Pope Leo XIV visits Spain

ಸ್ಪೇನ್ ಪ್ರವಾಸದ ಮೂರನೇ ದಿನ: ಇಂದು ಮ್ಯಾಡ್ರಿಡ್‌ನ ಧರ್ಮ ಸಭೆಯ ಮರೆಯಲಾಗದ ಗುರಿಯೊಂದನ್ನು ದಾಖಲಿಸಿತು.

ಮ್ಯಾಡ್ರಿಡ್‌ನಲ್ಲಿ ತಮ್ಮ ಕೊನೆಯ ಪೂರ್ಣ ದಿನದಂದು, ಜಗದ್ಗುರು XIVನೇ ಲಿಯೋರವರು ಅತ್ಯಂತ ಕಾರ್ಯನಿರತ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದರು. ಈ ವೇಳೆ ಅವರು ಸ್ಪೇನ್‌ನ ಸಂಸತ್ತಿಗೆ ಐತಿಹಾಸಿಕ ಭೇಟಿ ನೀಡಿದರು, ಧರ್ಮಗುರುಗಳಿಂದ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರನ್ನು ಭೇಟಿಯಾದರು, ಅಲ್ಮುದೇನಾ ಕ್ಯಾಥೆಡ್ರಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು ಹಾಗೂ ಸಂಜೆ ವೇಳೆಯಲ್ಲಿ ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯದ ಸುಮಾರು 80,000 ವಿಶ್ವಾಸಿಗಳೊಂದಿಗೆ ಸಮಯ ಕಳೆದರು.

ವ್ಯಾಟಿಕನ್ ವರದಿ

ಮ್ಯಾಡ್ರಿಡ್‌ನಲ್ಲಿ ತಮ್ಮ ಕೊನೆಯ ಪೂರ್ಣ ದಿನದಂದು, ಜಗದ್ಗುರು XIVನೇ ಲಿಯೋರವರು ಸ್ಪೇನ್‌ನ ಸಂಸತ್ತಿಗೆ ಐತಿಹಾಸಿಕ ಭೇಟಿ ನೀಡಿ, ಮಾನವ ಘನತೆ, ವಲಸೆ, ಜೀವದ ರಕ್ಷಣೆ, ಶಸ್ತ್ರೀಕರಣ, ಕುಟುಂಬ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಶಾಂತಿಯಂತಹ ಜಾಗತಿಕ ಮಹತ್ವದ ವಿಷಯಗಳ ಕುರಿತು ಮಾತನಾಡಿದರು. ನ್ಯಾಯಯುತ ಸಮಾಜದ ಅಡಿಪಾಯವು ಪ್ರತಿಯೊಬ್ಬ ಮಾನವನ ಉಲ್ಲಂಘಿಸಲಾಗದ ಘನತೆಯನ್ನು ಗುರುತಿಸುವುದರಲ್ಲಿ ಇದೆ ಎಂದು ಅವರು ಒತ್ತಿ ಹೇಳಿದರು. ವಲಸಿಗರು ಮತ್ತು ನಿರಾಶ್ರಿತರ ಸಮಸ್ಯೆಗೆ ಕೇವಲ ವಲಸೆ ನಿರ್ವಹಣೆಯ ದೃಷ್ಟಿಯಿಂದಲ್ಲ, ಅವರ ಸಂಕಷ್ಟಗಳ ಮೂಲ ಕಾರಣಗಳನ್ನು ಪರಿಹರಿಸುವ ಮಾನವೀಯ ದೃಷ್ಟಿಕೋನದಿಂದ ಸ್ಪಂದಿಸಬೇಕು ಎಂದು ಕರೆ ನೀಡಿದರು.

ಯುದ್ಧದ ವಿಷಯವನ್ನು ಪ್ರಸ್ತಾಪಿಸಿದ ಜಗದ್ಗುರುಗಳು, ಪ್ರತಿಯೊಂದು ಯುದ್ಧವೂ ಮಾತುಕತೆ ನಡೆಸುವ ಮಾನವ ಸಾಮರ್ಥ್ಯದ ನೋವಿನ ಸೋಲಾಗಿದೆ ಎಂದು ಹೇಳಿದರು. “ಶಸ್ತ್ರಾಸ್ತ್ರಗಳು ತಾತ್ಕಾಲಿಕ ಮೌನವನ್ನು ಹೇರಬಹುದು, ಆದರೆ ಅವು ಎಂದಿಗೂ ನಿಜವಾದ ಮತ್ತು ಶಾಶ್ವತ ಶಾಂತಿಯನ್ನು ನಿರ್ಮಿಸಲಾರವು” ಎಂದು ಅವರು ಎಚ್ಚರಿಸಿದರು.

ನಂತರ ಸ್ಪೇನಿನ ಬಿಷಪ್‌ಗಳನ್ನು ಭೇಟಿಯಾದ ಜಗದ್ಗುರುಗಳು, ಧರ್ಮ ಸಭೆಯ ನಿಜವಾದ ಶಕ್ತಿ ಅದರ ಸಂಪನ್ಮೂಲಗಳ ಮಹತ್ವದಲ್ಲಿಲ್ಲ, ಬದಲಾಗಿ ಅದರ ಮಕ್ಕಳ ಪಾವಿತ್ರ್ಯದಲ್ಲಿ, ಧರ್ಮಗುರುಗಳ ಐಕ್ಯತೆಯಲ್ಲಿ ಹಾಗೂ ಪವಿತ್ರಾತ್ಮನ ಮಾರ್ಗದರ್ಶನಕ್ಕೆ ನಿಷ್ಠೆಯಿಂದ ಸ್ಪಂದಿಸುವವರಲ್ಲಿ ಇದೆ ಎಂದು ಹೇಳಿದರು. ಐಕ್ಯತೆಯನ್ನು ಕಾಪಾಡುವುದು, ಸಂವಾದವನ್ನು ಉತ್ತೇಜಿಸುವುದು ಮತ್ತು ವಿಭಜನೆಗಳನ್ನು ಗುಣಪಡಿಸುವುದು ಬಿಷಪ್‌ಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಅವರು ನೆನಪಿಸಿದರು.

ದಿನದ ಕಾರ್ಯಕ್ರಮಗಳ ಮಧ್ಯೆ, ಜಗದ್ಗುರು XIVನೇ ಲಿಯೋರವರು ಸ್ಪೇನ್‌ನಲ್ಲಿ ಧರ್ಮಗುರುಗಳಿಂದ ದೌರ್ಜನ್ಯಕ್ಕೆ ಒಳಗಾದ ಆರು ಸಂತ್ರಸ್ತರೊಂದಿಗೆ ಖಾಸಗಿ ಭೇಟಿಯನ್ನು ನಡೆಸಿದರು. ಸುಮಾರು ಒಂದು ಗಂಟೆ ನಡೆದ ಈ ಸಂವಾದದಲ್ಲಿ, ಸಂತ್ರಸ್ತರು ಇಂತಹ ಪ್ರಕರಣಗಳಿಗೆ ಧರ್ಮ ಸಭೆ ನೀಡುವ ಪ್ರತಿಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹಲವು ಸಲಹೆಗಳನ್ನು ಮಂಡಿಸಿದರು. ಜಗದ್ಗುರುಗಳು ತಮ್ಮ ನೋವನ್ನು ಅರ್ಥಮಾಡಿಕೊಂಡು ಅದನ್ನು ತಮ್ಮದೇ ನೋವಿನಂತೆ ಸ್ವೀಕರಿಸಿದ್ದಾರೆ ಎಂಬ ಭಾವನೆ ಸಂತ್ರಸ್ತರಲ್ಲಿ ಮೂಡಿತು ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ತಿಳಿಸಿತು.

ಸಂಜೆಯ ವೇಳೆಯಲ್ಲಿ ಅಲ್ಮುದೇನಾ ಕ್ಯಾಥೆಡ್ರಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಜಗದ್ಗುರುಗಳು, ಕನ್ಯಾ ಮರಿಯಮ್ಮನ ಮೂರ್ತಿಯನ್ನು ಬಹಿರಂಗಪಡಿಸಿದ ಕುಸಿದ ಗೋಡೆಯ ಘಟನೆಯನ್ನು ಸ್ಮರಿಸಿದರು. “ಹೊಸದನ್ನು, ಸುಂದರವಾದುದನ್ನು ಮತ್ತು ಶಾಶ್ವತವಾದುದನ್ನು ನಿರ್ಮಿಸಲು ನಾವು ವಿಭಜನೆಯ ಗೋಡೆಗಳನ್ನು ಕೆಡವಲು ಸಿದ್ಧರಾಗಿರಬೇಕು” ಎಂದು ಅವರು ಹೇಳಿದರು. ವಿಶ್ವಾಸದಲ್ಲಿ ದೃಢವಾಗಿ ನಿಲ್ಲುವಂತೆ ಹಾಗೂ ಮರಿಯಮ್ಮನ ಮಾದರಿಯನ್ನು ಅನುಸರಿಸುವಂತೆ ಅವರು ಭಕ್ತರನ್ನು ಪ್ರೋತ್ಸಾಹಿಸಿದರು.

ದಿನದ ಅಂತಿಮ ಕಾರ್ಯಕ್ರಮವಾಗಿ, ಮ್ಯಾಡ್ರಿಡ್ ಮಹಾಧರ್ಮಪ್ರಾಂತ್ಯದ ಸುಮಾರು 80,000 ವಿಶ್ವಾಸಿಗಳೊಂದಿಗೆ ಬೆರ್ನಬೆವು ಕ್ರೀಡಾಂಗಣದಲ್ಲಿ ಜಗದ್ಗುರುಗಳು ಭೇಟಿಯಾದರು. “ಇಂದು ಮ್ಯಾಡ್ರಿಡ್‌ನ ಧರ್ಮ ಸಭೆ ಮರೆಯಲಾಗದ ಗುರಿಯೊಂದನ್ನು ದಾಖಲಿಸಿದೆ” ಎಂದು ಹೇಳಿದ ಅವರು, ವಿಶ್ವಾಸಿಗಳನ್ನು “ಸುಂದರ ಧರ್ಮ ಸಭೆಯ ಕುಟುಂಬ” ಎಂದು ಪ್ರಶಂಸಿಸಿದರು. ಸುವಾರ್ತೆಯ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಲು ದಯೆ ಮತ್ತು ಮಾನವೀಯತೆ ಅತ್ಯಗತ್ಯ ಎಂದು ನೆನಪಿಸಿದ ಜಗದ್ಗುರುಗಳು, “ಎಲ್ಲರಿಗೂ ತೆರೆದ ಬೈಬಲಿನಂತಾಗಿರಿ; ಏಕೆಂದರೆ ಪ್ರೀತಿಯೇ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿರುವಂತೆ ಅನುಭವಿಸುವ ಭಾಷೆಯಾಗಿದೆ” ಎಂಬ ಸಂದೇಶದೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

09 ಜೂನ್ 2026, 18:03