ಹುಡುಕಿ

ವ್ಯಾಟಿಕನ್‌ನಲ್ಲಿ ಕಥೋಲಿಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಂಘದ ನಿಯೋಗವನ್ನು ಜಗದ್ಗುರು XIVನೇ ಲಿಯೋರವರನ್ನು ಭೇಟಿಯಾಗಿ ಸ್ವಾಗತಿಸಿದರು. ವ್ಯಾಟಿಕನ್‌ನಲ್ಲಿ ಕಥೋಲಿಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಂಘದ ನಿಯೋಗವನ್ನು ಜಗದ್ಗುರು XIVನೇ ಲಿಯೋರವರನ್ನು ಭೇಟಿಯಾಗಿ ಸ್ವಾಗತಿಸಿದರು.  (@Vatican Media)

ಜಗದ್ಗುರುಗಳು: ಕಥೊಲಿಕ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಕ್ರಿಸ್ತನತ್ತ ಕರೆದೊಯ್ಯುವ ಮಾರ್ಗದರ್ಶಿಗಳಾಗಬೇಕು.

ಅಮೆರಿಕದ ಕಥೊಲಿಕ ಕಾಲೇಜುಗಳ ಅಧ್ಯಕ್ಷರು ಮತ್ತು ರೆಕ್ಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಕಥೊಲಿಕ ಶಿಕ್ಷಣವು ಕೇವಲ ಜ್ಞಾನಾರ್ಜನೆಯ ಮೇಲಿನ ಪ್ರೀತಿಯನ್ನು ಬೆಳೆಸುವುದಷ್ಟೇ ಅಲ್ಲ, “ಸತ್ಯಸ್ವರೂಪನಾದ” ಕ್ರಿಸ್ತನ ಮೇಲಿನ ಆಳವಾದ ಪ್ರೀತಿಯನ್ನೂ ಬೆಳೆಸಬೇಕು ಎಂದು ಹೇಳಿದರು. ಈ ಮೂಲಭೂತ ಅಂಶವಿಲ್ಲದಿದ್ದರೆ, ವಿದ್ಯಾರ್ಥಿಗಳು ಸತ್ಯವನ್ನು ಗುರುತಿಸಲು ಮತ್ತು ಅದರ ಅನುಸಾರ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಕಡಿಮೆ ಸಿದ್ಧರಾಗಿರುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ವ್ಯಾಟಿಕನ್ ವರದಿ

“ಕಥೊಲಿಕ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸತ್ಯದ ಬಗ್ಗೆ ನಿಜವಾದ ಉತ್ಸಾಹವನ್ನು ಮೂಡಿಸದಿದ್ದರೆ  ಅದು ಕೇವಲ ಬೌದ್ಧಿಕ ಸತ್ಯವಲ್ಲ, ಆದರೆ ಸ್ವತಃ ಕ್ರಿಸ್ತನೇ ಆಗಿರುವ ಸತ್ಯ (ಯೋಹಾನ 14:6) ಆಗಿದ್ದರೆ  ಸತ್ಯವನ್ನು ಗುರುತಿಸಲು ಮತ್ತು ಅದರಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಅಗತ್ಯವಾದ ಪ್ರಯತ್ನವನ್ನು ಜನರು ಮಾಡಲು ಸಿದ್ಧರಾಗುತ್ತಾರೆ ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ.”

ಈ ಮಾತುಗಳನ್ನು ಜಗದ್ಗುರು XIVನೇ ಲಿಯೋರವರು ಬುಧವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಅಮೆರಿಕದ ಕಥೊಲಿಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸಂಘದ ಪ್ರತಿನಿಧಿ ಮಂಡಳಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದರು. ಈ ಪ್ರತಿನಿಧಿಗಳು 2026ರ ರೋಮಿನ ಸೆಮಿನಾರ್‌ಗಾಗಿ ರೋಮಿಗೆ ಆಗಮಿಸಿದ್ದರು.

ಜಗದ್ಗುರುಗಳು, ಕಥೊಲಿಕ ಶಿಕ್ಷಣ ಸಂಸ್ಥೆಗಳು ಕ್ರೈಸ್ತ ದೃಷ್ಟಿಕೋನವು ಪ್ರತಿಯೊಂದು ವಿದ್ಯಾಶಾಖೆಯಲ್ಲಿಯೂ ಹಾಗೂ ಪ್ರತಿಯೊಂದು ಮಾನವ ಸಂಬಂಧದಲ್ಲಿಯೂ ವ್ಯಾಪಿಸಿರುವ ಜೀವಂತ ವಾತಾವರಣವಾಗಿರಲು ಕರೆಯಲ್ಪಟ್ಟಿವೆ ಎಂದು ಒತ್ತಿ ಹೇಳಿದರು.

ವಿಶ್ವವಿದ್ಯಾಲಯಗಳ ಅಧ್ಯಕ್ಷರು ಮತ್ತು ರೆಕ್ಟರ್‌ಗಳನ್ನು ಉತ್ತೇಜಿಸುತ್ತಾ ಅವರು, “ಕ್ರಿಸ್ತನ ನಿಜವಾದ ಶಿಷ್ಯರಾಗಿ ನಿಮ್ಮ ಪ್ರಾಮಾಣಿಕ ಜೀವನಸಾಕ್ಷಿಯು, ನಿಮಗೆ ಒಪ್ಪಿಸಲ್ಪಟ್ಟಿರುವವರು ಪ್ರಭುವನ್ನು ನಿಜವಾಗಿ ಭೇಟಿಯಾಗಲು ಹಾಗೂ ಕಥೊಲಿಕ ನಂಬಿಕೆಯಲ್ಲಿ ಸತ್ಯ ಮಾತ್ರ ನೀಡಬಲ್ಲ ಏಕೀಕೃತ ದೃಷ್ಟಿಕೋನವನ್ನು ಕಂಡುಕೊಳ್ಳಲು ನೆರವಾಗುವ ರೀತಿಯಲ್ಲಿ ಜೀವಂತ ಸುವಾರ್ತೆಯನ್ನು ಅವರಿಗೆ ಹಂಚಲು ಸಹಾಯ ಮಾಡುತ್ತದೆ” ಎಂದರು.

ಸೀಮಿತ ದೃಷ್ಟಿಕೋನ ಹೊಂದಿರುವ ಪರಿಣತರು

ದೇವರಿಂದ ಸೃಷ್ಟಿಸಲ್ಪಟ್ಟು ಕ್ರಿಸ್ತನಿಂದ ವಿಮೋಚನೆ ಹೊಂದಿರುವ ಮಾನವಕುಲದ ಮಹಿಮೆಯನ್ನೂ, ಸತ್ಯದ ಸೌಂದರ್ಯವನ್ನೂ ಇನ್ನಷ್ಟು ಆಳವಾಗಿ ಅರಿಯುವಂತೆ ಅವರ ಹೃದಯಗಳು ಆಕರ್ಷಿತವಾಗಲಿ ಎಂದು ಜಗದ್ಗುರುಗಳು ಆಶಿಸಿದರು.

ಮೇ 25ರಂದು ಪ್ರಕಟವಾದ “ಮ್ಯಾಗ್ನಿಫಿಕಾ ಹ್ಯುಮಾನಿಟಾಸ್” ಎಂಬ ವಿಶ್ವಪತ್ರಿಕೆಯಲ್ಲಿ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವ ಅಗತ್ಯವನ್ನು ಅವರು ಪ್ರಸ್ತಾಪಿಸಿದ್ದನ್ನು ಉಲ್ಲೇಖಿಸಿ, ಇಂದಿನ ಜಗತ್ತಿನಲ್ಲಿ ಕಥೊಲಿಕ ಶಿಕ್ಷಣದ ನಿರ್ಣಾಯಕ ಮಹತ್ವದ ಬಗ್ಗೆ ಅವರು ಮಾತನಾಡಿದರು.

ಮೊದಲನೆಯದಾಗಿ, ಶಿಕ್ಷಣ ಕ್ಷೇತ್ರವು ಇಂದು ಎದುರಿಸುತ್ತಿರುವ ಪ್ರಮುಖ ಸವಾಲು ಜ್ಞಾನದ ಹೆಚ್ಚುತ್ತಿರುವ ವಿಭಜನೆಯಾಗಿದೆ ಎಂದು ಅವರು ಗಮನಿಸಿದರು.

ನಿರ್ದಿಷ್ಟ ಅಧ್ಯಯನ ಕ್ಷೇತ್ರಗಳಲ್ಲಿ ಪರಿಣತರಾಗಿರುವವರನ್ನು ಕಂಡುಹಿಡಿಯುವುದು ಸುಲಭವಾದರೂ, ಅವರಲ್ಲಿ ಅನೇಕರು “ತಮ್ಮ ಜೀವನಕ್ಕೆ ಸ್ಪಷ್ಟ ದಿಕ್ಕನ್ನು ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ.” ಅವರು “ಜ್ಞಾನದ ವಿವಿಧ ಕ್ಷೇತ್ರಗಳನ್ನು ಮಾತ್ರವಲ್ಲದೆ, ಜೀವನದ ಅನೇಕ ಆಯಾಮಗಳನ್ನು ಹಾಗೂ ಮಾನವ ಹೃದಯದ ಆಂತರಿಕ ಹಂಬಲಗಳನ್ನು ಒಗ್ಗೂಡಿಸುವ ಸಮಗ್ರ ವಾಸ್ತವದ ದೃಷ್ಟಿಕೋನವನ್ನು” ಹೊಂದಿರುವುದಿಲ್ಲ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಕಥೊಲಿಕ ಶಿಕ್ಷಣವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಯೇಸುವೇ ಆಗಿರುವ ಸತ್ಯವನ್ನು ಪ್ರೀತಿಸಲು ವಿದ್ಯಾರ್ಥಿಗಳಿಗೆ ನೆರವಾಗಿರಿ

ಯುವಕರು ಮತ್ತು ಯುವತಿಯರು ಸಾಮಾನ್ಯವಾಗಿ ನಿರ್ದಿಷ್ಟ ಪದವಿಯನ್ನು ಪಡೆಯುವ ಉದ್ದೇಶದಿಂದ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಾರೆ ಎಂಬುದನ್ನು ಜಗದ್ಗುರುಗಳು ಒಪ್ಪಿಕೊಂಡರು.

ಆದ್ದರಿಂದ, “ಜ್ಞಾನದ ಕುರಿತ ಅವರ ಆಸೆಯನ್ನು ಮಾರ್ಗದರ್ಶನ ಮಾಡುವ ನಿಮ್ಮ ಉದಾತ್ತ ಕಾರ್ಯವನ್ನು ಸ್ವೀಕರಿಸಿ. ಅವರು ಸತ್ಯವನ್ನು ಹುಡುಕಲು ಮತ್ತು ಪ್ರೀತಿಸಲು ಕಲಿಯಲಿ. ಜೀವನದ ಅರ್ಥವನ್ನು ಕುರಿತು ಚಿಂತಿಸಲಿ,ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗುರುತಿಸಲಿ” ಎಂದು ಶಿಕ್ಷಕರಿಗೆ ಪ್ರೋತ್ಸಾಹ ನೀಡಿದರು.

“ಇದು ಸುಲಭದ ಕಾರ್ಯವಲ್ಲ,” ಎಂದು ಅವರು ಒಪ್ಪಿಕೊಂಡರೂ, ವಿದ್ಯಾರ್ಥಿಗಳು ಕ್ರಿಸ್ತನ ಮೇಲಿನ ಪ್ರೀತಿ, ತಮ್ಮ ಅಧ್ಯಯನದ ಮೇಲಿನ ಆಸಕ್ತಿ ಹಾಗೂ ಅರ್ಥಪೂರ್ಣ ಜೀವನದ ಉತ್ಸಾಹವನ್ನು ಕಂಡುಕೊಳ್ಳಲು ಇದು ಅತ್ಯಗತ್ಯ ಎಂದು ಹೇಳಿದರು.

‘ಶುದ್ಧ ಸಿದ್ಧಾಂತ’ ವಿದ್ಯಾರ್ಥಿಗಳ ಜೀವನಕ್ಕೂ ರಾಷ್ಟ್ರದ ಭವಿಷ್ಯಕ್ಕೂ ಅಡಿಪಾಯ

ಇತ್ತೀಚಿನ ತಾಂತ್ರಿಕ ಪ್ರಗತಿಗಳು ಶಿಕ್ಷಣ ಕ್ಷೇತ್ರಕ್ಕೆ ಅನೇಕ ಸವಾಲುಗಳನ್ನು ತಂದೊಡ್ಡಿವೆ ಎಂಬುದರ ಕುರಿತು ಜಗದ್ಗುರು ಲಿಯೋರವರು ಚಿಂತನೆ ಹಂಚಿಕೊಂಡರು.

“ಕೃತಕ ಬುದ್ಧಿಮತ್ತೆಯ ವ್ಯಾಪಕ ಬಳಕೆಯು ವಿದ್ಯಾರ್ಥಿಗಳ ಕಾರ್ಯಗಳನ್ನು ಮೌಲ್ಯಮಾಪನ ಮಾಡುವುದು ಹೆಚ್ಚು ಕಷ್ಟಕರವಾಗಿಸಿದೆ,” ಎಂದು ಅವರು ಹೇಳಿದರು. “ಆದ್ದರಿಂದ ಶಿಕ್ಷಕರು ತಮ್ಮ ಪಾಲನೆಯಲ್ಲಿರುವ ವಿದ್ಯಾರ್ಥಿಗಳ ಸಮಗ್ರ ಮಾನವೀಯ ಬೆಳವಣಿಗೆಯನ್ನು ಖಚಿತಪಡಿಸಲು ಸೃಜನಾತ್ಮಕವಾಗಿ ತಮ್ಮ ಬೋಧನಾ ವಿಧಾನಗಳನ್ನು ಹೊಂದಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಶಿಕ್ಷಕರಿಂದ ಹೆಚ್ಚಿನ ಶ್ರಮ ಬೇಕಾದರೂ, ಭವಿಷ್ಯದ ಪೀಳಿಗೆಯ ಶಿಕ್ಷಣದಲ್ಲಿ ಉದಾರವಾಗಿ ಹೂಡಿಕೆ ಮಾಡಲು ನಾವು ಸಿದ್ಧರಾಗಿರಬೇಕು.”

“ಯುವಕರು ಮತ್ತು ಯುವತಿಯರು ಹೊಸ ತಂತ್ರಜ್ಞಾನಗಳೊಂದಿಗೆ ಸಕಾರಾತ್ಮಕವಾಗಿ ತೊಡಗಿಸಿಕೊಳ್ಳುವುದನ್ನು ಕಲಿಯುವುದು ಅತ್ಯಂತ ಮುಖ್ಯ,” ಎಂದು ಅವರು ಒತ್ತಿಹೇಳಿದರು. “ಅದೇ ಸಮಯದಲ್ಲಿ, ದೇವರು ಅವರಿಗೆ ನೀಡಿರುವ ತಾರ್ಕಿಕ ಚಿಂತನೆ, ವಿಮರ್ಶಾತ್ಮಕ ವಿಶ್ಲೇಷಣೆ ಹಾಗೂ ಜ್ಞಾನವನ್ನು ಸ್ಮರಣೆಯಲ್ಲಿ ಉಳಿಸಿಕೊಳ್ಳುವ ಸಾಮರ್ಥ್ಯಗಳನ್ನು ಸಹ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಅವರು ಭವಿಷ್ಯದ ಜಗತ್ತನ್ನು ಜವಾಬ್ದಾರಿಯುತವಾಗಿ ರೂಪಿಸಲು ಸಿದ್ಧರಾಗುತ್ತಾರೆ.”

ಕೊನೆಯಲ್ಲಿ, ಶಿಕ್ಷಣತಜ್ಞರು ಧರ್ಮ ಸಭೆಯ ಸುವಾರ್ತಾ ಧರ್ಮಪ್ರಚಾರದ ಕಾರ್ಯವನ್ನು ಮುಂದುವರಿಸುತ್ತಿರುವಾಗ, “ನಿಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಯಾವಾಗಲೂ ಧರ್ಮ ಸಭೆಗೆ ಒಪ್ಪಿಸಲ್ಪಟ್ಟಿರುವ ಶುದ್ಧ ಸಿದ್ಧಾಂತವನ್ನು ಕಂಡುಕೊಳ್ಳುವಂತಾಗಲಿ. ಅದು ಅವರ ವೈಯಕ್ತಿಕ ಜೀವನಕ್ಕೆ ಮಾತ್ರವಲ್ಲ, ರಾಷ್ಟ್ರದ ಭವಿಷ್ಯಕ್ಕೂ ನಿಜವಾದ ಹಾಗೂ ಶಾಶ್ವತ ಅಡಿಪಾಯವಾಗಲಿ” ಎಂದು ಜಗದ್ಗುರು ಲಿಯೋರವರು ಆಶಯ ವ್ಯಕ್ತಪಡಿಸಿದರು.

 

03 ಜೂನ್ 2026, 16:23