ಸಾಮಾನ್ಯ ಸಭೆಯಲ್ಲಿ ಜಗದ್ಗುರು XIV ನೇ ಲಿಯೋರವರು ಸಾಮಾನ್ಯ ಸಭೆಯಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

ಜಗದ್ಗುರುಗಳು ಅಮೆರಿಕಾ–ಇರಾನ್ ಒಪ್ಪಂದವನ್ನು ಸ್ವಾಗತಿಸಿ, ಮಧ್ಯಪ್ರಾಚ್ಯದಲ್ಲಿ ಪರಸ್ಪರ ವಿಶ್ವಾಸ ಬೆಳೆಸುವಂತೆ ಕರೆ ನೀಡಿದರು.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಮತ್ತು ಉಕ್ರೇನ್ ಯುದ್ಧದಿಂದ ಬಳಲುತ್ತಿರುವ ಜನರಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದ ಜಗದ್ಗುರುಗಳು, ಎಲ್ಲ ಪಕ್ಷಗಳೂ ಹಿಂಸೆಯನ್ನು ತೊರೆದು ಶಾಂತಿ, ನ್ಯಾಯ ಮತ್ತು ಮಾನವ ಘನತೆಯನ್ನು ಕಾಪಾಡುವ ದಾರಿಯನ್ನು ಅನುಸರಿಸಬೇಕು ಎಂದು ಹೇಳಿದರು.

ವ್ಯಾಟಿಕನ್ ವರದಿ

ಬುಧವಾರದ ತಮ್ಮ ವಾರದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಇರಾನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಸಂವಾದ ಮತ್ತು ಸಹಕಾರದ ಮಾರ್ಗದಲ್ಲಿ ಮುಂದುವರಿಯುವಂತೆ ಕರೆ ನೀಡಿದರು.

ಸುಮಾರು ನಾಲ್ಕು ತಿಂಗಳ ಯುದ್ಧದ ಬಳಿಕ, ಈ ಎರಡು ರಾಷ್ಟ್ರಗಳು ಶುಕ್ರವಾರ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

“ಇಸ್ಲಾಮಿಕ್ ಗಣರಾಜ್ಯ ಇರಾನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನಡುವೆ ಒಪ್ಪಂದಕ್ಕೆ ಬಂದಿರುವುದನ್ನು ನಾನು ಸಂತೋಷದಿಂದ ಸ್ವಾಗತಿಸುತ್ತೇನೆ. ಶುಕ್ರವಾರ ಸಹಿಯಾಗಲಿರುವ ಈ ಒಪ್ಪಂದವು ತಾಳ್ಮೆಯಿಂದ ನಡೆಸಲಾದ ಸಂವಾದ ಮತ್ತು ಮಾತುಕತೆಗಳ ಪ್ರೋತ್ಸಾಹದಾಯಕ ಫಲವಾಗಿದೆ” ಎಂದು ಜಗದ್ಗುರುಗಳು ಹೇಳಿದರು.

ಶಾಂತಿ ಮಾತುಕತೆಗಳಿಗೆ ಅನುಕೂಲ ಕಲ್ಪಿಸಲು ಶ್ರಮಿಸಿದ ಮೂರನೇ ಪಕ್ಷದ ರಾಷ್ಟ್ರಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. “ಈ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಪರಸ್ಪರ ವಿಶ್ವಾಸ, ಭದ್ರತೆ ಮತ್ತು ಸ್ಥಿರತೆಯನ್ನು ಬಲಪಡಿಸಲು ನೆರವಾಗಿ, ಜನಾಂಗಗಳ ನಡುವೆ ಸಂವಾದ ಮತ್ತು ಸಹಕಾರದ ಮಾರ್ಗಗಳನ್ನು ಉತ್ತೇಜಿಸಲಿ ಎಂಬುದು ನನ್ನ ಆಶಯವಾಗಿದೆ” ಎಂದು ಅವರು ಹೇಳಿದರು.

ಫೆಬ್ರುವರಿ 28ರಂದು ಅಮೆರಿಕಾ ಮತ್ತು ಇಸ್ರೇಲ್, ಇರಾನ್‌ನ ಅಣುಶಕ್ತಿ ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ಆರಂಭಿಸಿದ್ದವು. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ ಹಾಗೂ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ನೆಲೆಗಳು ಮತ್ತು ಮಿತ್ರರಾಷ್ಟ್ರಗಳ ವಿರುದ್ಧ ಪ್ರತಿದಾಳಿಗಳನ್ನು ನಡೆಸಿತ್ತು. ಜೊತೆಗೆ ಹೋರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗು ಸಂಚಾರಕ್ಕೂ ಅಡ್ಡಿಪಡಿಸಿತ್ತು.

ಉಕ್ರೇನಿಗಾಗಿ ಜಗದ್ಗುರುಗಳ ಮನವಿ

ಉಕ್ರೇನಿನಲ್ಲಿ ಹೆಚ್ಚುತ್ತಿರುವ ಸಾವುನೋವುಗಳ ಬಗ್ಗೆ ಜಗದ್ಗುರು ಲಿಯೋರವರು ತೀವ್ರ ವಿಷಾದ ವ್ಯಕ್ತಪಡಿಸಿದರು. ವಿಶೇಷವಾಗಿ ಉಕ್ರೇನಿನ ನಗರಗಳ ಮೇಲೆ ರಷ್ಯಾ ತನ್ನ ದಾಳಿಗಳನ್ನು ತೀವ್ರಗೊಳಿಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಅವರು ಹೇಳಿದರು.

“ಅಸಂಖ್ಯಾತ ನಿರಪರಾಧಿಗಳು ಬಲಿಯಾಗುತ್ತಿದ್ದಾರೆ. ರಕ್ಷಣಾ ಕಾರ್ಯಕರ್ತರು ಸಾವನ್ನಪ್ಪುತ್ತಿದ್ದಾರೆ. ಧರ್ಮ ಸಭೆಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಸ್ಥಳಗಳು ಬೆಂಕಿಗೆ ಆಹುತಿಯಾಗುತ್ತಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಶೋಕಿಸುತ್ತಿರುವವರೊಂದಿಗೆ, ಗಾಯಗೊಂಡವರೊಂದಿಗೆ ಹಾಗೂ ಹಿಂಸಾಚಾರದ ನಡುವೆಯೂ ಧೈರ್ಯದಿಂದ ಜೀವವನ್ನು ರಕ್ಷಿಸಲು ಸೇವೆ ಸಲ್ಲಿಸುತ್ತಿರುವ ಎಲ್ಲರೊಂದಿಗೆ ನಾನು ಆತ್ಮೀಯವಾಗಿ ಇದ್ದೇನೆ” ಎಂದು ಜಗದ್ಗುರುಗಳು ಹೇಳಿದರು.

ಉಕ್ರೇನ್ ಯುದ್ಧದ ಅಂತ್ಯಕ್ಕಾಗಿ ಪ್ರಾರ್ಥಿಸುವಂತೆ ಅವರು ಎಲ್ಲರಿಗೂ ಕರೆ ನೀಡಿದರು. “ಈ ಯುದ್ಧವು ಕೊನೆಗೊಳ್ಳಲೆಂದು ನಾವು ಪ್ರಾರ್ಥಿಸೋಣ. ಸಂವಾದದ ಮಾರ್ಗಗಳನ್ನು ತೆರೆಯಲು, ದ್ವೇಷವನ್ನು ನಂದಿಸಲು ಮತ್ತು ನ್ಯಾಯಸಮ್ಮತ ಹಾಗೂ ಶಾಶ್ವತ ಶಾಂತಿಯನ್ನು ಸಾಧ್ಯವಾಗಿಸಲು ಪ್ರಭು ಸಹಾಯ ಮಾಡಲಿ ಎಂದು ಬೇಡಿಕೊಳ್ಳೋಣ” ಎಂದು ಜಗದ್ಗುರು XIVನೇ ಲಿಯೋರವರು ಮನವಿ ಮಾಡಿದರು.

17 ಜೂನ್ 2026, 15:47