ಜಗದ್ಗುರು XIVನೇ ಲಿಯೋರವರು ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರನ್ನು ವ್ಯಾಟಿಕನ್‌ಗೆ ಸ್ವಾಗತಿಸುತ್ತಾರೆ ಜಗದ್ಗುರು XIVನೇ ಲಿಯೋರವರು ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರನ್ನು ವ್ಯಾಟಿಕನ್‌ಗೆ ಸ್ವಾಗತಿಸುತ್ತಾರೆ  (ANSA)

ಜೆರುಸಲೇಮಿನ ಹೀಬ್ರೂ ವಿಶ್ವವಿದ್ಯಾಲಯಕ್ಕೆ ಜಗದ್ಗುರುಗಳ ಕರೆ: ‘ನಿಜವಾದ ಶಾಂತಿಯನ್ನು ನಿರ್ಮಿಸುವವರಾಗಿರಿ’.

ಜಗದ್ಗುರು XIVನೇ ಲಿಯೋರವರು ಜೆರುಸಲೇಮಿನ ಹೀಬ್ರೂ ವಿಶ್ವವಿದ್ಯಾಲಯದ ಪ್ರತಿನಿಧಿಗಳನ್ನು ಭೇಟಿಯಾಗಿ, ಹಿಂಸಾಚಾರ ಮತ್ತು ವಿಭಜನೆಯಿಂದ ಗಾಯಗೊಂಡಿರುವ ಇಂದಿನ ಜಗತ್ತಿನಲ್ಲಿ ಭರವಸೆ, ಶಾಂತಿ ಮತ್ತು ಐಕ್ಯತೆಯ ದೀಪಸ್ತಂಭಗಳಾಗುವಂತೆ ಅವರನ್ನು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

“ಹಿಂಸಾಚಾರ ಮತ್ತು ಕಟುವಾದ ಭಾಷಣಗಳಿಂದ ಆಗಾಗ ಗುರುತಿಸಲ್ಪಡುವ ಈ ಕಾಲಘಟ್ಟದಲ್ಲಿ, ನಿಮ್ಮ ವೈವಿಧ್ಯಮಯ ವಿಶ್ವವಿದ್ಯಾಲಯ ಸಮುದಾಯದ ಸದಸ್ಯರು ನಿಜವಾದ ಶಾಂತಿಯ ಶಿಲ್ಪಿಗಳಾಗುವುದನ್ನು ಮುಂದುವರಿಸಬಹುದು. ಆ ಶಾಂತಿ ಶಸ್ತ್ರರಹಿತವಾಗಿದ್ದು, ಹಿಂಸೆಯನ್ನು ನಿರಾಯುಧಗೊಳಿಸುವಂತದ್ದಾಗಿದೆ; ಅದು ವಿನಮ್ರವೂ ದೃಢಸಂಕಲ್ಪಪೂರ್ಣವೂ ಆಗಿದ್ದು, ಜನರ ನಡುವೆ ಸೌಹಾರ್ದವನ್ನು ಬೆಳೆಸಲು ಶ್ರಮಿಸುತ್ತದೆ.”

ಜಗದ್ಗುರು XIVನೇ ಲಿಯೋರವರು ಗುರುವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಜೆರುಸಲೇಮ್‌ನ ಹೀಬ್ರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರನ್ನು ಭೇಟಿಯಾದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು.

ಜಗದ್ಗುರುಗಳು ಅವರನ್ನು ಸ್ವಾಗತಿಸುತ್ತಾ, ವ್ಯಾಟಿಕನ್ ನಗರ ಮತ್ತು ರೋಮಿನ ಬಗ್ಗೆ ತಮ್ಮ ಅರಿವನ್ನು ಇನ್ನಷ್ಟು ಆಳಗೊಳಿಸಿಕೊಳ್ಳಲು ಈ ಭೇಟಿಯು ಸಹಕಾರಿಯಾಗಲಿ ಎಂದು ಆಶಿಸಿದರು. ಕ್ರೈಸ್ತ ನಂಬಿಕೆಯ ಉದ್ಭವ ಮತ್ತು ಬೆಳವಣಿಗೆಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ರೋಮಿನ, ಸಾವಿರಾರು ವರ್ಷಗಳಿಂದ ವಿವಿಧ ಸಂಸ್ಕೃತಿಗಳು ಮತ್ತು ಜನಾಂಗಗಳ ಸಂಗಮಕ್ಕೆ ವೇದಿಕೆಯಾಗಿರುವ ಸ್ಥಳವೂ ಹೌದು ಎಂದು ಅವರು ನೆನಪಿಸಿದರು.

ಅದೇ ರೀತಿ, ವಿಶ್ವವಿದ್ಯಾಲಯಗಳು ದೀರ್ಘಕಾಲದಿಂದಲೂ ಭೇಟಿಯ ಮತ್ತು ಸಂವಾದದ ಕೇಂದ್ರಗಳಾಗಿದ್ದು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಜ್ಞಾನ ಮತ್ತು ವಿವೇಕದಲ್ಲಿ ಬೆಳೆಯಲು ಸಹಕಾರಿಯಾಗಿವೆ ಎಂದು ಅವರು ಹೇಳಿದರು.

ಯಾವಾಗಲೂ ಸುಲಭವಲ್ಲ

“ಇದು ಯಾವಾಗಲೂ ಸುಲಭವಲ್ಲ,” ಎಂದು ಅವರು ಒಪ್ಪಿಕೊಂಡರೂ, “ಅರ್ಥಪೂರ್ಣ ಭೇಟಿಗಳಿಗೆ ಅವಕಾಶಗಳು ಸದಾ ಲಭ್ಯವಾಗುವಂತೆ ನೋಡಿಕೊಳ್ಳಲು ವಿಶ್ವವಿದ್ಯಾಲಯಗಳು ನಿರಂತರವಾಗಿ ಶ್ರಮಿಸಬೇಕು” ಎಂದು ಹೇಳಿದರು.

ಜಗದ್ಗುರುಗಳ ಪ್ರಕಾರ, ಇದು ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯ ಜೀವನದ ಅತ್ಯಗತ್ಯ ಭಾಗವಾಗಿದೆ. ಏಕೆಂದರೆ ಇತರರೊಂದಿಗೆ ನಮ್ಮ ಸಂಬಂಧಗಳು, ನಮ್ಮ ಭಾಷೆಗಳು ಮತ್ತು ನಮ್ಮ ಸಂಸ್ಕೃತಿಗಳು ನಾವು ಮಾನವರಾಗಿ ಯಾರು ಎಂಬುದನ್ನು ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.

ಭೇಟಿ ಮತ್ತು ಸಂವಾದಕ್ಕೆ ಸಹಜ ವೇದಿಕೆಗಳಾದ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕವಾಗಿ “ಸಂವಾದಕ್ಕೆ ವಿಶೇಷವಾದ ಸ್ಥಳಗಳು” ಆಗಿವೆ ಎಂದು ಜಗದ್ಗುರು ಲಿಯೋರವರು ಹೇಳಿದರು. ಇಲ್ಲಿ ಜ್ಞಾನದ ಅನ್ವೇಷಣೆ ಶೈಕ್ಷಣಿಕ ಸಮುದಾಯದೊಳಗಿನ ವಿಚಾರ ವಿನಿಮಯದೊಂದಿಗೆ ಅವಿನಾಭಾವವಾಗಿ ಜೋಡಿಸಿಕೊಂಡಿರುತ್ತದೆ.

“ಪರಸ್ಪರ ಗೌರವಯುತ ಸಂವಾದಕ್ಕೆ ಅವಕಾಶವಿರುವ ವಾತಾವರಣದಲ್ಲಿ,” ಎಂದು ಅವರು ಹೇಳಿದರು, “ಭಿನ್ನಾಭಿಪ್ರಾಯ ಹೊಂದಿರುವವರಿಂದಲೂ ಅವರ ದೃಷ್ಟಿಕೋನಗಳು ಮತ್ತು ಜೀವನ ಸಾಕ್ಷ್ಯಗಳಿಂದ ಕಲಿಯುವ ಮೂಲಕ ಪ್ರತಿಯೊಬ್ಬರೂ ಜ್ಞಾನದಲ್ಲಿ ಬೆಳೆಯಬಹುದು.”

ಅಡೆತಡೆಗಳನ್ನು ನಿವಾರಿಸುವುದು

“ಇಂತಹ ವಾತಾವರಣದಲ್ಲಿ, ತಾಳ್ಮೆಯುತ ಪರಿಶ್ರಮದ ಮೂಲಕ,” ಎಂದು ಜಗದ್ಗುರು ಲಿಯೋರವರು ಒತ್ತಿಹೇಳಿದರು, “ತಪ್ಪು ತಿಳುವಳಿಕೆ ಮತ್ತು ಅವಿಶ್ವಾಸದಿಂದ ಉಂಟಾಗುವ ಅಡೆತಡೆಗಳನ್ನು ಕ್ರಮೇಣ ನಿವಾರಿಸಲು ಸಾಧ್ಯವಾಗುತ್ತದೆ.”

ದೇವರು ಲೋಕಕ್ಕೆ ಶಾಂತಿಯನ್ನು ತರುವ ತನ್ನ ಸಾಧನಗಳಾಗುವಂತೆ ನಮ್ಮನ್ನು ಕರೆಯುತ್ತಾನೆ ಎಂದು ಜಗದ್ಗುರುಗಳು ಹೇಳಿದರು. ಆದರೆ ಆ ಕಾರ್ಯ ನಮ್ಮಿಂದಲೇ ಆರಂಭವಾಗಬೇಕು.

“ಶಾಂತಿ ಅಸಾಧ್ಯವಾದದ್ದು ಅಥವಾ ನಮ್ಮ ಕೈಗೆಟುಕದದ್ದು ಎಂದು ನಂಬುವ ಬದಲು,” ಎಂದು ಜಗದ್ಗುರು ಲಿಯೋರವರು ಹೇಳಿದರು, “ನಾವು ನಮ್ಮ ಸಮುದಾಯಗಳಲ್ಲಿ ಶಾಂತಿಯನ್ನು ಉತ್ತೇಜಿಸಲು ಮತ್ತು ನಮ್ಮ ಸ್ವಂತ ಜೀವನದಲ್ಲಿಯೇ ಅದನ್ನು ಸ್ವೀಕರಿಸಿ ಗುರುತಿಸಲು ಪ್ರಯತ್ನಿಸಬೇಕು.”

ಕೊನೆಯಲ್ಲಿ, ಶಾಂತಿಯ ಶಿಲ್ಪಿಗಳನ್ನು ರೂಪಿಸುವ ಮೂಲಕ ವಿಶ್ವವಿದ್ಯಾಲಯ ಸಮುದಾಯವು “ಹೆಚ್ಚೆಚ್ಚು ವಿಭಜನೆಯಾಗುತ್ತಿರುವ ಜಗತ್ತಿನಲ್ಲಿ ಆಶೆ ಮತ್ತು ಐಕ್ಯತೆಯ ದೀಪಸ್ತಂಭವಾಗಿ ಮುಂದುವರಿಯಲಿ” ಎಂದು ಜಗದ್ಗುರು ಲಿಯೋರವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

18 ಜೂನ್ 2026, 14:43