ಸ್ಪೇನಿನ ಪ್ರೇಷಿತರ ಯಾತ್ರೆಗಾಗಿ ದೇವರಿಗೆ ಮತ್ತೊಮ್ಮೆ ಕೃತಜ್ಞತೆ ಅರ್ಪಿಸಿದ ಜಗದ್ಗುರು ಲಿಯೋರವರು.
ವ್ಯಾಟಿಕನ್ ವರದಿ
ರೋಮಿಗೆ ಮರಳಿದ ಕೇವಲ ಎರಡು ದಿನಗಳ ನಂತರ, ಜೂನ್ 6ರಿಂದ 12ರವರೆಗೆ ನಡೆದ ತಮ್ಮ ಪ್ರೇಷಿತರ ಸ್ಪೇನಿನ ಯಾತ್ರೆಯ ಸಂದರ್ಭದಲ್ಲಿ ಅಲ್ಲಿನ ಜನರಿಂದ ದೊರೆತ ಆತ್ಮೀಯ ಸ್ವಾಗತಕ್ಕಾಗಿ ಜಗದ್ಗುರು XIVನೇ ಲಿಯೋರವರು ದೇವರಿಗೆ ಕೃತಜ್ಞತೆ ಸಲ್ಲಿಸಿದರು.
ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಅವರು, “ನನ್ನನ್ನು ಅಪಾರ ಉತ್ಸಾಹ ಮತ್ತು ಭಕ್ತಿಯಿಂದ ಸ್ವಾಗತಿಸಿದ ಸ್ಪೇನಿನ ಜನತೆಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ,” ಎಂದು ಹೇಳಿದರು.
ಜಗದ್ಗುರುಗಳು ವಿಶೇಷವಾಗಿ ರಾಜ VIನೇ ಫೆಲಿಪೆ ರವರಿಗೆ ಕೃತಜ್ಞತೆ ಸಲ್ಲಿಸಿದರು. ರಾಜರು ಮ್ಯಾಡ್ರಿಡ್‌ನಲ್ಲಿ ಜಗದ್ಗುರುಗಳನ್ನು ಸ್ವಾಗತಿಸಿದ್ದಲ್ಲದೆ, ಅವರ ಯಾತ್ರೆಯ ಕೊನೆಯ ದಿನ ಕ್ಯಾನರಿ ದ್ವೀಪಗಳಲ್ಲಿ ವಿದಾಯವನ್ನೂ ಕೋರಿದ್ದರು.
ಜಗದ್ಗುರುಗಳ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾದ ಬಳಿಕ, ರಾಜ VIನೇ ಫೆಲಿಪೆರವರು ತಮ್ಮ ಖಾಸಗಿ ವಿಮಾನವನ್ನು ಬಳಸಲು ಜಗದ್ಗುರುಗಳಿಗೆ ನೀಡಿದರು. ಅದರ ಮೂಲಕ ಜಗದ್ಗುರು ಲಿಯೋರವರು ಶುಕ್ರವಾರ ಸಂಜೆ ರೋಮಿಗೆ ಮರಳಿದರು.
ತಮ್ಮ ಭೇಟಿಯ ಸಿದ್ಧತೆಗಾಗಿ ಶ್ರಮಿಸಿದ ಅನೇಕ ಜನರಿಗೆ ಹಾಗೂ ಜಗದ್ಗುರುಗಳನ್ನು ಸ್ವಾಗತಿಸಲು ವಿಶ್ವಾಸಿಗಳನ್ನು ಮಾರ್ಗದರ್ಶಿಸಿದ ಸ್ಪೇನಿನ ಬಿಷಪ್‌ಗಳಿಗೂ ಅವರು ಕೃತಜ್ಞತೆ ವ್ಯಕ್ತಪಡಿಸಿದರು.
“ವಿಶೇಷವಾಗಿ ಮಹಾಮಹಿಮ ರಾಜರಿಗೆ ನಾನು ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ,” ಎಂದು ಜಗದ್ಗುರು ಲಿಯೋ ರವರು ಹೇಳಿದರು. “ಹಾಗೆಯೇ ನಾನು ಭೇಟಿಯಾದ ಎಲ್ಲಾ ಸಮುದಾಯಗಳಿಗೆ, ಬಿಷಪ್‌ಗಳಿಗೆ ಮತ್ತು ಸ್ಪೇನಿನ ಇಡೀ ಧರ್ಮ ಸಭೆಗೆ ಪ್ರೀತಿಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ದೇವರು ಸದಾಕಾಲ ಸ್ಪೇನಿನ ದೇಶವನ್ನು ಆಶೀರ್ವದಿಸಲಿ!” ಎಂದು ಅವರು ಪ್ರಾರ್ಥಿಸಿದರು.
