ಹುಡುಕಿ

Oltre 40.00 i partecipanti alla messa del Papa a Tenerife

“ತೆನೆರಿಫೆಯಲ್ಲಿ ಜಗದ್ಗುರು ಲಿಯೋರವರು: ಕ್ರಿಸ್ತನ ಪ್ರೀತಿಯ ಸಾಗರದತ್ತ ಮನಸ್ಸುಗಳನ್ನು ತೆರೆಯುವಂತೆ ಕರೆ”.

ಸಾಂತಾ ಕ್ರೂಸ್ ದೆ ತೆನೆರಿಫೆ ಬಂದರಿನಲ್ಲಿ ತಮ್ಮ ಪ್ರೇಷಿತರ ಸ್ಪೇನಿನ ಪ್ರವಾಸವನ್ನು ಸಮಾಪ್ತಿಗೊಳಿಸಿದ ಜಗದ್ಗುರು ಲಿಯೋರವರು, “ಯಾವ ವ್ಯಕ್ತಿಯೂ ಇತರರಿಂದ ಪ್ರತ್ಯೇಕವಾಗಿ ಬದುಕುವ ದ್ವೀಪವಲ್ಲ” ಎಂದು ಸಾರಿದರು.

ವ್ಯಾಟಿಕನ್ ವರದಿ

ಅಟ್ಲಾಂಟಿಕ್ ಮಹಾಸಾಗರದ ನೀರುಗಳು ಮಿನುಗುತ್ತಿದ್ದ ಸಾಂತಾ ಕ್ರೂಸ್ ದೆ ತೆನೆರಿಫೆ ಬಂದರಿನ ಸುಂದರ ಹಿನ್ನೆಲೆಯ ನಡುವೆ, ಜಗದ್ಗುರು XIVನೇ ಲಿಯೋರವರು ಕ್ಯಾನರಿ ದ್ವೀಪಗಳ ಭೇಟಿಯನ್ನು ಹಾಗೂ ಅದರೊಂದಿಗೆ ತಮ್ಮ ಪ್ರೇಷಿತರ ಸ್ಪೇನಿನ ಯಾತ್ರೆಯನ್ನು ಸಮಾಪ್ತಿಗೊಳಿಸಿದರು. ತಮ್ಮ ಪ್ರಭೊಧನೆಯಲ್ಲಿ ಅವರು ಯೇಸುವಿನ ಪವಿತ್ರ ಹೃದಯವನ್ನು ಮಾನವ ಇತಿಹಾಸದ ಕೇಂದ್ರವೆಂದು ಬಣ್ಣಿಸಿ, ಮಾನವರ ಸಂತೋಷ, ನಿರೀಕ್ಷೆ, ದುಃಖ ಮತ್ತು ಆತಂಕಗಳೆಲ್ಲವೂ ಅಲ್ಲಿ ಪ್ರತಿಧ್ವನಿಸುತ್ತವೆ ಎಂದು ಹೇಳಿದರು.

“ಯಾವ ಮಾನವನೂ ಒಂದು ಪ್ರತ್ಯೇಕ ದ್ವೀಪವಲ್ಲ” ಎಂದು ಒತ್ತಿಹೇಳಿದ ಜಗದ್ಗುರುಗಳು, ಕ್ರೈಸ್ತ ಜೀವನವು ಇತರರತ್ತ ಮತ್ತು ದೇವರತ್ತ ಸಾಗುವ ನಿರಂತರ ಪ್ರಯಾಣವಾಗಿದೆ ಎಂದು ನೆನಪಿಸಿದರು. ಆತುರ, ಭೌತಿಕವಾದ ಮತ್ತು ಲಾಭದಾಸೆಯಿಂದ ಕೂಡಿದ ಸಮಾಜವು ಮನುಷ್ಯರನ್ನು ಫಲವಿಲ್ಲದ ಚಟುವಟಿಕೆಗಳಲ್ಲಿ ಸಿಲುಕಿಸಬಹುದು ಎಂದು ಅವರು ಎಚ್ಚರಿಕೆ ನೀಡಿದರು. “ಜೀವನವನ್ನು ನೀಡಿದಾಗಲೇ ನಿಜವಾದ ಜೀವನ ದೊರೆಯುತ್ತದೆ” ಎಂದು ಅವರು ಹೇಳಿದರು.

ಆ ದಿನದ ಸುವಾರ್ತೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ದೇವರ ಯೋಜನೆಯಲ್ಲಿ ಬಡವರು ಮತ್ತು ಅಂಚಿನಲ್ಲಿರುವವರಿಗೆ ವಿಶೇಷ ಸ್ಥಾನವಿದೆ ಎಂದು ತಿಳಿಸಿದರು. ಲೋಕವು ಅಪ್ರಮುಖರೆಂದು ಪರಿಗಣಿಸುವವರಲ್ಲಿಯೇ ದೇವರ ಪ್ರಕಟನೆ ಹೆಚ್ಚಾಗಿ ವ್ಯಕ್ತವಾಗುತ್ತದೆ ಎಂದು ಅವರು ಹೇಳಿದರು. ಬಡವರು ಕೇವಲ ಸಹಾಯ ಪಡೆಯುವವರಲ್ಲ, ಧರ್ಮ ಸಭೆಗೆ ಸುವಾರ್ತೆಯನ್ನು ಸಾರಬಲ್ಲ ಜ್ಞಾನವನ್ನು ಹೊಂದಿರುವವರೂ ಆಗಿದ್ದಾರೆ ಎಂದು ಅವರು ನೆನಪಿಸಿದರು.

ಅಟ್ಲಾಂಟಿಕ್ ಸಮುದ್ರವನ್ನು ದಾಟಿ ಬರುವ ವಲಸಿಗರ ಪ್ರಮುಖ ಪ್ರವೇಶ ಕೇಂದ್ರವಾಗಿರುವ ಕ್ಯಾನರಿ ದ್ವೀಪಗಳ ಹಿನ್ನೆಲೆಯಲ್ಲಿ, ಜಗದ್ಗುರುಗಳು ವಲಸಿಗರು ಎದುರಿಸುವ ಕಠಿಣ ವಾಸ್ತವತೆಗಳತ್ತ ಗಮನ ಸೆಳೆದರು. ಮಾನವ ಕಳ್ಳಸಾಗಣೆಗಾರರ ಶೋಷಣೆಗೆ ಒಳಗಾಗುವ ಈ ಜನರಿಗೆ ಕೇವಲ ಭೌತಿಕ ಸಹಾಯವಷ್ಟೇ ಅಲ್ಲ, ನಿಜವಾದ ಸಹೋದರತ್ವ ಮತ್ತು ಮಾನವೀಯ ಸ್ವಾಗತವನ್ನು ನೀಡುವಂತೆ ಅವರು ಕ್ರೈಸ್ತರನ್ನು ಕರೆದರು.

ಸ್ಥಳೀಯ ಸಮುದಾಯಗಳು ಹೊಸದಾಗಿ ಬರುವವರನ್ನು ಕೇವಲ ಸ್ವೀಕರಿಸುವುದಷ್ಟೇ ಅಲ್ಲ, ಅವರ ಅನುಭವಗಳಿಂದ ತಾವೂ ರೂಪಾಂತರಗೊಳ್ಳಬೇಕು ಎಂದು ಜಗದ್ಗುರುಗಳು ಹೇಳಿದರು. ಬಡವರು ಮತ್ತು ವಲಸಿಗರ ಜೀವನಾನುಭವಗಳು, ಸುಖಾಸಕ್ತಿಯ ಮತ್ತು ವ್ಯಕ್ತಿವಾದದ ಬಂಧನದಲ್ಲಿರುವ ಸಮಾಜಗಳಿಗೆ ಅಮೂಲ್ಯವಾದ ಜ್ಞಾನವನ್ನು ನೀಡಬಲ್ಲವು ಎಂದು ಅವರು ವಿವರಿಸಿದರು.

ತಮ್ಮ ಪ್ರಭೋಧನೆಯ ಕೊನೆಯಲ್ಲಿ, ಕ್ಯಾನರಿ ದ್ವೀಪಗಳ ಜನರ ಆತಿಥ್ಯ ಮತ್ತು ಸಹೋದರತ್ವದ ಮನೋಭಾವಕ್ಕೆ ಜಗದ್ಗುರುಗಳು ಕೃತಜ್ಞತೆ ಸಲ್ಲಿಸಿದರು. ಯುವಕರು, ದುರ್ಬಲರು, ಶ್ರೀಮಂತರು, ಬಡವರು, ಸ್ಥಳೀಯರು ಮತ್ತು ಪ್ರವಾಸಿಗರು ಎಲ್ಲರತ್ತಲೂ ವಿಶೇಷ ಕಾಳಜಿ ವಹಿಸುವಂತೆ ಕ್ರೈಸ್ತ ಸಮುದಾಯಗಳನ್ನು ಅವರು ಪ್ರೋತ್ಸಾಹಿಸಿದರು. “ದೇವರು ಪ್ರೀತಿಯಾಗಿದ್ದಾನೆ” ಎಂದು ನೆನಪಿಸಿದ ಅವರು, ಕ್ರಿಸ್ತನ ಹೃದಯದಲ್ಲಿರುವ “ಪ್ರೀತಿಯ ಸಾಗರ”ವನ್ನು ಎಲ್ಲರೂ ಕಂಡುಕೊಳ್ಳುವಂತೆ ಸಹಾಯ ಮಾಡುವಂತೆ ವಿಶ್ವಾಸಿಗಳಿಗೆ ಕರೆ ನೀಡಿದರು. ಅಂತಿಮವಾಗಿ, ಸ್ಪೇನಿನ ಜನರು ತೋರಿದ ಪ್ರೀತಿ, ವಿಶ್ವಾಸ ಮತ್ತು ಧರ್ಮ ಸಭೆಯ ಮೇಲಿನ ನಿಷ್ಠೆಯ ಸಾಕ್ಷ್ಯಗಳಿಂದ ತಾವು ಆಳವಾಗಿ ಸ್ಪರ್ಶಿತರಾಗಿರುವುದಾಗಿ ಹೇಳಿ, ಕೃತಜ್ಞತೆಯಿಂದ ರೋಮಿಗೆ ಮರಳುತ್ತಿರುವುದಾಗಿ ತಿಳಿಸಿದರು.

12 ಜೂನ್ 2026, 21:30