ಸ್ಪೇನ್‌ನಲ್ಲಿ ದೌರ್ಜನ್ಯಕ್ಕೆ ಒಳಗಾದವರನ್ನು ಭೇಟಿಯಾದ ಜಗದ್ಗುರು XIVನೇ ಲಿಯೋರವರು.
ವ್ಯಾಟಿಕನ್ ವರದಿ
ಸೋಮವಾರ, ಸ್ಪೇನಿನಲ್ಲಿ ಧರ್ಮಗುರುಗಳಿಂದ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರೊಂದಿಗೆ ಜಗದ್ಗುರುಗಳು ಭೇಟಿಯಾಗಿದ್ದರು ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮ್ಯಾಟಿಯೊ ಬ್ರೂನಿ ರವರು ಟೆಲಿಗ್ರಾಂ ಸಂದೇಶದಲ್ಲಿ ತಿಳಿಸಿದ್ದಾರೆ.
ತಮ್ಮ ಸಂದೇಶದಲ್ಲಿ, ಜಗದ್ಗುರುಗಳು ದೌರ್ಜನ್ಯಕ್ಕೆ ಒಳಗಾದ ಆರು ಸಂತ್ರಸ್ತರನ್ನು ಭೇಟಿಯಾದರು ಎಂದು ಬ್ರೂನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಬೆಂಬಲ ಮತ್ತು ಸಹಾಯ ಒದಗಿಸುವ ಕಾರ್ಯದಲ್ಲಿ ತೊಡಗಿರುವ ಧರ್ಮ ಸಭೆಯ ಸಿಬ್ಬಂದಿಯೂ ಅವರೊಂದಿಗೆ ಇದ್ದರು.
“ಸುಮಾರು ಒಂದು ಗಂಟೆ ಕಾಲ ನಡೆದ ಈ ಸಂವಾದದ ವೇಳೆ,” ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರು ತಿಳಿಸಿದರು, “ಅಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರೂ ತಮ್ಮ ನೋವಿನ ವೈಯುಕ್ತಿಕ ಅನುಭವಗಳನ್ನು ಹಂಚಿಕೊಂಡು, ಇಂತಹ ದುರಂತಕರ ಘಟನೆಗಳಿಗೆ ಧರ್ಮ ಸಭೆ ನೀಡುವ ಪ್ರತಿಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹಲವಾರು ಸಲಹೆಗಳನ್ನು ಜಗದ್ಗುರುಗಳಿಗೆ ಸಲ್ಲಿಸಿದರು.”
“ಪ್ರೀತಿ ಮತ್ತು ಕಾಳಜಿಯಿಂದ ಅವರ ಮಾತುಗಳನ್ನು ಆಲಿಸಿದರು ತಮ್ಮ ಸಾನ್ನಿಧ್ಯ ಹಾಗೂ ಇಡೀ ಧರ್ಮ ಸಭೆಯ ಸಮುದಾಯದ ಬೆಂಬಲವನ್ನು ಅವರಿಗೆ ಭರವಸೆ ನೀಡಿದರು. ಜೊತೆಗೆ, ಸ್ವೀಕರಿಸಲಾದ ಈ ಸಲಹೆಗಳು ಮುಂದಿನ ಪ್ರಯತ್ನಗಳಿಗೆ ಆಧಾರವಾಗುವಂತೆ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು, ಇದರಿಂದ ಧರ್ಮ ಸಭೆಯು ನಿಜವಾಗಿಯೂ ಸುರಕ್ಷಿತ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯಕರ ಸ್ಥಳವಾಗಿ, ಗಾಯಗೊಂಡ ಹೃದಯಗಳಿಗೆ ಸಾಂತ್ವನ ಮತ್ತು ಗುಣಮುಖತೆಯನ್ನು ನೀಡುವ ತಾಣವಾಗಲಿ ಎಂದು ಆಶಿಸಿದರು.”
ಇದೇ ವೇಳೆ, “ಜಗದ್ಗುರುಗಳು ತಮ್ಮ ದುಃಖವನ್ನು ತಮ್ಮದೇ ದುಃಖವಾಗಿ ಸ್ವೀಕರಿಸಿದ್ದಾರೆ ಎಂಬ ಭಾವನೆ ಸಂತ್ರಸ್ತರಲ್ಲಿ ಮೂಡಿತು” ಎಂದು ಬ್ರೂನಿರವರು ಹೇಳಿದರು.
ಜಗದ್ಗುರುಗಳು ರೋಮಿನಿಂದ ಪ್ರಯಾಣ ಬೆಳೆಸುವ ಮುನ್ನವೇ ಈ ಭೇಟಿಯು ನಡೆಯಲಿದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರು ದೃಢಪಡಿಸಿದ್ದರು. ಈ ಭೇಟಿಯನ್ನು ಸ್ಥಳೀಯ ಧರ್ಮ ಸಭೆ ಆಯೋಜಿಸಿದ್ದು, ಸಂತ್ರಸ್ತರ ಗೌಪ್ಯತೆಯನ್ನು ಗೌರವಿಸುವ ಸಲುವಾಗಿ ಹೆಚ್ಚಿನ ವಿವರಗಳನ್ನು ನಂತರ ನೀಡಲಾಗುವುದು ಎಂದು ಅವರು ತಿಳಿಸಿದ್ದರು.
ದೌರ್ಜನ್ಯದ ಸಮಸ್ಯೆಯು ಸ್ಪೇನಿನ ಧರ್ಮ ಸಭೆಗೆ ಇನ್ನೂ ನೋವಿನ ವಿಷಯವಾಗಿಯೇ ಉಳಿದಿದೆ. ಇತ್ತೀಚಿನ ವರ್ಷಗಳಲ್ಲಿ, ತಡೆಗಟ್ಟುವಿಕೆ ಮತ್ತು ಪರಿಹಾರದ ಉದ್ದೇಶದಿಂದ ಹಲವು ಕ್ರಮಗಳು ಮತ್ತು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಇತ್ತೀಚೆಗೆ, ಮಾರ್ಚ್ ತಿಂಗಳಲ್ಲಿ, ಸ್ಪ್ಯಾನಿಷ್ ಎಪಿಸ್ಕೋಪಲ್ ಸಮ್ಮೇಳನ, ಧಾರ್ಮಿಕ ಸಮ್ಮೇಳನ ಹಾಗೂ ಅಧ್ಯಕ್ಷತೆಯ ಸಚಿವಾಲಯ ಇವುಗಳ ನಡುವೆ ಈ ನೋವಿನ ವಾಸ್ತವಿಕತೆಯನ್ನು ಸತ್ಯ ಮತ್ತು ನ್ಯಾಯದ ಆಧಾರದ ಮೇಲೆ ಎದುರಿಸಲು ಒಂದು ಪ್ರೋಟೋಕಾಲ್‌ಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ಜಗದ್ಗುರು XIVನೇ ಲಿಯೋರವರ ಈ ಖಾಸಗಿ ಹಾಗೂ ಮುಚ್ಚಿದ ಬಾಗಿಲಿನ ಸಂವಾದವು ಅವರ ಪೂರ್ವಾಧಿಕಾರಿಗಳ ಶೈಲಿಯನ್ನು ಹೋಲುವಂತಿತ್ತು.
ಜಗದ್ಗುರು XVIನೇ ಬೆನೆಡಿಕ್ಟ್ ರವರು 2008ರಲ್ಲಿ ಯುನೈಟೆಡ್ ಸ್ಟೇಟ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ದೌರ್ಜನ್ಯ ಸಂತ್ರಸ್ತರನ್ನು ಭೇಟಿಯಾಗಿದ್ದರು. ನಂತರ ಅವರು ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ಜರ್ಮನಿ ದೇಶಗಳಿಗೆ ಭೇಟಿ ನೀಡಿದಾಗಲೂ ಇಂತಹ ಭೇಟಿಗಳನ್ನು ನಡೆಸಿದ್ದರು.
ಅದೇ ರೀತಿಯಲ್ಲಿ, ಪೋಪ್ ಫ್ರಾನ್ಸಿಸ್ ಅವರು ಐರ್ಲೆಂಡ್, ಚಿಲಿ, ಪೋರ್ಚುಗಲ್ ಮತ್ತು ಬೆಲ್ಜಿಯಂ ದೇಶಗಳಿಗೆ ತಮ್ಮ ಪ್ರವಾಸಗಳ ಸಂದರ್ಭದಲ್ಲಿ ದೌರ್ಜನ್ಯ ಸಂತ್ರಸ್ತರೊಂದಿಗೆ ಇದೇ ರೀತಿಯ ಭೇಟಿಗಳನ್ನು ನಡೆಸಿದ್ದರು.
