ITALY-VATICAN-POPE-VISIT

ಪಾವಿಯಾದಲ್ಲಿ ಜಗದ್ಗುರುಗಳು: ಸಂತ ಆಗಸ್ಟಿನ್ ನಮಗೆ ‘ಅಂತರಂಗದತ್ತ ತಿರುಗುವ ಅಗತ್ಯವನ್ನು’ ತೋರಿಸುತ್ತಾರೆ.

ಸಂತ ಆಗಸ್ಟಿನ್ ಸಮಾಧಿಗೊಳಗಾಗಿರುವ ದೇವಾಲಯಕ್ಕೆ ಜಗದ್ಗುರು ಲಿಯೋ ರವರು ಭೇಟಿ ನೀಡಿ, ನಿರಾಶಾವಾದ, ಅಂತರಂಗದ ಜೀವನ ಮತ್ತು “ಕಾಲದ ಸಂಕೇತಗಳನ್ನು ಓದುವ” ಅಗತ್ಯದ ಕುರಿತು ಚಿಂತನೆ ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಉತ್ತರ ಇಟಲಿಯ ಪಾವಿಯಾ ನಗರಕ್ಕೆ ತಮ್ಮ ಪ್ರೇಷಿತರ ಭೇಟಿಯನ್ನು ಆರಂಭಿಸಿ, ಸಂತ ಆಗಸ್ಟಿನ್ ರವರ ಸಮಾಧಿ ಇರುವ ಎಂಟನೇ ಶತಮಾನದ ಸಾನ್ ಪಿಯೆಟ್ರೊ ಇನ್ ಚಿಯೆಲ್ ದ್'ಓರೊ ಬಾಸಿಲಿಕಾಗೆ ಭೇಟಿ ನೀಡಿದರು. ಅಲ್ಲಿ ಪಾವಿಯಾ ಮತ್ತು ಲೊಂಬಾರ್ಡಿ ಪ್ರದೇಶದ ಭಕ್ತರು, ಧರ್ಮಗುರುಗಳು, ಧಾರ್ಮಿಕರು, ಗುರು ವಿದ್ಯಾರ್ಥಿ ಮಂದಿರದ ವಿದ್ಯಾರ್ಥಿಗಳು ಹಾಗೂ ಬಿಷಪ್‌ಗಳು ಸೇರಿದ್ದರು. ಸಂತ ಆಗಸ್ಟಿನ್ ರವರ ಅವಶೇಷಗಳಿಗೆ ಗೌರವ ಸಲ್ಲಿಸಿದ ಬಳಿಕ ಜಗದ್ಗುರುಗಳು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಪಾವಿಯಾದ ಧರ್ಮ ಸಭೆಯು ಪುರಾತನ ಪರಂಪರೆಯನ್ನು ಹೊಂದಿದ್ದರೂ, ಇಂದಿನ ಕಾಲದ ಸಂಕೇತಗಳನ್ನು ಸರಿಯಾಗಿ ಗ್ರಹಿಸಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಉಳಿಸಿಕೊಂಡಿದೆ ಎಂದು ಜಗದ್ಗುರುಗಳು ಹೇಳಿದರು. ಪ್ರಾಚೀನ ನಂಬಿಕೆಯ ಬೆಳಕಿನಲ್ಲಿ ವರ್ತಮಾನವನ್ನು ನೋಡುವವರು ವಾಸ್ತವತೆಯನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಸಮಸ್ಯೆಗಳ ನಡುವೆ ನಿರಾಶೆಗೆ ಒಳಗಾಗುವುದಿಲ್ಲ ಎಂದು ಅವರು ತಿಳಿಸಿದರು.

ಯೇಸು ಕ್ರಿಸ್ತನ ಉದಾಹರಣೆಯನ್ನು ಅನುಸರಿಸುವಂತೆ ಜಗದ್ಗುರುಗಳು ಕರೆ ನೀಡಿದರು. ಅನೇಕ ಕಷ್ಟಗಳು ಮತ್ತು ತಪ್ಪು ಅರ್ಥೈಸಿಕೆಗಳ ನಡುವೆಯೂ ಯೇಸು ಪಕ್ಷಿಗಳು ಮತ್ತು ಹೂವುಗಳಂತಹ ಸರಳ ಸೃಷ್ಟಿಗಳಲ್ಲಿಯೂ ದೇವರ ದೈವಿಕ ಯೋಜನೆಯನ್ನು ಕಂಡರು. ಅದೇ ರೀತಿಯಾಗಿ ನಾವೂ ಜೀವನದ ಸವಾಲುಗಳ ನಡುವೆ ದೇವರ ಕಾರ್ಯವನ್ನು ಗುರುತಿಸುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪಾವಿಯಾದ ಧರ್ಮ ಕೇಂದ್ರಗಳು ಅನೇಕ ಜವಾಬ್ದಾರಿಗಳು ಮತ್ತು ತುರ್ತು ಅಗತ್ಯಗಳನ್ನು ಎದುರಿಸುತ್ತಿವೆ ಎಂಬುದನ್ನು ಒಪ್ಪಿಕೊಂಡ ಜಗದ್ಗುರುಗಳು, ಎಲ್ಲಾ ಚಟುವಟಿಕೆಗಳ ಕೇಂದ್ರದಲ್ಲಿ ಕ್ರಿಸ್ತನನ್ನೇ ಇರಿಸಬೇಕೆಂದು ಒತ್ತಿಹೇಳಿದರು. ಕ್ರಿಸ್ತ ಎಂಬ ಮೂಲಸ್ತಂಭವಿಲ್ಲದೆ ಧರ್ಮ ಸಭೆಯ ಕಾರ್ಯಗಳು ಚದುರಿಹೋಗುವ ಮತ್ತು ಕೇವಲ ಮಾನವ ಪ್ರಯತ್ನಗಳ ಮೇಲೆ ಕೇಂದ್ರೀಕೃತವಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಈ ನವೀಕರಣದ ಪ್ರಕ್ರಿಯೆಯಲ್ಲಿ ಧರ್ಮ ಸಭೆಯ ಹಿಂದಿನ ಕೆಲವು ರಚನೆಗಳು ಮತ್ತು ಭದ್ರತೆಗಳನ್ನು ಬಿಟ್ಟುಕೊಡಬೇಕಾಗಬಹುದು ಎಂದು ಜಗದ್ಗುರುಗಳು ಒಪ್ಪಿಕೊಂಡರು. ಆದರೆ ಇತಿಹಾಸದ ಅಮೂಲ್ಯ ಪರಂಪರೆಗಳಾದ ಯುವಕರಿಗಾಗಿ ನಡೆಸುವ ‘ಒರಾಟೊರಿ’ ಕೇಂದ್ರಗಳಂತಹ ಉತ್ತಮ ಅಂಶಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಸಿನೋಡಾಲಿಟಿ ಎಂಬ ಹೊಸ ಧರ್ಮ ಸಭೆಯ ದೃಷ್ಟಿಕೋನವನ್ನು ಮುಂದುವರಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು.

ಕೊನೆಯಲ್ಲಿ, ಸಂತ ಆಗಸ್ಟಿನ್ ಇಂದಿನ ಜಗತ್ತಿಗೆ ಅತ್ಯಂತ ಪ್ರಸ್ತುತವಾದ ಸಂದೇಶವನ್ನು ನೀಡುತ್ತಾರೆ ಎಂದು ಜಗದ್ಗುರು ಲಿಯೋರವರು ಹೇಳಿದರು. “ನಿನ್ನ ಹೊರಗೆ ಹೋಗಬೇಡ, ನಿನ್ನೊಳಗೆ ಹಿಂದಿರುಗು. ಸತ್ಯವು ಮಾನವನ ಅಂತರಂಗದಲ್ಲೇ ವಾಸಿಸುತ್ತದೆ” ಎಂಬ ಆಗಸ್ಟಿನ್ ರವರ ಮಾತುಗಳನ್ನು ಉಲ್ಲೇಖಿಸಿದ ಅವರು, ಜೀವನದ ನಿಜವಾದ ಅರ್ಥವನ್ನು ಕಂಡುಕೊಳ್ಳಲು ಮತ್ತು ನಮ್ಮನ್ನು ನಾವು ಕಳೆದುಕೊಳ್ಳದಿರಲು ಪ್ರತಿಯೊಬ್ಬರೂ ತಮ್ಮ ಅಂತರಂಗದತ್ತ ತಿರುಗಬೇಕು ಎಂದು ಕರೆ ನೀಡಿದರು.

20 ಜೂನ್ 2026, 19:19