ಹುಡುಕಿ

VATICAN-RELIGION-POPE-AUDIENCE

ಜಗದ್ಗುರುಗಳು: ಅಮೆರಿಕಾ–ಇರಾನ್ ಒಪ್ಪಂದ ಪತ್ರವು “ಯುದ್ಧಕ್ಕೆ ನಿಜವಾದ ಪರಿಹಾರವಾಗಲಿ”

ಅಮೆರಿಕಾ–ಇರಾನ್ ಸಂಘರ್ಷ, ತಮ್ಮ ಇತ್ತೀಚಿನ ಸ್ಪೇನಿನ ಭೇಟಿ ಸೇರಿದಂತೆ ಹಲವು ಸಮಕಾಲೀನ ವಿಷಯಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಜಗದ್ಗುರು XIVನೇ ಲಿಯೋರವರು ಪ್ರತಿಕ್ರಿಯಿಸಿದರು.

ವ್ಯಾಟಿಕನ್ ವರದಿ

ಕಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಜಗದ್ಗುರುಗಳ ನಿವಾಸದ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ಜಗದ್ಗುರು ಲಿಯೋರವರು ಅಮೆರಿಕಾ–ಇರಾನ್ ನಡುವಿನ ಇತ್ತೀಚಿನ ತಿಳುವಳಿಕೆ ಒಪ್ಪಂದ, ತಮ್ಮ ಸ್ಪೇನಿನ ಭೇಟಿ, ವಲಸೆ ಸಮಸ್ಯೆ, ಧರ್ಮ ಸಭೆಯ ಏಕತೆ ಹಾಗೂ ಭವಿಷ್ಯದ ಪ್ರವಾಸಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರು ಮೊದಲು ಸ್ಪೇನಿನ ಮಾಧ್ಯಮದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ತಾಂತ್ರಿಕ ಸಮಸ್ಯೆಯಿಂದಾಗಿ ಟೆನೆರಿಫೆಯಿಂದ ಹಿಂದಿರುಗುವ ವಿಮಾನದಲ್ಲಿ ನಡೆಯಬೇಕಿದ್ದ ಪತ್ರಿಕಾಗೋಷ್ಠಿ ಸಾಧ್ಯವಾಗಿರಲಿಲ್ಲ ಎಂದು ನೆನಪಿಸಿದರು.

ಅಮೆರಿಕಾ ಮತ್ತು ಇರಾನ್ ನಡುವಿನ ಇತ್ತೀಚಿನ ಒಪ್ಪಂದದ ಕುರಿತು ಮಾತನಾಡಿದ ಜಗದ್ಗುರುಗಳು, “ದೇವರಿಗೆ ಧನ್ಯವಾದಗಳು, ಕನಿಷ್ಠ ಈ ತಿಳುವಳಿಕೆ ಒಪ್ಪಂದವಾದರೂ ಶುಕ್ರವಾರ ಅಧಿಕೃತವಾಗಿ ಸಹಿಯಾಗಲಿದೆ” ಎಂದರು. ಇನ್ನೂ ಕೆಲವು ವಿಷಯಗಳು ಸ್ಪಷ್ಟವಾಗಬೇಕಿದ್ದರೂ, ಯುದ್ಧದ ಮಾರ್ಗಕ್ಕಿಂತ ಸಂವಾದ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವುದು ಉತ್ತಮ ಎಂದು ಅವರು ಒತ್ತಿ ಹೇಳಿದರು. ಈ ಒಪ್ಪಂದವು ಯುದ್ಧಕ್ಕೆ ನಿಜವಾದ ಅಂತ್ಯ ತಂದು, ಅಣ್ವಸ್ತ್ರಗಳ ನಿರ್ಮೂಲನೆ ಹಾಗೂ ಎಲ್ಲ ಜನರ ಒಳಿತಿಗೆ ದಾರಿ ಮಾಡಿಕೊಡಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಇತ್ತೀಚಿನ ಸ್ಪೇನಿನ ಭೇಟಿಯನ್ನು ಸ್ಮರಿಸಿದ ಜಗದ್ಗುರು ಲಿಯೋರವರು, ದೇಶದಾದ್ಯಂತ ಜನರಿಂದ ದೊರೆತ ಉತ್ಸಾಹಭರಿತ ಸ್ವಾಗತವನ್ನು ಪ್ರಶಂಸಿಸಿದರು. ಬಿಷಪ್‌ಗಳು, ಸಾಮಾನ್ಯ ವಿಶ್ವಾಸಿಗಳು ಮತ್ತು ಸ್ವಯಂಸೇವಕರು ಎಲ್ಲ ಕಾರ್ಯಕ್ರಮಗಳನ್ನೂ ಅತ್ಯುತ್ತಮವಾಗಿ ಸಿದ್ಧಪಡಿಸಿದ್ದರು ಎಂದು ಅವರು ಹೇಳಿದರು. ತಮ್ಮ ಅನುಭವದ ಆಧಾರದ ಮೇಲೆ ಸ್ಪೇನಿನ ಜನರು ಈ ಭೇಟಿಯಿಂದ ತುಂಬಾ ಸಂತೋಷಗೊಂಡಿದ್ದರು ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು. ಅಲ್ಲದೆ, ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆ ಪರಸ್ಪರ ಸಂವಾದ, ಆಲಿಸುವ ಮನೋಭಾವ ಮತ್ತು ಸಾಮೂಹಿಕ ಹಿತಕ್ಕಾಗಿ ಒಮ್ಮತ ಸಾಧಿಸುವ ಪ್ರಯತ್ನಗಳ ಅಗತ್ಯವನ್ನು ಅವರು ಒತ್ತಿಹೇಳಿದರು.

ವಲಸೆ ವಿಷಯದ ಕುರಿತು ಮಾತನಾಡಿದ ಜಗದ್ಗುರುಗಳು, ತಮ್ಮ ದೇಶಗಳನ್ನು ತೊರೆಯಬೇಕಾದ ಜನರ ನೋವು ಮತ್ತು ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಹಿಂಸಾಚಾರ, ಯುದ್ಧ ಮತ್ತು ಸಂಘರ್ಷಗಳಿಂದ ಅನೇಕರು ವಲಸೆ ಹೋಗಲು ಬಾಧ್ಯರಾಗುತ್ತಾರೆ ಎಂದು ಅವರು ಹೇಳಿದರು. “ಅವರನ್ನು ಹಿಂದಕ್ಕೆ ಕಳುಹಿಸಿ ಸಮಸ್ಯೆಯಿಂದ ಕೈತೊಳೆಯುವುದು ಕ್ರೈಸ್ತ ಮನೋಭಾವವಲ್ಲ, ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವದಿಂದ ಕಾಣಬೇಕು” ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು.

ಧರ್ಮ ಸಭೆಯ ಒಳಗಿನ ಭಿನ್ನಾಭಿಪ್ರಾಯಗಳ ಕುರಿತು ಮಾತನಾಡಿದ ಅವರು, ಸಂತ Xನೇ ಪಿಯಸ್  ಸಂಘದ ಬಿಷಪ್ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿದರು. ಧರ್ಮ ಸಭೆಯೊಂದಿಗೆ ಪೂರ್ಣ ಐಕ್ಯತೆಯಲ್ಲಿ ಉಳಿಯುವಂತೆ ಮತ್ತೊಮ್ಮೆ ಮನವಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದರು. ಕ್ರೈಸ್ತರ ನಡುವಿನ ವಿಭಜನೆ ಸದಾ ನೋವಿನ ಸಂಗತಿಯಾಗಿದ್ದು, ದ್ವಿತೀಯ ವ್ಯಾಟಿಕನ್ ಮಹಾಸಭೆಯ ಕೆಲವು ಮೂಲಭೂತ ಬೋಧನೆಗಳನ್ನು ತಿರಸ್ಕರಿಸುವುದು ದುಃಖಕರ ಬೆಳವಣಿಗೆ ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು.

ಕೊನೆಯಲ್ಲಿ, ತಮ್ಮ ಬೇಸಿಗೆ ರಜೆಯ ಬಗ್ಗೆ ಮಾತನಾಡಿದ ಜಗದ್ಗುರು ಲಿಯೋರವರು, ಸ್ವಲ್ಪ ವಿಶ್ರಾಂತಿ, ಹೆಚ್ಚಿನ ಓದು, ಚಿಂತನೆ ಮತ್ತು ಮುಂದಿನ ಕಾರ್ಯಗಳ ಸಿದ್ಧತೆಯಲ್ಲಿ ಸಮಯ ಕಳೆಯುವುದಾಗಿ ಹೇಳಿದರು. ಮೆಕ್ಸಿಕೋ ಮತ್ತು ಪೆರು ದೇಶಗಳಿಗೆ ಭವಿಷ್ಯದಲ್ಲಿ ಭೇಟಿ ನೀಡುವ ಸಾಧ್ಯತೆಯ ಕುರಿತು ಕೇಳಿದಾಗ, ನಗುತ್ತಾ “ನೋಡೋಣ” ಎಂದು ಉತ್ತರಿಸಿದರು.

16 ಜೂನ್ 2026, 18:55