ಹುಡುಕಿ

Papa Leone a Piazza San Pietro per l'udienza generale

ಸಾರ್ವಜನಿಕ ಭೇಟಿಯಲ್ಲಿ ಜಗದ್ಗುರುಗಳು: ‘ಸ್ಪೇನಿನ ಜನರ ನಂಬಿಕೆ ಮತ್ತು ಸಂತೋಷ ನನಗೆ ಸಾಂತ್ವನ ಹಾಗೂ ಪ್ರೋತ್ಸಾಹ ನೀಡಿತು.

ಬುಧವಾರದ ಸಾರ್ವಜನಿಕ ಭೇಟಿಯಲ್ಲಿ ಜಗದ್ಗುರು XIVನೇ ಲಿಯೋರವರು ತಮ್ಮ ಇತ್ತೀಚಿನ ಪ್ರೇಷಿತರ ಸ್ಪೇನ್ ಪ್ರವಾಸವನ್ನು ಅವಲೋಕಿಸಿ, ಮ್ಯಾಡ್ರಿಡ್, ಬಾರ್ಸಿಲೋನಾ ಮತ್ತು ಕ್ಯಾನರಿ ದ್ವೀಪಗಳ ಭೇಟಿಯ ಅನುಭವಗಳನ್ನು ನೆನಪಿಸಿಕೊಂಡರು.

ವ್ಯಾಟಿಕನ್ ವರದಿ

“ದೇವರ ಜನರು ತಮ್ಮ ವಿಶ್ವಾಸ ಮತ್ತು ಪ್ರೀತಿಯನ್ನು ಸಂತೋಷಭರಿತವಾಗಿ ವ್ಯಕ್ತಪಡಿಸುವ ಮೂಲಕ ನನಗೆ ಅಪಾರ ಸಾಂತ್ವನ ನೀಡಿದರು.”

ಜಗದ್ಗುರು XIVನೇ ಲಿಯೋರವರು ಈ ಮಾತುಗಳನ್ನು ಸಂತ ಪೇತ್ರರ ಚೌಕದಲ್ಲಿ ನಡೆದ ತಮ್ಮ ವಾರದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಹೇಳಿದರು. ಅವರು ತಮ್ಮ ಪ್ರೇಷಿತರ ಸ್ಪೇನಿನ ಪ್ರವಾಸವನ್ನು ಸ್ಮರಿಸಿಕೊಂಡು, ಮ್ಯಾಡ್ರಿಡ್, ಬಾರ್ಸಿಲೋನಾ, ಮೊಂಟ್ಸೆರಾತ್ ಮಠ ಹಾಗೂ ಕ್ಯಾನರಿ ದ್ವೀಪಗಳಿಗೆ ನೀಡಿದ ಭೇಟಿಯ ಅನುಭವಗಳನ್ನು ಹಂಚಿಕೊಂಡರು.

ಜಗದ್ಗುರುಗಳು ನೆನಪಿಸಿಕೊಂಡಂತೆ, ನಾಲ್ಕು ಆಫ್ರಿಕಾ ರಾಷ್ಟ್ರಗಳ ದೀರ್ಘ ಪ್ರವಾಸದ ಬಳಿಕ ಈ ಬಾರಿ ಅವರು ಪ್ರಾಚೀನ ಹಾಗೂ ಸಮೃದ್ಧ ಕಥೋಲಿಕ ಪರಂಪರೆಯನ್ನು ಹೊಂದಿರುವ ಯುರೋಪಿನ ದೇಶವಾದ ಸ್ಪೇನಿಗೆ ಭೇಟಿ ನೀಡಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ನಡೆದಿದ್ದರೂ, ಅಲ್ಲಿನ ಜನರು ಅಪಾರ ಉತ್ಸಾಹ ಮತ್ತು ಆಲಿಸುವ ಮನೋಭಾವದಿಂದ ಅವರನ್ನು ಸ್ವಾಗತಿಸಿದರು. ಇದಕ್ಕಾಗಿ ಅವರು ದೇವರಿಗೂ, ಸ್ಪೇನ್ ಜನರಿಗೂ, ರಾಜನಿಗೂ, ನಾಗರಿಕ ಅಧಿಕಾರಿಗಳಿಗೂ, ಬಿಷಪ್‌ಗಳಿಗೂ ಹಾಗೂ ಧರ್ಮ ಸಭೆಯ ಸಮುದಾಯಗಳಿಗೂ ಕೃತಜ್ಞತೆ ಸಲ್ಲಿಸಿದರು.

ವಿಶ್ವಾಸಿಗಳನ್ನು ದೃಢಪಡಿಸುವ ಹಾಗೂ ವಿಭಜನೆ ಮತ್ತು ಸಂಘರ್ಷಗಳ ಎಲ್ಲ ರೂಪಗಳನ್ನು ಮೀರಿ ಐಕ್ಯತೆ, ಸಂವಾದ ಮತ್ತು ವೈವಿಧ್ಯತೆಯಲ್ಲಿನ ಏಕತೆಯನ್ನು ಉತ್ತೇಜಿಸುವ ಅವಕಾಶ ದೊರೆತಿದ್ದಕ್ಕಾಗಿ ಜಗದ್ಗುರುಗಳು ಸಂತೋಷ ವ್ಯಕ್ತಪಡಿಸಿದರು. “ಇದೇ ಪೇತ್ರನ ಉತ್ತರಾಧಿಕಾರಿಯ ಸೇವೆ, ಪ್ರತಿಯೊಂದು ಪ್ರೇಷಿತರ ಪ್ರವಾಸದಲ್ಲೂ ಅದು ಭೇಟಿ ನೀಡುವ ದೇಶಗಳ ಧರ್ಮ ಸಭೆಯ ಹಾಗೂ ಸಾಮಾಜಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ವ್ಯಕ್ತವಾಗುತ್ತದೆ” ಎಂದು ಅವರು ಹೇಳಿದರು.

ಸ್ಪೇನಿನ ಪ್ರವಾಸದ ಸಂದರ್ಭದಲ್ಲಿ ಎಲ್ಲಾ ವಯೋಮಾನದ ಜನರು ಜಗದ್ಗುರುಗಳ ಭೇಟಿಗಾಗಿ ಕಾತರದಿಂದ ಕಾಯುತ್ತಿದ್ದುದನ್ನು ಮತ್ತು ಅಪಾರ ಆತ್ಮೀಯತೆಯಿಂದ ಸ್ವಾಗತಿಸಿದ್ದುದನ್ನು ಕಂಡು ತಮಗೆ ಸಂತೋಷವಾಯಿತು ಎಂದು ಜಗದ್ಗುರುಗಳು ಹೇಳಿದರು. ಈ ಉತ್ಸಾಹವು ಕೇವಲ ಸ್ಪೇನಿನ ಜನರ ವಿಶ್ವಾಸದ ಅಭಿವ್ಯಕ್ತಿ ಮಾತ್ರವಲ್ಲ, ನಿಜವಾದ ಮತ್ತು ಆಳವಾದ ನೆಲೆಯಲ್ಲಿ ಐಕ್ಯತೆಯನ್ನು ಕಂಡುಕೊಳ್ಳಬೇಕೆಂಬ ಜನರ ವ್ಯಾಪಕ ಬಯಕೆಯನ್ನು ಸಹ ವ್ಯಕ್ತಪಡಿಸುತ್ತದೆ ಎಂದು ಅವರು ವಿವರಿಸಿದರು. “ಆ ನೆಲೆಯನ್ನು ಖಚಿತಪಡಿಸಬಲ್ಲವರು ಕ್ರಿಸ್ತರೊಬ್ಬರೇ” ಎಂದು ಜಗದ್ಗುರುಗಳು ಒತ್ತಿ ಹೇಳಿದರು.

ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾದಲ್ಲಿನ ಧಾರ್ಮಿಕ ಆಚರಣೆಗಳು ಹಾಗೂ ಮೊಂಟ್ಸೆರಾತ್ ಮಠದಲ್ಲಿ ಪವಿತ್ರ ಜಪಮಾಲೆ ಪ್ರಾರ್ಥಿಸಿದ ಅನುಭವವನ್ನು ಅವರು ಸ್ಮರಿಸಿದರು. ಪ್ರಾಚೀನ ಮತ್ತು ಆಧುನಿಕ, ಕಥೋಲಿಕ ಪರಂಪರೆ ಮತ್ತು ಸಮಕಾಲೀನ ಸಂಸ್ಕೃತಿಯ ಈ ಸಂಗಮವು ಯುರೋಪಿನ ನಿಜವಾದ ಸ್ವರೂಪವನ್ನು ತಮ್ಮ ಮುಂದೆ ತೆರೆದಿಟ್ಟಿತು ಎಂದು ಹೇಳಿದರು. ಇದು ಭೂತಕಾಲದ ಸ್ಮರಣೆಯಲ್ಲ, ಜೀವಂತ ವಾಸ್ತವಿಕತೆಯಾಗಿದ್ದು, ಅಪಾರ ಮೌಲ್ಯದ ಪರಂಪರೆಯಾಗಿದೆ. ಶಾಂತಿ, ಸಮಗ್ರ ಪರಿಸರ ಸಂರಕ್ಷಣೆ, ನ್ಯಾಯಯುತ ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಮಾನವ ಘನತೆಯ ರಕ್ಷಣೆಯಂತಹ ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಲು ಈ ಪರಂಪರೆಯನ್ನು ಜಾಗರೂಕತೆಯಿಂದ ಕಾಪಾಡಬೇಕು ಎಂದು ಅವರು ಹೇಳಿದರು.

ಈ ಸವಾಲುಗಳನ್ನು ದ್ವಿತೀಯ ವ್ಯಾಟಿಕನ್ ಮಹಾಸಭೆಯೇ ಈಗಾಗಲೇ ಗುರುತಿಸಿತ್ತು ಎಂದು ಜಗದ್ಗುರುಗಳು ನೆನಪಿಸಿದರು. ನಂತರದ ಧರ್ಮ ಸಭೆಯ ಬೋಧನೆಗಳೂ, ವಿಶೇಷವಾಗಿ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ಘನತೆಯನ್ನು ರಕ್ಷಿಸುವ ಉದ್ದೇಶದಿಂದ ತಾವು ಪ್ರಕಟಿಸಿದ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪರಿಪತ್ರಿಕೆಯೂ ಇದೇ ವಿಷಯಗಳನ್ನು ಪುನರುಚ್ಚರಿಸಿವೆ ಎಂದು ಅವರು ಹೇಳಿದರು. ವಿವಿಧ ಭೇಟಿಗಳ ಮೂಲಕ, ಇಂದಿನ ಮಾನವಕುಲವು ತಪ್ಪು ಅಭಿವೃದ್ಧಿ ಮಾದರಿಯ ದುಷ್ಪರಿಣಾಮಗಳಿಂದ ಬಳಲುತ್ತಿರುವ ಸಂದರ್ಭದಲ್ಲಿ, ಜಗದ್ಗುರುಗಳ ಧ್ವನಿಯ ಮೂಲಕ ಭರವಸೆಯ ಸುವಾರ್ತೆಯನ್ನು ಕೇಳಬೇಕೆಂಬ ಜನರ ಅಗತ್ಯತೆಯನ್ನು ತಾವು ಸ್ಪಷ್ಟವಾಗಿ ಅನುಭವಿಸಿದ್ದಾಗಿ ಅವರು ತಿಳಿಸಿದರು.

ಪ್ರವಾಸದ ವೇಳೆ ತಮಗೆ ದೊರೆತ ಸ್ಪರ್ಶಿಸುವಂತಹ ಭೇಟಿಗಳು ಮತ್ತು ಸಾಕ್ಷ್ಯಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದ ಜಗದ್ಗುರುಗಳು, ವಿಶೇಷವಾಗಿ ಭೇಟಿಯಾದ ಮಕ್ಕಳು, ಬಡವರು, ತನ್ನ ಪತ್ರವನ್ನು ಓದಿದ ಬಾಲಕ, ತಮ್ಮ ನೋವನ್ನು ಕೇಳಿಸಿಕೊಳ್ಳಲು ಬಂದ ದುರುಪಯೋಗದ ಸಂತ್ರಸ್ತರು, ಕಾರಾಗೃಹದಲ್ಲಿದ್ದ ಕೈದಿಗಳು, ಆತಂಕ ಮತ್ತು ಕನಸುಗಳಿಂದ ತುಂಬಿದ್ದ ಯುವಜನರು ಹಾಗೂ ಕ್ಯಾನರಿ ದ್ವೀಪಗಳ ಸ್ವಾಗತ ಕೇಂದ್ರಗಳಲ್ಲಿದ್ದ ವಲಸಿಗರನ್ನು ಸ್ಮರಿಸಿದರು.

ಕ್ಯಾನರಿ ದ್ವೀಪಗಳ ಧರ್ಮ ಸಭೆಯ ಅನೇಕ ಬಲವಂತದ ವಲಸಿಗರನ್ನು, ಮುಖ್ಯವಾಗಿ ಆಫ್ರಿಕಾದಿಂದ ಬಂದವರನ್ನು, ಸ್ವಾಗತಿಸುತ್ತಿದೆ ಎಂದು ಜಗದ್ಗುರುಗಳು ಹೇಳಿದರು. ವಲಸೆ ಎಂಬುದು ಸಂಕೀರ್ಣವಾದ ವಿಷಯವಾಗಿದ್ದು, ಸಂಘಟಿತ ಮತ್ತು ಸಮನ್ವಯಗೊಂಡ ಕಾರ್ಯಯೋಜನೆಗಳನ್ನು ಅಗತ್ಯವಾಗಿಸುತ್ತದೆ ಎಂದು ಅವರು ಒಪ್ಪಿಕೊಂಡರು. ಆದರೆ ಇದೇ ಸಂದರ್ಭದಲ್ಲಿ, ಇಂದಿನ ಜಗತ್ತಿನಲ್ಲಿ ಸುವಾರ್ತೆಯನ್ನು ಹೊಸ ದೃಷ್ಟಿಕೋನದಿಂದ ಓದಬೇಕೆಂಬ ಕರೆಯನ್ನೂ ಇದು ನೀಡುತ್ತದೆ ಎಂದು ಹೇಳಿದರು. ವಿವಿಧ ಸಂಸ್ಕೃತಿಗಳ ಉಡುಗೊರೆಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ, ವಿಶೇಷವಾಗಿ ಕ್ರಿಸ್ತನ ಸಂದೇಶವು ಅವುಗಳಲ್ಲಿ ಉಂಟುಮಾಡಿದ ಫಲಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನಾವು ಸಮೃದ್ಧರಾಗಬಹುದು ಎಂದು ಅವರು ವಿವರಿಸಿದರು.

ಜನರ ನಡುವಿನ ಹಾಗೂ ರಾಷ್ಟ್ರಗಳ ನಡುವಿನ ಸಂವಾದ ಮತ್ತು ಸಹೋದರತ್ವದ ಮನೋಭಾವದಲ್ಲಿ ನಡೆಯುವ ಭೇಟಿಯು ಕ್ರಿಸ್ತನ ಸಂದೇಶದ ಪ್ರಮುಖ ಫಲಗಳಲ್ಲಿ ಒಂದಾಗಿದೆ ಎಂದು ಜಗದ್ಗುರುಗಳು ಹೇಳಿದರು. “ಈ ದಾರಿ ಸುಲಭವಲ್ಲ; ಇದಕ್ಕೆ ಸದ್ಭಾವನೆ ಮತ್ತು ದೇವರ ಸಹಾಯ ಅಗತ್ಯ. ಆದರೆ ಇದು ಪ್ರೀತಿಯ ನಾಗರಿಕತೆಯತ್ತ ನಮ್ಮನ್ನು ಕೊಂಡೊಯ್ಯುತ್ತದೆ” ಎಂದು ಅವರು ಹೇಳಿದರು.

ಕೊನೆಯಲ್ಲಿ, ತಮ್ಮ ಸ್ಪೇನಿನ ಪ್ರವಾಸದ ಧ್ಯೇಯವಾಕ್ಯವಾಗಿದ್ದ “ನಿಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿರಿ!” (ಯೋಹಾನ 4:35) ಎಂಬ ಕರೆಯನ್ನು ಎಲ್ಲರಿಗೂ ಪುನರುಚ್ಚರಿಸಿದರು. ಪ್ರತಿಯೊಬ್ಬರೂ ತಮ್ಮ ದೃಷ್ಟಿಯನ್ನು ಪ್ರಭುವಿನ ಕಡೆಗೆ ಎತ್ತಿ, ಆಶೆ, ವಿಶ್ವಾಸ ಮತ್ತು ಪ್ರೀತಿಯಿಂದ ತುಂಬಿದ ಜೀವನವನ್ನು ನಡೆಸುವಂತೆ ಅವರು ಆಹ್ವಾನಿಸಿದರು.

17 ಜೂನ್ 2026, 15:41