ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  

ಮಕ್ಕಳನ್ನು ಕಳೆದುಕೊಂಡು ದುಃಖಿಸುತ್ತಿರುವ ಪೋಷಕರಿಗಾಗಿ ಜಗದ್ಗುರುಗಳ ಪ್ರಾರ್ಥನೆ: ಜೀವದಿನದ ಸಂದೇಶ.

2026ರ ಜೀವದಿನ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಮಗುವಿನ ಅಗಲಿಕೆಯಿಂದ ದುಃಖದಲ್ಲಿರುವ ಪೋಷಕರಿಗಾಗಿ ಪ್ರಾರ್ಥನೆ ಸಲ್ಲಿಸಿ ಅವರಿಗೆ ಧೈರ್ಯ ಮತ್ತು ಸಾಂತ್ವನದ ಸಂದೇಶ ನೀಡಿದರು. ಅಲ್ಲದೆ, ಗರ್ಭಧಾರಣೆಯ ಕ್ಷಣದಿಂದಲೇ ಪ್ರತಿಯೊಂದು ಮಾನವ ಜೀವಕ್ಕೂ ಇರುವ ಅಂತರ್ನಿಹಿತ ಘನತೆ ಮತ್ತು ಮೌಲ್ಯವನ್ನು ಅವರು ಒತ್ತಿಹೇಳಿದರು.

ವ್ಯಾಟಿಕನ್ ವರದಿ

2026ರ ಜೀವದಿನ ಅಂಗವಾಗಿ, ಮಗುವನ್ನು—ವಿಶೇಷವಾಗಿ ಶಿಶುವನ್ನು ಕಳೆದುಕೊಂಡು ದುಃಖಿಸುತ್ತಿರುವ ಪೋಷಕರಿಗೆ ಜಗದ್ಗುರು XIVನೇ ಲಿಯೋರವರು ತಮ್ಮ ಪ್ರಾರ್ಥನೆಗಳು ಮತ್ತು ಆಧ್ಯಾತ್ಮಿಕ ಸಾನ್ನಿಧ್ಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದೇಶವನ್ನು ಇಂಗ್ಲೆಂಡ್ ಮತ್ತು ವೇಲ್ಸ್, ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್‌ನ ಬಿಷಪ್‌ಗಳ ಸಮ್ಮೇಳನಗಳು ಆಚರಿಸಲಿರುವ ಜೀವದಿನದ ಸಂದರ್ಭದಲ್ಲಿ ಕಳುಹಿಸಲಾಗಿದೆ.

ಜೂನ್ 21ರಂದು ನಡೆಯಲಿರುವ ವಾರ್ಷಿಕ ಆಚರಣೆಯ ಮುನ್ನ, ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾಡಿ೯ನಲ್ ಪಿಯತ್ರೋ ಪಾರೋಲಿನ್ ರವರು ಆರ್ಚ್‌ಬಿಷಪ್ ಜಾನ್ ಶೆರಿಂಗ್ಟನ್ ರವರಿಗೆ ಬರೆದ ಪತ್ರದ ಮೂಲಕ ಜಗದ್ಗುರುಗಳ ಸಂದೇಶವನ್ನು ತಲುಪಿಸಿದರು.

“ಈ ವರ್ಷದ ವಿಷಯವಾಗಿ ಗರ್ಭದಲ್ಲಿರುವ ಮಗುವಿನ ಸಂಪೂರ್ಣ ಮಾನವೀಯತೆಯ ಅದ್ಭುತತೆಯನ್ನು ಕೇಂದ್ರೀಕರಿಸಿರುವುದನ್ನೂ, ಹಾಗೆಯೇ ಶಿಶುವಿನ ಅಗಲಿಕೆಯನ್ನು ಅನುಭವಿಸಿದ ತಾಯಂದಿರು ಮತ್ತು ತಂದೆಯರಿಗೆ ಬೆಂಬಲ ನೀಡಲು ನೀವು ಮಾಡುತ್ತಿರುವ ಪ್ರಯತ್ನಗಳನ್ನೂ ತಿಳಿದು ಪರಮಪೂಜ್ಯರು ಸಂತೋಷಪಟ್ಟಿದ್ದಾರೆ” ಎಂದು ಕಾರ್ಡಿನಲ್ ಪರೋಲಿನ್ ರವರು ಜಗದ್ಗುರುಗಳ ಪರವಾಗಿ ಬರೆದಿದ್ದಾರೆ.

“ಗರ್ಭಧಾರಣೆಯ ಮೊದಲ ಕ್ಷಣದಿಂದಲೇ ಪ್ರತಿಯೊಬ್ಬ ಮಾನವ ವ್ಯಕ್ತಿಯು ಕೇವಲ ಅಸ್ತಿತ್ವದಲ್ಲಿರುವ ಕಾರಣಕ್ಕೇ, ದೇವರಿಂದ ಬಯಸಲ್ಪಟ್ಟು, ಸೃಷ್ಟಿಸಲ್ಪಟ್ಟು ಮತ್ತು ಪ್ರೀತಿಸಲ್ಪಟ್ಟಿರುವ ಕಾರಣಕ್ಕೇ ಅನಂತ ಘನತೆಯನ್ನು ಹೊಂದಿರುತ್ತಾನೆ” ಎಂದು ಸಂದೇಶದಲ್ಲಿ ಹೇಳಲಾಗಿದೆ. ಈ ಮಾತು ಜಗದ್ಗುರುಗಳ ಇತ್ತೀಚಿನ ಪರಿಪತ್ರಿಕೆ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಅನ್ನು ಉಲ್ಲೇಖಿಸುತ್ತದೆ. ದೇವರ ಈ ಪ್ರೀತಿಯೇ ಪ್ರತಿಯೊಂದು ಮಾನವ ಜೀವನಕ್ಕೂ ಅರ್ಥವನ್ನು ನೀಡುತ್ತದೆ ಮತ್ತು “ಶಾಶ್ವತತೆಯಲ್ಲಿ ಹೊಸ ಪರಿಪೂರ್ಣತೆಯ” ಕಡೆಗೆ ದಾರಿಯನ್ನು ತೆರೆಯುತ್ತದೆ ಎಂದು ಜಗದ್ಗುರುಗಳು ಗಮನಿಸಿದ್ದಾರೆ.

ದುಃಖದಲ್ಲಿರುವ ಪೋಷಕರಿಗೆ ಸಾಂತ್ವನ

ವಿಶೇಷವಾಗಿ ಮಗುವಿನ ಮರಣದಿಂದ ಶೋಕಿಸುತ್ತಿರುವ ಪೋಷಕರಿಗೆ ಜಗದ್ಗುರು ಲಿಯೋರವರು ತಮ್ಮ ಪ್ರಾರ್ಥನೆಗಳು ಮತ್ತು ಆತ್ಮೀಯ ಸಾನ್ನಿಧ್ಯವನ್ನು ಭರವಸೆ ನೀಡಿದರು. ಇಂತಹ ದುಃಖದ ಭಾರವನ್ನು ಹೊತ್ತಿರುವವರು ಕ್ರೈಸ್ತ ಸಮುದಾಯದಲ್ಲಿ ಅಗತ್ಯವಾದ ಬೆಂಬಲವನ್ನು ಕಂಡುಕೊಳ್ಳಲಿ ಎಂಬ ಆಶೆಯನ್ನು ಅವರು ವ್ಯಕ್ತಪಡಿಸಿದರು.

“ಈ ಪೋಷಕರು ಧರ್ಮ ಸಭೆಯ ಸಮುದಾಯದಲ್ಲಿ, ಮತ್ತು ವಿಶೇಷವಾಗಿ ಪ್ರಾರ್ಥನೆ ಹಾಗೂ ಸಂಸ್ಕಾರಗಳಿಂದ ಪೋಷಿತವಾದ ಜೀವನದಲ್ಲಿ, ತಮಗೆ ಅಗತ್ಯವಾದ ಬೆಂಬಲವನ್ನು ಕಂಡುಕೊಳ್ಳಲಿ ಎಂಬುದು ಅವರ ಭರವಸೆಯಾಗಿದೆ” ಎಂದು ಅವರು ಬರೆದಿದ್ದಾರೆ.

ಜೀವದ ವರಕ್ಕೆ ಸಾಕ್ಷಿಯಾಗುವುದು

ಸಂದೇಶದ ಕೊನೆಯಲ್ಲಿ, ಜೀವದಿನದ ಉಪಕ್ರಮದ ಮೂಲಕ ಮಾನವ ಜೀವದ ಘನತೆಯನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಶ್ರಮಿಸುತ್ತಿರುವ ಎಲ್ಲರಿಗೂ ಜಗದ್ಗುರು ಲಿಯೋರವರು ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರ ಮೇಲೂ ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

ಇಂಗ್ಲೆಂಡ್ ಮತ್ತು ವೇಲ್ಸ್, ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್‌ನ ಕಥೋಲಿಕ ಬಿಷಪ್‌ಗಳ ಸಮ್ಮೇಳನಗಳಿಂದ ಪ್ರತಿವರ್ಷ ಆಚರಿಸಲಾಗುವ ಜೀವದಿನವು, ಪ್ರತಿಯೊಬ್ಬ ಮಾನವ ವ್ಯಕ್ತಿಯ ಘನತೆಯನ್ನು ಉತ್ತೇಜಿಸುವುದರ ಜೊತೆಗೆ, ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಂಕಷ್ಟಗಳನ್ನು ಎದುರಿಸುತ್ತಿರುವವರಿಗೆ ಬೆಂಬಲ ನೀಡುವ ಉದ್ದೇಶವನ್ನು ಹೊಂದಿದೆ.

16 ಜೂನ್ 2026, 18:49