ಕ್ವೆಲಿಮನೆಯ ಡೊಮ್ ಒಸೊರಿಯೊ ಸಿಟೊರಾ ಅಫೊನ್ಸೊ ಬಿಷಪ್. ಕ್ವೆಲಿಮನೆಯ ಡೊಮ್ ಒಸೊರಿಯೊ ಸಿಟೊರಾ ಅಫೊನ್ಸೊ ಬಿಷಪ್. 

ಮೊಜಾಂಬಿಕ್‌ನ ಬಿಷಪ್ ಸಿಟೋರಾ ಅಫೊನ್ಸೊರವರ ಅಗಲಿಕೆಗೆ ಜಗದ್ಗುರುಗಳು ಸಂತಾಪ ಸೂಚಿಸಿದರು.

ಕ್ವೆಲಿಮಾನೆಯ ಬಿಷಪ್ ಹಾಗೂ ಬೈರಾ ಮಹಾಧರ್ಮಪ್ರಾಂತ್ಯದ ಪ್ರೇಷಿತರ ಆಡಳಿತಾಧಿಕಾರಿಯಾಗಿದ್ದ ಅವರು ತಮ್ಮ ನಿವಾಸದಲ್ಲೇ ಗುಂಡಿಕ್ಕಿ ಹತ್ಯೆಗೀಡಾದ ಈ "ಗಂಭೀರ ಹಿಂಸಾತ್ಮಕ ಕೃತ್ಯ"ದ ಕುರಿತು ಜಗದ್ಗುರು XIVನೇ ಲಿಯೋರವರು ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದೇಶವನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಟೆಲಿಗ್ರಾಂ ವಾಹಿನಿಯ ಮೂಲಕ ಪ್ರಕಟಿಸಲಾಗಿದೆ.

ವ್ಯಾಟಿಕನ್ ವರದಿ

ಮೊಜಾಂಬಿಕ್‌ನ ಕ್ವೆಲಿಮಾನೆ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಬೈರಾ ಮಹಾಧರ್ಮಪ್ರಾಂತ್ಯದ ಪ್ರೇಷಿತರ ಆಡಳಿತಾಧಿಕಾರಿಯಾಗಿದ್ದ ಬಿಷಪ್ ಒಸೋರಿಯೊ ಸಿಟೋರಾ ಅಫೊನ್ಸೊರವರ ಸಾವಿಗೆ ಕಾರಣವಾದ "ಗಂಭೀರ ಹಿಂಸಾತ್ಮಕ ಕೃತ್ಯದ" ಸುದ್ದಿಯನ್ನು ತಿಳಿದು ಜಗದ್ಗುರು XIVನೇ ಲಿಯೋರವರು ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಟೆಲಿಗ್ರಾಂ ವಾಹಿನಿಯ ಮೂಲಕ ಪ್ರಕಟಿಸಲಾಗಿದೆ.

ಹೇಳಿಕೆಯಲ್ಲಿ ಮುಂದುವರಿದು, "ಈ ಆಘಾತ ಮತ್ತು ಗೊಂದಲದ ಸಂದರ್ಭದಲ್ಲಿ ಜಗದ್ಗುರುಗಳು ಮೊಜಾಂಬಿಕ್‌ನ ಜನರೊಂದಿಗೆ ಹಾಗೂ ಸಂಬಂಧಿತ ಧರ್ಮಪ್ರಾಂತ್ಯಗಳ ವಿಶ್ವಾಸಿಗಳೊಂದಿಗೆ ಪ್ರಾರ್ಥನೆಯಲ್ಲಿ ಒಂದಾಗಿದ್ದಾರೆ. ಪ್ರಭು ಅವರಿಗೆ ಸಾಂತ್ವನವನ್ನು ನೀಡಲಿ, ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯನ್ನು ತನ್ನ ಪ್ರೀತಿಯಲ್ಲಿ ಕಾಪಾಡಲಿ ಹಾಗೂ ಹಿಂಸಾಚಾರಿಗಳ ಕೈಗಳನ್ನು ತಡೆಯಲಿ ಎಂದು ಅವರು ಪ್ರಾರ್ಥಿಸುತ್ತಾರೆ" ಎಂದು ತಿಳಿಸಲಾಗಿದೆ.

ತನಿಖೆ ಆರಂಭ

ಬಿಷಪ್ ಸಿಟೋರಾ ಅಫೊನ್ಸೊರವರು ಜೂನ್ 6ರ ಬೆಳಿಗ್ಗೆ ಕ್ವೆಲಿಮಾನೆಯಲ್ಲಿರುವ ತಮ್ಮ ಬಿಷಪ್ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಎದೆಗೆ ಗುಂಡು ಹಾರಿಸಲಾಗಿದ್ದು, ಅದರಿಂದ ಅವರು ಸಾವನ್ನಪ್ಪಿದ್ದರು.

ಫಿಡೆಸ್ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ರಾಷ್ಟ್ರೀಯ ಅಪರಾಧ ತನಿಖಾ ಸೇವೆಯು ಈ ಪ್ರಕರಣದ ಕುರಿತು ತನಿಖೆಯನ್ನು ಆರಂಭಿಸಿದೆ. ಸದ್ಯಕ್ಕೆ ಹತ್ಯೆಯ ಸಂದರ್ಭಗಳು ಅಥವಾ ಇದರ ಹಿಂದಿರುವವರ ಗುರುತು ಕುರಿತು ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

"ಡಾನ್ ಒಸೋರಿಯೊ" ಮತ್ತು ಸುವಾರ್ತಾ ಪ್ರಸಾರದ ಡಿಕಾಸ್ಟರಿ

ಅನೇಕರ ಪ್ರೀತಿಯ ಕರೆಯಾದ "ಡಾನ್ ಒಸೋರಿಯೊ" ಎಂದು ಪರಿಚಿತರಾಗಿದ್ದ ಬಿಷಪ್ ಅವರು, 2017ರಿಂದ 2023ರವರೆಗೆ ಸುವಾರ್ತಾ ಪ್ರಸಾರದ ಡಿಕಾಸ್ಟರಿಯ  ಮೊದಲ ಸುವಾರ್ತಾ ಪ್ರಸಾರ ಮತ್ತು ಹೊಸ ಸ್ಥಳೀಯ ಧರ್ಮ ಸಭೆಗಳ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರವೂ ಅವರು ಡಿಕಾಸ್ಟರಿಯೊಂದಿಗೆ ನಿಕಟ ಸಂಬಂಧವನ್ನು ಮುಂದುವರಿಸಿಕೊಂಡಿದ್ದರು.

ಅವರು ಫಿಡೆಸ್ ಸುದ್ದಿಸಂಸ್ಥೆಯ ಆತ್ಮೀಯ ಸಹಯೋಗಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಕೆಲವೇ ವಾರಗಳ ಹಿಂದೆವರೆಗೂ ಸ್ಥಳೀಯ ಧರ್ಮ ಸಭೆಯ ಜೀವನ ಹಾಗೂ ದೇಶವನ್ನು ಕಾಡುತ್ತಿರುವ ಹಿಂಸಾಚಾರ ಮತ್ತು ಸಂಘರ್ಷಗಳ ಗಂಭೀರ ಪರಿಸ್ಥಿತಿಯ ಕುರಿತು ಮಾಹಿತಿಯನ್ನು ಆ ಸಂಸ್ಥೆಯೊಂದಿಗೆ ಹಂಚಿಕೊಳ್ಳುತ್ತಿದ್ದರು.

ನಾಗರಿಕ ಆಡಳಿತದಿಂದ ಸಂತಾಪ

ಮೊಜಾಂಬಿಕ್‌ನ ರಾಷ್ಟ್ರಪತಿ ಡೇನಿಯಲ್ ಫ್ರಾನ್ಸಿಸ್ಕೊ ಚಾಪೊರವರೂ ಬಿಷಪ್ ಅವರ ನಿಧನಕ್ಕೆ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಸಂದೇಶದಲ್ಲಿ, "ಬಿಷಪ್ ಒಸೋರಿಯೊರವರ ನಿಧನವು ಮೊಜಾಂಬಿಕ್ ಸಮಾಜಕ್ಕೂ ಕ್ರೈಸ್ತ ಸಮುದಾಯಕ್ಕೂ ತುಂಬಲಾರದ ನಷ್ಟವಾಗಿದೆ" ಎಂದು ಅವರು ಹೇಳಿದ್ದಾರೆ. ವಿನಯಶೀಲತೆ, ಶ್ರದ್ಧಾಭರಿತ ಧರ್ಮಾಧ್ಯಕ್ಷೀಯ ಸೇವೆ ಹಾಗೂ ಶಾಂತಿ ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ಬಿಷಪ್ ಅವರು ನೀಡಿದ ಸಾಕ್ಷಿಜೀವನವನ್ನು ಅವರು ವಿಶೇಷವಾಗಿ ಸ್ಮರಿಸಿದ್ದಾರೆ.

06 ಜೂನ್ 2026, 18:40