ಜಗದ್ಗುರು XIVನೇ ಲಿಯೋರವರು ಪಾಂಟಿಫಿಕಲ್ ಮಿಷನರಿ ಸೊಸೈಟಿಗಳನ್ನು ಸ್ವಾಗತಿಸಿದರು. ಜಗದ್ಗುರು XIVನೇ ಲಿಯೋರವರು ಪಾಂಟಿಫಿಕಲ್ ಮಿಷನರಿ ಸೊಸೈಟಿಗಳನ್ನು ಸ್ವಾಗತಿಸಿದರು.  (ANSA)

ಜಗದ್ಗುರು XIVನೇ ಲಿಯೋರವರು ವಿಶ್ವ ಧಮ೯ಪ್ರಚಾರ ಭಾನುವಾರದ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಧರ್ಮ ಸಭೆಗೆ ಆಹ್ವಾನ ನೀಡಿದರು.

ಪಾಂಟಿಫಿಕಲ್ ಮಿಷನ್ ಸೊಸೈಟಿಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ವಿಶ್ವ ಧಮ೯ಪ್ರಚಾರ ಭಾನುವಾರದ ಆಚರಣೆಯಲ್ಲಿ ಸಂಪೂರ್ಣ ಧರ್ಮ ಸಭೆ ಭಾಗವಹಿಸುವಂತೆ ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪಾಂಟಿಫಿಕಲ್ ಮಿಷನ್ ಸೊಸೈಟಿಗಳ ದೀರ್ಘಕಾಲದ ನಿರ್ದೇಶಕರಾಗಿದ್ದ ಪೂಜ್ಯ ಫುಲ್ಟನ್ ಶೀನ್ ರವರನ್ನು ಸ್ಮರಿಸಿ, ಅವರನ್ನು “ಸುವಾರ್ತೆಯಲ್ಲಿ ನಂಬಿಕೆ ಮತ್ತು ನಿರೀಕ್ಷೆಯ ಪ್ರಕಾಶಮಾನ ದೀಪ” ಎಂದು ಕೊಂಡಾಡಿದರು. “ನಾನು ಬೆಳೆದ ಕಾಲದಲ್ಲಿ ಅವರ ಸುವಾರ್ತಾ ಸೇವೆಯ ಫಲವನ್ನು ಸ್ವತಃ ಅನುಭವಿಸಿದ ಸಾಕ್ಷಿಯಾಗಿದ್ದೇನೆ” ಎಂದು ಜಗದ್ಗುರುಗಳು ಹೇಳಿದರು. ಫುಲ್ಟನ್ ಶೀನ್

ವ್ಯಾಟಿಕನ್ ವರದಿ

ವಿಶ್ವ ಧಮ೯ಪ್ರಚಾರ ಭಾನುವಾರ: ಪ್ರಾರ್ಥನೆ ಮತ್ತು ತ್ಯಾಗಕ್ಕೆ ಜಗದ್ಗುರು XIVನೇ ಲಿಯೋರವರ ಆಹ್ವಾನ

“ವಿಶ್ವ ಧಮ೯ಪ್ರಚಾರ ಭಾನುವಾರದಂದು ಪ್ರತಿಯೊಂದು ಕಥೋಲಿಕ ಸಮುದಾಯವೂ ಪ್ರಾರ್ಥನೆ ಸಲ್ಲಿಸಲು ಹಾಗೂ ಮೊದಲ ಸುವಾರ್ತಾ ಪ್ರಚಾರ ನಡೆಯುತ್ತಿರುವ ಪ್ರದೇಶಗಳಲ್ಲಿನ ಮಿಷನರಿ ಕಾರ್ಯಗಳಿಗಾಗಿ ಮತ್ತು ಯುವ ಧರ್ಮ ಸಭೆಗಳ ಬೆಂಬಲಕ್ಕಾಗಿ ಆಧ್ಯಾತ್ಮಿಕ ಹಾಗೂ ಭೌತಿಕ ತ್ಯಾಗಗಳನ್ನು ಅರ್ಪಿಸಲು ಆಹ್ವಾನಿತವಾಗಿದೆ.”

ವ್ಯಾಟಿಕನ್‌ನಲ್ಲಿ ಸೋಮವಾರ ನಡೆದ ಪಾಂಟಿಫಿಕಲ್ ಮಿಷನ್ ಸೊಸೈಟಿಗಳ  ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಜಗದ್ಗುರು ಲಿಯೋ ರವರು ಈ ಮಾತುಗಳನ್ನು ಹೇಳಿದರು.

ತಮ್ಮ ಭಾಷಣದ ಆರಂಭದಲ್ಲಿ ಜಗದ್ಗುರುಗಳು ಈ ಸಂಘಟನೆಗಳ ಸಮೃದ್ಧ ಇತಿಹಾಸವನ್ನು ಸ್ಮರಿಸಿ, ಹಲವು ದಶಕಗಳಿಂದ ಧರ್ಮ ಸಭೆ ಮತ್ತು ಜಗತ್ತಿನಾದ್ಯಂತ ಅವು ನೀಡಿರುವ ಮಹತ್ವದ ಕೊಡುಗೆಯನ್ನು ಪ್ರಶಂಸಿಸಿದರು. 2026ನೇ ವರ್ಷವು ಪಾಂಟಿಫಿಕಲ್ ಮಿಷನ್ ಸೊಸೈಟಿಗಳಿಗೆ ಅನೇಕ ಮಹತ್ವದ ಮಿಷನರಿ ಮೈಲಿಗಲ್ಲುಗಳನ್ನು ಗುರುತಿಸುತ್ತದೆ ಎಂದು ಅವರು ನೆನಪಿಸಿದರು. ವಿಶೇಷವಾಗಿ, ಜಗದ್ಗುರು XIನೇ ಪಿಯಸ್ ರವರು ‘ಸುವಾರ್ತಾ ಪ್ರಸಾರದ ಪಾಂಟಿಫಿಕಲ್ ಸಂಘದ’ ವಿನಂತಿಯ ಮೇರೆಗೆ ಅಕ್ಟೋಬರ್ ತಿಂಗಳ ಕೊನೆಯಿಂದ ಎರಡನೇ ಭಾನುವಾರವನ್ನು ವಿಶ್ವ ಮಿಷನ್ ಭಾನುವಾರವಾಗಿ ಸ್ಥಾಪಿಸಿದ ನೂರನೇ ವಾರ್ಷಿಕೋತ್ಸವವನ್ನು ಉಲ್ಲೇಖಿಸಿದರು.

 “ಈ ದಿನವನ್ನು ಪ್ರಾರ್ಥನೆ, ಚಿಂತನೆ ಮತ್ತು ಧರ್ಮ ಸಭೆಯ ಸುವಾರ್ತಾ ಪ್ರಚಾರದ ಧ್ಯೇಯಕ್ಕಾಗಿ ವಿಶೇಷವಾಗಿ ಮೀಸಲಿಡಲಾಗಿದೆ; ವಿಶೇಷವಾಗಿ ಸುವಾರ್ತೆಯ ಘೋಷಣೆ ಇನ್ನಷ್ಟೇ ಆರಂಭವಾಗಿರುವ ಮತ್ತು ಧರ್ಮ ಸಭೆ ಇನ್ನೂ ಯುವವಾಗಿರುವ ಪ್ರದೇಶಗಳಿಗಾಗಿ”ಎಂದು ಹೇಳಿದರು.

ಅವರು ಮುಂದುವರಿದು, “ವಿಶ್ವ ಮಿಷನ್ ಭಾನುವಾರದ ಒಂದು ವಿಶೇಷ ಸೇವೆ ಎಂದರೆ, ದೀರ್ಘಕಾಲದಿಂದ ಸ್ಥಾಪಿತವಾಗಿರುವ ಧರ್ಮ ಸಭೆಗಳಲ್ಲಿರುವ ವಿಶ್ವಾಸಿಗಳಿಗೆ ಸಹ ಸಂಪೂರ್ಣ ಧರ್ಮ ಸಭೆಯ ಮಿಷನರಿ ಆತ್ಮದಲ್ಲಿ ಪಾಲುಗೊಳ್ಳುವುದು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನೆನಪಿಸುವುದಾಗಿದೆ” ಎಂದು ಹೇಳಿದರು.

ವಿಶ್ವ ಧಮ೯ಪ್ರಚಾರ ಭಾನುವಾರದ ಉದಾರತೆಯ ಫಲ

ವಿಶ್ವ ಧಮ೯ಪ್ರಚಾರ ಭಾನುವಾರದಂದು ಸಂಗ್ರಹವಾಗುವ ದೇಣಿಗೆಗಳ ಮೂಲಕ, ‘ಸುವಾರ್ತಾ ಪ್ರಚಾರದ ದಿಕಾಸ್ತೇರಿ  ಮೊದಲ ಸುವಾರ್ತಾ ಪ್ರಚಾರ ಮತ್ತು ಹೊಸ ಸ್ಥಳೀಯ ಧರ್ಮ ಸಭೆಗಳ ವಿಭಾಗ’ದ ಅಧೀನದಲ್ಲಿರುವ 1,130ಕ್ಕೂ ಹೆಚ್ಚು ಧರ್ಮ ಸಭೆ ಆಡಳಿತ ಘಟಕಗಳಿಗೆ ಅಗತ್ಯ ಸಹಾಯವನ್ನು ಒದಗಿಸಲು ‘ಸುವಾರ್ತಾ ಪ್ರಸಾರದ ಪಾಂಟಿಫಿಕಲ್ ಸಂಘ’ಕ್ಕೆ ಸಾಧ್ಯವಾಗುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.

ಈ ನೆರವುಗಳ ಮೂಲಕ ಅಗತ್ಯ ಧರ್ಮ ಸಭೆ ಮೂಲಸೌಕರ್ಯಗಳನ್ನು ನಿರ್ಮಿಸುವುದು ಹಾಗೂ ವಿವಿಧ ಮಿಷನರಿ ಕಾರ್ಯಕ್ರಮಗಳನ್ನು ಬೆಂಬಲಿಸುವುದು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಇದೇ ದೇಣಿಗೆಗಳು ರೋಮಿನಲ್ಲಿರುವ ಐದು ಕಾಲೇಜುಗಳ ನಿರ್ವಹಣೆಗೆ ಸಹಕಾರಿಯಾಗುತ್ತವೆ. ಅಲ್ಲಿ ಅಧ್ಯಯನಕ್ಕಾಗಿ ಬರುವ ಯಾಜಕರು, ಧಾರ್ಮಿಕ ಸಹೋದರರು ಮತ್ತು ಸಹೋದರಿಯರ ನಿರಂತರ ತರಬೇತಿಗೆ ಇದು ನೆರವಾಗುತ್ತದೆ. ತಮ್ಮ ಅಧ್ಯಯನ ಪೂರ್ಣಗೊಳಿಸಿದ ನಂತರ ಅವರು ತಮ್ಮ ಸ್ಥಳೀಯ ಧರ್ಮ ಸಭೆಗಳಿಗೆ ಅಮೂಲ್ಯ ಸಂಪನ್ಮೂಲಗಳಾಗಿ ಮರಳುತ್ತಾರೆ ಎಂದು ಜಗದ್ಗುರುಗಳು ಹೇಳಿದರು.

“ಇಂತಹ ಅನೇಕ ಮಿಷನರಿ ಕಾರ್ಯಗಳು ವಿಶ್ವ ಧಮ೯ಪ್ರಚಾರ ಭಾನುವಾರದಂದು ವಿಶ್ವಾಸಿಗಳು ತೋರಿಸುವ ಉದಾರತೆಯಿಂದಲೇ ಸಾಧ್ಯವಾಗುತ್ತವೆ” ಎಂದು ಅವರು ಹೇಳಿದರು.

“ಕ್ರಿಸ್ತನಲ್ಲಿ ಒಂದಾಗಿ, ಧಮ೯ಪ್ರಚಾರದಲ್ಲಿ ಐಕ್ಯವಾಗಿ”

ಈ ವರ್ಷದ ವಿಶ್ವ ಧಮ೯ಪ್ರಚಾರ ಭಾನುವಾರದ ಧ್ಯೇಯವಾಕ್ಯವಾದ “ಕ್ರಿಸ್ತನಲ್ಲಿ ಒಂದಾಗಿ, ಮಿಷನ್‌ನಲ್ಲಿ ಐಕ್ಯವಾಗಿ” ಎಂಬುದು ವಿಶ್ವಾಸಿಗಳ ಐಕ್ಯತೆಯನ್ನು ಎತ್ತಿಹಿಡಿಯುವುದರ ಜೊತೆಗೆ ಈ ಜಾಗತಿಕ ಆಚರಣೆಯ ನೂರನೇ ವಾರ್ಷಿಕೋತ್ಸವವನ್ನೂ ಸ್ಮರಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಈ ಧ್ಯೇಯವಾಕ್ಯವು “ಧಮ೯ಸಭೆಯ ಎಲ್ಲ ಸದಸ್ಯರನ್ನು ಕ್ರಿಸ್ತನಲ್ಲಿ ಇನ್ನಷ್ಟು ಆಳವಾದ ಐಕ್ಯತೆಯತ್ತ ಮತ್ತು ದೇವರ ಪ್ರೀತಿಯ ದೈವಿಕ ಧ್ಯೇಯದಲ್ಲಿ ಸಂಪೂರ್ಣ ಏಕತೆಯತ್ತ ಆಹ್ವಾನಿಸುತ್ತದೆ” ಎಂದು ಅವರು ವಿವರಿಸಿದರು. ಇದು ಯೇಸು ತನ್ನ ಪಾಡು ಅನುಭವದ ಮೊದಲು ತಂದೆಯ ಮುಂದೆ ಸಲ್ಲಿಸಿದ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿದ ಆಳವಾದ ಬಯಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಮುಂದಿನ ವರ್ಷಗಳಲ್ಲಿ ಧರ್ಮ ಸಭೆಯಲ್ಲಿ ಮಿಷನರಿ ನವೀಕರಣಕ್ಕೆ ಈ ಧ್ಯೇಯವಾಕ್ಯವು ಕರೆ ನೀಡುತ್ತದೆ ಎಂದು ಹೇಳಿದ ಜಗದ್ಗುರುಗಳು, “ಕ್ರಿಸ್ತಕೇಂದ್ರಿತ ಮಿಷನರಿ ಐಕ್ಯತೆ ಮತ್ತು ಸಹಭಾಗಿತ್ವದ ನೈಜ ಆಧ್ಯಾತ್ಮಿಕತೆಯನ್ನು ಬದುಕಿ, ಅದನ್ನು ವಿಶ್ವಾಸಿಗಳ ನಡುವೆ ನಿಮ್ಮ ಕಾರ್ಯಗಳ ಮೂಲಕ ಉತ್ತೇಜಿಸಿ” ಎಂದು ಪ್ರೋತ್ಸಾಹಿಸಿದರು.

ಪೂಜ್ಯ ಫುಲ್ಟನ್ ಶೀನ್: ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯ ಬೆಳಕು

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿನ ಪಾಂಟಿಫಿಕಲ್ ಮಿಷನ್ ಸೊಸೈಟಿಗಳ ಖ್ಯಾತ ರಾಷ್ಟ್ರೀಯ ನಿರ್ದೇಶಕರಾಗಿದ್ದ ಪೂಜ್ಯ ಫುಲ್ಟನ್ ಜೆ. ಶೀನ್ ರವರು ಸೆಪ್ಟೆಂಬರ್ 24ರಂದು ಮಿಸ್ಸೌರಿಯ ಸೈಂಟ್ ಲೂಯಿಸ್‌ನಲ್ಲಿ ಧನ್ಯರೆಂದು ಘೋಷಿಸಲ್ಪಡುವುದು  “ದೈವಿಕ ಯೋಜನೆಯ ಭಾಗ” ಎಂದು ಜಗದ್ಗುರುಗಳು ಹೇಳಿದರು.

“ಆರ್ಚ್‌ಬಿಷಪ್ ಶೀನ್ ರವರು ಹಲವು ದಶಕಗಳ ಕಾಲ ರೇಡಿಯೋ ಮತ್ತು ದೂರದರ್ಶನ ಮಾಧ್ಯಮಗಳ ಮೂಲಕ ಪ್ರಕಾಶಿಸಿದ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯ ಬೆಳಕಾಗಿದ್ದರು. ನಾನು ಬೆಳೆದಾಗ ಅವರ ಸುವಾರ್ತಾ ಸೇವೆಯ ಫಲವನ್ನು ಸ್ವತಃ ಅನುಭವಿಸಿದ ಸಾಕ್ಷಿಯಾಗಿದ್ದೇನೆ” ಎಂದು ಜಗದ್ಗುರುಗಳು ನೆನಪಿಸಿಕೊಂಡರು.

“ಅವರ ಪ್ರಸಾರಗಳು ಲಕ್ಷಾಂತರ ಜನರಿಗೆ ಸುವಾರ್ತೆಯ ನಿರೀಕ್ಷೆಯನ್ನು ತಲುಪಿಸಿದವು. ಅವರ ಕಾರ್ಯಗಳು ಮತ್ತು ಪ್ರಯತ್ನಗಳು ಮೊದಲ ಸುವಾರ್ತಾ ಪ್ರಚಾರದ ಪ್ರದೇಶಗಳಲ್ಲಿನ ಧರ್ಮ ಸಭೆಗಳಿಗೆ ಅಪಾರ ಆಧ್ಯಾತ್ಮಿಕ ಮತ್ತು ಭೌತಿಕ ನೆರವನ್ನು ಒದಗಿಸಿದವು” ಎಂದು ಅವರು ಹೇಳಿದರು.

ಧನ್ಯರೆಂದು ಘೋಷಿಸಲ್ಪಡಲಿರುವ ಫುಲ್ಟನ್ ಶೀನ್ ರವರು ವಿಶ್ವದಾದ್ಯಂತದ ಪಾಂಟಿಫಿಕಲ್ ಮಿಷನ್ ಸೊಸೈಟಿಗಳ ರಾಷ್ಟ್ರೀಯ ಮತ್ತು ಧರ್ಮಪ್ರಾಂತೀಯ ನಿರ್ದೇಶಕರಿಗೆ ಮಾದರಿಯಾಗಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು.

ಧರ್ಮ ಸಭೆಯ ಧ್ಯೇಯಕ್ಕೆ ಅಮೂಲ್ಯ ಸೇವೆ

ವಿಶೇಷವಾಗಿ ಯುದ್ಧ, ಹಿಂಸಾಚಾರ ಮತ್ತು ವಿಭಜನೆಗಳಿಂದ ಬಳಲುತ್ತಿರುವ ಇಂದಿನ ಜಗತ್ತಿನಲ್ಲಿ ಪಾಂಟಿಫಿಕಲ್ ಮಿಷನ್ ಸೊಸೈಟಿಗಳ ಸೇವೆಯ ಮಹತ್ವವನ್ನು ಜಗದ್ಗುರುಗಳು ಒತ್ತಿಹೇಳಿದರು.

ರಾಷ್ಟ್ರಗಳು ಮತ್ತು ಜನಾಂಗಗಳ ನಡುವೆ ಹೆಚ್ಚುತ್ತಿರುವ ಸಂಘರ್ಷ, ಯುದ್ಧ ಮತ್ತು ಭಿನ್ನಾಭಿಪ್ರಾಯಗಳ ನಡುವೆ, ‘ಸುವಾರ್ತಾ ಪ್ರಚಾರದ ದಿಕಾಸ್ತೇರಿ’ಯ ಅಧೀನದಲ್ಲಿರುವ ನಾಲ್ಕು ಪಾಂಟಿಫಿಕಲ್ ಮಿಷನ್ ಸೊಸೈಟಿಗಳು ಶಾಂತಿಯ ರಾಜನಾದ ಕ್ರಿಸ್ತನನ್ನು ಘೋಷಿಸುವ ಧರ್ಮ ಸಭೆಯ ಧ್ಯೇಯಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ‘ಪವಿತ್ರ ಬಾಲ್ಯ ಮಿಷನ್ ಸಂಘ’ ವಿಶ್ವದಾದ್ಯಂತ, ವಿಶೇಷವಾಗಿ ದ್ವೇಷ ಮತ್ತು ಹಿಂಸಾಚಾರದಿಂದ ಬಳಲುತ್ತಿರುವ ಪ್ರದೇಶಗಳ ಮಕ್ಕಳಿಗೆ ನಂಬಿಕೆಯ ಬೆಳಕು ಮತ್ತು ಕ್ರೈಸ್ತ ಪ್ರೀತಿಯ ಸಾಂತ್ವನವನ್ನು ತಲುಪಿಸುವ ಅಮೂಲ್ಯ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಅವರು ಪ್ರಶಂಸಿಸಿದರು.

ಅದೇ ರೀತಿ, ಮೊದಲ ಸುವಾರ್ತಾ ಪ್ರಚಾರದ ಪ್ರದೇಶಗಳಲ್ಲಿ ಸ್ಥಳೀಯ ಯಾಜಕರು ಮತ್ತು ಧಾರ್ಮಿಕರ ತರಬೇತಿಯನ್ನು ಉತ್ತೇಜಿಸುವ ಹಾಗೂ ಬೆಂಬಲಿಸುವ ‘ಪವಿತ್ರ ಪೇತ್ರ ಪ್ರೇಷಿತರ ಮಿಷನ್ ಸಂಘ’ದ ಸೇವೆಯನ್ನು ಜಗದ್ಗುರುಗಳು ಶ್ಲಾಘಿಸಿದರು.

“ಈ ಸಂಘದ ನೆರವು ಇಲ್ಲದೆ ಅನೇಕ ಕಡೆಗಳಲ್ಲಿ ಗುರು ವಿದ್ಯಾರ್ಥಿಗಳು ಮತ್ತು ನವಶಿಷ್ಯರು ತಮ್ಮ ಮಾನವೀಯ, ಆಧ್ಯಾತ್ಮಿಕ ಮತ್ತು ಪಾಸ್ತೋರಲ್ ತರಬೇತಿಗೆ ಅಗತ್ಯವಾದ ಸಂಪನ್ಮೂಲಗಳಿಂದ ವಂಚಿತರಾಗುತ್ತಿದ್ದರು” ಎಂದು ಅವರು ಒಪ್ಪಿಕೊಂಡರು.

ಸಮಾರೋಪ

ಜಗದ್ಗುರು XIVನೇ ಲಿಯೋರವರು ತಮ್ಮ ಮುಂದೆ ಉಪಸ್ಥಿತರಿದ್ದ ಎಲ್ಲರನ್ನು ಹಾಗೂ ಪಾಂಟಿಫಿಕಲ್ ಮಿಷನ್ ಸೊಸೈಟಿಗಳ ಈ ಜೀವಂತ ಮಿಷನರಿ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲರನ್ನು ‘ಮಿಷನ್‌ಗಳ ರಾಣಿ’ಯಾದ ದೇವಮಾತೆ ಮರಿಯಮ್ಮನ ಮಾತೃಮಯ ಮಧ್ಯಸ್ಥಿಕೆಗೆ ಮತ್ತು ಎಲ್ಲಾ ಮಿಷನರಿ ಸಂತರ ಪ್ರಾರ್ಥನೆಗೆ ಸಮರ್ಪಿಸುತ್ತಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

01 ಜೂನ್ 2026, 16:36