2026.06.01 Pope Leo XIV's monthly prayer intention for June is for 'the values of sports'  Courtesy of the Pope's Worldwide Prayer Network

ಜಗದ್ಗುರುಗಳ ಜೂನ್ ತಿಂಗಳ ಪ್ರಾರ್ಥನಾ ಉದ್ದೇಶ: ‘ಕ್ರೀಡೆಯ ಮೌಲ್ಯಗಳಿಗಾಗಿ’

ಜೂನ್ ತಿಂಗಳಿಗಾಗಿ ತಮ್ಮ ಪ್ರಾರ್ಥನಾ ಸಂಕಲ್ಪವನ್ನು ಪ್ರಕಟಿಸಿರುವ ಜಗದ್ಗುರು XIVನೇ ಲಿಯೋರವರು, ‘ಕ್ರೀಡೆಯ ಮೌಲ್ಯಗಳಿಗಾಗಿ’ ಪ್ರಾರ್ಥಿಸಲು ಕಥೊಲಿಕರನ್ನು ಆಹ್ವಾನಿಸಿದ್ದಾರೆ. ಕ್ರೀಡೆಯು ಶಾಂತಿ, ಸಹೋದರತ್ವ ಮತ್ತು ಐಕ್ಯತೆಯನ್ನು ಉತ್ತೇಜಿಸುವ ಸಾಧನವಾಗಲಿ ಎಂದು ಅವರು ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

 

ಜಗದ್ಗುರು XIVನೇ ಲಿಯೋರವರು ವಿಶ್ವದಾದ್ಯಂತದ ಕಥೊಲಿಕರನ್ನು ಈ ಜೂನ್ ತಿಂಗಳಲ್ಲಿ ತಮ್ಮೊಂದಿಗೆ ಸೇರಿ ಕ್ರೀಡೆಯ ಮೌಲ್ಯಗಳಿಗಾಗಿ ಪ್ರಾರ್ಥಿಸಲು ಆಹ್ವಾನಿಸಿದ್ದಾರೆ.

ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣ ಸಿದ್ಧಪಡಿಸುವ ಮಾಸಿಕ “ಜಗದ್ಗರುಗಳೊಂದಿಗೆ ಪ್ರಾರ್ಥಿಸೋಣ” ವೀಡಿಯೊವನ್ನು ಅವರು ಗುರುವಾರ ಬಿಡುಗಡೆ ಮಾಡಿದರು.

ತಮ್ಮ ಪ್ರಾರ್ಥನೆಯಲ್ಲಿ ಜಗದ್ಗುರುಗಳ ಕ್ರೀಡಾ ಕ್ಷೇತ್ರದ ಮಹತ್ತರ ಪ್ರಯೋಜನಗಳನ್ನು ಗುರುತಿಸುವುದರ ಜೊತೆಗೆ ಅದರಲ್ಲಿರುವ ಸವಾಲುಗಳನ್ನೂ ಉಲ್ಲೇಖಿಸಿ, ಕ್ರೀಡಾಕೂಟಗಳು ಶಾಂತಿ ಮತ್ತು ಸಹೋದರತ್ವವನ್ನು ಉತ್ತೇಜಿಸುವ ಸಾಧನಗಳಾಗಲೆಂದು ಪ್ರಾರ್ಥಿಸಿದರು.

ಸಹೋದರತ್ವ, ಶಾಂತಿ ಮತ್ತು ಭೇಟಿಯ ಶಾಲೆ

“ತಮ್ಮ ದೇಹದ ಸಾಮರ್ಥ್ಯವನ್ನು ಬಳಸಿಕೊಂಡು ದೇವರನ್ನು ಮಹಿಮೆಪಡಿಸುವವರಿಗಾಗಿ, ಕ್ರೀಡಾಂಗಣದಲ್ಲಿ ಹುಟ್ಟುವ ಸ್ನೇಹಗಳಿಗಾಗಿ ಹಾಗೂ ತಂಡವಾಗಿ ಆಡುವ ಸಂತೋಷಕ್ಕಾಗಿ ಕ್ರೀಡೆ ಎಂಬ ವರವನ್ನು ನೀಡಿದ ಪ್ರಭುವಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಜಗದ್ಗುರುಗಳು ಹೇಳಿದರು.

“ಜೀವನದಲ್ಲಿ ಹೇಗೋ ಆಟದಲ್ಲಿಯೂ ಯಾರೂ ಒಬ್ಬರೇ ರಕ್ಷಿಸಲ್ಪಡುವುದಿಲ್ಲ” ಎಂಬುದನ್ನು ಪ್ರಭು ನಮಗೆ ಬೋಧಿಸುತ್ತಾರೆ ಎಂದು ನೆನಪಿಸಿಕೊಂಡ ಜಗದ್ಗುರು XIVನೇ ಲಿಯೋರವರು, “ಬೆಳೆಯಲು, ಗೌರವವನ್ನು ಕಲಿಯಲು, ನಮ್ಮ ಮಿತಿಗಳನ್ನು ಮೀರಿ ಸಾಗಲು ಹಾಗೂ ನಾವು ಸಾಧಿಸುವ ವಿಜಯಗಳನ್ನು ಒಟ್ಟಾಗಿ ಸಂಭ್ರಮಿಸಲು ನಮಗೆ ಇತರರ ಅಗತ್ಯವಿದೆ” ಎಂದು ಒತ್ತಿಹೇಳಿದರು.

ಆದ್ದರಿಂದ ಕ್ರೀಡೆಯು “ಖಾಲಿ ಪೈಪೋಟಿಯ ಸ್ಥಳವಾಗದೆ, ಸಹೋದರತ್ವದ ಶಾಲೆಯಾಗಲಿ ಹೊರಗಿಡುವಿಕೆಯ ಸ್ಥಳವಾಗದೆ, ಭೇಟಿಯ ವೇದಿಕೆಯಾಗಲಿ, ಹಿಂಸೆಯ ಮಾರ್ಗವಾಗದೆ, ಶಾಂತಿಯ ಪಥವಾಗಲಿ” ಎಂದು ಅವರು ಪ್ರಾರ್ಥಿಸಿದರು.

ಜನರನ್ನು ಒಗ್ಗೂಡಿಸಿ, ಕ್ರಿಸ್ತನಿಗೆ ಹತ್ತಿರವಾಗಿಸುವ ಕ್ರೀಡೆ

“ಆಡುವವರು, ತರಬೇತಿ ನೀಡುವವರು ಅಥವಾ ಪ್ರೋತ್ಸಾಹಿಸುವವರು ಎಲ್ಲರೂ ಕ್ರೀಡೆಯಲ್ಲಿ ಸಂಸ್ಕೃತಿಗಳನ್ನು ಒಗ್ಗೂಡಿಸುವ, ಜನರನ್ನು ಒಂದಾಗಿಸುವ ಹಾಗೂ ಗೌರವ, ಐಕಮತ್ಯ ಮತ್ತು ವೈಯಕ್ತಿಕ ಬೆಳವಣಿಗೆಯ ಬೀಜಗಳನ್ನು ಬಿತ್ತುವ ಸಾರ್ವತ್ರಿಕ ಭಾಷೆಯನ್ನು ಕಂಡುಕೊಳ್ಳಲಿ” ಎಂದು ಜಗದ್ಗುರುಗಳು ಹೇಳಿದರು.

ಅವರು ಮತ್ತಷ್ಟು ಪ್ರಾರ್ಥಿಸುತ್ತಾ, ಪ್ರತಿಯೊಂದು ಕ್ರೀಡೆಯೂ “ನಿಮ್ಮೊಂದಿಗೆ ಬದುಕುವ ಜೀವನದ ಒಂದು ಉಪಮೆಯಾಗಲಿ ಸಂತೋಷ ಮತ್ತು ಪರಿಶ್ರಮದೊಂದಿಗೆ ಕಾರ್ಯನಿರ್ವಹಿಸುವ, ಸೋಲಿನಲ್ಲಿ ವಿನಮ್ರತೆಯಿಂದ ಬದುಕುವ ಹಾಗೂ ನಿನ್ನ ಪುನರುತ್ಥಾನದಲ್ಲಿ ನೀನು ನೀಡುವ ವಿಜಯಕ್ಕಾಗಿ ಕೃತಜ್ಞತೆಯಿಂದಿರುವ ಜೀವನದ ಸಂಕೇತವಾಗಲಿ” ಎಂದರು.

“ನಿಮ್ಮ ಆತ್ಮವು ನಮ್ಮಲ್ಲಿ ಎಂದಿಗೂ ಕೊರತೆಯಾಗದಿರಲಿ ಇತಿಹಾಸದಲ್ಲಿ ಐಕ್ಯತೆ ಮತ್ತು ಸಹೋದರತ್ವವನ್ನು ನಿರ್ಮಿಸಲು ನಿನ್ನೊಂದಿಗೆ ಒಂದೇ ತಂಡವಾಗಿ ನಮ್ಮನ್ನು ಒಗ್ಗೂಡಿಸಲಿ” ಎಂದು ಜಗದ್ಗುರುಗಳು ತಮ್ಮ ಪ್ರಾರ್ಥನೆಯನ್ನು ಮುಕ್ತಾಯಗೊಳಿಸಿದರು.

ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣ

1844ರಲ್ಲಿ ‘ಪ್ರೇಷಿತರ ಪ್ರಾರ್ಥನಾ ಸಂಘ’ ಎಂಬ ಹೆಸರಿನಲ್ಲಿ ಸ್ಥಾಪನೆಯಾದ ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣವು, ಯೇಸುಸಭೆಯವರಿಗೆ ವಹಿಸಲ್ಪಟ್ಟಿರುವ ಒಂದು ಪಾಂಟಿಫಿಕಲ್ ಕಾರ್ಯವಾಗಿದೆ.

2020ರ ಡಿಸೆಂಬರ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಈ ಪಾಂಟಿಫಿಕಲ್ ಕಾರ್ಯವನ್ನು ವ್ಯಾಟಿಕನ್ ಪ್ರತಿಷ್ಠಾನವಾಗಿ ಸ್ಥಾಪಿಸಿದರು ಹಾಗೂ 2024ರ ಜುಲೈನಲ್ಲಿ ಅದರ ಅಂತಿಮ ನಿಯಮಾವಳಿಗಳನ್ನು ಅನುಮೋದಿಸಿದರು.

ಈ ಜಾಲತಾಣವು 92ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇವರ ಧ್ಯೇಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಪ್ರತಿದಿನ ಬದುಕಲು ಪ್ರಯತ್ನಿಸುವ 2.2 ಕೋಟಿಗೂ ಹೆಚ್ಚು ಜನರ ಆಧ್ಯಾತ್ಮಿಕ ಸಮುದಾಯವನ್ನು ರೂಪಿಸಿದೆ.

ಇದರ ಧ್ಯೇಯದ ಕೇಂದ್ರಬಿಂದುವಾಗಿರುವುದು ಜಗದ್ಗುರುಗಳ ಮಾಸಿಕ ಪ್ರಾರ್ಥನಾ ಸಂಕಲ್ಪಗಳು. ಇವು ಮಾನವಕುಲ ಎದುರಿಸುತ್ತಿರುವ ತುರ್ತು ಸವಾಲುಗಳು ಹಾಗೂ ಧರ್ಮ ಸಭೆಯ ಧ್ಯೇಯದತ್ತ ಸದಸ್ಯರ ಗಮನವನ್ನು ಕೇಂದ್ರೀಕರಿಸಲು ಆಹ್ವಾನಿಸುತ್ತವೆ.

02 ಜೂನ್ 2026, 16:28