ಹುಡುಕಿ

ITALY-VATICAN-POPE-VISIT

ಪಾವಿಯಾದಲ್ಲಿ ಜಗದ್ಗುರುಗಳು: ‘ನಮ್ಮ ಅಂತರಂಗದತ್ತ ಮುಖಮಾಡುವ ಅಗತ್ಯವನ್ನು’ ಸಂತ ಆಗಸ್ಟಿನ್ ನಮಗೆ ಬೋಧಿಸುತ್ತಾರೆ.

ಸಂತ ಆಗಸ್ಟಿನ್ ರವರ ಸಮಾಧಿಗೊಳಗಾಗಿರುವ ದೇವಾಲಯಕ್ಕೆ ಜಗದ್ಗುರು ಲಿಯೋರವರು ಭೇಟಿ ನೀಡಿ, ನಿರಾಶಾವಾದ, ಅಂತರಂಗದ ಜೀವನ ಮತ್ತು “ಕಾಲದ ಸಂಕೇತಗಳನ್ನು ಓದುವ” ಅಗತ್ಯದ ಕುರಿತು ಚಿಂತನೆ ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಶನಿವಾರ ಪಾವಿಯಾಗೆ ನೀಡಿದ ತಮ್ಮ ಪ್ರೇಷಿತರ ಭೇಟಿಯ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ನಗರದ ಪ್ರಮುಖ ಚೌಕಗಳಲ್ಲಿ ಒಂದರಲ್ಲಿ ಸೇರಿದ್ದ ನಾಗರಿಕ ಮತ್ತು ಧಾರ್ಮಿಕ ಅಧಿಕಾರಿಗಳು ಹಾಗೂ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಪಾವಿಯಾದ ಸೌಂದರ್ಯವನ್ನು ಸ್ಮರಿಸಿದ ಅವರು, “ನಗರವು ಒಂದು ವರವೂ ಹೌದು, ಒಂದು ಕರ್ತವ್ಯವೂ ಹೌದು” ಎಂದು ಹೇಳಿದರು. ನಗರದ ಸ್ಮಾರಕಗಳು, ಶಾಲೆಗಳು, ವಿಶ್ವವಿದ್ಯಾನಿಲಯ, ಆಸ್ಪತ್ರೆ ಮತ್ತು ಧರ್ಮ ಕೇಂದ್ರಗಳು ಮಾನವ ಘನತೆ, ಶಿಕ್ಷಣ, ಸಂಸ್ಕೃತಿ ಮತ್ತು ಐಕ್ಯತೆಯ ಮೇಲಿನ ಸಮೂಹ ಬದ್ಧತೆಯ ಸಾಕ್ಷಿಗಳಾಗಿವೆ ಎಂದು ಅವರು ತಿಳಿಸಿದರು.

ಸಂಬಂಧಗಳ ಮೇಲೆ ನಿರ್ಮಿತವಾದ ನಗರ

“ನಗರ” ಎಂಬ ಪದದ ಆಳವಾದ ಅರ್ಥವನ್ನು ವಿವರಿಸಿದ ಜಗದ್ಗುರಗಳು, ಅದರ ಲ್ಯಾಟಿನ್ ಮೂಲವಾದ ಸಿವಿಟಾಸ್ ಅನ್ನು ಉಲ್ಲೇಖಿಸಿದರು. ಇದು ಕೇವಲ ಒಂದು ಭೌತಿಕ ಸ್ಥಳವನ್ನಲ್ಲ, ಮಾನವ ಸಮುದಾಯವನ್ನೂ ಸೂಚಿಸುತ್ತದೆ ಎಂದರು. ವ್ಯಕ್ತಿಗಳು ತಮ್ಮ ಸ್ವಂತ ಹಿತಾಸಕ್ತಿಗಿಂತ ಸಾಮೂಹಿಕ ಹಿತಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಸಮಾಜವು ಅಭಿವೃದ್ಧಿ ಹೊಂದುತ್ತದೆ ಎಂದು ಅವರು ಹೇಳಿದರು. “ನಾಗರಿಕರು ಯಾವಾಗಲೂ ಸಹ-ನಾಗರಿಕರಾಗಿರುತ್ತಾರೆ” ಎಂದು ಒತ್ತಿಹೇಳಿದ ಜಗದ್ಗುರಗಳು, ಸಾರ್ವಜನಿಕ ಜೀವನವು ಹಂಚಿಕೊಂಡ ಜವಾಬ್ದಾರಿಯ ಮನೋಭಾವದ ಮೇಲೆ ಅವಲಂಬಿತವಾಗಿದೆ ಎಂದರು.

ಇಂದಿನ ಸವಾಲುಗಳ ಕುರಿತು ಚಿಂತನೆ ನಡೆಸಿದ ಅವರು, ಉದಾಸೀನತೆ ಮತ್ತು ನಾಗರಿಕ ಜೀವನದಿಂದ ದೂರವಿರುವ ಪ್ರವೃತ್ತಿಯು ಸಮಾಜದ ಬಾಂಧವ್ಯವನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಎಚ್ಚರಿಸಿದರು. ಅದರ ಬದಲು, ಸಾರ್ವಜನಿಕ ಜೀವನದಲ್ಲಿ ಹೊಸ ಉತ್ಸಾಹದಿಂದ ಭಾಗವಹಿಸುವಂತೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಭೇಟಿಯ ಹಾಗೂ ಸಂವಾದದ ಕೇಂದ್ರಗಳಾಗಿ ಉಳಿಸುವ ಸೇವಾ ಸಂಸ್ಕೃತಿಯನ್ನು ಬೆಳೆಸುವಂತೆ ಕರೆ ನೀಡಿದರು.

“ನನಗೆ ನಮ್ಮ ನಗರದ ಬಗ್ಗೆ ಕಾಳಜಿಯಿದೆ”

ನಂತರ ಜಗದ್ಗುರುಗಳು, ಪ್ರತಿಯೊಬ್ಬ ನಿವಾಸಿಯೂ ಸಮುದಾಯದ ಹಿತಕ್ಕಾಗಿ ವೈಯಕ್ತಿಕ ಬದ್ಧತೆಯನ್ನು ತೋರಿಸಬೇಕು ಎಂದು ಹೇಳಿದರು. “ಇಂದು ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮೊಳಗೆ ಹೀಗೆ ಹೇಳಿಕೊಳ್ಳಿರಿ. ‘ನನಗೆ ನಮ್ಮ ನಗರದ ಬಗ್ಗೆ ಕಾಳಜಿಯಿದೆ’” ಎಂದು ಅವರು ಆಹ್ವಾನಿಸಿದರು. ಈ ಕಾಳಜಿ ಕೇವಲ ಜನರ ಬಗ್ಗೆ ಮಾತ್ರವಲ್ಲ, ನಗರದ ಸುತ್ತಲಿನ ಭೂಪ್ರದೇಶದ ಕುರಿತೂ ಇರಬೇಕು ಎಂದ ಅವರು, ಪಾವಿಯಾವನ್ನು ಸುತ್ತುವರಿದಿರುವ ಫಲವತ್ತಾದ ಸಮತಟ್ಟು ಪ್ರದೇಶಗಳನ್ನು ಹಾಗೂ ಸೃಷ್ಟಿಯೊಂದಿಗೆ ಸಾಮರಸ್ಯದಲ್ಲಿ ಭೂಮಿಯನ್ನು ಬೆಳೆಸಿದ ಪೀಳಿಗೆಯ ಕಾರ್ಮಿಕರನ್ನು ಪ್ರಶಂಸಿಸಿದರು.

ಶಿಕ್ಷಣ ಮತ್ತು ಸತ್ಯದ ಅನ್ವೇಷಣೆ

ಪಾವಿಯಾದ ವಿಶಿಷ್ಟ ಶೈಕ್ಷಣಿಕ ಪರಂಪರೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ನಗರದ ವಿಶ್ವವಿದ್ಯಾನಿಲಯ ಮತ್ತು ವಿದ್ಯಾರ್ಥಿಗಳತ್ತ ಗಮನ ಹರಿಸಿದರು. ನಿಜವಾದ ಶಿಕ್ಷಣ ಕೇಂದ್ರವು ಕೇವಲ ಜ್ಞಾನ ಸಂಗ್ರಹದ ಸ್ಥಳವಾಗಿರಬಾರದು, ಅದು ವ್ಯಕ್ತಿಯ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಿ, ವೈಜ್ಞಾನಿಕ ಮತ್ತು ಬೌದ್ಧಿಕ ಪ್ರಗತಿಯ ಕೇಂದ್ರದಲ್ಲಿ ಮಾನವನನ್ನು ಇರಿಸಬೇಕು ಎಂದು ಹೇಳಿದರು. ಪ್ರತಿಯೊಂದು ಜ್ಞಾನ ಕ್ಷೇತ್ರವೂ ಒಂದು ರೀತಿಯ ಕಾಳಜಿಗೆ ಸಂಬಂಧಿಸಿದೆ ಎಂದು ವಿವರಿಸಿದ ಅವರು, ವೈದ್ಯಕೀಯವು ಮಾನವ ದೇಹದ ಬಗ್ಗೆ ಕಾಳಜಿ ವಹಿಸುತ್ತದೆ, ಕಾನೂನು ಸಮಾಜದ ದೇಹದ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ತತ್ತ್ವಶಾಸ್ತ್ರವು ಮಾನವ ಚಿಂತನೆಯ ಬಗ್ಗೆ ಕಾಳಜಿ ವಹಿಸುತ್ತದೆ ಎಂದರು. ಜ್ಞಾನದ ಅನ್ವೇಷಣೆ ಅಂತಿಮವಾಗಿ ಮಾನವನನ್ನು ಸತ್ಯ ಮತ್ತು ನ್ಯಾಯದ ಕುರಿತ ಆಳವಾದ ಪ್ರಶ್ನೆಗಳತ್ತ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ಅರಿವಿನ ಹುಡುಕಾಟದಲ್ಲಿರುವ ಎಲ್ಲರಿಗೂ ಮಾದರಿಯಾಗಿರುವ ಸಂತ ಆಗಸ್ಟಿನ್ ಅವರನ್ನು ಜಗದ್ಗುರುಗಳು ಸ್ಮರಿಸಿದರು. ಅಧ್ಯಯನ ಮಾಡುವವರು, ಬೋಧಿಸುವವರು ಮತ್ತು ಜೀವನದ ಅರ್ಥವನ್ನು ಹುಡುಕುವವರನ್ನು ಪ್ರೇರೇಪಿಸುವ “ಆರೋಗ್ಯಕರ ಅಶಾಂತಿ”ಯನ್ನು ಆಗಸ್ಟಿನ್ ರವರು ತಮ್ಮ ಜೀವನದಲ್ಲಿ ತೋರಿಸಿದರು ಎಂದು ಹೇಳಿದರು. ಅವರ ಜೀವನವು ನಂಬಿಕೆ ಮತ್ತು ವಿವೇಕದ ನಡುವಿನ ಶಾಶ್ವತ ಸಂವಾದಕ್ಕೆ ಸಾಕ್ಷಿಯಾಗಿದೆ. “ಯೋಚಿಸದೆ ನಂಬಲು ಸಾಧ್ಯವಿಲ್ಲ, ಹಾಗೆಯೇ ನಂಬಿಕೆಯ ಬೆಳಕಿಲ್ಲದೆ ವಿವೇಕದ ಉನ್ನತ ಪ್ರಶ್ನೆಗಳಿಗೆ ಉತ್ತರ ದೊರೆಯುವುದಿಲ್ಲ” ಎಂದು ಜಗದ್ಗುರುಗಳು ಹೇಳಿದರು.

ದಯೆಯ ಮನೆಯಾಗಿರುವ ಧರ್ಮ ಸಭೆ

ಸ್ಥಳೀಯ ಧರ್ಮ ಸಭೆಯ ಕುರಿತು ಮಾತನಾಡಿದ ಜಗದ್ಗುರು ಲಿಯೋರವರು, ಅದನ್ನು ಎಲ್ಲರನ್ನು ಸ್ವಾಗತಿಸುವ ಮತ್ತು ಅತ್ಯಂತ ಅಗತ್ಯದಲ್ಲಿರುವವರಿಗೆ ಸೇವೆ ಸಲ್ಲಿಸುವ ಮನೆಯೆಂದು ವರ್ಣಿಸಿದರು. ಪಾವಿಯಾದ ಧರ್ಮ ಸಭೆ ವಿಶೇಷವಾಗಿ ಬಡವರು, ವೃದ್ಧರು ಮತ್ತು ಏಕಾಂತವನ್ನು ಅನುಭವಿಸುವವರಿಗಾಗಿ “ನಂಬಿಕೆಯ ಒಲೆ ಮತ್ತು ದಯೆಯ ಮನೆ” ಆಗಿರಬೇಕೆಂದು ಅವರು ಹೇಳಿದರು. ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿರುವ ಅನೇಕ ಸ್ವಯಂಸೇವಕರಿಗೆ ಅವರು ಕೃತಜ್ಞತೆ ಸಲ್ಲಿಸಿ, ಅವರ ಸೇವೆಯು ಭೌತಿಕ ಸಂಪತ್ತಿನಲ್ಲಷ್ಟೇ ಅಲ್ಲ, ಸದ್ಗುಣಗಳಲ್ಲಿಯೂ ಶ್ರೀಮಂತವಾಗಿರುವ ನಗರದ ಸಂಕೇತವಾಗಿದೆ ಎಂದು ಪ್ರಶಂಸಿಸಿದರು.

ಒಟ್ಟಾಗಿ ಬರೆಯಬೇಕಾದ ಇತಿಹಾಸ

ತಮ್ಮ ಭಾಷಣದ ಕೊನೆಯಲ್ಲಿ, ಪಾವಿಯಾದ ನಾಗರಿಕ ಲಾಂಛನದಲ್ಲಿರುವ ಶಿಲುಬೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಅದು ಕೇವಲ ಒಂದು ಚಿಹ್ನೆಯಲ್ಲ ಎಂದು ಹೇಳಿದರು. ಅದು ನಗರದ ಇತಿಹಾಸವು ಕ್ರೈಸ್ತ ಪ್ರೀತಿಯ ವಿಶ್ವವ್ಯಾಪಿ ಮೌಲ್ಯದ ಮೇಲೆ ನೆಲೆಗೊಂಡಿದೆ ಎಂಬುದನ್ನು ನೆನಪಿಸುತ್ತದೆ ಎಂದರು.

ಆ ಇತಿಹಾಸವು ನಾಗರಿಕರು, ಸಂಘಟನೆಗಳು, ಸಾರ್ವಜನಿಕ ಸಂಸ್ಥೆಗಳು, ಧರ್ಮ ಸಭೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಸಾಗುವ ಸಹಕಾರದ ಮೂಲಕ ಇನ್ನೂ ಬರೆಯಲ್ಪಡುತ್ತಲೇ ಇದೆ ಎಂದು ಜಗದ್ಗುರು ಲಿಯೋರವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

20 ಜೂನ್ 2026, 19:26