಗೂ ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡಲಿದ್ದಾರೆ.

 ವ್ಯಾಟಿಕನ್ ವರದಿ

ಪೂಜ್ಯನೀಯ ಆಂಟೋನಿ ಗೌಡಿರವರ ನಿಧನದ ಶತಮಾನೋತ್ಸವದ ಅಂಗವಾಗಿ ಜಗದ್ಗುರು XIVನೇ ಲಿಯೋರವರು ಕೈಗೊಳ್ಳಲಿರುವ ಏಳು ದಿನಗಳ ಸ್ಪೇನ್ ಪ್ರೇಷಿತರ ಯಾತ್ರೆ ಕೇವಲ ಒಂದು ಅಧಿಕೃತ ಭೇಟಿಯಲ್ಲ ಅದು ಯುರೋಪಿನ ಹೃದಯವನ್ನು ತಲುಪುವ ಆತ್ಮೀಯ ತೀರ್ಥಯಾತ್ರೆಯಾಗಿದೆ. ಮ್ಯಾಡ್ರಿಡ್, ಬಾರ್ಸಿಲೋನಾ ಮತ್ತು ಕ್ಯಾನರಿ ದ್ವೀಪಗಳ ಈ ಮೂರು ಹಂತಗಳು ಇಂದು ಯುರೋಪಿನ ಧರ್ಮ ಸಭೆ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಪ್ರತಿಬಿಂಬಿಸುತ್ತವೆ. ಟರ್ಕಿಯೆ, ಲೆಬನಾನ್, ಮೊನಾಕೊ ಮತ್ತು ಆಫ್ರಿಕಾದ ದೇಶಗಳಿಗೆ ನಡೆದ ಹಿಂದಿನ ಯಾತ್ರೆಗಳ ನಂತರ, ಈ ಭೇಟಿ ಸಮಕಾಲೀನ ಯುರೋಪಿನ ವಾಸ್ತವಿಕತೆಗೆ ಜಗದ್ಗುರುಗಳ ನೇರ ಮುಖಾಮುಖಿಯಾಗಿದೆ.

ಯಾತ್ರೆಯ ಮೊದಲ ಹಂತವಾದ ಮ್ಯಾಡ್ರಿಡ್‌ನಲ್ಲಿ ಜಗದ್ಗುರುಗಳು ಸಂಸತ್ ಸದಸ್ಯರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯವನ್ನು ಧರ್ಮ ಸಭೆ ಹೇಗೆ ನೋಡುತ್ತದೆ ಮತ್ತು ಸಾಮಾನ್ಯ ಹಿತಕ್ಕಾಗಿ ಸೇವೆ ಸಲ್ಲಿಸುವ ಬದ್ಧತೆಯನ್ನು ಹೇಗೆ ಅರ್ಥೈಸುತ್ತದೆ ಎಂಬ ಸಂದೇಶವನ್ನು ಅವರು ನೀಡಲಿದ್ದಾರೆ. ಧರ್ಮಸಭೆ ಯಾವುದೇ ರಾಜಕೀಯ ಶಕ್ತಿಯೊಂದಿಗೂ ತನ್ನನ್ನು ಕಟ್ಟಿಹಾಕಿಕೊಳ್ಳದೆ, ಸುವಾರ್ತೆಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಹೆಚ್ಚು ನ್ಯಾಯಯುತ, ಮಾನವೀಯ ಮತ್ತು ಅಂಚಿನಲ್ಲಿರುವವರನ್ನು ಒಳಗೊಳ್ಳುವ ಸಮಾಜವನ್ನು ನಿರ್ಮಿಸಲು ಕರೆ ನೀಡುತ್ತದೆ.

ಬಾರ್ಸಿಲೋನಾದಲ್ಲಿ ವಿಶ್ವವಿಖ್ಯಾತ ಸಗ್ರಾದಾ ಫಮಿಲಿಯಾ ಬಸಿಲಿಕಾಗೆ ಭೇಟಿ ನೀಡುವ ಜಗದ್ಗುರುಗಳು, ಯೇಸು ಕ್ರಿಸ್ತನಿಗೆ ಸಮರ್ಪಿತವಾಗಿರುವ ಅತಿ ಎತ್ತರದ ಗೋಪುರವನ್ನು ಉದ್ಘಾಟಿಸಲಿದ್ದಾರೆ. ಪೂಜ್ಯನೀಯ ಆಂಟೋನಿ ಗೌಡಿರವರ ನಂಬಿಕೆ ಮತ್ತು ಪ್ರತಿಭೆಯ ಫಲವಾಗಿರುವ ಈ ಮಹಾಕಟ್ಟಡವು ಸೌಂದರ್ಯದ ಮೂಲಕ ಸುವಾರ್ತೆಯನ್ನು ಸಾರುವ ಧರ್ಮ ಸಭೆಯ ಶಾಶ್ವತ ಪರಂಪರೆಯ ಸಂಕೇತವಾಗಿದೆ. ಕುಟುಂಬಗಳಲ್ಲಿ ನಂಬಿಕೆಯ ಪರಂಪರೆ ಕ್ಷೀಣಿಸುತ್ತಿರುವ ಇಂದಿನ ಯುರೋಪಿನಲ್ಲಿ, ಕಲೆಯ ಮತ್ತು ಸೌಂದರ್ಯದ ಭಾಷೆಯ ಮೂಲಕ ಜನರ ಹೃದಯಗಳನ್ನು ತಲುಪುವ ಅಗತ್ಯವನ್ನು ಈ ಭೇಟಿ ನೆನಪಿಸುತ್ತದೆ.

ಯಾತ್ರೆಯ ಅಂತಿಮ ಹಂತವಾದ ಗ್ರಾನ್ ಕನಾರಿಯಾ ಮತ್ತು ಟೆನೆರಿಫೆ ದ್ವೀಪಗಳಲ್ಲಿ ಜಗದ್ಗುರುಗಳು ವಲಸಿಗರ ದುಃಖವನ್ನು ನೇರವಾಗಿ ಕಾಣಲಿದ್ದಾರೆ. ಸಮುದ್ರದ ಅಪಾಯಕಾರಿ ಪ್ರಯಾಣವನ್ನು ದಾಟಿ ಬದುಕುಳಿದ ಸಾವಿರಾರು ಜನರು ಯುರೋಪಿನ ಬಾಗಿಲಿಗೆ ತಲುಪಿದರೂ, ಅವರ ಸಮಸ್ಯೆಗಳಿಗೆ ಸಮನ್ವಯದ ಮತ್ತು ಮಾನವೀಯ ಪ್ರತಿಕ್ರಿಯೆ ದೊರೆಯುತ್ತಿಲ್ಲ. ಈ ಸಂದರ್ಭದಲ್ಲಿ, ಬಡವರು, ನಿರ್ಗತಿಕರು ಮತ್ತು ಪರದೇಶಿಗಳೊಂದಿಗೆ ನಿಕಟವಾಗಿರಬೇಕೆಂಬ ಕ್ರಿಸ್ತನ ಕರೆಯನ್ನು ಜಗದ್ಗುರುಗಳು ಮತ್ತೊಮ್ಮೆ ಜಗತ್ತಿಗೆ ನೆನಪಿಸಲಿದ್ದಾರೆ.

ಜಗದ್ಗುರು XIVನೇ ಲಿಯೋರವರ ಈ ಸ್ಪೇನ್ ಯಾತ್ರೆಯು ಸುವಾರ್ತಾ ಪ್ರಸಾರ, ಸೌಂದರ್ಯದ ಮೂಲಕ ನಂಬಿಕೆಯ ಸಾಕ್ಷಿ ಮತ್ತು ವಲಸಿಗರೊಂದಿಗೆ ಮಾನವೀಯ ಐಕ್ಯತೆ ಎಂಬ ಮೂರು ಪ್ರಮುಖ ಸಂದೇಶಗಳನ್ನು ಜಗತ್ತಿಗೆ ನೀಡುತ್ತದೆ. ವಿಶೇಷವಾಗಿ ಕ್ಯಾನರಿ ದ್ವೀಪಗಳ ಭೇಟಿ, ಸಮಾಜದ ಅತಿ ದುರ್ಬಲರ ನೋವನ್ನು ಅರಿತುಕೊಂಡು ಅವರಿಗೆ ಕ್ರೈಸ್ತ ಪ್ರೀತಿಯ ಸಾಕ್ಷಿಯಾಗುವಂತೆ ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತದೆ. ಅಂತಿಮವಾಗಿ, ಈ ಯಾತ್ರೆ ವಿಶ್ವದ ಎಲ್ಲರಿಗೂ ಒಂದು ಸರಳವಾದ ಆದರೆ ಗಾಢವಾದ ಸಂದೇಶವನ್ನು ಸಾರುತ್ತದೆ ಯಾವುದೇ ಪರಿಸ್ಥಿತಿಯಲ್ಲಿಯೂ ನಾವು ನಮ್ಮ ಮಾನವೀಯತೆಯನ್ನು ಕಳೆದುಕೊಳ್ಳಬಾರದು.

05 ಜೂನ್ 2026, 14:50