ಮಾನವ ಕಳ್ಳಸಾಗಣೆಗಾರರಿಗೆ ಜಗದ್ಗುರು ಲಿಯೋರವರ ಎಚ್ಚರಿಕೆ: ನಮ್ಮೆಲ್ಲರ ಹಂಚಿಕೆಯ ಜವಾಬ್ದಾರಿಯ ನೆನಪು.
ವ್ಯಾಟಿಕನ್ ವರದಿ
“ನಿಲ್ಲಿಸಿ! ಪಶ್ಚಾತ್ತಾಪಪಡಿರಿ!”
ಟೆನೆರಿಫ್‌ನ ಪ್ಲಾಸಾ ದೆಲ್ ಕ್ರಿಸ್ತೊ ದೆ ಲಾ ಲಗುನಾ ಚೌಕದಿಂದ ಜಗದ್ಗುರು XIVನೇ ಲಿಯೋರವರು ಮೊಳಗಿಸಿದ ಈ ಕರೆಯು, 1993ರ ಮೇ 9ರಂದು ಅಗ್ರಿಜೆಂಟೋದ ಟೆಂಪಲ್ಸ್ ಕಣಿವೆಯಲ್ಲಿ ನಡೆದ ಪವಿತ್ರ ಬಲಿಪೂಜೆಯ ಅಂತ್ಯದಲ್ಲಿ ಸಂತ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಮಾಫಿಯಾ ಸಂಘಟನೆಗೆ ನೀಡಿದ್ದ ಪ್ರಸಿದ್ಧ ಪಶ್ಚಾತ್ತಾಪದ ಕರೆಯನ್ನು ನೆನಪಿಗೆ ತರುತ್ತದೆ. ಆಗ ಪೋಲಿಷ್ ಪೋಪ್ ಕೋಸಾ ನೋಸ್ತ್ರಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದರು, ಇಂದು ಅವರ ಮೂರನೇ ಉತ್ತರಾಧಿಕಾರಿಯಾದ ಜಗದ್ಗುರು XIVನೇ ಲಿಯೋರವರು, ಉತ್ತಮ ಭವಿಷ್ಯದ ಕನಸು ಹೊತ್ತು ಹೊರಟ ವಲಸಿಗರನ್ನು ಮೋಸಗೊಳಿಸಿ, ಗುಲಾಮರನ್ನಾಗಿ ಮಾಡಿ, ಶೋಷಣೆ ಮತ್ತು ಹಿಂಸೆಗೆ ಒಳಪಡಿಸುವ ಮಾನವ ಕಳ್ಳಸಾಗಣೆಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ಕೆಲವು ವಲಸಿಗರ ಸಾಕ್ಷ್ಯಗಳನ್ನು ಆಲಿಸಿದ ಬಳಿಕ, ಜಗದ್ಗುರು XIVನೇ ಲಿಯೋರವರು ತಮ್ಮ ಅತ್ಯಂತ ತೀಕ್ಷ್ಣವಾದ ಮನವಿಯನ್ನು ಪವಿತ್ರ ಗ್ರಂಥದ ಆಧಾರದ ಮೇಲೆ ರೂಪಿಸಿದರು. “ನಿಲ್ಲಿಸಿ! ಪಶ್ಚಾತ್ತಾಪಪಡಿರಿ!” ಎಂಬ ಅವರ ಕರೆ, ಮಾರ್ಕನ ಸುವಾರ್ತೆಯಲ್ಲಿ ಯೇಸು ಘೋಷಿಸಿದ ಮನಃಪರಿವರ್ತನೆಯ ಕರೆಯನ್ನು ಪ್ರತಿಧ್ವನಿಸುತ್ತದೆ. ಅದೇ ರೀತಿ, “ಈ ಸಹೋದರ-ಸಹೋದರಿಯರ ಕಣ್ಣೀರು ಮತ್ತು ರಕ್ತವು ದೇವರ ಮುಂದೆ ಮೊರೆಯಿಡುತ್ತಿದೆ,ಅವರ ದುಃಖವು ಆತನಿಗೆ ತಲುಪುತ್ತಿದೆ” ಎಂಬ ಮಾತುಗಳು, ಆದಿಕಾಂಡದಲ್ಲಿ ಕಾಯಿನನು ಅಬೆಲನನ್ನು ಕೊಂದ ನಂತರ ದೇವರು ನೀಡಿದ ಪ್ರತಿಕ್ರಿಯೆಯನ್ನು ಹಾಗೂ ವಿಮೋಚನಕಾಂಡದಲ್ಲಿ ತನ್ನ ಜನರ ನೋವಿನ ಕೂಗನ್ನು ದೇವರು ಆಲಿಸಿದ ಘಟನೆಯನ್ನು ನೆನಪಿಸುತ್ತವೆ.
ಸ್ಪೇನಿನ ಪ್ರವಾಸದ ಅಂತಿಮ ಎರಡು ದಿನಗಳಲ್ಲಿ ಗ್ರಾನ್ ಕನಾರಿಯಾ ಮತ್ತು ಟೆನೆರಿಫ್‌ಗೆ ಭೇಟಿ ನೀಡಿದ ಜಗದ್ಗುರು ಲಿಯೋರವರು, ಜಗದ್ಗುರು ಫ್ರಾನ್ಸಿಸ್ ರವರು ಬಹುಕಾಲದಿಂದ ಮಾಡಲು ಬಯಸಿದ್ದ ಈ ಭೇಟಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು, ಬಡವರಿಂದ ಕಸಿದುಕೊಂಡ ಹಣವು ಶಾಂತಿ, ಗೌರವ ಅಥವಾ ಭವಿಷ್ಯವನ್ನು ನೀಡುವುದಿಲ್ಲ ಎಂದು ಎಚ್ಚರಿಸಿದರು. ಮಾನವ ಕಳ್ಳಸಾಗಣೆಗಾರರನ್ನು ಉದ್ದೇಶಿಸಿ, ಸಂತ ಪೌಲನ ಎರಡನೇ ಕೊರಿಂಥದವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ಅವರು, “ಕಳೆದುಹೋದ ಪ್ರತಿಯೊಂದು ಜೀವಕ್ಕಾಗಿ, ಮೋಸಹೋದ ಪ್ರತಿಯೊಂದು ಕುಟುಂಬಕ್ಕಾಗಿ, ಶೋಷಣೆಗೆ ಒಳಗಾದ ಪ್ರತಿಯೊಂದು ದೇಹಕ್ಕಾಗಿ, ಬೆದರಿಕೆಗೆ ಒಳಗಾದ ಪ್ರತಿಯೊಂದು ಮಹಿಳೆಗಾಗಿ ಮತ್ತು ದುರುಪಯೋಗಕ್ಕೊಳಗಾದ ಪ್ರತಿಯೊಂದು ಕಾರ್ಮಿಕನಿಗಾಗಿ ನೀವು ದೈವಿಕ ನ್ಯಾಯದ ಮುಂದೆ ಹಾಜರಾಗಬೇಕಾಗುತ್ತದೆ” ಎಂದು ಹೇಳಿದರು.
ಅದೇ ವೇಳೆ, ಮಹಿಳೆಯರು, ಮಕ್ಕಳು ಮತ್ತು ಪುರುಷರ ದುರ್ಬಲತೆಯನ್ನು ದುರುಪಯೋಗಪಡಿಸಿಕೊಳ್ಳುವ ಅತ್ಯಂತ ಕಠಿಣ ಪಾಪಿಗಳಿಗೂ ದೇವರ ಕರುಣೆ ಲಭ್ಯವಿದೆ ಎಂದು ಅವರು ನೆನಪಿಸಿದರು. ಆದರೆ ಅದು ಪ್ರವಾದಿ ಎಜೆಕಿಯೇಲನ ಬೋಧನೆಯಂತೆ “ಸತ್ಯ, ನ್ಯಾಯ ಮತ್ತು ಮನಃಪರಿವರ್ತನೆಯ ಕಿರಿದಾದ ಬಾಗಿಲಿನ ಮೂಲಕ” ಮಾತ್ರ ಸಾಧ್ಯವೆಂದು ಹೇಳಿದರು. ಶೋಷಣೆಗೆ ಒಳಪಡಿಸಿರುವವರನ್ನು ಬಿಡುಗಡೆ ಮಾಡಿ, ಕಸಿದುಕೊಂಡದ್ದನ್ನು ಹಿಂದಿರುಗಿಸಿ, ತಡವಾಗುವ ಮೊದಲು ಸಮನ್ವಯವನ್ನು ಹುಡುಕುವಂತೆ ಅವರು ಕರೆ ನೀಡಿದರು.
ಮಾನವ ಕಳ್ಳಸಾಗಣೆಗಾರರ ಮನಃಪರಿವರ್ತನೆಗಾಗಿ ಮಾಡಿದ ಈ ಪ್ರವಾದಿತ್ವದ ಕರೆಯು ಜಗದ್ಗುರುಗಳ ಸಂದೇಶದ ಅತ್ಯಂತ ಬಲವಾದ ಭಾಗವಾಗಿದ್ದರೂ, ಕ್ಯಾನರಿ ದ್ವೀಪಗಳಲ್ಲಿ ಅವರು ಕಳೆದ ಎರಡು ದಿನಗಳಲ್ಲಿ ಹೇಳಿದ ಇತರ ಮಾತುಗಳನ್ನೂ ಕಡೆಗಣಿಸಲಾಗದು. ಲಾಸ್ ಪಾಲ್ಮಾಸ್ ದೆ ಗ್ರಾನ್ ಕನಾರಿಯಾದ ಅರ್ಗಿನೆಗುಯಿನ್ ಬಂದರಿನಲ್ಲಿ, ಅವರು ವಲಸಿಗರ ಮಾನವ ಘನತೆಯ ಮುಂದೆ ತಲೆಬಾಗುತ್ತಾ, “ಅವರು ಕೇವಲ ಸಂಖ್ಯೆಗಳಲ್ಲ ಅಥವಾ ಕಡತಗಳಲ್ಲ, ಕುಟುಂಬ ಮತ್ತು ಮನೆಗಳನ್ನು ಬಿಟ್ಟು ಬಂದ ಮಾನವರು. ಅವರ ಕನಸುಗಳನ್ನು ತಿರಸ್ಕರಿಸುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳಿದರು. ಅವರ ಜೀವನವನ್ನು ರಕ್ಷಿಸಲೇಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಜಗದ್ಗುರು ಲಿಯೋರವರು ವಲಸಿಗರ ಮೂಲ ದೇಶಗಳ ಮನಸ್ಸಾಕ್ಷಿಗೂ ಕರೆ ನೀಡಿದರು. ಅಲ್ಲಿ ಶಾಂತಿ, ನ್ಯಾಯ ಮತ್ತು ಅಭಿವೃದ್ಧಿಗೆ ಅನುಕೂಲಕರ ಪರಿಸ್ಥಿತಿಗಳನ್ನು ನಿರ್ಮಿಸಬೇಕಾಗಿದೆ ಎಂದರು. ಹಾಗೆಯೇ, ವಲಸಿಗರು ಸಾಗುವ ಮಾರ್ಗದ ದೇಶಗಳು ದುರ್ಬಲರನ್ನು ರಕ್ಷಿಸಬೇಕು ಮತ್ತು ಅವರನ್ನು ಅಪರಾಧಿ ಜಾಲಗಳ ಕೈಗೆ ಒಪ್ಪಿಸಬಾರದು ಎಂದರು. ಯುರೋಪಿನ ಮನಸ್ಸಾಕ್ಷಿಗೂ ಅವರು ಪ್ರಶ್ನೆ ಹಾಕಿದರು: “ಮಾನವ ಘನತೆಯ ಬಗ್ಗೆ ಮಾತನಾಡುತ್ತಾ, ಮೆಡಿಟರೇನಿಯನ್ ಮತ್ತು ಅಟ್ಲಾಂಟಿಕ್ ಸಮುದ್ರಗಳು ಹೆಸರಿಲ್ಲದ ಸಮಾಧಿಗಳಾಗಿ ಮಾರ್ಪಡುತ್ತಿರುವುದನ್ನು ನಾವು ಹೇಗೆ ಸಹಿಸಿಕೊಳ್ಳಬಹುದು?” ಎಂದು. ಅಂತರರಾಷ್ಟ್ರೀಯ ಸಮುದಾಯವೂ ಪರಿಣಾಮಕಾರಿ ಮತ್ತು ನಿರಂತರ ಸಹಕಾರ ನೀಡಬೇಕೆಂದು ಅವರು ಒತ್ತಾಯಿಸಿದರು.
ಧರ್ಮ ಸಭೆಯತ್ತ ಮುಖ ಮಾಡಿದ ಜಗದ್ಗುರುಗಳು, “ವಲಸಿಗರ ಸ್ವಾಗತವು ಕೆಲವೇ ಸ್ವಯಂಸೇವಕರ ಹೊಣೆಗಾರಿಕೆಯಾಗಬಾರದು” ಎಂದು ಹೇಳಿದರು. ಯೂಕರಿಸ್ಟಿನಲ್ಲಿ ಕ್ರಿಸ್ತನನ್ನು ಆರಾಧಿಸಲು ಬಲಿಪೀಠದ ಮುಂದೆ ಮಂಡಿಯೂರಿ, ನಂತರ ಸಂಕಷ್ಟದಲ್ಲಿರುವ ಈ ಸಹೋದರ-ಸಹೋದರಿಯರ ನೋವನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.
ಅರ್ಗಿನೆಗುಯಿನ್ ಬಂದರಿನಲ್ಲಿ ಮಾತನಾಡುತ್ತಾ, “ಕಾನೂನುಬದ್ಧ ಮತ್ತು ಸುರಕ್ಷಿತ ವಲಸೆ ಮಾರ್ಗಗಳು, ರಕ್ಷಣಾ ಕಾರ್ಯಗಳು, ಸಹಾಯ, ಮಾನವ ಕಳ್ಳಸಾಗಣೆ ವಿರುದ್ಧ ನೈಜ ಸಹಕಾರ, ಬಲಿಪಶುಗಳಿಗೆ ಪರಿಣಾಮಕಾರಿ ರಕ್ಷಣೆ, ಸ್ವಾಗತ ಮತ್ತು ಏಕೀಕರಣದ ಗಂಭೀರ ಪ್ರಕ್ರಿಯೆಗಳು ಹಾಗೂ ಪ್ರತಿಯೊಬ್ಬರೂ ತಮ್ಮದೇ ದೇಶದಲ್ಲಿ ಗೌರವಯುತ ಜೀವನ ನಡೆಸಲು ನೆರವಾಗುವ ನೀತಿಗಳು” ಅಗತ್ಯವೆಂದು ಅವರು ಹೇಳಿದರು. ಜೊತೆಗೆ ನಾಗರಿಕ ಅಧಿಕಾರಿಗಳು, ಸಂಸತ್ತುಗಳು, ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಕ್ರೈಸ್ತ ಸಮುದಾಯಗಳೆಲ್ಲರೂ ಒಂದು ಆಳವಾದ ಪ್ರಶ್ನೆಯನ್ನು ತಮ್ಮನ್ನು ತಾವು ಕೇಳಿಕೊಳ್ಳಬೇಕು ಎಂದರು: “ಜೀವನವನ್ನು ಹುಡುಕಲು ಇಷ್ಟೊಂದು ಸಹೋದರ-ಸಹೋದರಿಯರು ಸಾವಿನ ಅಪಾಯವನ್ನು ಎದುರಿಸಬೇಕಾದಂತಹ ಜಗತ್ತನ್ನು ನಾವು ಹೇಗೆ ನಿರ್ಮಿಸಿದ್ದೇವೆ?”
ಕ್ಯಾನರಿ ದ್ವೀಪಗಳ ಈ ಭೇಟಿ, ಲಿಯೋರವರ ಪೋಪ್‌ಪದದ ಒಂದು ಮಹತ್ವದ ಮೈಲಿಗಲ್ಲಾಗಿದೆ. ಲೆಸ್ಬೋಸ್‌ನಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಮಾಡಿದಂತೆ, ಜಗದ್ಗುರು ಲಿಯೋರವರು ಕೂಡ ನಜರೇತ್‌ನ ಪವಿತ್ರ ಕುಟುಂಬವನ್ನು ನೆನಪಿಸಿದರು. ಹೆರೋದನ ಕೋಪದಿಂದ ದೇವರ ಪುತ್ರನ ಜೀವವನ್ನು ಉಳಿಸಲು ಯೇಸು, ಮರಿಯಮ್ಮ ಮತ್ತು ಜೋಸೇಫರು ಈಜಿಪ್ಟ್‌ಗೆ ನಿರಾಶ್ರಿತರಾಗಿ ತೆರಳಬೇಕಾಯಿತು. ಜಗದ್ಗುರು XIIನೇ ಪಿಯಸ್ ರವರ ಎಕ್ಸುಲ್ ಫ್ಯಾಮಿಲಿಯಾ ಪ್ರೇಷಿತರ ಸಂವಿಧಾನವನ್ನು ಉಲ್ಲೇಖಿಸುತ್ತಾ, “ಪವಿತ್ರ ಕುಟುಂಬವು ಇಂದಿಗೂ ಪ್ರತಿಯೊಬ್ಬ ನಿರಾಶ್ರಿತ ಕುಟುಂಬಕ್ಕೂ, ಪ್ರತಿಯೊಬ್ಬ ವಲಸಿಗನಿಗೂ ಮತ್ತು ಭಯ, ಹಿಂಸೆ ಅಥವಾ ಅಗತ್ಯದಿಂದ ತಮ್ಮ ತಾಯ್ನಾಡನ್ನು ತೊರೆಯಬೇಕಾದ ಪ್ರತಿಯೊಬ್ಬರಿಗೂ ಮಾದರಿ ಮತ್ತು ಆಶ್ರಯವಾಗಿದೆ” ಎಂದು ಅವರು ನೆನಪಿಸಿದರು.
ಕ್ರೈಸ್ತರು ಒಂದು ವಿಷಯವನ್ನು ಎಂದಿಗೂ ಮರೆಯಬಾರದು ಮಾನವನಾಗಿ ಬಂದ ದೇವರೇ ಒಬ್ಬ ವಲಸಿಗ ಮತ್ತು ನಿರಾಶ್ರಿತರಾಗಿದ್ದರು. ಆದ್ದರಿಂದ, ಭವಿಷ್ಯದ ಹುಡುಕಾಟದಲ್ಲಿ ನಮ್ಮ ದೇಶಗಳ ಬಾಗಿಲು ತಟ್ಟುವ ಸಹೋದರ-ಸಹೋದರಿಯರ ಮುಖಗಳಲ್ಲಿ ಕ್ರಿಸ್ತನ ಮುಖವನ್ನು ಗುರುತಿಸಲು ನಾವು ಕರೆಯಲ್ಪಟ್ಟಿದ್ದೇವೆ.
