ಹುಡುಕಿ

ಆಂಜೆಲಿಕಮ್‌ನಲ್ಲಿ ಅಂತರ್ಧರ್ಮೀಯ ಸಂವಾದಕ್ಕಾಗಿ ಡಿಕ್ಯಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೂವಕಾಡ್. ಆಂಜೆಲಿಕಮ್‌ನಲ್ಲಿ ಅಂತರ್ಧರ್ಮೀಯ ಸಂವಾದಕ್ಕಾಗಿ ಡಿಕ್ಯಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೂವಕಾಡ್. 

ಕಾರ್ಡಿನಲ್ ಕೂವಕ್ಕಾಡ್: ಸಹೋದರತ್ವದ ಪರಿಕಲ್ಪನೆ ಒಂದು ಕಾಲ್ಪನಿಕ ಆದರ್ಶವಲ್ಲ.

“ಸಂವಾದ ಮತ್ತು ಸಹಕಾರದ ಮೂಲಕ ಭ್ರಾತೃತ್ವವನ್ನು ನಿರ್ಮಿಸುವುದು” ಎಂಬ ವಿಷಯದ ಕುರಿತು ಏಂಜೆಲಿಕಮ್‌ನಲ್ಲಿ ನಡೆದ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ, ಅಂತರಧಾರ್ಮಿಕ ಸಂವಾದದ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಜಾರ್ಜ್ ಕೂವಕೂಡ್ ರವರು, ಹೆಚ್ಚುತ್ತಿರುವ ವಿಭಜನೆ ಮತ್ತು ಧ್ರುವೀಕರಣದಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ ಶಾಂತಿಯನ್ನು ಕಾಪಾಡಲು ಮತ್ತು ಉತ್ತೇಜಿಸಲು ವಿವಿಧ ಧಾರ್ಮಿಕ ಪರಂಪರೆಗಳು ವಹಿಸುವ ಮಹತ್ವದ ಪಾತ್ರವನ್ನು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಸಂವಾದ ಮತ್ತು ಚರ್ಚೆ, ಅನುಭವಗಳ ವಿನಿಮಯ, ಹಾಗೂ ಒಂದೇ ಗುರಿಯತ್ತ ಸಾಗುವುದು  ಅಂದರೆ, ಭ್ರಾತೃತ್ವದ ಬಂಧಗಳನ್ನು ನಿರ್ಮಿಸಿ ಬಲಪಡಿಸಲು ಬದ್ಧರಾಗಿರುವ ಸಹೋದರರು ಮತ್ತು ಸಹೋದರಿಯರಾಗಿರುವುದು.

ಇದೇ ಉದ್ದೇಶವನ್ನು ಹೊಂದಿರುವ “ಯುರೋಪಿನಲ್ಲಿರುವ ಬೌದ್ಧರು, ಕ್ರೈಸ್ತರು, ಹಿಂದೂಗಳು, ಜೈನರು ಮತ್ತು ಸಿಖ್ಖರು ಸಂವಾದ ಮತ್ತು ಸಹಕಾರದ ಮೂಲಕ ಭ್ರಾತೃತ್ವ ನಿರ್ಮಾಣ” ಎಂಬ ಸಮ್ಮೇಳನವು ಇಂದು ಜೂನ್ 23ರಿಂದ ನಾಳೆಯವರೆಗೆ ರೋಮಿನ ಸೇಂಟ್ ಥಾಮಸ್ ಅಕ್ವಿನಾಸ್ ಪಾಂಟಿಫಿಕಲ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ.

ಈ ಕಾರ್ಯಕ್ರಮದ ಆಯೋಜಕರಲ್ಲಿ ಒಂದಾದ ಧರ್ಮಾಂತರ ಸಂವಾದ ವಿಭಾಗದ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಜಾರ್ಜ್ ಜೇಕಬ್ ಕೂವಕ್ಕಾಡ್ ತಮ್ಮ ಶುಭಾಶಯ ಸಂದೇಶದಲ್ಲಿ, “ಭ್ರಾತೃತ್ವದ ಪರಿಕಲ್ಪನೆಯನ್ನು ಅನೇಕ ಬಾರಿ ಒಂದು ಆದರ್ಶಲೋಕದ ಕಲ್ಪನೆ ಎಂದು ಪರಿಗಣಿಸಲಾಗುತ್ತದೆ” ಎಂದು ಹೇಳಿದರು. ವಿಶೇಷವಾಗಿ, ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮಾನವತೆಯ ವಿರುದ್ಧದ ಅಪರಾಧಗಳು, ಯುದ್ಧಗಳು, ಹಿಂಸಾಚಾರ, ಸಂಘರ್ಷಗಳು, ವಿಭಜನೆಗಳು, ತಾರತಮ್ಯ ಮತ್ತು ದ್ವೇಷ ಇವುಗಳಿಂದ ಅದು ಗಂಭೀರವಾಗಿ ದುರ್ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ಕಲ್ಪನೆ ಇನ್ನಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಅವರು ಸೂಚಿಸಿದರು.

ಕಾರ್ಡಿನಲ್ ಕೂವಕ್ಕಾಡ್ ರವರು, 1986ರಲ್ಲಿ ಸಂತ ದ್ವಿತೀಯ ಜಾನ್ ಪಾಲ್ ರವರು ಆರಂಭಿಸಿದ್ದ ವಿಶ್ವ ಶಾಂತಿ ಪ್ರಾರ್ಥನಾ ದಿನದ 40ನೇ ವಾರ್ಷಿಕೋತ್ಸವ ಹಾಗೂ “ಸಾರ್ವತ್ರಿಕ ಭ್ರಾತೃತ್ವದ ಅಪೋಸ್ತಲ” ಎಂದು ಕರೆಯಲ್ಪಡುವ ಸಂತ ಫ್ರಾನ್ಸಿಸ್ ಅವರ ನಿಧನದ 800ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, “ಅಸ್ಸಿಸಿಯ ಆತ್ಮ”ವನ್ನು ಸ್ಮರಿಸಿದರು. ಸಂತ ಫ್ರಾನ್ಸಿಸ್ ಅವರೇ ಮಾನವ ಭ್ರಾತೃತ್ವದ ಕುರಿತಾದ ಜಗದ್ಗುರು ಫ್ರಾನ್ಸಿಸ್ ರವರ ಫ್ರಾಟೆಲ್ಲಿ ತುಟ್ಟಿ ವಿಶ್ವಪತ್ರಿಕೆಗೆ ಸ್ಫೂರ್ತಿಯಾಗಿದ್ದರು.

ಸೇತುವೆಗಳನ್ನು ನಿರ್ಮಿಸುವುದು

ನಂಬಿಕೆಯುಳ್ಳವರ ಹಾಗೂ ಸತ್ಸಂಕಲ್ಪದ ಜನರ ನಡುವೆ “ಸಂವಾದ ಮತ್ತು ಸಹಕಾರದ ಮೂಲಕ ಸೇತುವೆಗಳನ್ನು ನಿರ್ಮಿಸುವ” ಅಗತ್ಯತೆಯ ಕುರಿತು ಜಗದ್ಗುರು XIVನೇ ಲಿಯೋರವರು ನೀಡಿದ ಸಂದೇಶವನ್ನೂ ಕಾರ್ಡಿನಲ್ ಕೂವಕ್ಕಾಡ್ ಉಲ್ಲೇಖಿಸಿದರು.

ಜಗದ್ಗುರುಗಳ ದೃಷ್ಟಿಯಲ್ಲಿ, ಭ್ರಾತೃತ್ವವು “ಸಂಘರ್ಷಗಳು, ಭಿನ್ನತೆಗಳು ಮತ್ತು ಉದ್ವಿಗ್ನತೆಗಳಿಗಿಂತಲೂ ಶಕ್ತಿಯುತವಾದ ಬದುಕಿನ ವಾಸ್ತವಿಕತೆ” ಆಗಿದೆ. ಇದು ವಿವಿಧ ಸಂಸ್ಕೃತಿಗಳು, ಸಂವೇದನೆಗಳು ಮತ್ತು ಸಂಪ್ರದಾಯಗಳನ್ನು ಪರಸ್ಪರ ಸಮೃದ್ಧಿಗೊಳಿಸುವ ಅವಕಾಶಗಳಾಗಿ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು.

ವೈವಿಧ್ಯತೆಯಿಂದ ಸಮೃದ್ಧವಾದ ಖಂಡ

ಯುರೋಪನ್ನು ಕುರಿತು ಮಾತನಾಡಿದ ಕಾರ್ಡಿನಲ್ ಕೂವಕ್ಕಾಡ್, ಅದು “ಇತಿಹಾಸದ ಪೂರಾ ಅವಧಿಯಲ್ಲಿ ವಿವಿಧ ಸಮುದಾಯಗಳ ಬೆಳವಣಿಗೆ ಮತ್ತು ಅವುಗಳ ಏಕೀಕರಣಕ್ಕೆ ಸಾಕ್ಷಿಯಾಗಿರುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು” ಉಳಿಸಿಕೊಂಡಿದೆ ಎಂದು ಹೇಳಿದರು.

ವಲಸೆ, ಜಾಗತೀಕರಣ, ಜನಸಂಖ್ಯಾ ಬದಲಾವಣೆಗಳು ಹಾಗೂ ಕುಗ್ಗುತ್ತಿರುವ ಕಾರ್ಮಿಕ ಶಕ್ತಿ ಇವುಗಳ ಪರಿಣಾಮವಾಗಿ ಯುರೋಪ್ ಇಂದು ಜನಾಂಗಗಳು, ಭಾಷೆಗಳು ಮತ್ತು ಧಾರ್ಮಿಕ ಸಂಪ್ರದಾಯಗಳ ಶ್ರೀಮಂತ ಸಂಗಮಸ್ಥಳವಾಗಿ ರೂಪಾಂತರಗೊಂಡಿದೆ ಎಂದು ಅವರು ವಿವರಿಸಿದರು.

ಈ ಪರಂಪರೆಯನ್ನು ಮೌಲ್ಯೀಕರಿಸುವುದು ಅತ್ಯಗತ್ಯ ಎಂದು ಹೇಳಿದ ಅವರು, ಪ್ರತಿಯೊಬ್ಬ ಮಾನವನ ಘನತೆ ಮತ್ತು ಹಕ್ಕುಗಳಿಗೆ, ಅದರಲ್ಲೂ ತನ್ನ ಧರ್ಮವನ್ನು ಅಂಗೀಕರಿಸಿ ಆಚರಿಸುವ ಹಕ್ಕಿಗೆ ಸಂಪೂರ್ಣ ಗೌರವ ನೀಡುವ ಮೂಲಕ, ಹೆಚ್ಚು ಒಗ್ಗಟ್ಟಿನ, ಸಮಗ್ರ ಮತ್ತು ಸೌಹಾರ್ದಯುತ ಸಮಾಜವನ್ನು ನಿರ್ಮಿಸಬೇಕೆಂದು ಕರೆ ನೀಡಿದರು.

ಸಾಮಾನ್ಯ ಹಿತಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸುವುದು

ಯುರೋಪಿನಲ್ಲಿ ವಾಸಿಸುವವರು ಹಾಗೂ ಯುರೋಪನ್ನು ತಮ್ಮ ಮನೆಯಾಗಿಸಿಕೊಂಡವರು ಎಲ್ಲರೂ “ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ವೈವಿಧ್ಯತೆಯು ಮಾನವಕುಲದ ಸಂಪತ್ತು,ಅದು ಬೆದರಿಕೆಯಲ್ಲ” ಎಂಬ ದೃಢ ನಂಬಿಕೆಯೊಂದಿಗೆ ಸಾಮಾನ್ಯ ಹಿತಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕೆಂದು ಕಾರ್ಡಿನಲ್ ಕೂವಕ್ಕಾಡ್ ಹೇಳಿದರು.

ಅವರು ಮುಂದುವರಿದು, “ವಿಭಿನ್ನ ಧಾರ್ಮಿಕ ಸಂಪ್ರದಾಯಗಳಿಗೆ ಸೇರಿದ ನಾವು ಪರಸ್ಪರರ ವಿಶಿಷ್ಟ ಸಂದರ್ಭಗಳು, ಸಂಪ್ರದಾಯಗಳು ಮತ್ತು ಧರ್ಮಗಳನ್ನು ಗೌರವಿಸುತ್ತಾ ಭೇಟಿಯಾಗಿ ವಿಚಾರ ವಿನಿಮಯ ಮಾಡಿಕೊಳ್ಳುವಷ್ಟೂ, ನಾವು ಕೇವಲ ಸಹೋದರ ಪ್ರೀತಿ ಮತ್ತು ಪರಸ್ಪರ ಗೌರವದಲ್ಲಷ್ಟೇ ಅಲ್ಲ, ಸಮಾಜದ ಎಲ್ಲರ ಹಿತಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸುವ ಬದ್ಧತೆಯಲ್ಲಿಯೂ ಬೆಳೆಯುತ್ತೇವೆ” ಎಂದು ಹೇಳಿದರು.

ಶಾಂತಿಯ ಉತ್ತೇಜನ

ತಮ್ಮ ಭಾಷಣದ ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಪ್ರತಿಧ್ವನಿಸುತ್ತಾ, ಕಾರ್ಡಿನಲ್ ಕೂವಕ್ಕಾಡ್ ರವರು “ಸಂವಾದ, ಸಹಕಾರ ಮತ್ತು ಸಾಮಾಜಿಕ ಸ್ನೇಹದ ಮೂಲಕ ಶಾಂತಿ, ನ್ಯಾಯ ಮತ್ತು ಮಾನವ ಭ್ರಾತೃತ್ವವನ್ನು ರಕ್ಷಿಸಲು ಹಾಗೂ ಉತ್ತೇಜಿಸಲು ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಇವುಗಳೆಲ್ಲವೂ ಇಂದಿನ ಕಾಲದಲ್ಲಿ ಮಾನವ ಭ್ರಾತೃತ್ವವನ್ನು ನಿರ್ಮಿಸಲು ಅಗತ್ಯವಾದ ಮೂಲಭೂತ ಅಂಶಗಳಾಗಿವೆ, ಏಕೆಂದರೆ ಪ್ರಪಂಚವು ಹಿಂದೆಂದಿಗಿಂತಲೂ ಹೆಚ್ಚು ವಿಭಜಿತ ಮತ್ತು ಧ್ರುವೀಕೃತವಾಗಿದೆ ಎಂದು ಅವರು ಒತ್ತಿಹೇಳಿದರು.

ಈ ಎರಡು ದಿನಗಳ ಚಿಂತನೆ ಮತ್ತು ವಿಚಾರ ವಿನಿಮಯವು ಭಾಗವಹಿಸುವವರಿಗೆ ಗೌರವ, ಭ್ರಾತೃತ್ವ, ಐಕ್ಯತೆ ಮತ್ತು ವಿಶ್ವಾಸದ ಆಧಾರದ ಮೇಲೆ ಪರಸ್ಪರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯವಾಗಲಿ ಎಂಬ ಆಶಯವನ್ನು ಕಾರ್ಡಿನಲ್ ಪ್ರಿಫೆಕ್ಟ್ ವ್ಯಕ್ತಪಡಿಸಿದರು.

23 ಜೂನ್ 2026, 18:17