ಜಗದ್ಗುರುಗಳು: ‘ಪ್ರೀತಿಯ ನಾಗರಿಕತೆಯನ್ನು’ ನಿರ್ಮಿಸಲು ಧೈರ್ಯ ಮತ್ತು ವಿನಮ್ರ ನಾಯಕತ್ವ ಅಗತ್ಯ.
ವ್ಯಾಟಿಕನ್ ವರದಿ
ಶುಕ್ರವಾರ ಜಗದ್ಗುರು XIVನೇ ಲಿಯೋರವರು‘ಬೊರ್ಗೊ ಲೌದಾತೋ ಸಿ’ ಸಂವಾದಗಳ ಮೊದಲ ಆವೃತ್ತಿಯಲ್ಲಿ ಭಾಗವಹಿಸಿದವರನ್ನು ಸ್ವಾಗತಿಸಿದರು. ಭಾಗವಹಿಸಿದವರು ಕಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಬೊರ್ಗೊ ಲೌದಾತೋ ಸಿಯಲ್ಲಿ ಎರಡು ದಿನಗಳ ಕಾಲ ನಡೆದ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಈ ಸಂವಾದಗಳು ಕೃತಕ ಬುದ್ಧಿಮತ್ತೆ ಮತ್ತು ಅದರ ಮಾನವ ಘನತೆಯ ಮೇಲಿನ ಪರಿಣಾಮ, ಆರೋಗ್ಯಕರ ವೃದ್ಧಾಪ್ಯ, ಕ್ರೀಡಾ ರಾಜತಾಂತ್ರಿಕತೆ ಹಾಗೂ ಪರಿಸರ ಸುಸ್ಥಿರತೆ ಸೇರಿದಂತೆ ಇಂದಿನ ಮಾನವಕುಲ ಎದುರಿಸುತ್ತಿರುವ ಅತ್ಯಂತ ತುರ್ತು ಸವಾಲುಗಳ ಕುರಿತು ಕೇಂದ್ರೀಕೃತವಾಗಿದ್ದವು.
ಈ ಉಪಕ್ರಮವು, ಜಗದ್ಗುರು ಫ್ರಾನ್ಸಿಸ್ ರವರ 2015ರ ಲೌದಾತೋ ಸಿ ವಿಶ್ವಪತ್ರಿಕೆಯಿಂದ ಪ್ರೇರಿತವಾಗಿ, ಕಾಸ್ಟೆಲ್ ಗಾಂಡೋಲ್ಫೊದ ಪಾಪಲ್ ವಿಲ್ಲಾಗಳಲ್ಲಿ ಸ್ಥಾಪಿಸಲಾದ ಸಮಗ್ರ ಪರಿಸರಶಾಸ್ತ್ರದ ಕೇಂದ್ರವಾದ ಬೊರ್ಗೊ ಲೌದಾತೋ ಸಿಯ ವಿಶಾಲ ಧ್ಯೇಯದ ಒಂದು ಭಾಗವಾಗಿದೆ. ಈ ಸಂವಾದಗಳು ವಿವಿಧ ದೇಶಗಳು ಮತ್ತು ಕ್ಷೇತ್ರಗಳಿಂದ ಬಂದ ತಜ್ಞರು, ವೃತ್ತಿಪರರು ಹಾಗೂ ನಾಯಕರನ್ನು ಒಗ್ಗೂಡಿಸಿ, ನೈತಿಕ ನಾಯಕತ್ವವು ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಪರಿಶೀಲಿಸಿತು.
ಸಭೆಯ ಸಮಾರೋಪದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು ಲಿಯೋರವರು, ಈ ಕೂಟವನ್ನು “ಇಂದು ವಿಭಜಿತವಾಗಿರುವ ಮತ್ತು ತನ್ನ ಐತಿಹಾಸಿಕ ಬೇರುಗಳನ್ನು ಮರೆತಿರುವಂತೆ ಕಾಣುವ ಜಗತ್ತಿನಲ್ಲಿ ನೈತಿಕ ನಾಯಕತ್ವವನ್ನು ನವೀಕರಿಸಿ ಮರುರೂಪಿಸುವ ಪ್ರಕ್ರಿಯೆಯ ಮೊದಲ ಹೆಜ್ಜೆ” ಎಂದು ಬಣ್ಣಿಸಿದರು. ತಮ್ಮ ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ವಿಶ್ವಪತ್ರಿಕೆಯಲ್ಲಿ ಪ್ರಸ್ತಾಪಿಸಿದ ಕೆಲವು ವಿಷಯಗಳನ್ನು ಸ್ಮರಿಸಿದ ಅವರು, ಸಮಕಾಲೀನ ಸವಾಲುಗಳನ್ನು ಎದುರಿಸಲು ಸಂವಾದದ ಮಹತ್ವವನ್ನು ಪುನರುಚ್ಚರಿಸಿದರು. “ಸಾಮಾನ್ಯ ಹಿತಕ್ಕಾಗಿ ಮತ್ತು ಪ್ರತಿಯೊಬ್ಬರಿಗೂ ಘನತೆಯುತ ಜೀವನವನ್ನು ಉತ್ತೇಜಿಸಲು ನಾವು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೇವೆ,” ಎಂದು ಅವರು ಹೇಳಿದರು.
ಜಗದ್ಗುರು ಹೆಚ್ಚುತ್ತಿರುವ “ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕುರುಡುತನ”ದ ಬಗ್ಗೆ ಎಚ್ಚರಿಕೆ ನೀಡಿದರು. ಇದು ಸಮಾಜವನ್ನು ತನ್ನ ಐತಿಹಾಸಿಕ ಸ್ಮರಣೆಯಿಂದ ದೂರಗೊಳಿಸುವ ಅಪಾಯವನ್ನು ಹೊಂದಿದೆ ಎಂದು ಅವರು ಹೇಳಿದರು. “ಒಂದು ತಪ್ಪು ವ್ಯಾವಹಾರಿಕ ಮನೋಭಾವವು ನಮ್ಮ ಇತಿಹಾಸದ ಬೇರುಗಳನ್ನು ಕತ್ತರಿಸಲು ಪ್ರೇರೇಪಿಸುತ್ತದೆ,ಭೂತಕಾಲದಿಂದ ಸಂಪೂರ್ಣವಾಗಿ ವಿಚ್ಛೇದಿತವಾದ ‘ಹೊಸ ಸೃಷ್ಟಿ’ಯನ್ನು ಆರಂಭಿಸಬಹುದು ಎಂಬ ಭ್ರಮೆಯನ್ನು ಉಂಟುಮಾಡುತ್ತದೆ,” ಎಂದು ಅವರು ಹೇಳಿದರು. ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವವರೂ ಸಹ ಕೆಲವೊಮ್ಮೆ “ಐತಿಹಾಸಿಕ ಶೂನ್ಯವಾದ”ದ ಬಲೆಗೆ ಬೀಳಬಹುದು ಮತ್ತು ಇಪ್ಪತ್ತನೇ ಶತಮಾನದ ದುರಂತಗಳು ಮತ್ತೆ ಸಂಭವಿಸುವುದಿಲ್ಲ ಎಂದು ತಪ್ಪಾಗಿ ಭಾವಿಸಬಹುದು ಎಂದು ಅವರು ಎಚ್ಚರಿಸಿದರು.
ಮುಂದುವರಿದು, ಈ ಸಂವಾದಗಳು ಧರ್ಮ ಸಭೆಯ ಸಿನೋಡಲ್ ದೃಷ್ಟಿಕೋನದಿಂದ ಪ್ರೇರಿತವಾಗಿವೆ ಎಂದು ಜಗದ್ಗುರುಗಳು ತಿಳಿಸಿದರು. ವಿಭಿನ್ನ ಧ್ವನಿಗಳನ್ನು ಒಗ್ಗೂಡಿಸುತ್ತಾ, ಸಾಮಾನ್ಯ ಕಾಳಜಿಗಳ ಸುತ್ತ ಏಕತೆಯನ್ನು ಹುಡುಕುವ ಪ್ರಯತ್ನ ಇದಾಗಿದೆ ಎಂದರು. ವಿಭಿನ್ನ ಹಿನ್ನೆಲೆಗಳು ಮತ್ತು ಪರಿಣತಿಯ ಕ್ಷೇತ್ರಗಳನ್ನು ಹೊಂದಿದ್ದರೂ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ನವೀಕರಣವನ್ನು ಉತ್ತೇಜಿಸಲು ತೋರಿದ ಬದ್ಧತೆಗಾಗಿ ಅವರು ಭಾಗವಹಿಸಿದವರನ್ನು ಶ್ಲಾಘಿಸಿದರು.
ತಾಂತ್ರಿಕ ಮತ್ತು ಆರ್ಥಿಕ ಅಭಿವೃದ್ಧಿಯಿಂದ ಉದ್ಭವಿಸುವ ನೈತಿಕ ಸವಾಲುಗಳ ಕುರಿತು ಮಾತನಾಡಿದ ಜಗದ್ಗುರುಗಳು, ಸಮಾಜದ ಎರಡು ವಿರುದ್ಧ ದೃಷ್ಟಿಕೋನಗಳನ್ನು ಹೋಲಿಸಿದರು. “ಅತ್ಯಂತ ದುರ್ಬಲರ ಹಿತಾಸಕ್ತಿಯನ್ನು ಬಲಿಕೊಟ್ಟು ಲಾಭದ ಆರಾಧನೆಯನ್ನು ಪ್ರತಿನಿಧಿಸುವ ಹಾಗೂ ಅಮಾನವೀಕರಣದ ಅಪಾಯವನ್ನು ಹೆಚ್ಚಿಸುವ ‘ಬಾಬೆಲ್ ಗೋಪುರ’ವನ್ನು ನಿರ್ಮಿಸುವ ಪ್ರಲೋಭನೆಯ ಎದುರು, ಕ್ರೈಸ್ತರು ‘ಹೊಸ ಜೆರುಸಲೇಮ್’, ಅಂದರೆ ಪ್ರೀತಿಯ ನಾಗರಿಕತೆಯನ್ನು ನಿರ್ಮಿಸಲು ತಮ್ಮ ಕೊಡುಗೆಯನ್ನು ನೀಡಲು ಕರೆಯಲ್ಪಟ್ಟಿದ್ದಾರೆ,” ಎಂದು ಅವರು ಹೇಳಿದರು.
‘ಪ್ರೀತಿಯ ನಾಗರಿಕತೆ’ಯು ಯಾವುದೇ ಅದ್ಭುತ ಅಥವಾ ಭವ್ಯ ಕಾರ್ಯದಿಂದ ನಿರ್ಮಾಣವಾಗುವುದಿಲ್ಲ ಎಂದು ಜಗದ್ಗುರುಗಳು ವಿವರಿಸಿದರು. ಬದಲಾಗಿ, ಅದು ಪ್ರತಿದಿನದ ನಿಷ್ಠೆ, ಕಾಳಜಿ ಮತ್ತು ಸೇವೆಯ ಸಣ್ಣ ಆದರೆ ದೃಢವಾದ ಕಾರ್ಯಗಳ ಸಮೂಹದಿಂದ ರೂಪುಗೊಳ್ಳುತ್ತದೆ. “ಅಮಾನವೀಕರಣದ ವಿರುದ್ಧ ರಕ್ಷಣಾ ಗೋಡೆಯಾಗಿ ಕಾರ್ಯನಿರ್ವಹಿಸುವ ಈ ನಿಷ್ಠಾವಂತ ಕಾರ್ಯಗಳ ಒಟ್ಟು ಫಲವೇ ಪ್ರೀತಿಯ ನಾಗರಿಕತೆಯನ್ನು ನಿರ್ಮಿಸುತ್ತದೆ,” ಎಂದು ಅವರು ಹೇಳಿದರು.
ಬೊರ್ಗೊ ಲೌದಾತೋ ಸಿಯ ಪಾಪಲ್ ಉದ್ಯಾನಗಳ ನೈಸರ್ಗಿಕ ಪರಿಸರದಲ್ಲಿ ಈ ಸಭೆ ನಡೆದಿರುವ ಮಹತ್ವವನ್ನೂ ಜಗದ್ಗುರುಗಳು ಉಲ್ಲೇಖಿಸಿದರು. ಅಲ್ಲಿ ಭಾಗವಹಿಸಿದವರು “ಸೃಷ್ಟಿಯ ಸೌಂದರ್ಯ ಮತ್ತು ಸೃಷ್ಟಿಕರ್ತನ ಮಹಿಮೆಯಿಂದ” ಪ್ರೇರಣೆ ಪಡೆದು, ಸ್ಥಳೀಯ ಅನುಭವಗಳನ್ನು ಜಾಗತಿಕ ಹೊಣೆಗಾರಿಕೆಗೆ ಸಂಪರ್ಕಿಸುವ ಪ್ರಯತ್ನ ನಡೆಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಕೊನೆಯಲ್ಲಿ, ತಮ್ಮ ಬದ್ಧತೆಗಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಜಗದ್ಗುರು XIVನೇ ಲಿಯೋರವರು, ಕಾಸ್ಟೆಲ್ ಗಾಂಡೋಲ್ಫೊದಲ್ಲಿ ಆರಂಭವಾದ ಈ ಪ್ರಕ್ರಿಯೆಯು ಭವಿಷ್ಯದ ಭೇಟಿಗಳು ಮತ್ತು ಹೊಸ ಉಪಕ್ರಮಗಳ ಮೂಲಕ ಮುಂದುವರಿಯಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
