ಗಾಜಾ ನಗರದ ಚಾರಿಟಿ ಅಡುಗೆಮನೆಯಿಂದ ಆಹಾರವನ್ನು ಸ್ವೀಕರಿಸಲು ಪ್ಯಾಲೆಸ್ಟೀನಿಯನ್ನರು ಕಾಯುತ್ತಿದ್ದಾರೆ. ಗಾಜಾ ನಗರದ ಚಾರಿಟಿ ಅಡುಗೆಮನೆಯಿಂದ ಆಹಾರವನ್ನು ಸ್ವೀಕರಿಸಲು ಪ್ಯಾಲೆಸ್ಟೀನಿಯನ್ನರು ಕಾಯುತ್ತಿದ್ದಾರೆ. 

‘ನಾವು’ ಎಂಬ ಒಗ್ಗಟ್ಟಿನ ಭಾಷೆಯನ್ನು ಮತ್ತೆ ಕಟ್ಟುವುದು”.

“ಮ್ಯಾಗ್ನಿಫಿಕಾ ಹ್ಯುಮಾನಿಟಾಸ್” ಮಾನವ ಅಸ್ತಿತ್ವದ ಅನೇಕ ಆಯಾಮಗಳನ್ನು ಸ್ಪರ್ಶಿಸುವ ವಿಷಯಗಳನ್ನು ಚರ್ಚಿಸುತ್ತದೆ. ಈ ವ್ಯಾಪಕತೆಯ ಬೆಳಕಿನಲ್ಲಿ ಹಾಗೂ ಪರಿಪತ್ರಿಕೆಯ 13ನೇ ವಿಧಿಯಿಂದ ಸ್ಫೂರ್ತಿ ಪಡೆದು, ಜಗದ್ಗುರು XIVನೇ ಲಿಯೋರವರು ಪ್ರಸ್ತಾಪಿಸಿರುವ ವಿಷಯಗಳ ಕುರಿತು ನಡೆಯುವ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಲು ನಾವು ಬಯಸುತ್ತೇವೆ. ಅದಕ್ಕಾಗಿ, ಕಥೋಲಿಕ ಧರ್ಮ ಸಭೆಗೆ ಸೇರದವರು ಅಥವಾ ಅದರೊಂದಿಗೆ ನಿಕಟ ಸಂಬಂಧ ಹೊಂದಿರದವರೂ ತಮ್ಮ ಚಿಂತನೆಗಳು ಮತ್ತು ಪ್ರತಿಬಿಂಬಗಳನ್ನು ಹಂಚಿಕೊಳ್ಳುವಂತೆ ನಾವು ಆಹ್ವಾನಿಸುತ್ತೇವೆ.”

ವ್ಯಾಟಿಕನ್ ವರದಿ

ಪೋಪ್ ಲಿಯೋ XIV ಅವರ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪರಿಪತ್ರಿಕೆ ಇಂದಿನ ಜಗತ್ತಿನ ಬಹುಮುಖ ಸಂಕಟಗಳನ್ನು ವಿಶ್ಲೇಷಿಸುತ್ತದೆ. ಬಹುಪಕ್ಷೀಯ ವ್ಯವಸ್ಥೆಗಳ ದುರ್ಬಲತೆ ಕೇವಲ ರಾಜಕೀಯ ಅಥವಾ ರಾಜತಾಂತ್ರಿಕ ಸಮಸ್ಯೆಯಲ್ಲ ಅದು ಮಾನವಕುಲವು ತನ್ನನ್ನು ಒಂದೇ ಹಂಚಿಕೊಂಡ ಭವಿಷ್ಯದ ಭಾಗವಾಗಿ ನೋಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವುದರ ಸಂಕೇತವಾಗಿದೆ ಎಂದು ಜಗದ್ಗುರುಗಳು ಎಚ್ಚರಿಸುತ್ತಾರೆ. ದ್ವಿತೀಯ ಮಹಾಯುದ್ಧದ ನಂತರ ಶಾಂತಿ, ಅಂತರರಾಷ್ಟ್ರೀಯ ಕಾನೂನು ಮತ್ತು ಸಹಕಾರದ ಆಧಾರದ ಮೇಲೆ ನಿರ್ಮಿಸಲಾದ ಜಾಗತಿಕ ವ್ಯವಸ್ಥೆ ಇಂದು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ.

ಪರಿಪತ್ರಿಕೆಯ ಪ್ರಕಾರ, ಯುದ್ಧವನ್ನು ಮತ್ತೆ ಅಂತರರಾಷ್ಟ್ರೀಯ ರಾಜಕೀಯದ ಸಾಧನವಾಗಿ ಒಪ್ಪಿಕೊಳ್ಳುವ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ. ಶಸ್ತ್ರಾಸ್ತ್ರ ಸ್ಪರ್ಧೆ, ಪರಸ್ಪರ ಅವಿಶ್ವಾಸ ಮತ್ತು ಅಧಿಕಾರದ ರಾಜಕಾರಣವು ಜಗತ್ತನ್ನು "ನಿರಂತರ ಸಂಘರ್ಷದ" ಸ್ಥಿತಿಯತ್ತ ತಳ್ಳುತ್ತಿದೆ. ಇದರ ಪರಿಣಾಮವಾಗಿ ವಿಶ್ವಸಂಸ್ಥೆಯಂತಹ ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ. ಈ ಬಿಕ್ಕಟ್ಟಿನ ಮೂಲದಲ್ಲಿ ರಾಷ್ಟ್ರಗಳ ನಡುವಿನ ವಿಶ್ವಾಸದ ಕೊರತೆಯಿದೆ ವಿಶ್ವಾಸ ಕುಸಿದಾಗ ಯಾವುದೇ ಸಂಸ್ಥೆಯು ತನ್ನ ಉದ್ದೇಶವನ್ನು ಪರಿಣಾಮಕಾರಿಯಾಗಿ ನೆರವೇರಿಸಲು ಸಾಧ್ಯವಾಗುವುದಿಲ್ಲ.

ಜಗದ್ಗುರುಗಳು ಯುದ್ಧ, ಬಡತನ ಮತ್ತು ಹಸಿವಿನ ನಡುವೆ ಇರುವ ಅವಿಭಾಜ್ಯ ಸಂಬಂಧವನ್ನು ವಿಶೇಷವಾಗಿ ಒತ್ತಿ ಹೇಳುತ್ತಾರೆ. ಯುದ್ಧವು ಆರ್ಥಿಕತೆಯನ್ನು ಹಾಳುಮಾಡಿ, ಕೃಷಿಯನ್ನು ನಾಶಮಾಡಿ, ಆಹಾರ ಭದ್ರತೆಯನ್ನು ಕುಗ್ಗಿಸುತ್ತದೆ. ಉಕ್ರೇನ್ ಯುದ್ಧದಂತಹ ಸಂಘರ್ಷಗಳು ದೂರದ ಆಫ್ರಿಕಾ ಮತ್ತು ಏಷ್ಯಾದ ದೇಶಗಳ ಮೇಲೂ ಪರಿಣಾಮ ಬೀರುತ್ತವೆ. ಭೂಮಿಯ ಸಂಪನ್ಮೂಲಗಳು ಎಲ್ಲರ ಒಳಿತಿಗಾಗಿ ಎಂಬ "ಸಾರ್ವತ್ರಿಕ ಗಮ್ಯತೆ" ತತ್ವವನ್ನು ನೆನಪಿಸುತ್ತಾ, ವಲಸಿಗರು ಮತ್ತು ನಿರಾಶ್ರಿತರು ಇಂದಿನ ಜಗತ್ತಿನ ನ್ಯಾಯಬದ್ಧತೆಯ ಪರೀಕ್ಷೆಯಾಗಿ ನಿಂತಿದ್ದಾರೆ ಎಂದು ಅವರು ಹೇಳುತ್ತಾರೆ.

ಹವಾಮಾನ ಬದಲಾವಣೆ ಮತ್ತೊಂದು ಜಾಗತಿಕ ಸವಾಲು. ಇದು ಯಾವುದೇ ಒಂದು ರಾಷ್ಟ್ರದ ಗಡಿಗಳೊಳಗೆ ಸೀಮಿತವಾಗದ ಸಮಸ್ಯೆಯಾಗಿರುವುದರಿಂದ ರಾಷ್ಟ್ರಗಳ ನಡುವೆ ನಿಜವಾದ ಸಹಕಾರ ಅಗತ್ಯವಾಗಿದೆ. ಲೌದತೋ ಸಿ’ ಪರಂಪರೆಯನ್ನು ಮುಂದುವರಿಸುತ್ತಾ, ಜಗದ್ಗುರುಗಳು ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯು ಮಾನವೀಯ ಮೌಲ್ಯಗಳ ಮಾರ್ಗದರ್ಶನವಿಲ್ಲದೆ ನಡೆದರೆ ಪರಿಸರ ಮತ್ತು ಸಮಾಜಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಎಂದು ಎಚ್ಚರಿಸುತ್ತಾರೆ.

ಕೃತಕ ಬುದ್ಧಿಮತ್ತೆಯ ಆಡಳಿತದ ಕುರಿತು  ಮ್ಯಾಗ್ನಿಫಿಕಾ ಹ್ಯುಮಾನಿಟಾಸ್  ಮಹತ್ವದ ದೃಷ್ಟಿಕೋನವನ್ನು ನೀಡುತ್ತದೆ. ಸೈಬರ್ ದಾಳಿಗಳು, ಮಾಹಿತಿ ದುರುಪಯೋಗ ಮತ್ತು ಸ್ವಯಂಚಾಲಿತ ನಿರ್ಧಾರಗಳಂತಹ ಹೊಸ ರೀತಿಯ ಸಂಘರ್ಷಗಳು ಜಾಗತಿಕ ಮಟ್ಟದಲ್ಲಿ ಉದ್ಭವಿಸುತ್ತಿವೆ. ಆದ್ದರಿಂದ ಎಐ ಅಭಿವೃದ್ಧಿ ಮತ್ತು ಬಳಕೆಗೆ ಸಾಮಾನ್ಯ ನೈತಿಕ ಮಾನದಂಡಗಳು ಹಾಗೂ ಅಂತರರಾಷ್ಟ್ರೀಯ ನಿಯಂತ್ರಣ ಅಗತ್ಯವೆಂದು ಜಗದ್ಗುರುಗಳು ಒತ್ತಿ ಹೇಳುತ್ತಾರೆ. ಯಾವುದೇ ರಾಷ್ಟ್ರವು ಒಂಟಿಯಾಗಿ ಈ ಸವಾಲನ್ನು ಎದುರಿಸಲು ಸಾಧ್ಯವಿಲ್ಲ.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಆಶಾವಾದದ ಸಂದೇಶವನ್ನು ನೀಡುತ್ತಾರೆ. ಶಾಂತಿ ಎಂದರೆ ಕೇವಲ ಯುದ್ಧದ ಅನುಪಸ್ಥಿತಿ ಅಲ್ಲ; ಅದು ನ್ಯಾಯ, ಸಂವಾದ, ಮಾನವ ಘನತೆ ಮತ್ತು ಹಂಚಿಕೊಂಡ ಜವಾಬ್ದಾರಿಯ ಫಲವಾಗಿದೆ. ಇಂದಿನ ಜಗತ್ತಿನ ಪ್ರಮುಖ ಸವಾಲು "ನಾವು" ಎಂಬ ಸಮೂಹಭಾವದ ವ್ಯಾಕರಣವನ್ನು ಪುನರ್‌ನಿರ್ಮಿಸುವುದಾಗಿದೆ. ಇತರರನ್ನು ಶತ್ರುಗಳಾಗಿ ಅಲ್ಲ, ನಮ್ಮ ಸಾಮಾನ್ಯ ಭವಿಷ್ಯದ ಸಹಯಾತ್ರಿಗಳಾಗಿ ನೋಡುವ ಮನೋಭಾವವೇ ಶಾಂತಿ, ಪ್ರಜಾಪ್ರಭುತ್ವ ಮತ್ತು ಮಾನವ ಘನತೆಯನ್ನು ಉಳಿಸಬಲ್ಲದು ಎಂದು ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಕರೆ ನೀಡುತ್ತದೆ.

20 ಜೂನ್ 2026, 16:26