Visita Pastorale a Pavia, incontro con la comunit� degli Agostiniani

ಜಗದ್ಗುರು ಲಿಯೋರವರು: ವಲಸಿಗರ ಪರ ಸಂತ ಕಬ್ರಿನಿ ನಡೆಸಿದ ಸೇವೆಯ ಧ್ಯೇಯ ಇಂದು ಕೂಡ ಅಷ್ಟೇ ಮಹತ್ವಪೂರ್ಣ ಮತ್ತು ಅಗತ್ಯವಾಗಿದೆ.

ಸಂತ ಫ್ರಾನ್ಸಿಸ್ ಝೇವಿಯರ್ ಕಬ್ರಿನಿರವರ ಜನ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಪವಿತ್ರ ಹೃದಯದ (ಸೇಕ್ರೆಡ್ ಹಾರ್ಟ್) ಮೇಲಿನ ಅವರ ಆಳವಾದ ಭಕ್ತಿಯನ್ನು ಸ್ಮರಿಸಿ, ವಲಸಿಗರಿಗಾಗಿ ಅವರು ಸಲ್ಲಿಸಿದ ಸೇವೆ ಇಂದಿನ ಜಗತ್ತಿನಲ್ಲಿ ಧರ್ಮ ಸಭೆಗೆ ಇನ್ನೂ ಆದರ್ಶ ಮಾದರಿಯಾಗಿ ಉಳಿದಿದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಧರ್ಮ ಸಭೆಯ ಅತ್ಯಂತ ಪ್ರಸಿದ್ಧ ಮಿಷನರಿಗಳಲ್ಲಿ ಒಬ್ಬರಾದ ಸಂತ ಫ್ರಾನ್ಸಿಸ್ ಝೇವಿಯರ್ ಕಬ್ರಿನಿರವರು ತಾಯ್ನಾಡಿಗೆ ಮರಳಿದ ಜಗದ್ಗುರು XIVನೇ ಲಿಯೋರವರು ಶನಿವಾರ ಅವರಿಗೆ ಗೌರವ ಸಲ್ಲಿಸಿ, ಆಧುನಿಕ ಜಗತ್ತಿನ ಪ್ರಮುಖ ಸವಾಲುಗಳಲ್ಲಿ ಒಂದಾದ ವಲಸೆಯ ಸಮಸ್ಯೆಯನ್ನು ಎದುರಿಸಲು ಅವರ ಜೀವನ ಮತ್ತು ಪರಂಪರೆಯನ್ನು ಮಾದರಿಯಾಗಿ ಪ್ರಸ್ತುತಪಡಿಸಿದರು.

ಮಿಲಾನ್‌ನ ದಕ್ಷಿಣ ಭಾಗದಲ್ಲಿರುವ ಲೊಂಬಾರ್ಡಿಯ ಸಣ್ಣ ಪಟ್ಟಣವಾದ ಸಾಂತ್’ಆಂಜೆಲೋ ಲೊಡಿಜಿಯಾನೊಗೆ ಜಗದ್ಗುರುಗಳು ನೀಡಿದ ಭೇಟಿ, ಸಮೀಪದ ಪಾವಿಯಾಗೆ ಕೈಗೊಂಡಿದ್ದ ಅವರ ಪ್ರೇಷಿತರ ಪ್ರವಾಸದ ಭಾಗವಾಗಿತ್ತು. ಈ ಭೇಟಿಗೆ ವಿಶೇಷ ಸಾಂಕೇತಿಕ ಮಹತ್ವವಿತ್ತು. 1850ರಲ್ಲಿ ಇದೇ ಸ್ಥಳದಲ್ಲಿ ಫ್ರಾನ್ಸೆಸ್ಕಾ ಕಬ್ರಿನಿ ಜನಿಸಿದರು. ಬಳಿಕ ಅವರು ಮಿಷನರಿ ಜೀವನವನ್ನು ಆರಂಭಿಸಿ ಅಟ್ಲಾಂಟಿಕ್ ಸಾಗರ ದಾಟಿ ಅಮೆರಿಕಾಕ್ಕೆ ತೆರಳಿ, ಕೊನೆಗೆ ಚಿಕಾಗೋ ನಗರದಲ್ಲಿ 1917ರಲ್ಲಿ ನಿಧನರಾದರು. 1946ರಲ್ಲಿ ಅವರನ್ನು ಸಂತೆಯಾಗಿ ಘೋಷಿಸಲಾಯಿತು ಮತ್ತು ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಸಂತೆ ಎಂಬ ಗೌರವ ಪಡೆದರು. ನಂತರ ಅವರನ್ನು ವಲಸಿಗರ ರಕ್ಷಕ ಸಂತೆಯಾಗಿ ನೇಮಿಸಲಾಯಿತು.

ಸಂತ ಆಂಟೋನಿಯೊ ಅಬಾತೆ ಮತ್ತು ಸಂತ ಫ್ರಾನ್ಸೆಸ್ಕಾ ಕಬ್ರಿನಿ ದೇವಾಲಯದಲ್ಲಿ ನಡೆದ ಪರಮ ಪ್ರಸಾದ ಆರಾಧನೆ ಹಾಗೂ ಕಬ್ರಿನಿರವರ ಹೃದಯದ ಅವಶೇಷಕ್ಕೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಪೋಪ್, ಇಂದಿನ ಧರ್ಮ ಸಭೆಗೆ ಅವರ ಜೀವನದ ನಿರಂತರ ಪ್ರಸ್ತುತತೆಯನ್ನು ಸ್ಮರಿಸಿದರು.

“ನಾನು ತಾಯಿ ಕಬ್ರಿನಿರವರಿಗೆ ಗೌರವ ಸಲ್ಲಿಸಲು ಇಲ್ಲಿ ಬಂದಿದ್ದೇನೆ,” ಎಂದು ಜಗದ್ಗುರುಗಳು ಭಕ್ತರಿಗೆ ತಿಳಿಸಿದರು. ಲೋಡಿ ಧರ್ಮಪ್ರಾಂತ್ಯದ ಬಿಷಪ್ ಮೌರಿಜಿಯೊ ಮಾಲ್ವೆಸ್ತಿತಿ ಸೇರಿದಂತೆ ಸ್ಥಳೀಯ ನಾಗರಿಕ ಮತ್ತು ಧಾರ್ಮಿಕ ಅಧಿಕಾರಿಗಳನ್ನು ಅವರು ಅಭಿನಂದಿಸಿದರು.

ಚಿಕಾಗೋದೊಂದಿಗೆ ವಿಶೇಷ ಬಾಂಧವ್ಯ

ಸಂತ ಕಬ್ರಿನಿ ತಮ್ಮ ಜೀವನದ ಕೊನೆಯ ವರ್ಷಗಳನ್ನು ಚಿಕಾಗೋದಲ್ಲಿ ಕಳೆದರು. ಅದೇ ನಗರದಲ್ಲಿ ಜಗದ್ಗುರು XIVನೇ ಲಿಯೋರವರು ಜನಿಸಿ ಬೆಳೆದಿದ್ದರು. ಈ ಸಂಬಂಧವನ್ನು ಸ್ಮರಿಸಿದ ಅವರು, ಸಾಂತ್’ಆಂಜೆಲೋ ಲೊಡಿಜಿಯಾನೊದ ಜನರ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಸ್ಥಳೀಯ ಧರ್ಮ ಸಭೆ ಯಾವಾಗಲೂ ಪೇತ್ರನ ಉತ್ತರಾಧಿಕಾರಿಯ ಮೇಲಿಟ್ಟಿದ್ದ ಪ್ರೀತಿಯನ್ನು ಶ್ಲಾಘಿಸಿದರು. ಕಬ್ರಿನಿರವರು ತಮ್ಮ ಅಪೂರ್ವ ಭಕ್ತಿ ಮತ್ತು ಜಗದ್ಗುರುಗಳಿಗೆ ವಿಧೇಯತೆಯ ಮೂಲಕ ಈ ಪ್ರೀತಿಯನ್ನು ಜೀವಂತಗೊಳಿಸಿದ್ದರು ಎಂದು ಹೇಳಿದರು.

ಯುವ ಧಾರ್ಮಿಕ ಸಹೋದರಿಯಾಗಿದ್ದಾಗ ಕಬ್ರಿನಿಯವರು, ಸಂತ ಫ್ರಾನ್ಸಿಸ್ ಝೇವಿಯರ್ ರವರಿಂದ ಪ್ರೇರಿತರಾಗಿ ಚೀನಾಕ್ಕೆ ಮಿಷನರಿಯಾಗಿ ತೆರಳುವ ಕನಸು ಕಂಡಿದ್ದರು. ಆದರೆ ತಮ್ಮ ಧಾರ್ಮಿಕ ಸಂಸ್ಥೆಯ ಭವಿಷ್ಯದ ಕುರಿತು ಜಗದ್ಗುರು XIIIನೇ ಲಿಯೋರವರ ಮಾರ್ಗದರ್ಶನ ಕೇಳಿದಾಗ, ಅವರಿಗೆ ಅಚ್ಚರಿಯ ಉತ್ತರ ದೊರೆಯಿತು. ಜಗದ್ಗುರುಗಳು, “ಪೂರ್ವಕ್ಕೆ ಅಲ್ಲ, ಪಶ್ಚಿಮಕ್ಕೆ ಹೋಗು” ಎಂದು ಸೂಚಿಸಿದರು.

ಆ ಸಮಯದಲ್ಲಿ ಲಕ್ಷಾಂತರ ಇಟಾಲಿಯನ್ನರು ಉತ್ತಮ ಭವಿಷ್ಯದ ಹುಡುಕಾಟದಲ್ಲಿ ತಮ್ಮ ತಾಯ್ನಾಡನ್ನು ತೊರೆದು, ವಿಶೇಷವಾಗಿ ಅಮೆರಿಕ ಖಂಡದತ್ತ ವಲಸೆ ಹೋಗುತ್ತಿದ್ದರು. ಜಗದ್ಗುರು XIIIನೇ ಲಿಯೋರವರು ಹಾಗೂ ವಲಸಿಗರ ಮಹಾನ್  ಪ್ರೇಷಿತರಾದ ಸಂತ ಜಾನ್ ಬ್ಯಾಪ್ಟಿಸ್ಟ್ ಸ್ಕಲಬ್ರಿನಿ ರವರ ಪ್ರೋತ್ಸಾಹದಿಂದ, ಈ ಜನರ ಚಲನವಲನವು ತಮ್ಮ ಯುಗದ ಪ್ರಮುಖ ಪ್ರೇಷಿತರ ಸವಾಲುಗಳಲ್ಲಿ ಒಂದೆಂದು ಕಬ್ರಿನಿಯವರು ಅರಿತುಕೊಂಡರು.

ಕಾಲದ ಸಂಕೇತಗಳನ್ನು ಓದಿದ ಸಂತೆ

ಜಗದ್ಗುರು ಲಿಯೋರವರು, ಕಬ್ರಿನಿಯ ಈ ನಿರ್ಧಾರವನ್ನು “ಕಾಲದ ಸಂಕೇತಗಳನ್ನು ಓದಿದ” ಅತ್ಯುತ್ತಮ ಉದಾಹರಣೆ ಎಂದು ವರ್ಣಿಸಿದರು. ತಮ್ಮ ಮಿಷನರಿ ಕರೆಯು ತಾವು ಕಲ್ಪಿಸಿಕೊಂಡ ಸ್ಥಳದಲ್ಲಿ ಅಲ್ಲ, ಅತ್ಯಂತ ಅಗತ್ಯವಿದ್ದ ಸ್ಥಳದಲ್ಲಿ ನೆರವೇರಬೇಕೆಂದು ಕಬ್ರಿನಿಯವರು ಅರ್ಥಮಾಡಿಕೊಂಡರು ಎಂದರು.

ಇಂದಿನ ಪರಿಸ್ಥಿತಿಯತ್ತ ಗಮನ ಹರಿಸಿದ  ಜಗದ್ಗುರುಗಳು, ವಲಸೆ ಇಂದಿಗೂ ಸಮಾಜ ಮತ್ತು ಧರ್ಮ ಸಭೆ ಎದುರಿಸುತ್ತಿರುವ ಅತ್ಯಂತ ತುರ್ತು ವಾಸ್ತವಿಕತೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಆದರೆ ಅದು ಕಬ್ರಿನಿಯ ಕಾಲಕ್ಕಿಂತ ಹೆಚ್ಚು ಸಂಕೀರ್ಣ ಸ್ವರೂಪ ಪಡೆದುಕೊಂಡಿದೆ ಎಂದರು.

“ತಾಯಿ ಫ್ರಾನ್ಸಿಸ್ ಇಂದು ಬದುಕಿದ್ದರೆ, ಅವರ ಮಿಷನರಿ ಆತ್ಮ ಏನು ಹೇಳುತ್ತಿತ್ತು? ಕ್ರಿಸ್ತನ ಹೃದಯವು ಅವರ ಹೃದಯಕ್ಕೆ ಏನು ಹೇಳುತ್ತಿತ್ತು?” ಎಂದು ಜಗದ್ಗುರುಗಳು ಪ್ರಶ್ನಿಸಿದರು.

ಈ ಪ್ರಶ್ನೆಗೆ ಉತ್ತರ, ಕಬ್ರಿನಿಯ ಸಂಪೂರ್ಣ ಜೀವನವನ್ನು ಪ್ರೇರೇಪಿಸಿದ ಆಧ್ಯಾತ್ಮಿಕ ಮೂಲದಲ್ಲಿದೆ ಎಂದು ಅವರು ಹೇಳಿದರು ಅದು ಯೇಸು ಕ್ರಿಸ್ತನ ಪವಿತ್ರ ಹೃದಯದಲ್ಲಿ ಪ್ರಕಟವಾದ ಪ್ರೀತಿಯಾಗಿದೆ.

ಯೇಸುವಿನ ಪವಿತ್ರ ಹೃದಯದ ಪ್ರೀತಿ

ಜಗದ್ಗುರು ಫ್ರಾನ್ಸಿಸ್ ರವರು ತಮ್ಮ ಕೊನೆಯ ಎನ್ಸೈಕ್ಲಿಕಲ್ ಡೈಲೆಕ್ಸಿಟ್ ಸಂಖ್ಯೆಗಳನ್ನು ಯೇಸುವಿನ ಹೃದಯದಲ್ಲಿ ವ್ಯಕ್ತವಾದ ಮಾನವೀಯ ಮತ್ತು ದೈವಿಕ ಪ್ರೀತಿಗೆ ಅರ್ಪಿಸಿದ್ದರು ಎಂದು ಜಗದ್ಗುರು ಲಿಯೋರವರು ನೆನಪಿಸಿದರು. ಇದೇ ಭಕ್ತಿ ಕಬ್ರಿನಿಯವರ ಅಸಾಮಾನ್ಯ ಮಿಷನರಿ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿತು ಎಂದರು.

ಅವರ ಅನೇಕ ಪ್ರವಾಸಗಳು, ಶಾಲೆಗಳು, ಆಸ್ಪತ್ರೆಗಳು, ಅನಾಥಾಶ್ರಮಗಳು ಮತ್ತು ದತ್ತಿ ಸಂಸ್ಥೆಗಳು ಕೇವಲ ಸಾಮಾಜಿಕ ಸೇವೆಗಳಲ್ಲ ಅವು ಕ್ರಿಸ್ತನ ಪ್ರೀತಿಯೊಂದಿಗಿನ ಆಳವಾದ ಭೇಟಿಯ ಅಭಿವ್ಯಕ್ತಿಗಳಾಗಿದ್ದವು ಎಂದು ಜಗದ್ಗುರುಗಳು ವಿವರಿಸಿದರು.

ತಮ್ಮದೇ ಪ್ರೇಷಿತರ ಉಪದೇಶ ಡೈಲೆಕ್ಸಿಟ್ ಸಂಖ್ಯೆಗಳನ್ನು ಉಲ್ಲೇಖಿಸಿದ ಜಗದ್ಗುರುಗಳು, ಅದರಲ್ಲಿ ಕಬ್ರಿನಿ ಮತ್ತು ಸಂತ ಜಾನ್ ಬ್ಯಾಪ್ಟಿಸ್ಟ್ ಸ್ಕಲಬ್ರಿನಿರವರ ಸಾಕ್ಷ್ಯವನ್ನು ಪ್ರಸ್ತಾಪಿಸಿದ್ದಾಗಿ ಹೇಳಿದರು. ಕಬ್ರಿನಿಯ ಮಾತುಗಳನ್ನು ಉಲ್ಲೇಖಿಸಿದ ಅವರು, “ಯೇಸುವಿನ ಪವಿತ್ರ ಹೃದಯದ ಪ್ರೀತಿಗೆ ಯಾವುದೇ ಕೆಲಸ ಕಷ್ಟಕರವಲ್ಲ, ಯಾವುದೇ ಭೂಮಿ ತುಂಬ ದೂರವಲ್ಲ, ಯಾವುದೇ ವ್ಯಕ್ತಿ ತುಂಬ ಗಾಯಗೊಂಡವನಲ್ಲ” ಎಂಬ ಅವರ ನಂಬಿಕೆಯನ್ನು ಸ್ಮರಿಸಿದರು.

ಯುವಕರಿಗೆ ವಿಶೇಷ ಕರೆ

ಕಬ್ರಿನಿಯ ಹೃದಯದ ಅವಶೇಷದ ಮುಂದೆ ನಿಂತು ಮಾತನಾಡಿದ ಜಗದ್ಗುರುಗಳು, ಸ್ಥಳಚ್ಯುತಿ, ಸಾಮಾಜಿಕ ವಿಭಜನೆ ಮತ್ತು ಹೊಸ ಬಗೆಯ ಬಡತನಗಳಿಂದ ಕೂಡಿದ ಇಂದಿನ ಯುಗದಲ್ಲಿ ಅವರ ಧರ್ಮಸೇವೆಯ ಆಕರ್ಷಣೆ ಇನ್ನೂ ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಿದರು.

“ವಲಸಿಗರ ಸೇವೆಗೆ ಸಮರ್ಪಿತವಾದ ಮಿಷನರಿ ಧರ್ಮಸೇವೆಯಿಗಿಂತ ಇಂದಿನ ಕಾಲಕ್ಕೆ ಇನ್ನೇನು ಹೆಚ್ಚು ಸೂಕ್ತವಾಗಿರಬಹುದು?” ಎಂದು ಅವರು ಪ್ರಶ್ನಿಸಿದರು.

ಯುವಜನತೆಗೆ ವಿಶೇಷವಾಗಿ ಮನವಿ ಮಾಡಿದ ಜಗದ್ಗುರುಗಳು, ಕಬ್ರಿನಿಯ ಬರಹಗಳು, ಪತ್ರಗಳು ಮತ್ತು ಪ್ರವಾಸದ ದಿನಚರಿಗಳ ಮೂಲಕ ಅವರನ್ನು ಅರಿತುಕೊಳ್ಳುವಂತೆ ಪ್ರೋತ್ಸಾಹಿಸಿದರು. ಅವರ ಕಥೆಯನ್ನು ಓದುವವರು, ಧ್ಯಾನ ಮತ್ತು ಕ್ರಿಯೆಯನ್ನು ಅಪೂರ್ವವಾಗಿ ಸಂಯೋಜಿಸಿದ್ದ ಮಹಿಳೆಯಿಂದ ಆಕರ್ಷಿತರಾಗದೇ ಇರಲಾರರು ಎಂದರು.

ಪ್ರಾರ್ಥನೆಯಲ್ಲಿ ಆಳವಾಗಿ ಬೇರೂರಿದ್ದ ಮತ್ತು ಕ್ರಿಸ್ತನ ಪ್ರೀತಿಯಲ್ಲಿ ಸಂಪೂರ್ಣ ಮುಳುಗಿದ್ದ ಕಬ್ರಿನಿ, ಅದ್ಭುತ ಕಾರ್ಯಶಕ್ತಿ ಮತ್ತು ಪರಿಶ್ರಮವನ್ನು ಬೆಳೆಸಿಕೊಂಡರು. ಅವರ ಜೀವನವು, “ನನಗೆ ಬಲ ನೀಡುವಾತನ ಮೂಲಕ ನಾನು ಎಲ್ಲವನ್ನೂ ಮಾಡಬಲ್ಲೆ” ಎಂಬ ಪೌಲನ ವಾಕ್ಯವನ್ನು ಜೀವಂತಗೊಳಿಸಿತು ಎಂದು ಜಗದ್ಗುರುಗಳು ಹೇಳಿದರು.

ಇಂದಿಗೂ ಜೀವಂತವಾಗಿರುವ ಕಬ್ರಿನಿಯ ಸಾಕ್ಷ್ಯ

ಕೊನೆಯಲ್ಲಿ, ಲೋಡಿ ಸ್ಥಳೀಯ ಧರ್ಮ ಸಭೆಯ ತನ್ನ ಪ್ರಸಿದ್ಧ ಪುತ್ರಿಯ ಗುಣಗಳನ್ನು ಪ್ರತಿಬಿಂಬಿಸುತ್ತಲೇ ಇರಲಿ ಎಂದು ಜಗದ್ಗುರುಗಳು ಆಶಿಸಿದರು ಕ್ರಿಸ್ತನ ಮೇಲಿನ ಪ್ರೀತಿ, ಮಿಷನರಿ ಉತ್ಸಾಹ, ಬಡವರ ಮೇಲಿನ ಉದಾರತೆ ಮತ್ತು ಸುವಾರ್ತೆಯ ಮೇಲಿನ ನಿಷ್ಠೆ.

ಅವರು ಕಬ್ರಿನಿಯ ಸಾಕ್ಷ್ಯವನ್ನು ಸಿನೋಡಾಲಿಟಿಯ ಧರ್ಮ ಸಭೆಯ ದೃಷ್ಟಿಕೋನದೊಂದಿಗೆ ಜೋಡಿಸಿ, ಕ್ರೈಸ್ತ ಸಮುದಾಯದಲ್ಲಿರುವ ವಿವಿಧ ವರಗಳು ಮತ್ತು ಸೇವೆಗಳನ್ನು ಗೌರವಿಸುತ್ತಾ ಎಲ್ಲರೂ ಏಕತೆಯಲ್ಲಿ ಜೊತೆಯಾಗಿ ನಡೆಯುವಂತೆ ಪ್ರೋತ್ಸಾಹಿಸಿದರು.

1880ರಲ್ಲಿ ಕಬ್ರಿನಿರವರು ಸ್ಥಾಪಿಸಿದ ಹಾಗೂ ಇಂದು ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ “ಯೇಸುವಿನ ಪವಿತ್ರ ಹೃದಯದ ಮಿಷನರಿ ಸಹೋದರಿಯರ ಸಂಘ”ಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾ ಜಗದ್ಗುರುಗಳು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು. ದೇವರ ರಾಜ್ಯದ ಸೇವೆಯನ್ನು ಇತಿಹಾಸದ ಮಧ್ಯೆ ಹೇಗೆ ನೆರವೇರಿಸಬೇಕು ಎಂಬುದಕ್ಕೆ ಸಂತ ಕಬ್ರಿನಿರವರು ಅತ್ಯುತ್ತಮ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.

ಅವರ ನಿಧನಕ್ಕೆ ಶತಮಾನಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಕಬ್ರಿನಿಯ ಸಂದೇಶ ಇಂದಿಗೂ ಬದಲಾಗಿಲ್ಲ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ವಲಸೆ, ಅನಿಶ್ಚಿತತೆ ಮತ್ತು ಮಾನವೀಯ ನೋವಿನಿಂದ ಕೂಡಿದ ಈ ಜಗತ್ತಿನಲ್ಲಿ, ಧರ್ಮ ಸಭೆಯ ಪ್ರತಿಕ್ರಿಯೆಯು ಕಬ್ರಿನಿಯಂತೆಯೇ ಕ್ರಿಸ್ತನ ಹೃದಯದ ರೂಪಾಂತರಕಾರಿ ಪ್ರೀತಿಯಿಂದಲೇ ಆರಂಭವಾಗಬೇಕು ಎಂದು ಅವರು ಒತ್ತಿಹೇಳಿದರು.

20 ಜೂನ್ 2026, 19:34