Pope Leo travels to Gran Canaria as part of his Spain trip

“‘ನಿಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿರಿ’ ಎಂಬ ಕರೆಗೊಂದಿಗೆ ಜಗದ್ಗುರು ಸ್ಪೇನಿನ ಪ್ರವಾಸವನ್ನು ಮುಕ್ತಾಯಗೊಳಿಸಿದರು.”

ಸ್ಪೇನಿನಲ್ಲಿನ ತಮ್ಮ ಪ್ರೇಷಿತರ ಯಾತ್ರೆಯನ್ನು ಮುಕ್ತಾಯಗೊಳಿಸಿದ ಜಗದ್ಗುರು XIVನೇ ಲಿಯೋರವರು, ಸ್ಪೇನಿನ ಜನರ ಆತ್ಮೀಯ ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿ, “ನಿಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿರಿ” ಎಂದು ವಿಶ್ವದ ಜನತೆಗೆ ಮನವಿ ಮಾಡಿದರು.

ವ್ಯಾಟಿಕನ್ ವರದಿ

ಸ್ಪೇನಿಗೆ ತಮ್ಮ ಪ್ರೇಷಿತರ ಯಾತ್ರೆಯನ್ನು ಪೂರ್ಣಗೊಳಿಸಿದ ಜಗದ್ಗುರು XIVನೇ ಲಿಯೋರವರು, ಅಂತಿಮ ಪವಿತ್ರ ಬಲಿಪೂಜೆಯ ಕೊನೆಯಲ್ಲಿ ಸಾಂತಾ ಕ್ರೂಸ್ ದೆ ತೆನೆರಿಫೆ ಬಂದರಿನಲ್ಲಿ ಶುಕ್ರವಾರ ಕೆಲವು ಮಾತುಗಳನ್ನು ಹೇಳುವ ಮೂಲಕ ತಮ್ಮ ಪ್ರವಾಸವನ್ನು ಸಮಾಪ್ತಿಗೊಳಿಸಿದರು. ತಮ್ಮ ಸಂಕ್ಷಿಪ್ತ ಸಂದೇಶದಲ್ಲಿ ಅವರು ಸ್ಪೇನಿನ ಜನರು ನೀಡಿದ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿ, ಅವರಿಗೆ ಕೊನೆಯ ಆಹ್ವಾನವಾಗಿ “ನಿಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿರಿ” ಎಂದು ಕರೆ ನೀಡಿದರು.

ಅಂತಿಮ ಯೂಕರಿಸ್ಟಿಕ್ ಆಚರಣೆಯ ಬಳಿಕ ಮಾತನಾಡಿದ ಜಗದ್ಗುರುಗಳು, ಆರು ದಿನಗಳ ಈ ಯಾತ್ರೆಯನ್ನು ಸ್ಮರಿಸಿಕೊಂಡರು. ಈ ಪ್ರವಾಸದ ವೇಳೆ ಅವರು ಮ್ಯಾಡ್ರಿಡ್, ಬಾರ್ಸಿಲೋನಾ, ಮೊಂಟ್ಸೆರಾಟ್ ಹಾಗೂ ಕ್ಯಾನರಿ ದ್ವೀಪಗಳಿಗೆ ಭೇಟಿ ನೀಡಿದ್ದರು.

“ನಾನು ಪಡೆದ ಅಪಾರ ಪ್ರೀತಿ ಮತ್ತು ಆತ್ಮೀಯತೆಯಿಂದ ಆಳವಾಗಿ ಸ್ಪರ್ಶಿತನಾಗಿ ರೋಮಿಗೆ ಮರಳುತ್ತಿದ್ದೇನೆ,” ಎಂದು ಅವರು ಹೇಳಿದರು. ಈ ಭೇಟಿಯನ್ನು ಆಯೋಜಿಸಲು ಶ್ರಮಿಸಿದ ಎಲ್ಲರಿಗೂ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿಶ್ವಾಸಿಗಳಿಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಸ್ಪೇನಿನ ಶಾಶ್ವತ ಕಥೋಲಿಕ ಗುರುತನ್ನೂ ಜಗದ್ಗುರುಗಳು ಪ್ರಶಂಸಿಸಿದರು. ದೇಶದಾದ್ಯಂತ ತಾವು ಕಂಡ “ವಿಶ್ವಾಸ ಮತ್ತು ಧರ್ಮ ಸಭೆಯ ಪ್ರೀತಿಯ ಸಾಕ್ಷ್ಯಗಳು” ತಮ್ಮನ್ನು ಬಹಳವಾಗಿ ಸಾಂತ್ವನಗೊಳಿಸಿವೆ ಎಂದು ಅವರು ಹೇಳಿದರು.

ಕ್ರಿಸ್ತನ ಕಡೆಗೆ ದೃಷ್ಟಿ

“ಪವಿತ್ರ ಶಿಲುಬೆ” ಎಂಬ ಅರ್ಥವನ್ನು ಹೊಂದಿರುವ ಸಾಂತಾ ಕ್ರೂಸ್ ದೆ ತೆನೆರಿಫೆ ನಗರದಲ್ಲಿ ಮಾತನಾಡಿದ ಜಗದ್ಗುರು ಲಿಯೋರವರು, ತಮ್ಮ ಚಿಂತನೆಗಳನ್ನು “ಸಂಪೂರ್ಣ ಜಗತ್ತು ಮತ್ತು ಅದರ ಗಾಯಗಳ ಕಡೆಗೆ, ಅನೇಕ ಜನಾಂಗಗಳನ್ನು ದುಃಖಕ್ಕೆ ತಳ್ಳುತ್ತಿರುವ ಸಂಕಷ್ಟಗಳ ಕಡೆಗೆ” ತಿರುಗಿಸಿದರು.

ಅನಂತರ ಅವರು ಈ ಯಾತ್ರೆಯ ಧ್ಯೇಯವಾಕ್ಯವನ್ನು ಉಲ್ಲೇಖಿಸಿದರು: “ನಿಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿರಿ.”

“ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನ ಕಡೆಗೆ ನಾವು ನಮ್ಮ ಕಣ್ಣುಗಳನ್ನು ತಿರುಗಿಸೋಣ,” ಎಂದು ಅವರು ಮನವಿ ಮಾಡಿದರು. ಕ್ರಿಸ್ತನ ಹೃದಯವನ್ನು ಅವರು “ಕರುಣೆಯ ಮೂಲ” ಎಂದು ವರ್ಣಿಸಿ, “ಮಾನವಕುಲವನ್ನು ರಕ್ಷಿಸಬಲ್ಲ ಏಕೈಕ ಶಕ್ತಿ ಅದೇ” ಎಂದು ಹೇಳಿದರು.

ಶಾಂತಿಗಾಗಿ ಕರೆ

ಮುಂದುವರಿದು ಮಾತನಾಡಿದ ಜಗದ್ಗುರುಗಳು, “ನಿಜವಾದ ಮತ್ತು ಶಾಶ್ವತ ಶಾಂತಿಯನ್ನು ಸಾಧಿಸಲು ಮಾನವಕುಲಕ್ಕೆ ಕ್ಷಮೆ ಮತ್ತು ಸೌಹಾರ್ದತೆ ಅತ್ಯಗತ್ಯ” ಎಂದು ಹೇಳಿದರು. ನಂತರ ಸಂಕಷ್ಟ ಮತ್ತು ನೋವಿನಲ್ಲಿರುವ ಎಲ್ಲರನ್ನು ಕನ್ಯಾ ಮರಿಯಮ್ಮನವರ ಆರೈಕೆಗೆ ಸಮರ್ಪಿಸಿದರು.

“ದುಃಖಿಸುವ ಎಲ್ಲರ ತಾಯಿಯಾದ ಮರಿಯಮ್ಮನಂತೆ ನಾವೂ ನಮ್ಮ ಕಣ್ಣುಗಳನ್ನು ಮೇಲಕ್ಕೆತ್ತೋಣ,” ಎಂದು ಅವರು ಹೇಳಿದರು.

ಪ್ರಾರ್ಥನೆಯಲ್ಲಿ ಏಕತೆ

ತಮ್ಮ ಸಂದೇಶವನ್ನು ಮುಕ್ತಾಯಗೊಳಿಸುತ್ತಾ, ಜಗದ್ಗುರುಗಳು ಮತ್ತೊಮ್ಮೆ ಸ್ಪೇನಿನ ಜನರಿಗೆ ಧನ್ಯವಾದ ಸಲ್ಲಿಸಿ, ವಿಶ್ವಾಸದಲ್ಲಿ ಒಂದಾಗಿ ಉಳಿಯುವಂತೆ ಆಹ್ವಾನಿಸಿದರು.

“ನನ್ನ ಹೃದಯದ ಆಳದಿಂದ ನಿಮಗೆ ಧನ್ಯವಾದಗಳು,” ಎಂದು ಅವರು ಹೇಳಿದರು. “ಕ್ರಿಸ್ತನಲ್ಲಿ ಮತ್ತು ಪವಿತ್ರ ಧರ್ಮ ಸಭೆಯ ಒಕ್ಕೂಟದಲ್ಲಿ, ನಾವು ಪ್ರಾರ್ಥನೆ ಹಾಗೂ ಸಹಭಾಗಿತ್ವದಲ್ಲಿ ಒಂದಾಗಿ ಮುಂದುವರಿಯೋಣ” ಎಂದು ಹೇಳಿದರು.

12 ಜೂನ್ 2026, 21:18