ಹುಡುಕಿ

Papa Leone XIV con la Congregazione Benedettina Vallombrosana

ಮೊಂಟ್ಸೆರಾಟ್‌ನ ಬೆನೆಡಿಕ್ಟೈನ್ ಸನ್ಯಾಸಿಗಳಿಗೆ ಜಗದ್ಗುರುಗಳು: ಮೌನವೆಂಬ ಅಮೂಲ್ಯ ಕೊಡುಗೆಗಾಗಿ ನಿಮಗೆ ಧನ್ಯವಾದಗಳು.

ಜಪಮಾಲೆ ಪ್ರಾರ್ಥನೆಯಲ್ಲಿ ಭಾಗವಹಿಸಿ ಹಾಗೂ ಮೊಂಟ್ಸೆರಾಟ್‌ನ ಅವರ್ ಲೇಡಿ ಅಬ್ಬೆಯಲ್ಲಿ ತಮ್ಮ ಸಂದೇಶವನ್ನು ನೀಡಿದ ನಂತರ, ಜಗದ್ಗುರು XIVನೇ ಲಿಯೋರವರು ಆ ಮಠವನ್ನು ನಡೆಸುತ್ತಿರುವ ಬೆನೆಡಿಕ್ಟೈನ್ ಸನ್ಯಾಸಿಗಳೊಂದಿಗೆ ಕೆಲಕಾಲ ಆತ್ಮೀಯವಾಗಿ ಸಮಯ ಕಳೆಯುತ್ತಾರೆ.

ವ್ಯಾಟಿಕನ್ ವರದಿ

ಜಪಮಾಲೆ ಪ್ರಾರ್ಥನೆಯನ್ನು ಸಲ್ಲಿಸಿ ಮತ್ತು ಮೊಂಟ್ಸೆರಾಟ್‌ನ ಅವರ್ ಲೇಡಿ ಅಬ್ಬೆಯಲ್ಲಿ ತಮ್ಮ ಸಂದೇಶವನ್ನು ನೀಡಿದ ಬಳಿಕ, ಜಗದ್ಗುರು XIVನೇ ಲಿಯೋರವರು ಬೆನೆಡಿಕ್ಟೈನ್ ಸಮುದಾಯದೊಂದಿಗೆ ಭೋಜನಶಾಲೆಯಲ್ಲಿ (ರೆಫೆಕ್ಟರಿಯಲ್ಲಿ) ಮಧ್ಯಾಹ್ನದ ಊಟದಲ್ಲಿ ಭಾಗವಹಿಸಿದರು. ಬಳಿಕ ಅವರು ಸನ್ಯಾಸಿಗಳೊಂದಿಗೆ ಉಡುಗೊರೆಗಳ ವಿನಿಮಯದ ಕಾರ್ಯಕ್ರಮದಲ್ಲಿಯೂ ಸೇರಿದರು.

“ಪೆರುವಿನ ಟ್ರುಹಿಲ್ಲೊ ನಗರದಲ್ಲಿರುವ ಅವರ್ ಲೇಡಿ ಆಫ್ ಮೊಂಟ್ಸೆರಾಟ್‌ಗೆ ಸಮರ್ಪಿತವಾದ ಒಂದು ಧರ್ಮ ಕೇಂದ್ರದ ಧರ್ಮಗುರುವಾಗಿದ್ದ ಸಂದರ್ಭವನ್ನು ಹಾಗೂ ಇತರ ಆಗಸ್ಟಿನಿಯನ್ ಸನ್ಯಾಸಿಗಳೊಂದಿಗೆ ಈ ಅಬ್ಬೆಗೆ ಭೇಟಿ ನೀಡಿದ್ದ ದಿನಗಳನ್ನು ಜಗದ್ಗುರುಗಳು ಸ್ಮರಿಸಿದರು” ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

“ಇಂದಿನ ಭೇಟಿಗಾಗಿ ಹಾಗೂ ಸಮುದಾಯದೊಳಗೆ ಕನ್ಯಾ ಮರಿಯಮ್ಮನವರ ಮೇಲಿನ ತಮ್ಮ ಭಕ್ತಿಯನ್ನು ಜೀವಂತವಾಗಿ ಸಾಕ್ಷ್ಯಪಡಿಸುತ್ತಿರುವ ಈ ಸನ್ಯಾಸಿಗಳ ಜೀವನ ಸಾಕ್ಷ್ಯಕ್ಕಾಗಿ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು” ಎಂದು ಪ್ರಕಟಣೆ ಮತ್ತಷ್ಟು ತಿಳಿಸಿದೆ.

ಈ ಸಂದರ್ಭದಲ್ಲಿ, ಧರ್ಮ ಸಭೆಗೂ ಮತ್ತು ಇಡೀ ಜಗತ್ತಿಗೂ ಈ ಐತಿಹಾಸಿಕ ಘಟ್ಟದಲ್ಲಿ ಸನ್ಯಾಸಿಗಳ ಸಾಕ್ಷ್ಯವು ವಿಶೇಷವಾಗಿ ಅಮೂಲ್ಯವಾಗಿದೆ ಎಂದು ಜಗದ್ಗುರು ಲಿಯೋರವರು ಒತ್ತಿಹೇಳಿದರು. “ಶಬ್ದ, ಚಟುವಟಿಕೆ ಮತ್ತು ಗಮನಭಂಗಗಳಿಂದ ತುಂಬಿರುವ ಈ ಜಗತ್ತಿನಲ್ಲಿ ಮೌನವೆಂಬ ಅಮೂಲ್ಯ ಉಡುಗೊರೆಯನ್ನು ನೀಡುತ್ತಿರುವುದಕ್ಕಾಗಿ” ಅವರು ಸನ್ಯಾಸಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

“ಮೌನದ ಕ್ಷಣಗಳನ್ನು ಅನುಭವಿಸಲು ಮತ್ತು ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳಲು ನಮ್ಮನ್ನು ಆಹ್ವಾನಿಸುವ ಮಾದರಿಗಳು ಜಗತ್ತಿಗೆ ಅಗತ್ಯವಾಗಿವೆ” ಎಂದು ಜಗದ್ಗುರುಗಳು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಸುಮಾರು 50 ಬೆನೆಡಿಕ್ಟೈನ್ ಸನ್ಯಾಸಿಗಳು ಈ ಮಠದಲ್ಲಿ ವಾಸಿಸುತ್ತಿದ್ದಾರೆ. 2025ರಲ್ಲಿ ಈ ಮಠವು ತನ್ನ ಸ್ಥಾಪನೆಯ ಸಹಸ್ರಮಾನೋತ್ಸವವನ್ನು (1000ನೇ ವಾರ್ಷಿಕೋತ್ಸವ) ಆಚರಿಸಿತು.

ಮೊಂಟ್ಸೆರಾಟ್‌ನ ಅವರ್ ಲೇಡಿ ಅಬ್ಬೆಯ ಸಂದರ್ಶಕರ ಪುಸ್ತಕದಲ್ಲಿ ಜಗದ್ಗುರುಗಳು ಹೀಗೆ ಬರೆದರು:

 “ಅವರ್ ಲೇಡಿ ಆಫ್ ಮೊಂಟ್ಸೆರಾಟ್ ರವರ ಪಾದಾರವಿಂದಗಳಲ್ಲಿ ನನ್ನ ಪೇತ್ರೀಯ ಸೇವೆಯನ್ನು ಸಮರ್ಪಿಸುತ್ತೇನೆ. ಅವರ ತಾಯಿಯ ಮಧ್ಯಸ್ಥಿಕೆಯು ಇಡೀ ಧರ್ಮ ಸಭೆಯನ್ನು ರಕ್ಷಿಸಲಿ. ನನ್ನ ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ.”

ಕೊನೆಯಲ್ಲಿ, ತಮಗೆ ನೀಡಲಾದ ಆತ್ಮೀಯ ಆತಿಥ್ಯಕ್ಕಾಗಿ ಜಗದ್ಗುರುಗಳು ಕೃತಜ್ಞತೆ ಸಲ್ಲಿಸಿ, ಎಲ್ಲರಿಗೂ ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

ಜಗದ್ಗುರು ಲಿಯೋರವರು ಪ್ರಸ್ತುತ ಸ್ಪೇನಿಗೆ ನಡೆಸುತ್ತಿರುವ ತಮ್ಮ ಜೂನ್ 6ರಿಂದ 12ರವರೆಗಿನ ಪ್ರೇಷಿತರ ಪ್ರವಾಸದ ಎರಡನೇ ಹಂತವಾಗಿ ಬಾರ್ಸಿಲೋನಾದಲ್ಲಿದ್ದಾರೆ. ಅವರು ಇದಕ್ಕೂ ಮೊದಲು ಮ್ಯಾಡ್ರಿಡ್‌ಗೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಕ್ಯಾನರಿ ದ್ವೀಪಗಳಿಗೂ ಪ್ರಯಾಣಿಸಲಿದ್ದಾರೆ.

 

10 ಜೂನ್ 2026, 21:14