ಭಾರೀ ಭೂಕಂಪದ ಪರಿಣಾಮಕ್ಕೆ ಒಳಗಾದ ಫಿಲಿಪ್ಪೀನ್ಸ್‌ನ ಜನರಿಗಾಗಿ ಜಗದ್ಗುರು ಲಿಯೋರವರ ಪ್ರಾರ್ಥಿಸಿದರು
ವ್ಯಾಟಿಕನ್ ವರದಿ
2026ರ ಜೂನ್ 8ರಂದು ಫಿಲಿಪ್ಪೀನ್ಸ್ ಕರಾವಳಿಯ ಸಮೀಪ ಸಂಭವಿಸಿದ 7.8 ತೀವ್ರತೆಯ ಭಾರಿ ಭೂಕಂಪ ಹಲವಾರು ದೇಶಗಳಲ್ಲಿ ಸುನಾಮಿ ಎಚ್ಚರಿಕೆಗಳನ್ನು ಜಾರಿಗೊಳಿಸಿತು.
ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಭೂಕಂಪ ಮತ್ತು ಅದರ ಪರಿಣಾಮಗಳಿಂದ ಸಾವಿಗೀಡಾದ 37 ಜನರ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.
ಜಗದ್ಗುರುಗಳು ಎಲ್ಲರೂ ಮೃತರ ಆತ್ಮಗಳಿಗಾಗಿ ಹಾಗೂ ಅವರ ಕುಟುಂಬಗಳಿಗಾಗಿ ಪ್ರಾರ್ಥಿಸಬೇಕೆಂದು ಮನವಿ ಮಾಡಿದರು.
“ಕೆಲವು ದಿನಗಳ ಹಿಂದೆ ಪ್ರಬಲ ಭೂಕಂಪದಿಂದ ತತ್ತರಿಸಲ್ಪಟ್ಟ ಫಿಲಿಪ್ಪೀನ್ಸ್ ಜನರಿಗೆ ನನ್ನ ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸುತ್ತೇನೆ,” ಎಂದು ಅವರು ಹೇಳಿದರು. “ಮೃತರಿಗಾಗಿ ಮತ್ತು ಅವರ ಕುಟುಂಬಗಳಿಗಾಗಿ, ಗಾಯಗೊಂಡವರಿಗಾಗಿ ಹಾಗೂ ಈ ವಿಪತ್ತಿನ ಪರಿಣಾಮವಾಗಿ ಸಂಕಷ್ಟ ಅನುಭವಿಸುತ್ತಿರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ.”
ಇತ್ತೀಚಿನ ಧನ್ಯರ ಘೋಷಣೆಗಳು
ಪ್ರತ್ಯೇಕವಾಗಿ, ವಿಶ್ವದ ವಿವಿಧ ಭಾಗಗಳಿಂದ ಧನ್ಯರಾಗಿ ಘೋಷಿಸಲ್ಪಟ್ಟ ಹಲವಾರು ಹೊಸ ಧನ್ಯರನ್ನು ಜಗದ್ಗುರು ಲಿಯೋರವರು ಸ್ವಾಗತಿಸಿದರು.
ಅವರು ಮೊರಾವಿಯಾದ ಧರ್ಮಪ್ರಾಂತ್ಯದ ಯಾಜಕರಾದ ವಂ.ಸ್ವಾಮಿ ವೆನ್ಸೆಸ್ಲಾವ್ ಡ್ರ್ಬೋಲಾ ಮತ್ತು ವಂ. ಸ್ವಾಮಿ ಜಿಯೋವಾನ್ನಿ ಬುಲಾ, ಹಾಗೆಯೇ ಪೋಲಿಷ್ ಸಲೇಸಿಯನ್ ಯಾಜಕರಾದ ವಂ.ಸ್ವಾಮಿ ಜಿಯೋವಾನ್ನಿ ಶ್ವಿಯೆರ್ಚ್ ಹಾಗೂ ಅವರ ಎಂಟು ಸಹಚರರನ್ನು ಸ್ಮರಿಸಿದರು.
“ಇವರೆಲ್ಲರನ್ನು ಹುತಾತ್ಮರಾಗಿ ಧನ್ಯರೆಂದು ಘೋಷಿಸಲಾಗಿದೆ, ಏಕೆಂದರೆ ಕ್ರಿಸ್ತನಿಗೆ ತೋರಿದ ಅವರ ನಿಷ್ಠೆಯ ಕಾರಣದಿಂದ ಅವರು ಸರ್ವಾಧಿಕಾರಿ ಆಡಳಿತಗಳ ಹಿಂಸಾಚಾರದ ಬಲಿಪಶುಗಳಾದರು,” ಎಂದು ಅವರು ಹೇಳಿದರು.
ನಂತರ ಜಗದ್ಗುರು ಲಿಯೋರವರು ಶನಿವಾರ ಬ್ರೆಜಿಲ್‌ನ ಮಾತೊ ಗ್ರೊಸ್ಸೊದಲ್ಲಿ ಧನ್ಯರೆಂದು ಘೋಷಿಸಲ್ಪಟ್ಟ ಇಟಾಲಿಯನ್ ಮಿಷನರಿ ಯಾಜಕರಾದ ಧನ್ಯ ನಜರೆನೊ ಲಾಂಚಿಯೊಟ್ಟಿರವರನ್ನು ಉಲ್ಲೇಖಿಸಿದರು. ಅವರು ಬಡವರ ಮತ್ತು ಅತ್ಯಂತ ದುರ್ಬಲರ ಹಕ್ಕುಗಳನ್ನು ಧೈರ್ಯದಿಂದ ರಕ್ಷಿಸಿದ್ದರೆಂದು ಜಗದ್ಗುರುಗಳು ಪ್ರಶಂಸಿಸಿದರು.
“ಈ ಧೈರ್ಯಶಾಲಿ ಸಾಕ್ಷಿಗಳ ಮಾದರಿ ಹಾಗೂ ಅವರ ಮಧ್ಯಸ್ಥಿಕೆ ಯಾಜಕರ ಮತ್ತು ಇಡೀ ಧರ್ಮ ಸಭೆಯ ಧರ್ಮಸೇವೆಯನ್ನು ಬಲಪಡಿಸಲಿ,” ಎಂದು ಜಗದ್ಗುರುಗಳು ಹೇಳಿದರು.
