ಯಾಜಕರಿಗೆ ಜಗದ್ಗುರುಗಳು: ಒಳ್ಳೆಯ ಕುರುಬನ ಸಾಕ್ಷಿಗಳಾಗಿರಿ ಮತ್ತು ನಿಮ್ಮನ್ನು ಸಂಪೂರ್ಣವಾಗಿ ಪ್ರಭುವಿಗೆ ಸಮರ್ಪಿಸಿರಿ ಎಂದು ಕರೆ ನೀಡಿದರು.
ವ್ಯಾಟಿಕನ್ ವರದಿ
“ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಮತ್ತು ಪ್ರತಿದಿನ ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯಲ್ಲಿಯೂ ಕ್ರಿಸ್ತನೊಂದಿಗೆ ಒಂದಾಗಿಯೇ ಇರೋಣ.”
ಧರ್ಮ ಸಭೆಯು ಜೂನ್ 12ರಂದು ಆಚರಿಸುವ ಯಾಜಕರ ಪವಿತ್ರೀಕರಣಕ್ಕಾಗಿ ಪ್ರಾರ್ಥನಾ ದಿನ ಹಾಗೂ ಯೇಸುವಿನ ಪರಮಪವಿತ್ರ ಹೃದಯದ ಮಹೋತ್ಸವದ ಸಂದರ್ಭದಲ್ಲಿ ಯಾಜಕರಿಗೆ ಕಳುಹಿಸಿದ ಸಂದೇಶದಲ್ಲಿ ಜಗದ್ಗುರು ಲಿಯೋರವರು ಈ ಮಾತುಗಳನ್ನು ಹೇಳಿದರು.
ತಮ್ಮ ಸಂದೇಶದಲ್ಲಿ ಜಗದ್ಗುರುಗಳು, ಪಾವಿತ್ರ್ಯವು ಅನೇಕ ಆಯ್ಕೆಗಳಲ್ಲೊಂದು ಆಯ್ಕೆಯಲ್ಲ ಮತ್ತು ಕೇವಲ ಒಂದು ಅಮೂರ್ತ ಆದರ್ಶವೂ ಅಲ್ಲ ಎಂದು ಹೇಳಿದರು. ಏಕೆಂದರೆ, ಪುನರುತ್ಥಾನಗೊಂಡ ಕ್ರಿಸ್ತನ ಜೀವನದಲ್ಲಿ ಪಾಲುಗಾರರಾಗಲು ಬಯಸುವ ಪ್ರತಿಯೊಬ್ಬರ ಅಸ್ತಿತ್ವದ ಕೇಂದ್ರಭಾಗವೇ ಪಾವಿತ್ರ್ಯವಾಗಿದೆ ಎಂದು ಅವರು ವಿವರಿಸಿದರು.
ದೇವರು ತನ್ನದೇ ಪಾವಿತ್ರ್ಯದಲ್ಲಿ ಪಾಲುಗೊಳ್ಳಲು ನಮ್ಮನ್ನು ಆಹ್ವಾನಿಸುತ್ತಾನೆ ಎಂದು ಒತ್ತಿಹೇಳಿದ ಜಗದ್ಗುರುಗಳು, “ದೇವರು ನಮ್ಮಿಂದ ಬಯಸುವ ಪಾವಿತ್ರ್ಯವೆಂದರೆ ಭರವಸೆಯೊಂದಿಗೆ ಆತನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದು ಮತ್ತು ಪವಿತ್ರಾತ್ಮನಿಂದ ರೂಪಾಂತರಗೊಳ್ಳಲು ಅವಕಾಶ ನೀಡುವುದು” ಎಂದು ಹೇಳಿದರು.
ನಾವು ಭೂಮಿಯ ಮೇಲಿನ ಮನುಷ್ಯರಾಗಿದ್ದು, ಅನೇಕ ಬಾರಿ ಮಿತಿಗಳಿಂದ ಕೂಡಿದವರು, ಅಪೂರ್ಣರು, ದುರ್ಬಲರು, ಆಯಾಸಗೊಂಡವರು ಮತ್ತು ಕೆಲವೊಮ್ಮೆ ಗಾಯಗೊಂಡವರಾಗಿದ್ದರೂ ಸಹ ದೇವರ ಪಾವಿತ್ರ್ಯದಲ್ಲಿ ಪಾಲುಗೊಳ್ಳಲು ಕರೆಯಲ್ಪಟ್ಟಿದ್ದೇವೆ ಎಂದು ಜಗದ್ಗುರುಗಳು ಚಿಂತಿಸಿದರು.
“ಇಂತಹ ದುರ್ಬಲ ಮಾನವ ಹೃದಯವು ಇಷ್ಟು ಉನ್ನತವಾದ ಕರೆಯನ್ನು ಹೇಗೆ ಸ್ವೀಕರಿಸಬಲ್ಲದು?” ಎಂದು ಅವರು ಪ್ರಶ್ನಿಸಿದರು.
ನಮ್ಮ ಹೃದಯವು ಕ್ರಿಸ್ತನ ಹೃದಯದೊಂದಿಗೆ ಒಂದಾಗುವುದು ಕೆಲವೇ ಆಯ್ದ ಜನರಿಗೆ ಮೀಸಲಾದ ಅನುಭವವಲ್ಲ ಎಂದು ಜಗದ್ಗುರುಗಳು ಹೇಳಿದರು. ಬದಲಾಗಿ, ಅದು ಸಂಸ್ಕಾರಮಯ ಹಾಗೂ ಯೂಕರಿಸ್ಟಿನ ಮಾರ್ಗವಾಗಿದ್ದು, ನಮ್ಮ ಜೀವನದ ಪ್ರತಿದಿನದಲ್ಲಿಯೂ ತೆರೆದುಕೊಳ್ಳುವ ಆಧ್ಯಾತ್ಮಿಕ ಪಯಣವಾಗಿದೆ ಎಂದು ಅವರು ವಿವರಿಸಿದರು.
“ಯಾಜಕಾಭಿಷೇಕದ ಮೂಲಕ ನಾವು ಕ್ರಿಸ್ತನಿಗೆ ರೂಪುಗೊಂಡವರಾಗಿದ್ದೇವೆ. ಆದರೂ, ಯೂಕರಿಸ್ಟಿನ ದೈನಂದಿನ ಆಚರಣೆ, ಪ್ರಾರ್ಥನೆ, ದೇವರ ವಾಕ್ಯದ ಧ್ಯಾನ ಹಾಗೂ ನಮ್ಮ ಸಹೋದರ-ಸಹೋದರಿಯರಿಗೆ ವಿನಯಪೂರ್ವಕ ಸೇವೆ ಮಾಡುವ ಮೂಲಕ, ದೇವರ ಕೃಪೆಯ ವರವನ್ನು ನಿರಂತರವಾಗಿ ನಮ್ಮೊಳಗೆ ನವೀಕರಿಸಿಕೊಳ್ಳಬೇಕು” ಎಂದು ಅವರು ಹೇಳಿದರು.
ನಮ್ಮ ಮಾನವೀಯ ಜೀವನವನ್ನು ಪ್ರತ್ಯೇಕ ವಿಭಾಗಗಳಾಗಿ ವಿಭಜಿಸಲು ಸಾಧ್ಯವಿಲ್ಲ ಎಂದು ಜಗದ್ಗುರುಗಳು ಗಮನಸೆಳೆದರು. “ಪ್ರಾರ್ಥನೆ, ಸೇವೆ, ಸಂಬಂಧಗಳು, ಆಯಾಸ, ಸಂತೋಷ, ವೈಫಲ್ಯಗಳು, ವ್ಯರ್ಥವಾದಂತೆ ಕಾಣುವ ಸಮಯ ಮತ್ತು ಪ್ರೀತಿಯೂ ಸಹ ದೇವರು ತನ್ನನ್ನು ಮತ್ತು ತನ್ನ ಅನಂತ ಪ್ರೀತಿಯನ್ನು ಪ್ರಕಟಿಸಿಕೊಳ್ಳುವ ವಿಶೇಷ ಸ್ಥಳಗಳಾಗುತ್ತವೆ” ಎಂದು ಅವರು ಹೇಳಿದರು.
ನೇರವಾದ, ಸರಳವಾದ ಮತ್ತು ಶುದ್ಧವಾದ ಹೃದಯವನ್ನು ಹೊಂದಿರುವ ಯಾಜಕನು ಕಾರ್ಯನಿರತ ಜೀವನದ ಮಧ್ಯೆಯೂ ಧ್ಯಾನಮಯನಾಗಿರಬಹುದು, ಪರೀಕ್ಷೆಗಳ ಸಮಯದಲ್ಲೂ ಕರುಣಾಮಯ ಮತ್ತು ನಂಬಿಗಸ್ತನಾಗಿರಬಹುದು; ತನ್ನನ್ನೇ ಅರ್ಪಿಸಿಕೊಳ್ಳುವ ವರದಲ್ಲಿ ಸಂತೋಷವನ್ನು ಕಂಡುಕೊಳ್ಳಬಹುದು ಎಂದು ಜಗದ್ಗುರುಗಳು ತಿಳಿಸಿದರು.
“ಇಂದಿನ ಜಗತ್ತಿಗೆ ಕೇವಲ ಮಾತುಗಳು ಅಥವಾ ಯೋಜನೆಗಳನ್ನು ನೀಡುವ ಯಾಜಕರು ಬೇಕಾಗಿಲ್ಲ,” ಎಂದು ಜಗದ್ಗುರುಗಳು ಒತ್ತಿಹೇಳಿದರು. “ಕ್ರಿಸ್ತನ ಪಾವಿತ್ರ್ಯದ ಸುಗಂಧವನ್ನು ಹರಡುವ, ದೇವರೊಂದಿಗೆ ಸಮನ್ವಯಗೊಂಡ ಹೃದಯದ ಜೀವಂತ ಸಾಕ್ಷಿ ಬೇಕಾಗಿದೆ.” ಯೇಸುವಿನ ಹೃದಯಕ್ಕೆ ರೂಪುಗೊಂಡ, ದೃಢವಾದ ಯಾಜಕ ಜೀವನವು ಏಕತೆ, ಶಾಂತಿ ಮತ್ತು ಕರುಣೆಯ ವಿಶ್ವಾಸಾರ್ಹ ಸಂಕೇತವಾಗಿದೆ ಎಂದು ಅವರು ಹೇಳಿದರು.
ವಿಭಜನೆ ಮತ್ತು ಭಯದಿಂದ ಗುರುತಿಸಲ್ಪಟ್ಟಿರುವ ಇಂದಿನ ಯುಗದಲ್ಲಿ, “ನಾವು ಶಾಂತಿಯ ನಿರ್ಮಾಪಕರಾಗಬೇಕು ಮತ್ತು ಚದುರಿಹೋದವರನ್ನು ಒಗ್ಗೂಡಿಸುವ ಹಾಗೂ ಗಾಯಗೊಂಡವರನ್ನು ಗುಣಪಡಿಸುವ ಒಳ್ಳೆಯ ಕುರುಬನ ಮೃದು ಪ್ರೀತಿಗೆ ಸಾಕ್ಷಿಗಳಾಗಬೇಕು” ಎಂದು ಜಗದ್ಗುರುಗಳು ಕರೆ ನೀಡಿದರು.
ಪಾವಿತ್ರ್ಯದ ಕರೆಯನ್ನು ಸ್ವೀಕರಿಸುವುದು ಕೇವಲ ಕಠಿಣ ತಪಸ್ಸು ಅಥವಾ ಪರಿಪೂರ್ಣತೆಗಾಗಿ ಮಾಡುವ ಪ್ರಯತ್ನಗಳಲ್ಲಿ ಮಾತ್ರ ಇರುವುದಿಲ್ಲ ಎಂದು ಅವರು ಹೇಳಿದರು. ಅವು ಅಗತ್ಯವಾದರೂ, ನಿಜವಾದ ಉತ್ತರವು ಯೇಸುವಿನ ಛೇದಿತ ಹೃದಯದಲ್ಲಿ ಪ್ರಕಟವಾದ ಪ್ರೀತಿಯ ಮೇಲೆ ಭರವಸೆಯೊಂದಿಗೆ ಅಂಟಿಕೊಂಡಿರುವುದಲ್ಲಿದೆ ಎಂದು ವಿವರಿಸಿದರು.
“ಇನ್ನು ಬದುಕುತ್ತಿರುವುದು ನಾವಲ್ಲ; ಕ್ರಿಸ್ತನೇ ನಮ್ಮೊಳಗೆ ಬದುಕುತ್ತಿದ್ದಾನೆ” ಎಂಬ ಸತ್ಯವನ್ನು ಜಗದ್ಗುರುಗಳು ಸಂತೋಷದಿಂದ ಸ್ಮರಿಸಿದರು.
“ನಿಮ್ಮನ್ನೆಲ್ಲ ಸಂಪೂರ್ಣವಾಗಿ ಆತನಿಗೆ ಸಮರ್ಪಿಸಿರಿ, ಆಗ ಆತನು ತನ್ನ ಜನರನ್ನು ಪ್ರೀತಿಸುವ ಅದೇ ಪ್ರೀತಿಯಿಂದ ನೀವು ಕೂಡ ಅವರನ್ನು ಪ್ರೀತಿಸಲು ಸಾಧ್ಯವಾಗುತ್ತದೆ” ಎಂದು ಜಗದ್ಗುರು ಲಿಯೋರವರು ಹೇಳಿದರು.
“ಈ ಪ್ರೀತಿಯೇ,” ಎಂದು ಅವರು ಮುಂದುವರಿಸಿದರು, “ನಾವು ನಮ್ಮನ್ನು ಸಂಪೂರ್ಣವಾಗಿ ದೇವರಿಗೆ ಒಪ್ಪಿಸಿ ಅರ್ಪಿಸಿದಾಗ, ನಮ್ಮಲ್ಲಿರುವ ಯಾವುದೂ ಕಳೆದುಹೋಗುವುದಿಲ್ಲ ಎಂಬ ವಾಗ್ದಾನವೂ ಭರವಸೆಯೂ ಆಗಿದೆ.”
ಕೊನೆಯಲ್ಲಿ, ಜಗದ್ಗುರು ಲಿಯೋರವರು ಪ್ರತಿಯೊಬ್ಬ ಯಾಜಕರನ್ನೂ ಯಾಜಕರ ತಾಯಿಯಾದ ಧನ್ಯ ಕನ್ಯಾ ಮರಿಯಮ್ಮನವರ ರಕ್ಷಣೆಗೆ ಒಪ್ಪಿಸಿದರು.
“ತನ್ನ ಹೃದಯದಲ್ಲಿ ತನ್ನ ಪುತ್ರನ ರಹಸ್ಯವನ್ನು ಸಂರಕ್ಷಿಸಿಕೊಂಡಿದ್ದ ಆಕೆ, ಲೋಕದ ರಕ್ಷಕನಾದ ಕ್ರಿಸ್ತನ ಹೃದಯವು ನಮ್ಮೊಳಗೂ ಜೀವಂತವಾಗಿ ಬಡಿಯುವಂತೆ ಅದನ್ನು ಕಾಪಾಡಿಕೊಳ್ಳುವುದನ್ನು ಮತ್ತು ಪೋಷಿಸುವುದನ್ನು ನಮಗೆ ಕಲಿಸಲಿ” ಎಂದು ಪ್ರಾರ್ಥಿಸಿ ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
