ಡಿಜಿಟಲ್ ಯುಗದಲ್ಲಿ ಆರೋಗ್ಯ ಮಾಹಿತಿಯ ಬಲವಾದ ರಕ್ಷಣೆಗೆ ಜಗದ್ಗುರುಗಳು ಕರೆ ನೀಡಿದರು.
ವ್ಯಾಟಿಕನ್ ವರದಿ
ವ್ಯಕ್ತಿಗಳನ್ನು ದುರುಪಯೋಗಕ್ಕೆ ಒಳಪಡಿಸಬಹುದಾದ ದತ್ತಾಂಶವಾಗಿ ಪರಿಗಣಿಸಬಾರದು ಜಗದ್ಗುರು XIVನೇ ಲಿಯೋರವರು
ಜಗದ್ಗುರು XIVನೇ ಲಿಯೋರವರು ವ್ಯಕ್ತಿಗಳನ್ನು ಕೇವಲ ದುರುಪಯೋಗಕ್ಕೆ ಒಳಪಡಿಸಬಹುದಾದ ಮಾಹಿತಿಯ ಮೂಲಗಳಾಗಿ ಪರಿಗಣಿಸುವ ಪ್ರವೃತ್ತಿಯ ವಿರುದ್ಧ ಎಚ್ಚರಿಕೆ ನೀಡಿದ್ದು, ಖಾಸಗಿತನದ ಹಕ್ಕು ಹಾಗೂ ಸಾರ್ವಜನಿಕ ಹಿತ ಎರಡನ್ನೂ ಉತ್ತೇಜಿಸುವ ನೀತಿಗಳನ್ನು ರೂಪಿಸುವಂತೆ ಕರೆ ನೀಡಿದ್ದಾರೆ.
ಜೂನ್ 1ರಂದು ದಿನಾಂಕಿತ ಸಂದೇಶವೊಂದರಲ್ಲಿ, ಆರೋಗ್ಯ ಸಂಬಂಧಿತ ದತ್ತಾಂಶದ ಸಂಗ್ರಹಣೆ ಮತ್ತು ಬಳಕೆಯಲ್ಲಿ ಮಾನವ ಘನತೆಯನ್ನು ರಕ್ಷಿಸಲು ಇನ್ನಷ್ಟು ಬಲವಾದ ಭದ್ರತಾ ಕ್ರಮಗಳ ಅಗತ್ಯವಿದೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ಡಿಜಿಟಲ್ ಯುಗದಲ್ಲಿ ವ್ಯಕ್ತಿಗಳನ್ನು ಕೇವಲ ಶೋಷಣೆಗೆ ಒಳಪಡಿಸಬಹುದಾದ ಮಾಹಿತಿಯ ಮೂಲಗಳಾಗಿ ಕುಗ್ಗಿಸುವ ಅಪಾಯ ಹೆಚ್ಚುತ್ತಿದೆ ಎಂದು ಅವರು ಎಚ್ಚರಿಸಿದರು.
ಈ ಸಂದೇಶವನ್ನು ವಿಶ್ವ ವೈದ್ಯಕೀಯ ಸಂಘದ ತೈಪೆ ಘೋಷಣೆ ಪರಿಷ್ಕರಣೆಗೆ ಸಂಬಂಧಿಸಿದ ಮೂರನೇ ಮುಕ್ತ ತಜ್ಞರ ಸಭೆಯಲ್ಲಿ ಭಾಗವಹಿಸಿದವರಿಗೆ ಕಳುಹಿಸಲಾಗಿತ್ತು. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಉದ್ಭವಿಸುತ್ತಿರುವ ತುರ್ತು ನೈತಿಕ ಸವಾಲುಗಳನ್ನು ಜಗದ್ಗುರುಗಳು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದರು.
ಈ ಸಂದೇಶವನ್ನು ಜೀವಕ್ಕಾಗಿ ಪಾಂಟಿಫಿಕಲ್ ಅಕಾಡೆಮಿಯ ಅಧ್ಯಕ್ಷರಾದ ಆರ್ಚ್‌ಬಿಷಪ್ ರೆನ್ಜೋ ಪೆಗೊರಾರೊರವರಿಗೆ ಉದ್ದೇಶಿಸಿ ಕಳುಹಿಸಲಾಗಿದ್ದು, ಜಗದ್ಗುರುಗಳ ಪರವಾಗಿ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರು ಸಹಿ ಮಾಡಿದ್ದರು.
ತೈಪೆ ಘೋಷಣೆ
ತೈಪೆ ಘೋಷಣೆಯು ಆರೋಗ್ಯ ದತ್ತಸಂಗ್ರಹಗಳು, ಜೈವಿಕ ಮಾದರಿ ಭಂಡಾರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ವೈದ್ಯಕೀಯ ಸಂಶೋಧನೆಗಳಿಗೆ ನೈತಿಕ ಮಾರ್ಗದರ್ಶನವನ್ನು ಒದಗಿಸುತ್ತದೆ.
ಹೊಸ ತಂತ್ರಜ್ಞಾನಗಳು ಮತ್ತು ದತ್ತಾಂಶ ಸಂಗ್ರಹಣೆಯ ಹೊಸ ವಿಧಾನಗಳ ಬೆಳಕಿನಲ್ಲಿ ಈ ದಸ್ತಾವೇಜನ್ನು ಪರಿಷ್ಕರಿಸುವ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ, ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿನ ಪ್ರಗತಿಯು ಮಾನವ ವ್ಯಕ್ತಿಯ ಗೌರವದ ಮೇಲಿನ ಅಚಲವಾದ ಗೌರವದಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಎಂದು ಜಗದ್ಗುರು ಲಿಯೋರವರು ಒತ್ತಿಹೇಳಿದರು.
ಹೊಸ ರೀತಿಯ ವಸಾಹತುಶಾಹಿ
ತಮ್ಮ ಇತ್ತೀಚಿನ ಪರಿಪತ್ರಿಕೆಯಾದ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಅನ್ನು ಉಲ್ಲೇಖಿಸಿದ ಜಗದ್ಗುರುಗಳು, ಇಂದಿನ ಸಮಾಜವು “ಹೊಸ ರೀತಿಯ ವಸಾಹತುಶಾಹಿ”ಯನ್ನು ಎದುರಿಸುತ್ತಿದೆ ಎಂದು ಹೇಳಿದರು. ಈ ಹೊಸ ಪ್ರವೃತ್ತಿಯು ವ್ಯಕ್ತಿಗಳ ವೈಯುಕ್ತಿಕ ಜೀವನವನ್ನು ಶೋಷಿಸಬಹುದಾದ ದತ್ತಾಂಶವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಎಚ್ಚರಿಸಿದರು.
ತಂತ್ರಜ್ಞಾನದ ನಿರಂತರ ಬೆಳವಣಿಗೆಯು ಖಾಸಗಿತನ ಮತ್ತು ಭದ್ರತೆಯ ರಕ್ಷಣಾ ಕ್ರಮಗಳನ್ನು ಪರಿಷ್ಕರಿಸಿ ಬಲಪಡಿಸುವ ಕಾರ್ಯವನ್ನು ಹಿಂದೆಂದಿಗಿಂತಲೂ ಹೆಚ್ಚು ತುರ್ತಾಗಿಸಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯ ಸಹಜ ಘನತೆ
ಪ್ರತಿಯೊಬ್ಬ ವ್ಯಕ್ತಿಯು ಸಹಜವಾದ ಮತ್ತು ಅಳಿಸಲಾಗದ ಘನತೆಯನ್ನು ಹೊಂದಿದ್ದು, ಅದನ್ನು ಕೇವಲ ಮಾಹಿತಿ ಅಥವಾ ವಾಣಿಜ್ಯ ಮೌಲ್ಯಕ್ಕೆ ಸೀಮಿತಗೊಳಿಸಲಾಗುವುದಿಲ್ಲ ಎಂದು ಜಗದ್ಗುರು ಲಿಯೋರವರು ಪ್ರತಿಪಾದಿಸಿದರು.
ದೇವರ ಸ್ವರೂಪ ಮತ್ತು ಹೋಲಿಕೆಯಲ್ಲಿ ಸೃಷ್ಟಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯೂ “ಅಮೂಲ್ಯ ಮೌಲ್ಯವನ್ನು ಹೊಂದಿರುವ, ಅನನ್ಯ ಮತ್ತು ಯಾರೊಂದಿಗೂ ಹೋಲಿಸಲಾಗದ ವ್ಯಕ್ತಿ” ಎಂದು ಅವರು ಸಂದೇಶದಲ್ಲಿ ತಿಳಿಸಿದರು. ಆದ್ದರಿಂದ, ವ್ಯಕ್ತಿಗಳನ್ನು ಕೇವಲ ದತ್ತಾಂಶದ ಸಂಗ್ರಹಗಳಂತೆ ಪರಿಗಣಿಸುವ ಶೋಷಣೆ ಮತ್ತು ವಾಣಿಜ್ಯೀಕರಣದ ಎಲ್ಲ ರೂಪಗಳ ವಿರುದ್ಧ ಸಮಾಜವು ಎಚ್ಚರಿಕೆಯಿಂದಿರಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿದವರಿಗೆ ಪ್ರೋತ್ಸಾಹ ನೀಡಿದ ಜಗದ್ಗುರು ಲಿಯೋರವರು, ಪರಿಷ್ಕೃತ ತೈಪೆ ಘೋಷಣೆ ಮಾನವ ಘನತೆಯನ್ನು ಕಾಪಾಡುತ್ತಲೇ ಸಾರ್ವಜನಿಕ ಹಿತಕ್ಕಾಗಿ ಜ್ಞಾನವನ್ನು ಜವಾಬ್ದಾರಿಯುತವಾಗಿ ಹಂಚಿಕೊಳ್ಳುವಿಕೆಯನ್ನು ಉತ್ತೇಜಿಸಲಿ ಎಂದು ಆಶಿಸಿದರು. ವ್ಯಕ್ತಿಯ ಮೇಲಿನ ಗೌರವ ಮತ್ತು ಹಂಚಿಕೆಯ ಜ್ಞಾನದ ವೃದ್ಧಿಯೇ ನೈತಿಕ ವೈದ್ಯಕೀಯ ಸಂಶೋಧನೆ ಹಾಗೂ ಆರೋಗ್ಯ ನೀತಿಗಳ ಮೂಲಾಧಾರವಾಗಿರಬೇಕು ಎಂದು ಅವರು ಹೇಳಿದರು.
