ಜಗದ್ಗುರು ಲಿಯೋರವರು: "ಯಾವ ಪರಿಸ್ಥಿತಿಯೂ ದೇವರು ನಮ್ಮ ಮೇಲಿರುವ ತನ್ನ ಪ್ರೀತಿಯ ದೃಷ್ಟಿಯನ್ನು ನಮ್ಮಿಂದ ತಿರುಗಿಸಿಕೊಳ್ಳುವಂತೆ ಮಾಡಲಾರದು."
ವ್ಯಾಟಿಕನ್ ವರದಿ
"ನಿಮ್ಮ ಪ್ರತಿಯೊಬ್ಬರಿಗೂ ನಾನು ಹೇಳುವುದೇನೆಂದರೆ: ದೇವರು ನಿಮ್ಮನ್ನು ನೀವು ಇರುವಂತೆಯೇ ಪ್ರೀತಿಸುತ್ತಾನೆ ಆದರೆ ನೀವು ಇನ್ನಷ್ಟು ಉತ್ತಮರಾಗಬೇಕೆಂಬ ಕನಸನ್ನು ಆತ ನಿಮ್ಮ ಕುರಿತು ಕಾಣುತ್ತಾನೆ. ಪ್ರಭು ನಮ್ಮೆಲ್ಲರಿಗೂ ಹೊಸದಾಗಿ ಆರಂಭಿಸುವ ಅವಕಾಶವನ್ನು ನೀಡುತ್ತಾನೆ. ಏಕೆಂದರೆ ಮಾನವನಾಗಿರುವುದು ಮತ್ತು ಕ್ರೈಸ್ತನಾಗಿರುವುದು ಎಂದರೆ ಎಂದಿಗೂ ತಪ್ಪು ಮಾಡದಿರುವುದಲ್ಲ, ಬದಲಾಗಿ ಪರಿವರ್ತನೆ ಹೊಂದುವಲ್ಲಿ, ಪಶ್ಚಾತ್ತಾಪಪಡುವಲ್ಲಿ, ತಪ್ಪುಗಳನ್ನು ಸರಿಪಡಿಸುವಲ್ಲಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಮಾಧಾನ ಹಾಗೂ ಕ್ಷಮೆಯನ್ನು ನೀಡುವಲ್ಲಿ ಬೆಳೆಯುವುದಾಗಿದೆ."
ಸ್ಪೇನಿಗೆ ತಮ್ಮ ಪ್ರೇಷಿತರ ಪ್ರವಾಸದ ಸಂದರ್ಭದಲ್ಲಿ ಬುಧವಾರ ಬೆಳಿಗ್ಗೆ ಬ್ರಿಯಾನ್ಸ್ 1 ಪಶ್ಚಾತ್ತಾಪ ಕೇಂದ್ರದಲ್ಲಿ ಜಗದ್ಗುರು XIVನೇ ಲಿಯೋರವರು ಈ ಶಕ್ತಿಯುತ ಸಂದೇಶವನ್ನು ನೀಡಿದರು. ಈ ಸಾಂತ್ವನದಾಯಕ ಸತ್ಯವು ನಮ್ಮ ಜೀವನದ ಪ್ರತಿಯೊಂದು ಕ್ಷಣದಲ್ಲೂ ನಮ್ಮೊಂದಿಗೇ ಇರುತ್ತದೆ ಎಂದು ಅವರು ಹೇಳಿದರು.
ಇದಲ್ಲದೆ, ದೇವರ ಕರುಣಾಮಯ ಪ್ರೀತಿಯು ನಾವು ಮಾಡಿದ ಒಳ್ಳೆಯದಾಗಲಿ ಕೆಟ್ಟದಾಗಲಿ ಎಲ್ಲಕ್ಕಿಂತಲೂ ಮಿಗಿಲಾಗಿದೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಪ್ರತಿಯೊಬ್ಬ ಮಾನವನು,"ದೇವರ ಇಚ್ಛೆಯಿಂದ ಸೃಷ್ಟಿಸಲ್ಪಟ್ಟು, ಪ್ರೀತಿಸಲ್ಪಟ್ಟಿರುವುದರಿಂದಲೇ ಗೌರವ ಮತ್ತು ಮೌಲ್ಯಕ್ಕೆ ಅರ್ಹನಾಗಿದ್ದಾನೆ. ಆದ್ದರಿಂದ, ಪ್ರಭು ತನ್ನ ದೃಷ್ಟಿಯನ್ನು ನಮ್ಮಿಂದ ತಿರುಗಿಸಿಕೊಳ್ಳುವಂತಹ ಯಾವುದೇ ಪರಿಸ್ಥಿತಿ ಇಲ್ಲ."ಎಂದು ಜಗದ್ಗುರುಗಳು ಹೇಳಿದರು.
ಸದಾ ನಿಮ್ಮನ್ನು ಪ್ರೀತಿಸುವಾತನ ಕಡೆಗೆ ನಿಮ್ಮ ದೃಷ್ಟಿಯನ್ನು ಎತ್ತಿರಿ
ತಮ್ಮ ಪ್ರೀತಿಪಾತ್ರರಿಂದ ದೂರವಿರುವ ಭಾರವನ್ನು ಹೊತ್ತುಕೊಂಡು, ತಮ್ಮ ಪ್ರಸ್ತುತ ಪರಿಸ್ಥಿತಿಯಿಂದ ನೋವನ್ನು ಅನುಭವಿಸುತ್ತಿರುವವರಿಗೆ ಈ ಸತ್ಯವು ವಿಶೇಷವಾಗಿ ಅನ್ವಯಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.
"ನೀವು ನಿಮ್ಮನ್ನು ಕೀಳಾಗಿ ಭಾವಿಸಲು ಪ್ರೇರೇಪಿತರಾದಾಗ, ಅಥವಾ ಮುಂದೆ ಸಾಗುವುದರಲ್ಲಿ ಅರ್ಥವಿಲ್ಲ ಎಂದು ಅನಿಸಿದಾಗ,ಅನೇಕ ಜನರ ಸಾನ್ನಿಧ್ಯದ ಮೂಲಕ ತನ್ನ ಪ್ರೀತಿ ಮತ್ತು ಸಾಮೀಪ್ಯವನ್ನು ನಿಮಗೆ ನಿರಂತರವಾಗಿ ತೋರಿಸುತ್ತಿರುವಾತನ ಕಡೆಗೆ ನಿಮ್ಮ ದೃಷ್ಟಿಯನ್ನು ಎತ್ತಿರಿ ಎಂದು ಜಗದ್ಗುರುಗಳು ಹೇಳಿದರು
ಆತಂಕ ಮತ್ತು ದುಃಖವು ನಿಮ್ಮನ್ನು ಕುಗ್ಗಿಸದಿರಲಿ
ನಿಮ್ಮ ಜೀವನಯಾತ್ರೆಯ ಕೆಲವು ಕ್ಷಣಗಳಲ್ಲಿ ಆತಂಕ ಮತ್ತು ದುಃಖವು ನಿಮ್ಮನ್ನು ಆವರಿಸಬಹುದು ಎಂದು ಅವರು ಒಪ್ಪಿಕೊಂಡರು. ಆದರೆ ಜೀವನದಲ್ಲಿ ನಡೆದ ತಪ್ಪುಗಳು ಒಬ್ಬ ವ್ಯಕ್ತಿಯ ನಿಜವಾದ ಗುರುತನ್ನು ನಿರ್ಧರಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ಹೇಳಿದರು.
ತಮ್ಮ ( ಕನ್‌ಫೆಶನ್ಸ್ )ಪಶ್ಚಾತ್ತಾಪ ಕೃತಿಯಲ್ಲಿ ಸಂತ ಆಗಸ್ಟಿನ್ ಇದನ್ನೇ ವಿವರಿಸುತ್ತಾರೆ ಎಂದು ಅವರು ನೆನಪಿಸಿದರು. ಅಲ್ಲಿ ಪ್ರಭು ನಮ್ಮ ಜೀವನಯಾತ್ರೆಯಲ್ಲಿ ನಮ್ಮೊಂದಿಗೆ ನಡೆಯುವವನಾಗಿ ಚಿತ್ರಿಸಲ್ಪಟ್ಟಿದ್ದಾನೆ.
"ನಾವು ದೈವಿಕ ಕೃಪೆಯ ಮೇಲೆ ಭರವಸೆ ಇಟ್ಟು, ಅದರ ಮಾರ್ಗದರ್ಶನ ಮತ್ತು ಪರಿವರ್ತನೆಗೆ ನಮ್ಮನ್ನು ಒಪ್ಪಿಸಿದರೆ, ನಮ್ಮ ಭೂತಕಾಲವು ನಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಕಂಡುಕೊಳ್ಳುತ್ತೇವೆ. ಬದಲಾಗಿ, ಮಹಾನ್ ಸಂತ ಆಗಸ್ಟಿನ್ ರವರು ಹೇಳುವಂತೆ, ಅದು ನಮ್ಮ ನಿರ್ಧಾರಗಳು ಮತ್ತು ಆಯ್ಕೆಗಳನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ನಮಗೆ ನೀಡುತ್ತದೆ."
ಆದ್ದರಿಂದ, ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ಸ್ಥಳ ನೀಡುವಂತೆ ಮತ್ತು ಆತನ ಮುಖವನ್ನು ಹುಡುಕುವಂತೆ ಜಗದ್ಗುರುಗಳು ಕೈದಿಗಳನ್ನು ಆಹ್ವಾನಿಸಿದರು.
"ಆತನ ಪ್ರೀತಿಯು ನಮ್ಮನ್ನು ಮಾರ್ಗದರ್ಶಿಸಲಿ. ನಿರಂತರವಾಗಿ ನಮ್ಮನ್ನು ಭರವಸೆಯತ್ತ ಕರೆಯುವಾತನನ್ನು ನಾವು ಬಿಗಿಯಾಗಿ ಹಿಡಿದುಕೊಳ್ಳೋಣ," ಎಂದು ಅವರು ಹೇಳಿದರು.
ಯಾವುದೇ ಭೌತಿಕ ಅಡೆತಡೆಯೂ ತಲುಪುವುದನ್ನು ತಡೆಯಲಾರದ ಅದ್ಭುತ ದಿಗಂತವನ್ನು ಆತನು ನಮಗೆ ತೋರಿಸುತ್ತಾನೆ ಎಂದು ಜಗದ್ಗುರುಗಳು ಧೈರ್ಯ ತುಂಬಿದರು.
ಇಂದಿಗೂ ಪ್ರಭು ನಮ್ಮ ಅಂತಃಕರಣದ ಆಳದಲ್ಲಿ ನಮ್ಮೊಂದಿಗೆ ಮಾತನಾಡುತ್ತಾರೆ ಮತ್ತು ಆತನು ನಮ್ಮ ಮಧ್ಯದಲ್ಲಿಯೇ ವಾಸಿಸುತ್ತಾನೆ ಎಂಬುದನ್ನು ಅರಿಯಲು ಸಹಾಯ ಮಾಡುತ್ತಾನೆ ಎಂದು ಅವರು ಹೇಳಿದರು.
ಆತನು ನಮಗೆ ಒಂದು ಅವಕಾಶ ನೀಡುವಂತೆ ಕಾಯುತ್ತಿದ್ದಾನೆ
ಆತನು ಕೇವಲ ನಾವು ಆತನಿಗೆ ಒಂದು ಅವಕಾಶವನ್ನು ನೀಡುವಂತೆ ಕಾಯುತ್ತಿದ್ದಾನೆ ಎಂದು ಜಗದ್ಗುರುಗಳು ಹೇಳಿದರು.
ದೇವರ ಕನಸನ್ನು ಕಾಣುವುದನ್ನು ಮುಂದುವರಿಸಿ, ಆತನು ನಮ್ಮನ್ನು ಹೊಸದಾಗಿ ಆರಂಭಿಸುವಂತೆ ಅವಕಾಶ ನೀಡಿರಿ ಎಂದು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ ಎಂದರು
ಈ ಸಾಂತ್ವನದಾಯಕ ಮಾತುಗಳೊಂದಿಗೆ ಜಗದ್ಗುರು XIVನೇ ಲಿಯೋರವರು ಕೈದಿಗಳನ್ನು ವಿಶೇಷ ರೀತಿಯಲ್ಲಿ ಕರುಣಾಮಾತೆ ಮರಿಯಮ್ಮನ ಮಧ್ಯಸ್ಥಿಕೆಗೆ ಸಮರ್ಪಿಸಿ, ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡುವ ಮೂಲಕ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
