ಹುಡುಕಿ

VIನೇ ಪಾಲ್  ಸಭಾಂಗಣಲ್ಲಿ ಜಗದ್ಗುರು ಲಿಯೋರವರು ಇಟಾಲಿಯನ್ ಕಥೋಲಿಕ ಗೈಡ್ಸ್ ಮತ್ತು ಸ್ಕೌಟ್ಸ್ ಅನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. VIನೇ ಪಾಲ್ ಸಭಾಂಗಣಲ್ಲಿ ಜಗದ್ಗುರು ಲಿಯೋರವರು ಇಟಾಲಿಯನ್ ಕಥೋಲಿಕ ಗೈಡ್ಸ್ ಮತ್ತು ಸ್ಕೌಟ್ಸ್ ಅನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.  (ANSA)

ಜಗದ್ಗುರುಗಳು ಸ್ಕೌಟ್ಸ್ ಮತ್ತು ಗೈಡ್ಸ್‌ಗಳಿಗೆ ಕರೆ: ಜೀವನದ ಪಯಣದಲ್ಲಿ ಸುವಾರ್ತೆಯೇ ನಿಮ್ಮ ಮಾರ್ಗದರ್ಶಕವಾಗಿರಲಿ.

ವ್ಯಾಟಿಕನ್‌ನಲ್ಲಿ ಇಟಾಲಿಯನ್ ಕಥೋಲಿಕ ಗೈಡ್ಸ್ ಮತ್ತು ಸ್ಕೌಟ್ಸ್ ಆಫ್ ಯೂರೋಪ್ ಸಂಘದ ಸದಸ್ಯರನ್ನು ಭೇಟಿಯಾದ ಜಗದ್ಗುರು XIVನೇ ಲಿಯೋರವರು, ನಂಬಿಕೆ, ಸೇವೆ ಮತ್ತು ಕ್ರೈಸ್ತ ಸಾಕ್ಷ್ಯ ಜೀವನದ ಮೇಲಿನ ತಮ್ಮ ಬದ್ಧತೆಯನ್ನು ಇನ್ನಷ್ಟು ಗಾಢಗೊಳಿಸಿಕೊಳ್ಳುವಂತೆ ಕಥೋಲಿಕ ಸ್ಕೌಟ್ಸ್ ಮತ್ತು ಗೈಡ್ಸ್‌ಗಳನ್ನು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಇಟಾಲಿಯನ್ ಕಥೋಲಿಕ ಗೈಡ್ಸ್ ಮತ್ತು ಸ್ಕೌಟ್ಸ್ ಆಫ್ ಯೂರೋಪ್ ಸಂಘದ 50ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ನಡೆದ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಈ ಸುವರ್ಣ ಮಹೋತ್ಸವವನ್ನು ಇತ್ತೀಚೆಗೆ ಆಚರಿಸಲಾದ ಪವಿತ್ರ ಪಂಚಶತ್ತಮ ಹಬ್ಬದೊಂದಿಗೆ ಸಂಪರ್ಕಿಸಿ, “ಪಂಚಶತ್ತಮ” ಎಂಬ ಪದದ ಅರ್ಥವೇ “ಐವತ್ತನೆಯದು” ಎಂದು ನೆನಪಿಸಿದರು.

“ಈ ಸಂತೋಷದ ವಾರ್ಷಿಕೋತ್ಸವವು ನಿಮಗೆ ಹೊಸ ಪಂಚಶತ್ತಮ ಅನುಭವವಾಗಲಿ” ಎಂದು ಅವರು ಹೇಳಿದರು. ಮೇಲ್ಮನೆಯಲ್ಲಿ ಒಟ್ಟುಗೂಡಿದ್ದ ಪ್ರೇಷಿತರ ಮೇಲೆ ಪವಿತ್ರಾತ್ಮ ಇಳಿದಂತೆಯೇ, ಸಂಘದ ಪ್ರತಿಯೊಬ್ಬ ಸದಸ್ಯನ ಮೇಲೂ ಪವಿತ್ರಾತ್ಮನು ಇಳಿದು ಬರಲೆಂದು ಅವರು ಪ್ರಾರ್ಥಿಸಿದರು.

ಪವಿತ್ರಾತ್ಮನ ವರವು ಕ್ರೈಸ್ತ ಜೀವನಕ್ಕೆ ಚೈತನ್ಯ ನೀಡುತ್ತದೆ, ಹೃದಯಗಳನ್ನು ಮಿಷನ್ ಕಾರ್ಯಕ್ಕೆ ತೆರೆದಿಡುತ್ತದೆ ಹಾಗೂ ನಂಬಿಕೆಯ ಸೌಂದರ್ಯಕ್ಕೆ ಸಾಕ್ಷಿಯಾಗಲು ಸದಾ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ವಿಶ್ವಾಸಿಗಳಿಗೆ ಶಕ್ತಿ ನೀಡುತ್ತದೆ ಎಂದು ಜಗದ್ಗುರುಗಳು ಹೇಳಿದರು. ರಕ್ಷಣೆಯ ಸಂದೇಶವು ಆಶಾಭರವಿನಿಂದ ತುಂಬಿದ್ದು, ಪ್ರತಿಯೊಂದು ನಿರ್ಧಾರ ಮತ್ತು ಕಾರ್ಯದಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸಲು ಕ್ರೈಸ್ತರನ್ನು ಪ್ರೇರೇಪಿಸುತ್ತದೆ ಎಂದರು.

ಐವತ್ತು ವರ್ಷಗಳ ಇತಿಹಾಸ

ಸಂಘದ ಐವತ್ತು ವರ್ಷಗಳ ಇತಿಹಾಸವನ್ನು ಸ್ಮರಿಸಿದ ಜಗದ್ಗುರುಗಳು, ಲಾರ್ಡ್ ಬೇಡನ್-ಪವೆಲ್ ರೂಪಿಸಿದ ಸ್ಕೌಟಿಂಗ್ ವಿಧಾನವನ್ನು ಆಧಾರವಾಗಿಟ್ಟುಕೊಂಡ ಅದರ ಶಿಕ್ಷಣ ಧ್ಯೇಯವನ್ನು ಪ್ರಶಂಸಿಸಿದರು.

ಈ ವಿಧಾನದಿಂದ ಯುವಜನರು ಯೇಸು ಕ್ರಿಸ್ತರನ್ನು ಭೇಟಿಯಾಗುವ ದಾರಿಯಲ್ಲಿ ಮುನ್ನಡೆಸಲ್ಪಡುತ್ತಾರೆ ಎಂದು ಅವರು ಹೇಳಿದರು. ಯೇಸುವನ್ನು ಅವರು “ಉತ್ತಮ ಜೀವನದ ಗುರು, ನಿಷ್ಠಾವಂತ ಸ್ನೇಹಿತ ಹಾಗೂ ನಮ್ಮ ಜೀವನಯಾತ್ರೆಯ ಖಚಿತ ಮಾರ್ಗದರ್ಶಕ” ಎಂದು ವರ್ಣಿಸಿದರು.

ಸ್ಕೌಟಿಂಗ್ ಅನುಭವದ ಅವಿಭಾಜ್ಯ ಅಂಶಗಳಾದ ಪ್ರಕೃತಿಯ ಮಡಿಲಿನಲ್ಲಿನ ಜೀವನ ಮತ್ತು ಪ್ರಕೃತಿಯೊಂದಿಗಿನ ನಿಕಟ ಸಂಪರ್ಕವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಇವುಗಳ ಮೂಲಕ ಸೃಷ್ಟಿಕರ್ತನು ಪ್ರಕೃತಿಯಲ್ಲಿ ಬಿಟ್ಟಿರುವ ಗುರುತುಗಳ ಮೂಲಕ ದೇವರ ಒಳ್ಳೆಯತನವನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಕೃತಿಯ ಪುಸ್ತಕ ಮತ್ತು ದೇವರ ವಾಕ್ಯ

ಅದೇ ಸಮಯದಲ್ಲಿ, ಸ್ಕೌಟ್ಸ್‌ಗಳು “ಪ್ರಕೃತಿಯ ಪುಸ್ತಕ”ವನ್ನು ದೇವರ ವಾಕ್ಯದೊಂದಿಗೆ ಜೋಡಿಸಬೇಕು ಹಾಗೂ ಪ್ರತಿದಿನ ಪವಿತ್ರ ಗ್ರಂಥದಿಂದ ಆಧ್ಯಾತ್ಮಿಕ ಪೋಷಣೆಯನ್ನು ಪಡೆಯಬೇಕು ಎಂದು ಅವರು ಪ್ರೋತ್ಸಾಹಿಸಿದರು.

ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಪ್ರತಿಧ್ವನಿಸುತ್ತಾ, ಸುವಾರ್ತೆಯನ್ನು ತಮ್ಮ “ನ್ಯಾವಿಗೇಟರ್” ಅಥವಾ ಮಾರ್ಗದರ್ಶಕವಾಗಿ ಯಾವಾಗಲೂ ಹತ್ತಿರದಲ್ಲಿಟ್ಟುಕೊಳ್ಳುವಂತೆ ಅವರು ಸಲಹೆ ನೀಡಿದರು. “ಜೀವನದ ನಿಜವಾದ ನಕ್ಷೆ”ಯಾದ ಸುವಾರ್ತೆಯನ್ನು ಪ್ರತಿದಿನ ತೆರೆಯಿರಿ ಮತ್ತು ಓದಿರಿ ಎಂದು ಕರೆ ನೀಡಿದರು.

ವಿಶೇಷವಾಗಿ ಸ್ಕೌಟ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸುವಾರ್ತೆ ಕೇವಲ ಒಂದು ಪುಸ್ತಕವಲ್ಲ, ಅದು ಸ್ವತಃ ಕ್ರಿಸ್ತನೇ ಆಗಿದ್ದಾನೆ ಎಂದು ನೆನಪಿಸಿದರು. ಅನೇಕ ಸವಾಲುಗಳಿಂದ ಗೊಂದಲಕ್ಕೊಳಗಾದ ಮತ್ತು ನಿರಾಶೆಯಲ್ಲಿರುವ ಮಾನವಕುಲಕ್ಕೆ ಕ್ರಿಸ್ತನು ಶುಭಸಂದೇಶವಾಗಿದ್ದಾನೆ ಎಂದರು. ಆತನು ನ್ಯಾಯ ಮತ್ತು ಸತ್ಯಕ್ಕಾಗಿ ಮಾನವನ ಹಂಬಲವನ್ನು ತಣಿಸುತ್ತಾನೆ ಹಾಗೂ ಒಳಿತಿನಲ್ಲಿ ಸ್ಥಿರವಾಗಿ ಉಳಿದು ಉದಾರವಾಗಿ ಇತರರಿಗೆ ಸೇವೆ ಸಲ್ಲಿಸುವ ಧೈರ್ಯವನ್ನು ನೀಡುತ್ತಾನೆ ಎಂದು ಹೇಳಿದರು.

ವೈಯಕ್ತಿಕ ಸಾಕ್ಷ್ಯದ ಮಹತ್ವ

ಸ್ಕೌಟಿಂಗ್‌ನ ಶಿಕ್ಷಣ ಧ್ಯೇಯದಲ್ಲಿ ವೈಯಕ್ತಿಕ ಸಾಕ್ಷ್ಯದ ಮಹತ್ವವನ್ನು ಜಗದ್ಗುರುಗಳು ಒತ್ತಿಹೇಳಿದರು. ನಾಯಕರ ಜೀವನದ ಸಾಂಗತ್ಯ ಹಾಗೂ ಅವರ ಪ್ರಬುದ್ಧ ನಿರ್ಧಾರಗಳು ಯುವಜನರಿಗೆ ಪ್ರಬಲ ಮಾದರಿಯನ್ನು ಒದಗಿಸುತ್ತವೆ ಮತ್ತು ನಂಬಿಕೆ ಹಾಗೂ ವ್ಯಕ್ತಿತ್ವದಲ್ಲಿ ಬೆಳೆಯಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು.

ಸಂಘದ ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುವ ಯಾಜಕರ ಪಾತ್ರವನ್ನೂ ಅವರು ಮೆಚ್ಚಿದರು. ಯಾಜಕರು ಧರ್ಮ ಸಭೆ ಮತ್ತು ಸ್ಕೌಟಿಂಗ್ ಚಳುವಳಿಯ ನಡುವಿನ ಬಾಂಧವ್ಯದ ಖಾತರಿಯಾಗಿದ್ದಾರೆ ಎಂದು ಹೇಳಿದರು. ಅವರ ಸೇವೆಯು ಯುವಜನರ ಆಧ್ಯಾತ್ಮಿಕ ಬೆಳವಣಿಗೆಗೂ ಮತ್ತು ಸ್ಕೌಟ್ ನಾಯಕರ ಶಿಕ್ಷಣ ಕಾರ್ಯಕ್ಕೂ ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದರು.

ಶಿಕ್ಷಣ ಮತ್ತು ವ್ಯಕ್ತಿತ್ವ ರೂಪಣೆ

ಸಂಘದ ಶಿಕ್ಷಣ ವಿಧಾನವನ್ನು ಉಲ್ಲೇಖಿಸಿದ ಜಗದ್ಗುರುಗಳು, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ತರಬೇತಿ ನೀಡುವ ಅದರ ಬದ್ಧತೆಯನ್ನು ಗಮನಿಸಿದರು. ಇದರಿಂದ ಪ್ರತಿಯೊಬ್ಬರ ವಿಶಿಷ್ಟ ಗುಣಲಕ್ಷಣಗಳಿಗೆ ವಿಶೇಷ ಗಮನ ನೀಡಲು ಸಾಧ್ಯವಾಗುತ್ತದೆ ಎಂದರು.

ಇಂತಹ ಶಿಕ್ಷಣವು ಇತರರೊಂದಿಗೆ ಪ್ರಾಮಾಣಿಕ ಮತ್ತು ಜಾಗೃತ ಭೇಟಿಗಳಿಗೆ ಅವಕಾಶ ಕಲ್ಪಿಸಿ, ಪರಸ್ಪರ ಬೆಳವಣಿಗೆ ಹಾಗೂ ಪ್ರೌಢತೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.

ಇದೇ ವೇಳೆ, ಕ್ರೈಸ್ತ ಮಾನವತಾವಾದದಲ್ಲಿ ಬೇರೂರಿರುವ ಯೂರೋಪಿನ ಸಾಂಸ್ಕೃತಿಕ ದೃಷ್ಟಿಕೋನವನ್ನು ಉತ್ತೇಜಿಸುವ ಸಂಘದ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಇಂದಿನ ಸಂಕೀರ್ಣ ಐತಿಹಾಸಿಕ ಪರಿಸ್ಥಿತಿಯಲ್ಲಿ, “ವ್ಯಾಪಾರದ ಯೂರೋಪ್ ಮಾತ್ರವಲ್ಲ, ಜನರ ಯೂರೋಪ್” ನಿರ್ಮಿಸಲು ಶ್ರಮಿಸುವುದು ಅಗತ್ಯ ಎಂದು ಅವರು ಹೇಳಿದರು. ಕ್ರೈಸ್ತ ಸಂಪ್ರದಾಯದ ಉನ್ನತ ಮೌಲ್ಯಗಳಿಂದ ಏಕೀಕೃತವಾದ ಯೂರೋಪನ್ನು ನಿರ್ಮಿಸುವುದು ಕಾಲದ ಅವಶ್ಯಕತೆ ಎಂದು ಒತ್ತಿಹೇಳಿದರು.

ಸೇವೆಯೇ ಕೇಂದ್ರಬಿಂದು

ಲಾರ್ಡ್ ಬೇಡನ್-ಪವೆಲ್ ರವರ ಶಿಕ್ಷಣ ದೃಷ್ಟಿಕೋನದ ಹೃದಯಭಾಗದಲ್ಲಿ “ಸೇವೆ” ಇದೆ ಎಂದು ಜಗದ್ಗುರುಗಳು ಹೇಳಿದರು.

ಸೇವೆ ಎಂದರೆ ತನ್ನ ಸಾಮರ್ಥ್ಯ, ಸಮಯ ಮತ್ತು ಪ್ರತಿಭೆಗಳನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಇತರರ ಒಳಿತಿಗಾಗಿ ಅರ್ಪಿಸುವುದು ಎಂದು ಅವರು ವಿವರಿಸಿದರು.

ಸೇವೆಯ ಮೂಲಕ ಯುವಜನರು ಐಕ್ಯತೆ, ಹೊಣೆಗಾರಿಕೆ, ಇತರರ ಬಗ್ಗೆ ಕಾಳಜಿ ಮತ್ತು ಸಾಮಾಜಿಕ ಬದ್ಧತೆಯನ್ನು ಕಲಿಯುತ್ತಾರೆ ಎಂದು ಹೇಳಿದರು.

ನಂಬಿಕೆಯ ಮನೋಭಾವದೊಂದಿಗೆ ಸೇವೆ ಮಾಡಿದಾಗ ಅದು ವ್ಯಕ್ತಿಯನ್ನು ಸ್ವಾರ್ಥ ಮತ್ತು ನಿರ್ಲಕ್ಷ್ಯದಿಂದ ಮುಕ್ತಗೊಳಿಸಿ, ಸಮುದಾಯ ಜೀವನ ಮತ್ತು ಪರಸ್ಪರ ಕಾಳಜಿಯತ್ತ ಕರೆದೊಯ್ಯುತ್ತದೆ. ಸ್ಕೌಟಿಂಗ್ ಮಾನವ ಜೀವನವು ದೇವರಿಂದ ಹೇಗೆ ಪ್ರಕಾಶಮಾನವಾಗುತ್ತದೆ ಮತ್ತು ರೂಪುಗೊಳ್ಳುತ್ತದೆ ಎಂಬುದನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ; ಏಕೆಂದರೆ ದೇವರೇ “ನಮ್ಮೆಲ್ಲರ ನಿಜವಾದ ಶಿಕ್ಷಕ” ಎಂದು ಅವರು ಹೇಳಿದರು.

ಸಮಾರೋಪ

ತಮ್ಮ ಭಾಷಣದ ಕೊನೆಯಲ್ಲಿ ಜಗದ್ಗುರು XIVನೇ ಲಿಯೋರವರು ಸ್ಕೌಟ್ಸ್ ಮತ್ತು ಗೈಡ್ಸ್‌ಗಳಿಗೆ ಸಂತೋಷ ಮತ್ತು ಸಮರ್ಪಣೆಯೊಂದಿಗೆ ತಮ್ಮ ಕಾರ್ಯಗಳನ್ನು ಮುಂದುವರಿಸುವಂತೆ ಪ್ರೋತ್ಸಾಹಿಸಿದರು.

ಪವಿತ್ರಾತ್ಮನು ತನ್ನ ವರಗಳನ್ನು ಅವರಲ್ಲಿ ಸಮೃದ್ಧಿಯಾಗಿ ಹೆಚ್ಚಿಸಿ, ಅವರು ಪ್ರೀತಿ, ಆತಿಥ್ಯ ಮತ್ತು ಶಾಂತಿಯ ಭಾಷೆಯನ್ನು ಎಲ್ಲೆಡೆ ಹರಡುವವರಾಗಲಿ ಎಂದು ಅವರು ಪ್ರಾರ್ಥಿಸಿದರು.

01 ಜೂನ್ 2026, 16:40