20 ಸ್ಪ್ಯಾನಿಷ್ ಹುತಾತ್ಮರನ್ನು ಧನ್ಯರೆಂದು ಘೋಷಿಸುವ ಪ್ರಕ್ರಿಯೆಗೆ ಜಗದ್ಗುರುಗಳು ಅನುಮತಿ ನೀಡಿದರು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಸಂತರ ಘೋಷಣೆಯ ಕಾರ್ಯಗಳ ವಿಭಾಗಕ್ಕೆ ಸ್ಪೇನಿನ ಇಬೀಜಾ ಮತ್ತು ಫೋರ್ಮೆಂಟೆರಾ ದ್ವೀಪಗಳ 20 ಧರ್ಮಪ್ರಾಂತ್ಯ ಯಾಜಕರ ಹುತಾತ್ಮತ್ವವನ್ನು ಅಧಿಕೃತವಾಗಿ ಮಾನ್ಯಗೊಳಿಸುವ ಆದೇಶಗಳನ್ನು ಪ್ರಕಟಿಸಲು ಅನುಮತಿ ನೀಡಿದ್ದಾರೆ. ಸ್ಪೇನಿನ ಅಂತರ್ಯುದ್ಧದ ಸಮಯದಲ್ಲಿ ಕ್ರೈಸ್ತ ನಂಬಿಕೆಯ ಮೇಲಿನ ದ್ವೇಷದಿಂದ ಈ ಯಾಜಕರು ಹತ್ಯೆಗೀಡಾಗಿದ್ದರು. ಅವರ ಹುತಾತ್ಮತ್ವದ ಮಾನ್ಯತೆಯು ಅವರನ್ನು ಧನ್ಯರ ಪಟ್ಟಕ್ಕೆ ಏರಿಸುವ ದಾರಿಯನ್ನು ತೆರೆಯುತ್ತದೆ.
ಜೂನ್ 18ರಂದು ಸಂತರ ಘೋಷಣೆಯ ಕಾರ್ಯಗಳ ವಿಭಾಗದ ಪ್ರಿಫೆಕ್ಟ್ ಕಾರ್ಡಿನಲ್ ಮಾರ್ಚೆಲ್ಲೊ ಸೆಮೆರಾರೊರವರೊಂದಿಗೆ ನಡೆದ ಭೇಟಿಯಲ್ಲಿ ಜಗದ್ಗುರುಗಳು ಈ ಅನುಮೋದನೆಯನ್ನು ನೀಡಿದರು.
ಅದೇ ವೇಳೆ, ಜಗದ್ಗುರುಗಳು ಐದು ದೇವಸೇವಕರ ವೀರೋಚಿತ ಸದ್ಗುಣಗಳನ್ನು ಸಹ ಮಾನ್ಯಗೊಳಿಸಿದರು. ಇದರೊಂದಿಗೆ ಅವರು ಈಗ “ವಂದನೀಯರು” ಎಂದು ಘೋಷಿಸಲ್ಪಟ್ಟಿದ್ದಾರೆ. ಅವರು ಮಯೋರ್ಕಾದ 17ನೇ ಶತಮಾನದ ಧಾರ್ಮಿಕ ಮಹಿಳೆ ಮಾತೆ ಕ್ಲಾರಾ ಆಂದ್ರೇಯು ಇ ಮಲ್ಫೆರಿತ್; ಬೆಲ್ಜಿಯಂ ಮೂಲದ ಮಿಷನರಿ ಹಾಗೂ ಹಲವು ಧಾರ್ಮಿಕ ಸಂಸ್ಥೆಗಳ ಸ್ಥಾಪಕರಾದ ವಂ.ಸ್ವಾಮಿ ಜೂಲಿಯೊ ಎಮಿಲಿಯೊ ಅಲ್ಬೆರ್ಟೊ ದೆ ಲೊಂಬಾರ್ದೆ; ಇಟಲಿಯ ಡೊಮಿನಿಕನ್ ಸನ್ಯಾಸಿನಿ ಸಿಸ್ಟರ್ ಮರಿಯಾ ಪೇತ್ರಾ ಜಿಯೋರ್ಡಾನೊ; ಅಮೆರಿಕಾದಲ್ಲಿ “ಪ್ಯಾರಿಷ್ ವಿಸಿಟರ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್” ಸಂಸ್ಥೆಯನ್ನು ಸ್ಥಾಪಿಸಿದ ಮಾತೆ ಮರಿಯಾ ತೆರೆಸಾ ಟ್ಯಾಲನ್, ಹಾಗೂ “ಪಿಯಸ್ ವರ್ಕರ್ಸ್ ಆಫ್ ಸೇಂಟ್ ಜೋಸೆಫ್” ಸಂಸ್ಥೆಯ ಸ್ಥಾಪಕಿ ಮಾತೆ ಮರಿಯಾ ಅಙ್ನೇಸೆ ತ್ರಿಬ್ಬಿಯೋಲಿ.
ಇಬೀಜಾ ಮತ್ತು ಫೋರ್ಮೆಂಟೆರಾದ ಹುತಾತ್ಮರು
ಜುವಾನ್ ತೊರೆಸ್ ತೊರೆಸ್ ನೇತೃತ್ವದ ಈ 20 ಯಾಜಕರು 1936ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳ ನಡುವೆ, ಸ್ಪೇನಿನ ಅಂತರ್ಯುದ್ಧದೊಂದಿಗೆ ಸಾಗಿದ ಧರ್ಮವಿರೋಧಿ ಹಿಂಸಾಚಾರದ ಸಂದರ್ಭದಲ್ಲಿ ಕೊಲ್ಲಲ್ಪಟ್ಟರು.
ಆ ಸಮಯದಲ್ಲಿ, ಇಬೀಜಾದ ಸ್ಥಳೀಯ ಧರ್ಮಗುರುಗಳ ಸುಮಾರು ಅರ್ಧ ಭಾಗವನ್ನು ಇವರೇ ಪ್ರತಿನಿಧಿಸುತ್ತಿದ್ದರು. ಧಾರ್ಮಿಕ ಆರಾಧನೆಗಳ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳ ಕಾರಣದಿಂದ ಭದ್ರತಾ ಕಾರಣಗಳಿಗಾಗಿ ಸಾರ್ವಜನಿಕ ಮೆರವಣಿಗೆಗಳನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಧರ್ಮಪ್ರಾಂತ್ಯಕ್ಕೆ ಎದುರಾಗಿತ್ತು.
ಹಿಂಸಾಚಾರ ಮತ್ತು ಪವಿತ್ರ ಸ್ಥಳಗಳ ಅಪವಿತ್ರಗೊಳಿಸುವ ಕೃತ್ಯಗಳ ಮೂಲಕ ಈ ದೌರ್ಜನ್ಯ ಮತ್ತಷ್ಟು ತೀವ್ರಗೊಂಡಿತು. ದ್ವೀಪಗಳ ಕಥೋಲಿಕ ಗುರುತನ್ನೇ ನಿರ್ಮೂಲಗೊಳಿಸುವ ಉದ್ದೇಶ ಇದರ ಹಿಂದೆ ಇತ್ತು. ಈ ಗುಂಪಿನಲ್ಲೇ ಕಿರಿಯವರಾಗಿದ್ದ ಜುವಾನ್ ತೊರೆಸ್ ತೊರೆಸ್ ಅವರು ತಮ್ಮ ವಿನಮ್ರತೆ ಮತ್ತು ಉದಾರತೆಗೆ ಹೆಸರುವಾಸಿಯಾಗಿದ್ದರು. ಈ ಹುತಾತ್ಮರ ಸ್ಮರಣೆ ಸ್ಥಳೀಯ ಧರ್ಮ ಸಭೆಯಲ್ಲಿ ದಶಕಗಳ ಕಾಲ ಜೀವಂತವಾಗಿ ಉಳಿದಿದೆ.
ಮಾತೆ ಕ್ಲಾರಾ ಆಂದ್ರೇಯು ಇ ಮಲ್ಫೆರಿತ್
1596ರಲ್ಲಿ ಮಯೋರ್ಕಾದಲ್ಲಿ ಜನಿಸಿದ ಮಾತೆ ಕ್ಲಾರಾ ಆಂದ್ರೇಯು ಇ ಮಲ್ಫೆರಿತ್ ರವರು ಬಾಲ್ಯದಲ್ಲಿಯೇ ಇಂಕಾದ ಸೇಂಟ್ ಬಾರ್ಥೊಲೊಮ್ಯೂ ಮಠವನ್ನು ಸೇರಿದರು. ತಮ್ಮ ಜೀವನವನ್ನು ಪ್ರಾರ್ಥನೆ ಮತ್ತು ಸೇವೆಗೆ ಸಮರ್ಪಿಸಿದರು.
ಆಳವಾದ ಅತೀಂದ್ರಿಯ ಆಧ್ಯಾತ್ಮಿಕ ಅನುಭವಗಳಿಗೆ ಹೆಸರಾದ ಅವರು, ಧರ್ಮ ಸಭೆಯ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿದಾಗ ಆದರ್ಶಪ್ರಾಯ ವಿಧೇಯತೆ ಮತ್ತು ವಿನಮ್ರತೆಯನ್ನು ಪ್ರದರ್ಶಿಸಿದರು. ಅವರ ಪಾವಿತ್ರ್ಯದ ಖ್ಯಾತಿ ಇಂದಿಗೂ ಉಳಿದಿದ್ದು, ಅವರು ವಾಸಿಸಿದ್ದ ಮಠವು ಯಾತ್ರಾ ಸ್ಥಳವಾಗಿ ಪ್ರಸಿದ್ಧವಾಗಿದೆ.
ಸಿಸ್ಟರ್ ಮರಿಯಾ ಪೇತ್ರಾ ಜಿಯೋರ್ಡಾನೊ
1912ರಲ್ಲಿ ನೇಪಲ್ಸ್‌ನಲ್ಲಿ ಜನಿಸಿ ನಂತರ ರೋಮಿನಲ್ಲಿ ಬೆಳೆದ ಸಿಸ್ಟರ್ ಮರಿಯಾ ಪೇತ್ರಾ ಜಿಯೋರ್ಡಾನೊ ಅವರು, ಸಾಂತಾ ಮರಿಯಾ ಸೋಪ್ರಾ ಮಿನರ್ವಾ ಬಸಿಲಿಕಾದಲ್ಲಿ ತಮ್ಮ ಧಾರ್ಮಿಕ ಕರೆಯನ್ನು ಅರಿತುಕೊಂಡರು. ನಂತರ ಟಸ್ಕನಿಯ ಸಾಂತಾ ಮರಿಯಾ ದೆಲ್ ಸಾಸ್ಸೊ ಡೊಮಿನಿಕನ್ ಮಠವನ್ನು ಸೇರಿದರು.
ಕಿರಿಯ ವಯಸ್ಸಿನಲ್ಲಿಯೇ ನವಶಿಷ್ಯರ ಮಾರ್ಗದರ್ಶಕಿಯಾಗಿ ನೇಮಕಗೊಂಡ ಅವರು, ನಂತರ ಮಠಾಧ್ಯಕ್ಷೆಯಾಗಿ ಆಯ್ಕೆಯಾದರು. ಸುವಾರ್ತೆಯ ಆದರ್ಶಗಳಿಗೆ ಅನುಗುಣವಾದ ಜೀವನ ಮತ್ತು ಧಾರ್ಮಿಕ ಸಹೋದರಿಯರ ತರಬೇತಿಗೆ ತಮ್ಮ ಜೀವನವನ್ನು ಸಮರ್ಪಿಸಿದರು. 2006ರಲ್ಲಿ ನಿಧನರಾದ ಅವರ ಪವಿತ್ರ ಜೀವನಕ್ಕೆ ಅನೇಕ ಪ್ರತ್ಯಕ್ಷ ಸಾಕ್ಷ್ಯಗಳ ಬೆಂಬಲ ದೊರೆತಿದೆ.
ಮಾತೆ ಮರಿಯಾ ತೆರೆಸಾ ಟ್ಯಾಲನ್
1867ರಲ್ಲಿ ಅಮೆರಿಕದ ನ್ಯೂಯಾರ್ಕ್ ರಾಜ್ಯದಲ್ಲಿ ಐರಿಷ್ ವಲಸಿಗರ ಕುಟುಂಬದಲ್ಲಿ ಜನಿಸಿದ ಮಾತೆ ಮರಿಯಾ ತೆರೆಸಾ ಟ್ಯಾಲನ್ ರವರು ಬಾಲ್ಯದಲ್ಲಿಯೇ ತಮ್ಮ ಜೀವನವನ್ನು ದೇವರಿಗೆ ಸಮರ್ಪಿಸುವ ಕರೆಯನ್ನು ಅನುಭವಿಸಿದರು.
ಹೋಲಿ ಕ್ರಾಸ್ ಸಹೋದರಿಯರ ಸಂಘವನ್ನು ಸೇರಿದ ನಂತರ ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಅಲ್ಲದೆ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡರು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಾಂಕ್ರಾಮಿಕ ರೋಗ ಹರಡಿದ್ದ ಸಮಯದಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾಗ ಡಿಫ್ತೀರಿಯಾ ಕಾಯಿಲೆಗೆ ತುತ್ತಾದರು.
1908ರಲ್ಲಿ ಮ್ಯಾನ್‌ಹ್ಯಾಟನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಮನೆಮನೆಗಳಿಗೆ ಹಾಗೂ ನೆರೆಹೊರೆಯ ಸಮುದಾಯಗಳಿಗೆ ಕ್ರಿಸ್ತನ ಸಾನ್ನಿಧ್ಯವನ್ನು ಕೊಂಡೊಯ್ಯುವ ಉದ್ದೇಶದಿಂದ ಮಹಿಳೆಯರ ಧಾರ್ಮಿಕ ಸಮುದಾಯವಾದ “ಪ್ಯಾರಿಷ್ ವಿಸಿಟರ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್” ಅನ್ನು ಸ್ಥಾಪಿಸಿದರು. ದೇವರ ಮೇಲಿನ ಪ್ರೀತಿ, ಶಿಕ್ಷಣ ಮತ್ತು ಅಗತ್ಯವಿರುವವರ ಆರೈಕೆ ಅವರ ಜೀವನದ ಕೇಂದ್ರಬಿಂದುವಾಗಿತ್ತು.
ವಂ.ಸ್ವಾಮಿ ಜೂಲಿಯೊ ಎಮಿಲಿಯೊ ಅಲ್ಬೆರ್ಟೊ ದೆ ಲೊಂಬಾರ್ದೆ
1878ರಲ್ಲಿ ಬೆಲ್ಜಿಯಂನಲ್ಲಿ ಜನಿಸಿದ ವಂ.ಸ್ವಾಮಿ ಜೂಲಿಯೊ ಎಮಿಲಿಯೊ ಅಲ್ಬೆರ್ಟೊ ದೆ ಲೊಂಬಾರ್ದೆ ಅವರು ಪವಿತ್ರ ಕುಟುಂಬಗಳ ಮಿಷನರಿಗಳ ಸದಸ್ಯರಾಗಿದ್ದರು. ಅವರು ತಮ್ಮ ಜೀವನವನ್ನು ಮಿಷನರಿ ಸೇವೆಗೆ ಸಮರ್ಪಿಸಿ, ಮೂರು ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿದರು.
“ಮಿಷನರೀಸ್ ಆಫ್ ಅವರ್ ಲೇಡಿ ಆಫ್ ಆಫ್ರಿಕಾ” ಸಂಸ್ಥೆಯಲ್ಲಿ ಮಿಷನರಿ ತರಬೇತಿ ಪಡೆದ ನಂತರ, 1912ರಲ್ಲಿ ಬ್ರೆಜಿಲ್‌ಗೆ ಕಳುಹಿಸಲ್ಪಟ್ಟರು. ಅಲ್ಲಿ ವಿಶೇಷವಾಗಿ ಅಮೆಜಾನ್‌ನ ದೂರದ ಪ್ರದೇಶಗಳಲ್ಲಿ ಧರ್ಮಾಧ್ಯಕ್ಷೀಯ ಸೇವೆ, ಶಿಕ್ಷಣ ಮತ್ತು ಧರ್ಮೋಪದೇಶ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
1941ರಲ್ಲಿ ಅವರು ಬ್ರೆಜಿಲ್‌ನ ಪೌರತ್ವವನ್ನು ಪಡೆದರು. ತಾವು ತಮ್ಮ ಮನೆಯಾಗಿ ಸ್ವೀಕರಿಸಿದ್ದ ಆ ದೇಶದ ಬಗ್ಗೆ ಅಪಾರ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. 1944ರ ಕ್ರಿಸ್ಮಸ್ ಹಬ್ಬದ ಮುನ್ನಾದಿನ ನಡೆದ ವಾಹನ ಅಪಘಾತದಲ್ಲಿ ಅವರು ನಿಧನರಾದರು. ಪ್ರೇಷಿತರ ಉತ್ಸಾಹ, ಪ್ರಾರ್ಥನೆಯಲ್ಲಿ ದೃಢತೆ ಮತ್ತು ದೇವರ ಮೇಲಿನ ಅಚಲ ವಿಶ್ವಾಸ ಅವರ ಜೀವನದ ಲಕ್ಷಣಗಳಾಗಿದ್ದವು.
ಮಾತೆ ಮರಿಯಾ ಆಗ್ನೆಸ್ ತ್ರಿಬ್ಬಿಯೋಲಿ
1879ರಲ್ಲಿ ಫ್ಲಾರೆನ್ಸ್‌ನಲ್ಲಿ ಜನಿಸಿದ ಮಾತೆ ಮರಿಯಾ ಆಗ್ನೆಸ್ ತ್ರಿಬ್ಬಿಯೋಲಿ ಅವರು ಕಠಿಣ ಬಾಲ್ಯವನ್ನು ಎದುರಿಸಿದ ನಂತರ ಧಾರ್ಮಿಕ ಜೀವನವನ್ನು ಅಪ್ಪಿಕೊಂಡರು. ಬಳಿಕ ಇಮೋಲಾ ಧರ್ಮಪ್ರಾಂತ್ಯದಲ್ಲಿ “ಪಿಯಸ್ ವರ್ಕರ್ಸ್ ಆಫ್ ಸೇಂಟ್ ಜೋಸೆಫ್” ಎಂಬ ಧಾರ್ಮಿಕ ಸಂಸ್ಥೆಯನ್ನು ಸ್ಥಾಪಿಸಿದರು.
ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಅವರು ಅನೇಕ ದಾನಧರ್ಮದ ಕಾರ್ಯಗಳಿಗೆ ಉತ್ತೇಜನ ನೀಡಿದರು. ಅಪಾಯಗಳಿದ್ದರೂ ಸಹ ಯೆಹೂದ್ಯರ ಒಂದು ಗುಂಪಿಗೆ ಆಶ್ರಯ ಒದಗಿಸಿದರು. ಅವರ ಈ ಧೈರ್ಯಶಾಲಿ ಮಾನವೀಯ ಸೇವೆಯನ್ನು ಗುರುತಿಸಿ, ನಂತರ ಅವರಿಗೆ “ರೈಟಿಯಸ್ ಅಮಾಂಗ್ ದಿ ನೇಶನ್ಸ್” ಎಂಬ ಗೌರವ ನೀಡಲಾಯಿತು.
ಅಸಿಸಿಯ ಸಂತ ಫ್ರಾನ್ಸಿಸ್ ರವರ ಸರಳತೆ ಮತ್ತು ಬಡತನದ ಆದರ್ಶಗಳಿಂದ ಪ್ರೇರಿತರಾದ ಅವರು, ಅಗತ್ಯವಿರುವವರಿಗೆ ಸೇವೆ ಸಲ್ಲಿಸುವುದಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದರು. 1965ರಲ್ಲಿ 85ನೇ ವಯಸ್ಸಿನಲ್ಲಿ ಅವರು ನಿಧನರಾದರು.
