ಹುಡುಕಿ

ಜಗದ್ಗುರು ಲಿಯೋರವರು ಒಬ್ಬ ಯುವಕನನ್ನು ಅಪ್ಪಿಕೊಳ್ಳುತ್ತಾರೆ. ಜಗದ್ಗುರು ಲಿಯೋರವರು ಒಬ್ಬ ಯುವಕನನ್ನು ಅಪ್ಪಿಕೊಳ್ಳುತ್ತಾರೆ. 

ಬಡವರ ವಿಶ್ವ ದಿನದ ಸಂದೇಶದಲ್ಲಿ ಜಗದ್ಗುರುಗಳು: “ಪ್ರಭು ಬಡವರ ಶರಣಾಗತಿ ಮತ್ತು ಆಶ್ರಯಸ್ಥಾನ.”

10ನೇ ಬಡವರ ವಿಶ್ವ ದಿನಾಚರಣೆಯ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು “ದೇವರು ಬಡವರ ಆಶ್ರಯಸ್ಥಾನ” ಎಂಬ ವಿಷಯದ ಕುರಿತು ಚಿಂತನೆ ನಡೆಸುತ್ತಾ, ಬಡವರಿಗೆ ಧರ್ಮ ಸಭೆಯ ಮತ್ತು ಸಮಾಜದಲ್ಲಿ ಸಲ್ಲಬೇಕಾದ ಕೇಂದ್ರ ಸ್ಥಾನವನ್ನು ಪುನಃ ಅರಿತುಕೊಳ್ಳುವಂತೆ ಕ್ರೈಸ್ತರನ್ನು ಆಹ್ವಾನಿಸುತ್ತಾರೆ. ಹಾಗೆಯೇ ನ್ಯಾಯ, ಐಕ್ಯತೆ ಮತ್ತು ಮಾನವ ಘನತೆಯ ಪರವಾಗಿ ನಮ್ಮ ಬದ್ಧತೆಯನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಅವರು ಕರೆ ನೀಡುತ್ತಾರೆ.

ವ್ಯಾಟಿಕನ್ ವರದಿ

2026ರ ನವೆಂಬರ್ 15ರಂದು ಆಚರಿಸಲ್ಪಡುವ 10ನೇ ಬಡವರ ವಿಶ್ವ ದಿನಾಚರಣೆಯ ಸಂದೇಶವನ್ನು ಜಗದ್ಗುರು XIVನೇ ಲಿಯೋರವರು ಪ್ರಕಟಿಸಿದ್ದಾರೆ.

“ಪ್ರಭು ಬಡವರ ಆಶ್ರಯಸ್ಥಾನ” (ಕೀರ್ತನೆ 14) ಎಂಬ ವಾಕ್ಯದ ಕುರಿತು ಚಿಂತನೆ ನಡೆಸುತ್ತಾ, ಈ ಕೀರ್ತನೆ ಜೆರೂಸಲೇಮಿನ ದೇವಾಲಯದ ವಿನಾಶದಂತಹ ಅತ್ಯಂತ ದುಃಖಕರ ಕಾಲಘಟ್ಟದಲ್ಲಿ ರಚಿಸಲ್ಪಟ್ಟಿತೆಂದು ಜಗದ್ಗುರುಗಳು ನೆನಪಿಸುತ್ತಾರೆ. ಆ ಸಂದರ್ಭದಲ್ಲಿ ಜನರು “ದೇವರ ಸಾನ್ನಿಧ್ಯದಿಂದ ವಂಚಿತರಾದಂತೆ ಅನುಭವಿಸಿದರು ಮತ್ತು ಹಿಂದೆಂದೂ ಕಂಡಿರದ ಭೌತಿಕ ಹಾಗೂ ನೈತಿಕ ದುಃಖವನ್ನು ಅನುಭವಿಸಿದರು” ಎಂದು ಅವರು ಹೇಳುತ್ತಾರೆ.

ಭಾನುವಾರ ಪ್ರಕಟಗೊಂಡು, ಜೂನ್ 13ರ ಪಾದುವಾದ ಸಂತ ಅಂತೋನಿಯವರ ಹಬ್ಬದ ದಿನಾಂಕವನ್ನು ಹೊಂದಿರುವ ಈ ಸಂದೇಶದಲ್ಲಿ, ಕೀರ್ತನೆ 14 ಇಂದಿಗೂ ಪ್ರತಿಯೊಂದು ಪೀಳಿಗೆಗೂ ಮಾತಾಡುತ್ತಲೇ ಇದೆ ಎಂದು ಜಗದ್ಗುರುಗಳು ಗಮನಿಸುತ್ತಾರೆ.

ಈ ಕೀರ್ತನೆಯ ಆರಂಭಿಕ ವಚನಗಳು ವಿವೇಕದಿಂದ ಬದುಕುವವರಿಗೂ, “ತಮ್ಮನ್ನು ಮೀರಿದ ಯಾವುದೂ ಇಲ್ಲವೆಂಬಂತೆ ಬದುಕುವವರಿಗೂ” ನಡುವಿನ ವ್ಯತ್ಯಾಸವನ್ನು ತೋರಿಸುತ್ತವೆ ಎಂದು ಅವರು ಹೇಳುತ್ತಾರೆ.

“ದುರದೃಷ್ಟವಶಾತ್,” ಎಂದು ಜಗದ್ಗುರುಗಳು ಬರೆಯುತ್ತಾರೆ, “ಇಂದಿಗೂ ಅಹಂಕಾರಪೂರಿತ ಭ್ರಷ್ಟಾಚಾರದಿಂದ ಉಂಟಾಗುವ ಸಾಮಾಜಿಕ ಅನ್ಯಾಯ ವ್ಯಾಪಕವಾಗಿದೆ, ಅದು ಎಷ್ಟು ಖಂಡನೀಯವೋ ಅಷ್ಟೇ ತಾರತಮ್ಯಪೂರ್ಣವೂ ಆಗಿದೆ.”

ಬಡವರ ಮೊರೆಯನ್ನು ಮೌನಗೊಳಿಸಬೇಡಿ

ಈ ಅನ್ಯಾಯದ ಪರಿಣಾಮಗಳು ಮೊದಲಿಗೆ ಬಡವರ ಮೇಲೆಯೇ ಬೀಳುತ್ತವೆ ಎಂದು ಜಗದ್ಗುರುಗಳು ಸೂಚಿಸುತ್ತಾರೆ. ಅನೇಕ ಸಮಾಜಗಳಲ್ಲಿ ಬಡವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ.

“ದೇವರ ಅನುಪಸ್ಥಿತಿಯು ಜನರನ್ನು ಪರಸ್ಪರ ಗೌರವದ ಸಂಬಂಧದಲ್ಲಿ ಒಂದಾಗಿಸುವುದಿಲ್ಲ,” ಎಂದು ಅವರು ಹೇಳುತ್ತಾರೆ. “ಬದಲಾಗಿ, ಅದು ಒಬ್ಬರನ್ನು ಮತ್ತೊಬ್ಬರಿಗಿಂತ ಮೇಲಿಟ್ಟು ಪ್ರಾಬಲ್ಯ ಮತ್ತು ದಬ್ಬಾಳಿಕೆಯ ಸಂಬಂಧವನ್ನು ನಿರ್ಮಿಸುತ್ತದೆ.”

ಬಡವರ ಮೊರೆಯನ್ನು “ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಿರುವ ಅನೇಕ ತಂತ್ರಗಳ ಮೂಲಕ” ಮೌನಗೊಳಿಸಲಾಗುತ್ತಿದೆ ಎಂದು ಜಗದ್ಗುರುಗಳು ಎಚ್ಚರಿಸುತ್ತಾರೆ. ಡಿಜಿಟಲ್ ಜಗತ್ತೂ ಪೂರ್ವಾಗ್ರಹಗಳನ್ನು ಹೆಚ್ಚಿಸಿ ನಿರ್ಲಕ್ಷ್ಯ ಮನೋಭಾವವನ್ನು ಬಲಪಡಿಸಬಲ್ಲದು ಎಂದು ಅವರು ಹೇಳುತ್ತಾರೆ.

“ಬಡವರಿಗೆ ದೇವರನ್ನು ಕೂಗಿಕೊಳ್ಳುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯಿಲ್ಲ,” ಎಂದು ಅವರು ಬರೆಯುತ್ತಾರೆ. “ದೇವರು ನಂಬಿಗಸ್ತನೂ ಅಪಾರ ಕರುಣೆಯುಳ್ಳವನೂ ಆಗಿರುವುದರಿಂದ, ತಮ್ಮ ಮೊರೆ ಕೇಳಲ್ಪಡುತ್ತದೆ ಎಂಬ ದೃಢ ವಿಶ್ವಾಸದಿಂದ ಅವರು ತಮ್ಮನ್ನು ಆತನಿಗೆ ಒಪ್ಪಿಸುತ್ತಾರೆ.”

ಬಡವರು ಅಗತ್ಯವಾದುದನ್ನು ಹೆಚ್ಚು ಸ್ಪಷ್ಟವಾಗಿ ಗುರುತಿಸುತ್ತಾರೆ

ತಮ್ಮ ಸಂದೇಶದಲ್ಲಿ, “ಬಡವರು ಅಗತ್ಯವಾದುದರ ಮೇಲೆಯೇ ಬದುಕುವುದರಿಂದ, ಜೀವನದಲ್ಲಿ ನಿಜವಾಗಿ ಅಗತ್ಯವಾದುದನ್ನು ಇತರರಿಗಿಂತ ಹೆಚ್ಚು ಸ್ಪಷ್ಟವಾಗಿ ಗುರುತಿಸಲು ಸಮರ್ಥರಾಗಿರುತ್ತಾರೆ” ಎಂದು ಜಗದ್ಗುರುಗಳು ಹೇಳುತ್ತಾರೆ.

ಆ ಕಾರಣದಿಂದಲೇ ಅವರು ದೇವರನ್ನು ತಮ್ಮ ಆಶ್ರಯವೆಂದು ಗುರುತಿಸಿ, ಆತನ ನ್ಯಾಯದಲ್ಲಿ ತಮ್ಮ ನಿರೀಕ್ಷೆಯನ್ನು ಇಡಲು ವಿಶೇಷವಾಗಿ ಸಮರ್ಥರಾಗಿರುತ್ತಾರೆ ಎಂದು ಅವರು ತಿಳಿಸುತ್ತಾರೆ.

ಇಂದಿನ ಬಡವರು – ಮರೆತುಹೋಗಿರುವವರು ಮತ್ತು ಅಂಚಿಗೆ ತಳ್ಳಲ್ಪಟ್ಟವರು

ಇಂದಿನ ಬಡತನದ ಕುರಿತು ಚಿಂತನೆ ನಡೆಸುತ್ತಾ, “ನಮ್ಮ ಕಾಲದ ಬಡವರು ಮರೆತುಹೋಗಿರುವವರು ಮತ್ತು ಸಮಾಜದ ಅಂಚಿಗೆ ತಳ್ಳಲ್ಪಟ್ಟವರು, ಅವರು ಕೇವಲ ಅನ್ನವನ್ನಷ್ಟೇ ಅಲ್ಲ, ತಮ್ಮ ಧ್ವನಿಯನ್ನೂ ತಮ್ಮ ಗುರುತನ್ನೂ ಕಳೆದುಕೊಂಡಿದ್ದಾರೆ” ಎಂದು ಜಗದ್ಗುರುಗಳು ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ, ಬಡವರು ಕ್ರಿಸ್ತನನ್ನು ಎದುರುಗೊಳ್ಳಲಿ ಎಂದು ಅವರು ಪ್ರಾರ್ಥಿಸುತ್ತಾರೆ. ವಿಶೇಷವಾಗಿ ಕ್ರೈಸ್ತರ ಮೂಲಕ ಮತ್ತು ಧಮ೯ಸಭೆಯ ಮೂಲಕ ಅವರು ಕ್ರಿಸ್ತನನ್ನು ಕಂಡುಕೊಳ್ಳಬೇಕು ಎಂದು ಆಶಿಸುತ್ತಾರೆ.

“ಅಲ್ಲಿ ಯೇಸುವೇ ಅನ್ನವನ್ನೂ ಸ್ನೇಹವನ್ನೂ ನೀಡುತ್ತಾನೆ, ಆತನು ಬೆಳಕನ್ನು ತಂದು ಭರವಸೆಯ ಕ್ಷಿತಿಜವನ್ನು ತೆರೆದಿಡುತ್ತಾನೆ, ಪ್ರತಿಯೊಬ್ಬರನ್ನೂ ಹೆಸರಿನಿಂದ ಕರೆಯುತ್ತಾನೆ ಮತ್ತು ಎಲ್ಲರಿಗೂ ಘನತೆಯನ್ನು ಮರಳಿ ನೀಡುತ್ತಾನೆ” ಎಂದು ಜಗದ್ಗುರುಗಳು ಬರೆಯುತ್ತಾರೆ.

ಬಡವರಿಗೆ ಆಶ್ರಯವಾಗಲು ಕ್ರೈಸ್ತರಿಗೆ ಕರೆ

ಕ್ರೈಸ್ತರು ಕೇವಲ ದೇವರಲ್ಲಿ ಆಶ್ರಯವನ್ನು ಹುಡುಕುವುದಷ್ಟೇ ಅಲ್ಲ, “ಬಡವರಿಗೆ ಆಶ್ರಯವಾಗುವಂತೆ” ಕೂಡ ಕರೆಯಲ್ಪಟ್ಟಿದ್ದಾರೆ ಎಂದು  ಜಗದ್ಗುರುಗಳು ಒತ್ತಿಹೇಳುತ್ತಾರೆ.

“ಇಂದು ಅನೇಕರು ನಮ್ಮ ಬಾಗಿಲಿನ ಬಳಿಯಲ್ಲಿ ನಿಂತಿದ್ದರೂ, ತಮ್ಮದೇ ಗೋಡೆಗಳೊಳಗೆ ಮುಚ್ಚಿಕೊಂಡಿರುವವರಿಗೆ ಅವರು ಕಾಣಿಸದೆ ಉಳಿದಿದ್ದಾರೆ. ಇಂತಹವರ ಬಗ್ಗೆ ಕ್ರೈಸ್ತ ಸಮುದಾಯ ನಿರ್ಲಕ್ಷ್ಯ ತೋರಲಾರದು” ಎಂದು ಅವರು ಹೇಳುತ್ತಾರೆ.

ನಮ್ಮ ಆದ್ಯತೆಗಳನ್ನು ಪರಿಶೀಲಿಸೋಣ

ಶ್ರೀಮಂತನು ಮತ್ತು ಲಾಜರನ ಉಪಮೆಯ ಕುರಿತು ಸಂತ ಆಗಸ್ಟೀನ್ ನೀಡಿದ ವ್ಯಾಖ್ಯಾನವನ್ನು ನೆನಪಿಸಿಕೊಳ್ಳುತ್ತಾ, ಜಗದ್ಗುರು ಲಿಯೋರವರು ವಿಶ್ವಾಸಿಗಳನ್ನು ತಮ್ಮ ಜೀವನ ಮತ್ತು ಆದ್ಯತೆಗಳನ್ನು ಪರಿಶೀಲಿಸಿಕೊಳ್ಳುವಂತೆ ಆಹ್ವಾನಿಸುತ್ತಾರೆ.

ತಮ್ಮ ಪ್ರೇಷಿತರ ಉತ್ತೇಜನ ಪತ್ರಿಕೆ ಡಿಲೆಕ್ಸಿ ತೇ ಯನ್ನು ಉಲ್ಲೇಖಿಸಿ, “ದೇವರು ಬಡವರ ಕಡೆ ವಿಶೇಷ ಒಲವನ್ನು ತೋರಿಸುತ್ತಾನೆ” ಹಾಗೂ ಧರ್ಮ ಸಭೆಯು “ಧನ್ಯವಚನಗಳ ಧರ್ಮ ಸಭೆ ಆಗಿರಬೇಕು, ಸಣ್ಣವರನ್ನು ಸ್ವಾಗತಿಸಿ, ಬಡವರೊಂದಿಗೆ ಬಡತನದಲ್ಲಿ ನಡೆಯುವ ಧರ್ಮ ಸಭೆ ಆಗಿರಬೇಕು” ಎಂದು ಅವರು ಪುನರುಚ್ಚರಿಸುತ್ತಾರೆ.

ಬಡವರ ಮಾತುಗಳನ್ನು ಕೇಳುವ ಸಂತೋಷ

ತಮ್ಮ ಸಂದೇಶದ ಕೊನೆಯಲ್ಲಿ ಜಗದ್ಗುರುಗಳು ಹೀಗೆ ಬರೆಯುತ್ತಾರೆ:

“ಬಡವರ ಕುರಿತು ಕೇವಲ ಮಾತನಾಡುವುದಕ್ಕಿಂತ, ಅವರ ಸ್ಥಾನದಲ್ಲಿ ನಮ್ಮನ್ನು ನಾವೇ ಇರಿಸಿಕೊಂಡು, ಅವರ ಮಾತುಗಳನ್ನು ಆಲಿಸುವ ಮೂಲಕ ಇಂದಿಗೂ ಅದೇ ಸಂತೋಷವನ್ನು ಅನುಭವಿಸಲು ಸಾಧ್ಯವೆಂಬುದಕ್ಕೆ ನಾವು ಸಾಕ್ಷಿಯಾಗಲು ಬಯಸುತ್ತೇವೆ.”

ಕೊನೆಯಲ್ಲಿ, 10ನೇ ಬಡವರ ವಿಶ್ವ ದಿನಾಚರಣೆಯು ಕ್ರೈಸ್ತರಿಗೆ “ದೇವರಲ್ಲಿ ಆಶ್ರಯವನ್ನು ಹುಡುಕುವ ಮತ್ತು ನಮ್ಮ ಸಮುದಾಯಗಳಲ್ಲಿ ತಮ್ಮ ಮನೆತನದ ಅನುಭವವನ್ನು ಬಯಸುವ ಅನೇಕ ಸಹೋದರ-ಸಹೋದರಿಯರ ಮುಖಗಳನ್ನು ಪುನಃ ಕಂಡುಕೊಳ್ಳಲು” ಸಹಾಯ ಮಾಡಲಿ ಎಂಬ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸುತ್ತಾರೆ.

 

 

14 ಜೂನ್ 2026, 11:43