ಹುಡುಕಿ

Pope Leo XIV meets children and young people from Vatican summer camp

ಜಗದ್ಗುರು XIVನೇ ಲಿಯೋರವರು: ತಂತ್ರಜ್ಞಾನವು ಸ್ನೇಹ ಸಂಬಂಧಗಳ ಸೇವೆಗೆ ಇರಬೇಕು, ಅವುಗಳನ್ನು ಬದಲಿಸುವ ಸಾಧನವಾಗಬಾರದು.

ವ್ಯಾಟಿಕನ್ ಉದ್ಯೋಗಿಗಳ ಮಕ್ಕಳ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿದ ಜಗದ್ಗುರು XIVನೇ ಲಿಯೋರವರು, ತಂತ್ರಜ್ಞಾನವನ್ನು ವಿವೇಕಪೂರ್ವಕವಾಗಿ ಹಾಗೂ ಜವಾಬ್ದಾರಿಯುತವಾಗಿ ಬಳಸುವಂತೆ ಮಕ್ಕಳಿಗೆ ಉತ್ತೇಜನ ನೀಡಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ವ್ಯಾಟಿಕನ್‌ನ ಎಸ್ಟೇಟ್ ರಗಾಜ್ಜಿ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ, ಈ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಯುವಕರನ್ನು ಭೇಟಿಯಾದರು. ಜೂಲ್ಸ್ ವರ್ನ್ ರವರ ಪ್ರಸಿದ್ಧ ಕಾದಂಬರಿ “80 ದಿನಗಳಲ್ಲಿ ವಿಶ್ವ ಪ್ರದಕ್ಷಿಣೆ” ಈ ವರ್ಷದ ಶಿಬಿರದ ವಿಷಯವಾಗಿತ್ತು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಜಗದ್ಗುರುಗಳು, ತಂತ್ರಜ್ಞಾನ, ಸ್ನೇಹ, ಪ್ರಾರ್ಥನೆ ಮತ್ತು ಜೀವನದ ಮೌಲ್ಯಗಳ ಕುರಿತು ಮಹತ್ವದ ಸಂದೇಶ ನೀಡಿದರು.

ಶಾಲಾ ವರ್ಷದಲ್ಲಿ ಮೊಬೈಲ್ ಮತ್ತು ಪರದೆಗಳಿಂದ ದೂರವಿರುವುದು ಕಷ್ಟವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಗದ್ಗುರುಗಳು, ತಂತ್ರಜ್ಞಾನವು ಉಪಯುಕ್ತವಾಗಿದ್ದರೂ ಅದು ಮಾನವ ಸಂಬಂಧಗಳ ಸ್ಥಾನವನ್ನು ಎಂದಿಗೂ ಪಡೆದುಕೊಳ್ಳಬಾರದು ಎಂದು ಹೇಳಿದರು. ಸ್ನೇಹವನ್ನು ಬೆಳೆಸುವುದು, ಒಟ್ಟಿಗೆ ಆಟವಾಡುವುದು, ಮಾತನಾಡುವುದು ಮತ್ತು ಸಮಯ ಕಳೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದರು. ನಾವು ಮೊದಲು ಮಾನವರು; ಆದ್ದರಿಂದ ಪರಸ್ಪರ ನೇರ ಸಂಪರ್ಕ ಮತ್ತು ಸಂಬಂಧಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಮಕ್ಕಳಿಗೆ ಸಲಹೆ ನೀಡಿದರು.

ಕುಟುಂಬ ಜೀವನದ ಕುರಿತು ಮಾತನಾಡಿದ ಜಗದ್ಗುರುಗಳು, ಕುಟುಂಬದವರು ಒಟ್ಟಿಗೆ ಇದ್ದಾಗ ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್‌ಗಳಲ್ಲಿ ಮುಳುಗಿರುವುದು ಸಾಕಾಗುವುದಿಲ್ಲ ಎಂದು ಹೇಳಿದರು. ಪರಸ್ಪರ ಮಾತನಾಡುವುದು, ಸಂಭಾಷಣೆ ನಡೆಸುವುದು ಮತ್ತು ಒಬ್ಬರ ಸಾನ್ನಿಧ್ಯವನ್ನು ಮತ್ತೊಬ್ಬರು ಆನಂದಿಸುವುದನ್ನು ಕಲಿಯಬೇಕು ಎಂದು ಅವರು ಒತ್ತಿಹೇಳಿದರು. ಪ್ರಾರ್ಥನೆಯ ಮಹತ್ವವನ್ನು ನೆನಪಿಸಿದ ಅವರು, “ಬೈಬಲ್ ಮತ್ತು ಪ್ರಾರ್ಥನೆಗಳು ನಮ್ಮ ಫೋನ್‌ನಲ್ಲಿರಬಹುದು, ಆದರೆ ದೇವರು ನಮ್ಮ ಫೋನ್‌ಗಳನ್ನು ನೋಡುವುದಿಲ್ಲ, ಆತನು ನಮ್ಮ ಹೃದಯಗಳನ್ನು ಮತ್ತು ಜೀವನವನ್ನು ನೋಡುತ್ತಾನೆ” ಎಂದು ಹೇಳಿದರು.

ಹಿರಿಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಅನೇಕ ಡಿಜಿಟಲ್ ಅಪ್ಲಿಕೇಶನ್‌ಗಳನ್ನು ಬಳಕೆದಾರರನ್ನು ಅವುಗಳಿಗೆ ಅವಲಂಬಿತರಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಎಚ್ಚರಿಸಿದರು. ಆದ್ದರಿಂದ, ಕೆಲವು ಸಮಯಗಳಲ್ಲಿ ಮೊಬೈಲ್‌ಗಳನ್ನು ದೂರವಿಟ್ಟು, ಕುಟುಂಬದವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾನವ ಮತ್ತು ಆಧ್ಯಾತ್ಮಿಕ ಜೀವನವನ್ನು ಸಮತೋಲನದಿಂದ ಬೆಳೆಸಿಕೊಳ್ಳುವ ಮೂಲಕ ನಿಜವಾದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಜಗದ್ಗುರುಗಳು, ವಿಶ್ವದ ವಿವಿಧ ದೇಶಗಳಿಗೆ ಪ್ರಯಾಣಿಸಿದ ಅನುಭವಗಳನ್ನು ಹಂಚಿಕೊಂಡರು. ಕೆಲವೊಮ್ಮೆ ಜಿಪಿಎಸ್ ಮಾರ್ಗದರ್ಶನವೇ ತಪ್ಪು ದಾರಿಯಲ್ಲಿ ಕರೆದೊಯ್ದ ಘಟನೆಗಳನ್ನು ನೆನಪಿಸಿಕೊಂಡ ಅವರು, ಜೀವನದಲ್ಲಿಯೂ ತಂತ್ರಜ್ಞಾನದ ಮೇಲೆ ಮಾತ್ರ ಅವಲಂಬಿತರಾಗದೆ ಸ್ವತಃ ಯೋಚಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಹೇಳಿದರು. ದೇವರು ಕೊಟ್ಟಿರುವ ಬುದ್ಧಿ, ವಿವೇಕ ಮತ್ತು ತೀರ್ಮಾನಶಕ್ತಿಯನ್ನು ಬಳಸಿಕೊಳ್ಳಬೇಕು ಎಂದು ಮಕ್ಕಳನ್ನು ಪ್ರೋತ್ಸಾಹಿಸಿದರು.

ಭೇಟಿಯ ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರಿಗೆ ಶಿಬಿರದ “ಮುಖ್ಯ ಅನ್ವೇಷಕ”  ಎಂಬ ಗೌರವ ನೀಡಲಾಯಿತು. ಮಕ್ಕಳೊಂದಿಗೆ ಸೇರಿ ಪ್ರಾರ್ಥನೆ ಮಾಡಿದ ಅವರು, “ನೀವು ಇಂದು ಜಗದ್ಗುರುಗಳು ಪ್ರಾರ್ಥನೆ ಮಾಡಿದ್ದೀರಿ ಎಂದು ನಿಮ್ಮ ತಂದೆ-ತಾಯಿಗಳಿಗೆ ಹೇಳಿ” ಎಂದು ಹೇಳಿದರು. “ಪ್ರಾರ್ಥನೆ ನಮ್ಮ ಜೀವನದಲ್ಲಿ ಬಹಳ ಮುಖ್ಯ. ಯೇಸು ನಮ್ಮೊಂದಿಗೆ ಇರಲೆಂದು ನಾವು ಬಯಸುತ್ತೇವೆ” ಎಂಬ ಸಂದೇಶದೊಂದಿಗೆ ಅವರು ತಮ್ಮ ಭೇಟಿಯನ್ನು ಮುಕ್ತಾಯಗೊಳಿಸಿದರು.

22 ಜೂನ್ 2026, 21:32