ಸಂಸ್ಥೆಗಳಿಂದ ಸಮಾಜದ ಅಂಚಿನವರೆಗೆ: ಸ್ಪೇನ್‌ನಲ್ಲಿ ಜಗದ್ಗುರು ಲಿಯೋರವರ ಪ್ರೇಷಿತರ ಪ್ರವಾಸ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಜೂನ್ 6 ರಿಂದ 12 ರವರೆಗೆ ನಡೆಯಲಿರುವ ಸ್ಪೇನ್‌ನ ಪ್ರೇಷಿತರ ಯಾತ್ರೆ ಅವರ ನಾಲ್ಕನೇ ಅಂತರರಾಷ್ಟ್ರೀಯ ಪ್ರವಾಸವಾಗಿದ್ದು, ಮ್ಯಾಡ್ರಿಡ್, ಬಾರ್ಸಿಲೋನಾ ಹಾಗೂ ಕ್ಯಾನರಿ ದ್ವೀಪಗಳನ್ನು ಒಳಗೊಂಡಿದೆ. ಸುಮಾರು 2,500 ಕಿಲೋಮೀಟರ್‌ಗಳ ಈ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರನ್ನು ಭೇಟಿಯಾಗಲಿರುವ ಜಗದ್ಗುರುಗಳು, ಶಾಂತಿ, ನಿರಾಯುಧೀಕರಣ, ವಲಸೆ, ಮಾನವ ಘನತೆ ಮತ್ತು ಧರ್ಮ ಸಭೆಯ ಸಾಮಾಜಿಕ ಪಾತ್ರದಂತಹ ಪ್ರಮುಖ ವಿಷಯಗಳ ಕುರಿತು ತಮ್ಮ ಸಂದೇಶವನ್ನು ನೀಡಲಿದ್ದಾರೆ.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕ ಮತ್ತಿಯೋ ಬ್ರೂನಿರವರ ಪ್ರಕಾರ, ಸ್ಪೇನ್ ಪ್ರಾಚೀನ ಕ್ರೈಸ್ತ ಸಂಪ್ರದಾಯ, ಚಿಂತನೆ ಮತ್ತು ಸಂವಾದದ ನೆಲೆಯಾಗಿದೆ. ಮಧ್ಯಯುಗದಲ್ಲಿ ವಿವಿಧ ಸಂಸ್ಕೃತಿಗಳ ನಡುವಿನ ಸಂವಾದಕ್ಕೆ ಸೇತುವೆಯಾಗಿದ್ದ ಈ ದೇಶವು, ಸಲಮಾಂಕಾ ವಿದ್ಯಾಸಂಸ್ಥೆಯ ಮೂಲಕ ಮಾನವ ಹಕ್ಕುಗಳು ಮತ್ತು ವ್ಯಕ್ತಿಯ ಘನತೆಯ ಕುರಿತು ಜಾಗತಿಕ ಚಿಂತನೆಗೆ ಮಹತ್ವದ ಕೊಡುಗೆ ನೀಡಿದೆ. ಸಂತ ಜಾನ್ ಆಫ್ ದ ಕ್ರಾಸ್ ಹಾಗೂ ಸಂತ ತೆರೆಸಾ ಆಫ್ ಅವಿಲಾ ಅವರಂತಹ ಮಹಾನ್ ಸಂತರ ಪರಂಪರೆಯೂ ಈ ಪ್ರವಾಸದ ಆತ್ಮೀಯ ಹಿನ್ನೆಲೆಯಾಗಿದೆ.
ಈ ಯಾತ್ರೆಯಲ್ಲಿ ಜಗದ್ಗುರು XIVನೇ ಲಿಯೋರವರು ಧರ್ಮ ಸಭೆಯ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಯುವಜನರು, ಕುಟುಂಬಗಳು ಹಾಗೂ ಕ್ರೀಡೆ, ಸಂಸ್ಕೃತಿ ಮತ್ತು ಮನರಂಜನಾ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ. ಇಂದಿನ ಯುದ್ಧಪೀಡಿತ ಜಗತ್ತಿನಲ್ಲಿ ಶಾಂತಿ ಮತ್ತು ನಿರಾಯುಧೀಕರಣದ ಅಗತ್ಯವನ್ನು ಒತ್ತಿಹೇಳುವುದರ ಜೊತೆಗೆ, ಕೃತಕ ಬುದ್ಧಿಮತ್ತೆ ಮತ್ತು ನೂತನ ತಂತ್ರಜ್ಞಾನಗಳ ಯುಗದಲ್ಲಿ ಮಾನವ ಘನತೆಯನ್ನು ಕಾಪಾಡುವ ಮಹತ್ವದ ಕುರಿತು ತಮ್ಮ ಇತ್ತೀಚಿನ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ವಿಶ್ವಪತ್ರಿಕೆಯ ಬೆಳಕಿನಲ್ಲಿ ಚಿಂತನೆ ಹಂಚಿಕೊಳ್ಳಲಿದ್ದಾರೆ.
ವಲಸೆ ಮತ್ತು ಜೀವನದ ರಕ್ಷಣೆಯ ಪ್ರಶ್ನೆಗಳು ಈ ಯಾತ್ರೆಯ ಮತ್ತೊಂದು ಪ್ರಮುಖ ಆಯಾಮವಾಗಿವೆ. ವಿಶೇಷವಾಗಿ ಕ್ಯಾನರಿ ದ್ವೀಪಗಳ ಬಂದರುಗಳಲ್ಲಿ ವಲಸಿಗರನ್ನು ಭೇಟಿ ಮಾಡುವ ಜಗದ್ಗುರುಗಳು, ಅವರ ನೋವು ಮತ್ತು ಆಕಾಂಕ್ಷೆಗಳನ್ನು ಆಲಿಸಲಿದ್ದಾರೆ. ಸಾವಿರಾರು ವಲಸಿಗರ ದುಃಖಕ್ಕೆ ಸಾಕ್ಷಿಯಾಗಿರುವ ಆ ಸ್ಥಳಗಳಲ್ಲಿ ಧರ್ಮ ಸಭೆಯ ಕರುಣೆ ಮತ್ತು ಮಾನವೀಯತೆಯ ಸಂದೇಶವನ್ನು ಅವರು ಜಗತ್ತಿಗೆ ಸಾರಲಿದ್ದಾರೆ. ಮ್ಯಾಡ್ರಿಡ್‌ನಲ್ಲಿರುವ "ಸೀಡಿಯಾ 24 ಹೋರಾಸ್"ಎಂಬ ನಿರ್ಗತಿಕರು ಮತ್ತು ದುರ್ಬಲರಿಗೆ ಸೇವೆ ಸಲ್ಲಿಸುವ ಕೇಂದ್ರಕ್ಕೂ ಅವರು ಭೇಟಿ ನೀಡಲಿದ್ದಾರೆ.
ಈ ಯಾತ್ರೆಯು ಕೇವಲ ಅಧಿಕೃತ ಕಾರ್ಯಕ್ರಮಗಳ ಸರಣಿಯಲ್ಲ, ಬದಲಾಗಿ ಜನರ ನಂಬಿಕೆ ಮತ್ತು ಸಂಸ್ಕೃತಿಯೊಂದಿಗಿನ ಜೀವಂತ ಭೇಟಿಯಾಗಿದೆ. ಬಾರ್ಸಿಲೋನಾದ ಪ್ರಸಿದ್ಧ ಸಾಗ್ರಾದ ಫಮಿಲಿಯಾ ಬಸಿಲಿಕಾಗೆ ಭೇಟಿ ನೀಡುವ ಜಗದ್ಗುರುಗಳು, ಅದರ ವಾಸ್ತುಶಿಲ್ಪಿ ಅಂತೋನಿ ಗೌಡಿಯವರ ಶತಮಾನೋತ್ಸವದ ಸಂದರ್ಭದಲ್ಲಿ ಯೇಸು ಕ್ರಿಸ್ತನ ಗೋಪುರವನ್ನು ಆಶೀರ್ವದಿಸಲಿದ್ದಾರೆ. ಯೇಸುವಿನ ಶರೀರ ಮತ್ತು ರಕ್ತದ ಹಬ್ಬದ ಮೆರವಣಿಗೆಯಲ್ಲಿಯೂ ಅವರು ಭಾಗವಹಿಸಲಿದ್ದು, ನಂಬಿಕೆ ದೇವಾಲಯಗಳ ಗೋಡೆಗಳೊಳಗೆ ಮಾತ್ರವಲ್ಲ, ಜನರ ಜೀವನ ಮತ್ತು ಬೀದಿಗಳಲ್ಲಿಯೂ ಜೀವಂತವಾಗಿದೆ ಎಂಬ ಸಂದೇಶವನ್ನು ಬಲಪಡಿಸಲಿದ್ದಾರೆ.
ಯುವಜನರಿಗೆ ವಿಶೇಷ ಪ್ರಾಮುಖ್ಯತೆ ನೀಡಿರುವ ಜಗದ್ಗುರು XIVನೇ ಲಿಯೋರವರು, ಭವಿಷ್ಯವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಅವರೊಂದಿಗೆ ಹಂಚಿಕೊಳ್ಳಲು ಬಯಸಿದ್ದಾರೆ. ಇಂದಿನ ಸವಾಲುಗಳ ನಡುವೆಯೂ ಧರ್ಮ ಸಭೆ ಸಮಾಜಕ್ಕೆ ಇನ್ನೂ ಬಹಳಷ್ಟು ನೀಡಲು ಹೊಂದಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ, ಈ ಸ್ಪೇನ್ ಯಾತ್ರೆಯ ಮೂಲಕ ಅವರು ಸಂಸ್ಥೆಗಳ ಕೇಂದ್ರಗಳಿಂದ ಸಮಾಜದ ಅಂಚಿನಲ್ಲಿರುವ ದುರ್ಬಲರ ತನಕ ಎಲ್ಲರನ್ನೂ ಒಂದೇ ಆಶೆಯ ಮತ್ತು ಐಕ್ಯದ ಸಂದೇಶದಲ್ಲಿ ಒಗ್ಗೂಡಿಸಲು ಪ್ರಯತ್ನಿಸಲಿದ್ದಾರೆ.
