SPAIN-VATICAN-DIPLOMACY-RELIGION-POPE

ಜಗದ್ಗುರುಗಳು: ‘ಅದೃಶ್ಯವಾಗಿ ಸ್ಪಂದಿಸುವ ಪ್ರೀತಿಯ ಹೃದಯದ ಧ್ವನಿಯನ್ನು ಆಲಿಸಿ’

ಗ್ರಾನ್ ಕನಾರಿಯಾದ ಪವಿತ್ರ ಬಲಿಪೂಜೆಯಲ್ಲಿ ಜಗದ್ಗುರು ಲಿಯೋರವರು, “ಅಬ್ಬರದ, ಎಲ್ಲೆಡೆ ವ್ಯಾಪಿಸಿರುವ ಮತ್ತು ಅಶಾಂತ ‘ನಾನು’ ಎಂಬ ಅಹಂಕಾರದ ಗದ್ದಲ”ದ ವಿರುದ್ಧ ಎಚ್ಚರಿಕೆ ನೀಡಿದರು. ಅಲ್ಲದೆ, ದ್ವೀಪವನ್ನು ತಲುಪುವ ಪ್ರಯತ್ನದಲ್ಲಿ ತಮ್ಮ ಪ್ರಾಣ ಕಳೆದುಕೊಂಡ ವಲಸಿಗರನ್ನು ಸ್ಮರಿಸಿದರು.

ವ್ಯಾಟಿಕನ್ ವರದಿ

ಗ್ರಾನ್ ಕನಾರಿಯಾ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಡೆದ ಪವಿತ್ರ ಬಲಿಪೂಜೆಯಲ್ಲಿ ಜಗದ್ಗುರು XIVನೇ ಲಿಯೋರವರು  ಪ್ರೀತಿ, ದುಃಖ ಮತ್ತು ವಿನಯಶೀಲತೆಯ ಕುರಿತು ಆಳವಾದ ಚಿಂತನೆಗಳನ್ನು ಹಂಚಿಕೊಂಡರು. ಆಫ್ರಿಕಾದ ಪಶ್ಚಿಮ ಕರಾವಳಿಯ ಸಮೀಪದಲ್ಲಿರುವ ಸ್ಪೇನಿನ ಗ್ರಾನ್ ಕನಾರಿಯಾ ದ್ವೀಪವು ಯುರೋಪಿನಲ್ಲಿ ಹೊಸ ಜೀವನದ ಆಶಯದೊಂದಿಗೆ ಬರುವ ಅನೇಕ ವಲಸಿಗರ ಪ್ರಮುಖ ಪ್ರವೇಶ ಕೇಂದ್ರವಾಗಿದೆ.

ತಮ್ಮ ಪ್ರಭೊಧನೆಯ ಆರಂಭದಲ್ಲಿ ಜಗದ್ಗುರುಗಳು, “ಈ ನೆಲ ಸಾಕ್ಷಿಯಾಗಿರುವ ನೋವು ಮತ್ತು ಸಂಕಟಗಳನ್ನು ಸ್ಮರಿಸಲು ನಾನು ಬಯಸುತ್ತೇನೆ” ಎಂದು ಹೇಳಿದರು. ವಿಶೇಷವಾಗಿ ಸಮುದ್ರ ಮಾರ್ಗವಾಗಿ ದ್ವೀಪವನ್ನು ತಲುಪಲು ಪ್ರಯತ್ನಿಸುವಾಗ ಪ್ರಾಣ ಕಳೆದುಕೊಂಡ ವಲಸಿಗ ಸಹೋದರ–ಸಹೋದರಿಯರಿಗಾಗಿ ಎಲ್ಲರೂ ಒಟ್ಟಾಗಿ ಪ್ರಾರ್ಥಿಸಬೇಕೆಂದು ಅವರು ಆಹ್ವಾನಿಸಿದರು.

ಅಂದು ಓದಲಾದ ಧರ್ಮೋಪದೇಶದ ಮೊದಲ ವಾಚನವು ಧರ್ಮೋಪದೇಶಕಾಂಡದಿಂದ ತೆಗೆದುಕೊಳ್ಳಲಾಗಿದ್ದು, ಇಸ್ರಾಯೇಲರ ಮೇಲಿನ ದೇವರ ನಿರುಪಾಧಿ ಪ್ರೀತಿಯನ್ನು ವಿವರಿಸುತ್ತದೆ. ಈ ಪ್ರೀತಿಯು ನಮ್ಮ ಅಸ್ತಿತ್ವವನ್ನೆಲ್ಲ ಆವರಿಸುವ ಶಕ್ತಿಯಾಗಿದ್ದು, ಆತ್ಮಕ್ಕೆ ಅಗ್ನಿ, ಮನಸ್ಸಿಗೆ ಬೆಳಕು, ಹೃದಯಕ್ಕೆ ಶಾಂತಿ ಹಾಗೂ ಸ್ವಾತಂತ್ರ್ಯದತ್ತ ಒಯ್ಯುವ ಅಪ್ರತಿರೋಧ್ಯ ಪ್ರೇರಣೆಯಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಇದೇ ದೈವಿಕ ಪ್ರೀತಿಯಲ್ಲೇ ಮಾನವನ ಪ್ರೀತಿಯ ಕರೆಯು ಬೇರುಬಿಟ್ಟಿದೆ ಎಂದರು.

ನಂತರ ಅವರು ಯೋಹಾನನ ಮೊದಲ ಪತ್ರಿಕೆಯಿಂದ ತೆಗೆದುಕೊಳ್ಳಲಾದ ಎರಡನೇ ವಾಚನದತ್ತ ಗಮನ ಹರಿಸಿದರು. ಪ್ರೇಷಿತ ಯೋಹಾನನ ಮಾತುಗಳು ನೋವು ಅನುಭವಿಸುವವರನ್ನು ತಾಯಿಯ ಮಮತೆಯೊಂದಿಗೆ ಅಪ್ಪಿಕೊಳ್ಳುವಂತೆ ನಮಗೆ ಕರೆ ನೀಡುತ್ತವೆ ಎಂದು ಜಗದ್ಗುರುಗಳು ಹೇಳಿದರು. ಆದರೆ ಕರುಣೆ ಕೇವಲ ಭೌತಿಕ ಸಹಾಯಕ್ಕೆ ಸೀಮಿತವಾಗಬಾರದು ಅಗತ್ಯವಿರುವವರ ಆಧ್ಯಾತ್ಮಿಕ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಸಹ ನೆರವಾಗಬೇಕು ಎಂದು ಅವರು ಒತ್ತಿಹೇಳಿದರು.

ಯೇಸುವಿನ ಪರಮಪವಿತ್ರ ಹೃದಯದ ಮಹೋತ್ಸವದ ಪೂರ್ವಸಂಧ್ಯೆಯಲ್ಲಿ ನಡೆದ ಈ ಬಲಿಪೂಜೆಯಲ್ಲಿ, ಜಗದ್ಗುರುಗಳು ಕ್ರಿಸ್ತನ ಹೃದಯದ ಪ್ರಮುಖ ಗುಣವಾದ ವಿನಯಶೀಲತೆಯನ್ನು ವಿಶೇಷವಾಗಿ ನೆನಪಿಸಿದರು. ಇಂದಿನ ಜಗತ್ತಿನಲ್ಲಿ ಅಬ್ಬರದ, ಎಲ್ಲೆಡೆ ವ್ಯಾಪಿಸಿರುವ ಮತ್ತು ಅಶಾಂತ ‘ನಾನು’ ಎಂಬ ಅಹಂಕಾರದ ಗದ್ದಲದಿಂದ ಅನೇಕರು ತಮ್ಮೊಳಗೆ ಸ್ಪಂದಿಸುವ ಪ್ರೀತಿಯ ಅಡಗಿದ ಹೃದಯದ ಧ್ವನಿಯನ್ನು ಕೇಳಲು ಅಗತ್ಯವಾದ ಮೌನವನ್ನು ಕಳೆದುಕೊಂಡಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಈ ಸಮಸ್ಯೆಗೆ ಯೇಸುವೇ ಪರಿಹಾರವನ್ನು ತೋರಿಸುತ್ತಾರೆ ಎಂದು ಜಗದ್ಗುರುಗಳು ಹೇಳಿದರು. “ನಮ್ಮನ್ನು ಬೇರ್ಪಡಿಸುವ ಅಹಂಕಾರದ ಎತ್ತರದ ಪೀಠಗಳಿಂದ ಕೆಳಗಿಳಿದು, ನಮ್ಮನ್ನು ಒಂದಾಗಿಸುವ ವಿನಯಶೀಲತೆಯಲ್ಲಿ ನಾವು ನಮ್ಮನ್ನು ಕಾಣಬೇಕು” ಎಂದು ಅವರು ಕರೆ ನೀಡಿದರು. ಪ್ರೀತಿ, ಕರುಣೆ ಮತ್ತು ವಿನಯದ ಮೂಲಕವೇ ನಿಜವಾದ ಮಾನವೀಯತೆ ಹಾಗೂ ಕ್ರೈಸ್ತ ಸಾಕ್ಷ್ಯವನ್ನು ಬದುಕಬಹುದು ಎಂದು ಜಗದ್ಗುರು ಲಿಯೋರವರ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

11 ಜೂನ್ 2026, 20:53