ಹುಡುಕಿ

Pope Leo travels to Gran Canaria as part of his Spain trip

ಗ್ರಾನ್ ಕನಾರಿಯಾದಲ್ಲಿ ಜಗದ್ಗುರು ಲಿಯೋರವರು: ‘ಮಾನವ ಘನತೆಗೆ ಯಾವುದೇ ಪಾಸ್‌ಪೋರ್ಟ್ ಇರುವುದಿಲ್ಲ.’

ಗ್ರಾನ್ ಕನಾರಿಯಾದಲ್ಲಿ ವಲಸಿಗರು ಹಾಗೂ ಅವರನ್ನು ರಕ್ಷಿಸಿ, ಬೆಂಬಲಿಸಿ ಮತ್ತು ಜೊತೆಗಿರುವ ಸಂಸ್ಥೆಗಳೊಂದಿಗೆ ನಡೆದ ಭೇಟಿಯಲ್ಲಿ, ಜಗದ್ಗುರು ಲಿಯೋರವರು ವಲಸಿಗರ ದುಃಖದ ಬಗ್ಗೆ ಜಗತ್ತು ನಿರ್ಲಕ್ಷ್ಯ ಮನೋಭಾವವನ್ನು ಬೆಳೆಸಿಕೊಳ್ಳಬಾರದು ಎಂದು ಕರೆ ನೀಡಿದರು. ಅವರು ಕಾನೂನುಬದ್ಧ ಮತ್ತು ಸುರಕ್ಷಿತ ವಲಸೆ ಮಾರ್ಗಗಳ ಅಗತ್ಯವನ್ನು ಒತ್ತಿಹೇಳಿ, ಮಾನವ ಕಳ್ಳಸಾಗಣೆ ಮತ್ತು ಶೋಷಣೆಯನ್ನು ತೀವ್ರವಾಗಿ ಖಂಡಿಸಿದರು. “ಮಾನವ ಘನತೆಗೆ ಯಾವುದೇ ಪಾಸ್‌ಪೋರ್ಟ್ ಇರುವುದಿಲ್ಲ,ಗಡಿಯನ್ನು ದಾಟಿದಾಗ ಅದರ ಮೌಲ್ಯವೂ ಕಡಿಮೆಯಾಗುವುದಿಲ್ಲ” ಎಂದು ಅವರು ದೃಢವಾಗಿ ಪ್ರತಿಪಾದಿಸಿದರು.

ವ್ಯಾಟಿಕನ್ ವರದಿ

ಗ್ರಾನ್ ಕನಾರಿಯಾದ ದಕ್ಷಿಣ ಕರಾವಳಿಯ ಅರ್ಗುನೆಗಿನ್ ಬಂದರಿನಲ್ಲಿ, ವಲಸಿಗರು ಹಾಗೂ ಅವರನ್ನು ರಕ್ಷಿಸಿ, ಸ್ವಾಗತಿಸಿ ಮತ್ತು ಬೆಂಬಲಿಸುತ್ತಿರುವ ಸಂಸ್ಥೆಗಳೊಂದಿಗೆ ಭೇಟಿಯಾದ ಜಗದ್ಗುರು XIVನೇ ಲಿಯೋರವರು ಮಾನವೀಯತೆ, ಹೊಣೆಗಾರಿಕೆ ಮತ್ತು ಐಕ್ಯತೆಯ ಕುರಿತ ಬಲವಾದ ಸಂದೇಶವನ್ನು ನೀಡಿದರು. ಯುರೋಪಿಗೆ ಪ್ರವೇಶಿಸುವ ಅತ್ಯಂತ ಅಪಾಯಕಾರಿ ವಲಸೆ ಮಾರ್ಗಗಳಲ್ಲಿ ಒಂದಾಗಿರುವ ಈ ಪ್ರದೇಶದಲ್ಲಿ ಮಾತನಾಡಿದ ಅವರು, “ಮಾನವ ಘನತೆಗೆ ಯಾವುದೇ ಪಾಸ್‌ಪೋರ್ಟ್ ಇರುವುದಿಲ್ಲ; ಗಡಿಯನ್ನು ದಾಟಿದಾಗ ಅದರ ಮೌಲ್ಯವೂ ಕಡಿಮೆಯಾಗುವುದಿಲ್ಲ” ಎಂದು ಒತ್ತಿಹೇಳಿದರು.

ಮತ್ತಾಯನ ಸುವಾರ್ತೆಯ 25ನೇ ಅಧ್ಯಾಯವನ್ನು ಉಲ್ಲೇಖಿಸಿದ ಜಗದ್ಗುರುಗಳು, ಅರ್ಗುನೆಗಿನ್‌ನಂತಹ ಸ್ಥಳಗಳಲ್ಲಿ ದೇವರ ವಾಕ್ಯವು ಜೀವಂತವಾಗುತ್ತದೆ ಎಂದು ಹೇಳಿದರು. ಬಡತನ, ಹಿಂಸೆ ಮತ್ತು ಶೋಷಣೆಯಿಂದ ಪಾರಾಗಿ ಬಂದಿರುವ ವಲಸಿಗರು ತಮ್ಮ ಎಲ್ಲವನ್ನೂ ಕಳೆದುಕೊಂಡಿರಬಹುದು, ಆದರೆ ಅವರ ಘನತೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಕರಾವಳಿಗೆ ತಲುಪುವ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕ್ರಿಸ್ತನ ಮುಖವನ್ನು ಕಾಣುವಂತೆ ಅವರು ಎಲ್ಲರನ್ನು ಆಹ್ವಾನಿಸಿದರು.

ಸಮುದ್ರವನ್ನು ಭರವಸೆ ಮತ್ತು ಅಪಾಯ ಎರಡನ್ನೂ ಒಳಗೊಂಡ ಸ್ಥಳವೆಂದು ವರ್ಣಿಸಿದ ಜಗದ್ಗುರುಗಳು, ಇಂದಿಗೂ ಮಾನವ ಕಳ್ಳಸಾಗಣೆ ನಡೆಸುವ ಜಾಲಗಳು, ಮಹಿಳೆಯರು ಮತ್ತು ಮಕ್ಕಳನ್ನು ಶೋಷಿಸುವ ದುಷ್ಕರ್ಮಿಗಳು ಹಾಗೂ ಬಡವರ ನೋವಿನ ಬಗ್ಗೆ ನಿರ್ಲಕ್ಷ್ಯ ತೋರುವ ಮನೋಭಾವಗಳು “ಸಮುದ್ರದ ರಾಕ್ಷಸರಂತೆ” ಕಾರ್ಯನಿರ್ವಹಿಸುತ್ತಿವೆ ಎಂದು ಎಚ್ಚರಿಸಿದರು. ಆದಾಗ್ಯೂ, ಭಯದಿಂದ ಮೌನವಾಗದೆ, ಸಂಕಷ್ಟದಲ್ಲಿರುವವರ ಪರವಾಗಿ ಧ್ವನಿಯಾಗುವುದು ಧರ್ಮ ಸಭೆಯ ಕರ್ತವ್ಯ ಎಂದು ಅವರು ಹೇಳಿದರು.

ತಮ್ಮ ಅನುಭವಗಳನ್ನು ಹಂಚಿಕೊಂಡ ರಕ್ಷಣಾ ಕಾರ್ಯಕರ್ತರು, ದಾನ ಸಂಸ್ಥೆಯ ಸ್ವಯಂಸೇವಕರು ಮತ್ತು ವಲಸಿಗರಿಗೆ ಜಗದ್ಗುರುಗಳು ಕೃತಜ್ಞತೆ ಸಲ್ಲಿಸಿದರು. ಅವರ ಸೇವೆಯಿಂದ ವಲಸಿಗರು ಕೇವಲ ಅಂಕಿ-ಅಂಶಗಳಾಗಿಯೇ ಉಳಿಯದೆ, ಕುಟುಂಬದ ಸದಸ್ಯರಂತೆ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರು. ಒಂದು ಚಿಕ್ಕ ಮಗಳ ರಕ್ಷಣೆಯ ಘಟನೆಯನ್ನು ಉಲ್ಲೇಖಿಸಿ, “ಆ ಮಗು ನಮ್ಮ ಮಗಳಾಗಿರಬಹುದಿತ್ತು ಆ ಮುಖಗಳು ನಮ್ಮ ಕುಟುಂಬದವರ ಮುಖಗಳಾಗಿರಬಹುದಿತ್ತು” ಎಂದು ಅವರು ನೆನಪಿಸಿದರು.

ಮಾನವ ಕಳ್ಳಸಾಗಣೆಗೆ ಬಲಿಯಾದ ನೈಜೀರಿಯಾದ ಮಹಿಳೆಯೊಬ್ಬಳ ಕಥೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಶೋಷಣೆಗೆ ಒಳಗಾದ ಎಲ್ಲರಿಗೂ ಸಾಂತ್ವನದ ಮಾತುಗಳನ್ನು ಹೇಳಿದರು. “ಇತರರು ನಿಮ್ಮ ದೇಹಕ್ಕೆ ಬೆಲೆ ಕಟ್ಟಿರಬಹುದು, ಆದರೆ ದೇವರು ನಿಮ್ಮ ಅಮೂಲ್ಯ ಮೌಲ್ಯವನ್ನು ಎಂದಿಗೂ ಮರೆಯುವುದಿಲ್ಲ” ಎಂದು ಅವರು ಹೇಳಿದರು. ಯಾವುದೇ ಹಿಂಸೆ ಅಥವಾ ಶೋಷಣೆಯು ವ್ಯಕ್ತಿಯ ದೇವದತ್ತ ಘನತೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು.

ಕೊನೆಯಲ್ಲಿ, ಯುರೋಪ್ ಮತ್ತು ಜಗತ್ತಿನ ರಾಷ್ಟ್ರಗಳಿಗೆ ಮನವಿ ಮಾಡಿದ ಜಗದ್ಗುರುಗಳು, ಸುರಕ್ಷಿತ ಮತ್ತು ಕಾನೂನುಬದ್ಧ ವಲಸೆ ಮಾರ್ಗಗಳು, ಮಾನವ ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ಸಹಕಾರ ಹಾಗೂ ವಲಸಿಗರ ಸಮರ್ಪಕ ಸ್ವಾಗತ ಮತ್ತು ಪುನರ್ವಸತಿ ಅಗತ್ಯವೆಂದು ಹೇಳಿದರು. “ವಲಸೆ ಹೋಗುವ ಹಕ್ಕಿನ ಜೊತೆಗೆ, ವಲಸೆ ಹೋಗಬೇಕಾದ ಅನಿವಾರ್ಯತೆಯಿಂದ ಮುಕ್ತರಾಗಿರುವ ಹಕ್ಕೂ ಇದೆ” ಎಂದು ಅವರು ನೆನಪಿಸಿದರು. ಸಮುದ್ರ ದಾಟುವ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಮೌನಾಚರಣೆ ನಡೆಸಿದ ಬಳಿಕ, “ಇಂದು ಇಲ್ಲಿ ಕರಾವಳಿಗೆ ತಲುಪುವ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮನ್ನು ಕೇಳುತ್ತಾನೆ: ನಮ್ಮ ಮಾನವೀಯತೆಯಲ್ಲಿ ಇನ್ನೇನು ಉಳಿದಿದೆ?” ಎಂಬ ಗಂಭೀರ ಪ್ರಶ್ನೆಯನ್ನು ಜಗತ್ತಿನ ಮುಂದೆ ಅವರು ಇಟ್ಟರು.

11 ಜೂನ್ 2026, 17:58