ಅಜ್ಜ-ಅಜ್ಜಿಯರು ಮತ್ತು ವಯೋವೃದ್ಧರಿಗೆ ಜಗದ್ಗುರುಗಳ ಸಂದೇಶ: “ದೇವರ ಪ್ರೀತಿಯ ನೋಟವು ಎಲ್ಲ ಕಾಲದಲ್ಲೂ ನಿಮ್ಮ ಮೇಲೆ ನೆಲೆಸಿದೆ.”
ವ್ಯಾಟಿಕನ್ ವರದಿ
“ಪ್ರವಾದಿ ಯೆಶಾಯರ ಮೂಲಕ ಪ್ರಭು ನಮ್ಮಲ್ಲಿ ಯಾರನ್ನೂ ಎಂದಿಗೂ ಮರೆಯುವುದಿಲ್ಲವೆಂದು ವಾಗ್ದಾನ ಮಾಡುತ್ತಾನೆ. ಆತನು ನಮ್ಮ ಮುಖಗಳನ್ನು ತನ್ನ ಕರಗಳ ಮೇಲೆ ಕೆತ್ತಿಕೊಂಡಿದ್ದಾನೆ (ಯೆಶಾಯ 49:16) ಮತ್ತು ಮಗುವಿನ ಮೇಲಿನ ತಾಯಿಯ ಪ್ರೀತಿಗಿಂತಲೂ ಆತನ ಪ್ರೀತಿ ಮಹತ್ತರವಾಗಿದೆ (ಯೆಶಾಯ 49:15) ಎಂದು ನಮಗೆ ಭರವಸೆ ನೀಡುತ್ತಾನೆ.”
ಜುಲೈ ತಿಂಗಳ ನಾಲ್ಕನೇ ಭಾನುವಾರ ಆಚರಿಸಲ್ಪಡುವ ಆರನೇ ಅಜ್ಜ-ಅಜ್ಜಿಯರು ಮತ್ತು ವಯೋವೃದ್ಧರ ವಿಶ್ವ ದಿನಾಚರಣೆಯ ಅಂಗವಾಗಿ, “ನಾನು ನಿನ್ನನ್ನು ಎಂದಿಗೂ ಮರೆಯುವುದಿಲ್ಲ” (ಯೆಶಾಯ 49:15) ಎಂಬ ವಿಷಯದ ಮೇಲೆ ಪೋಪ್ ಲಿಯೋ XIV ಅವರು ಬರೆದ ಸಂದೇಶದ ಆರಂಭದಲ್ಲಿ ಈ ಸಾಂತ್ವನದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸಂದೇಶವನ್ನು ವ್ಯಾಟಿಕನ್ ಇಂದು ಪ್ರಕಟಿಸಿದೆ.
ತಮ್ಮ ಸಂದೇಶದಲ್ಲಿ, ಪ್ರವಾದಿ ಯೆಶಾಯರು ದೇವರು ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಮತ್ತು ಸಮಸ್ತ ಜನರೊಂದಿಗೆ ಅತ್ಯಂತ ಆತ್ಮೀಯವಾಗಿ ಸಂವಾದ ನಡೆಸುವ ಚಿತ್ರಣವನ್ನು ನಮಗೆ ನೀಡುತ್ತಾರೆ ಎಂದು ಜಗದ್ಗುರುಗಳು ವಿವರಿಸುತ್ತಾರೆ. ಆ ಮಾತುಗಳು ಇಂದಿಗೂ ನಮ್ಮ ಪ್ರತಿಯೊಬ್ಬರಿಗೂ ಅನ್ವಯಿಸುತ್ತವೆ ಎಂದು ಅವರು ಹೇಳುತ್ತಾರೆ.
ಯಾವುದೇ ವಯಸ್ಸಿನಲ್ಲೂ ನಾವು ದೇವರ ಪ್ರೀತಿಯ ಮಕ್ಕಳು
ಸಾಂತ್ವನ ಮತ್ತು ಭರವಸೆಯಿಂದ ತುಂಬಿರುವ ಈ ಮಾತುಗಳು, “ಪ್ರಭು ನನ್ನನ್ನು ತ್ಯಜಿಸಿದ್ದಾನೆ, ನನ್ನ ದೇವರು ನನ್ನನ್ನು ಮರೆತಿದ್ದಾನೆ” (ಯೆಶಾಯ 49:14) ಎಂಬ ನೋವಿನ ಭಾವನೆಗೆ ದೇವರು ನೀಡುವ ಉತ್ತರವಾಗಿದೆ ಎಂದು ಜಗದ್ಗುರುಗಳು ಹೇಳಿದ್ದಾರೆ.
ಅನೇಕ ವಯೋವೃದ್ಧರು, ವಿಶೇಷವಾಗಿ ಏಕಾಂತತೆಯನ್ನು ಅನುಭವಿಸುವಾಗ ಅಥವಾ ಕೇವಲ ರೋಗಿಯ ಸಂಖ್ಯೆ ಅಥವಾ ಅನಾರೋಗ್ಯಕ್ಕೆ ಸೀಮಿತಗೊಂಡವರಂತೆ ಭಾಸವಾದಾಗ, ಮರೆತುಹೋಗಿರುವ ನೋವನ್ನು ಅನುಭವಿಸುತ್ತಾರೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.
ಅಜ್ಜ-ಅಜ್ಜಿಯರು ಮತ್ತು ವಯೋವೃದ್ಧರ ವಿಶ್ವ ದಿನಾಚರಣೆಯು, ಧರ್ಮ ಸಭೆಯು ಎಲ್ಲರಿಗೂ ತಾಯಿಯಾಗಿರಲು ಕರೆಯಲ್ಪಟ್ಟಿದೆ ಎಂಬ ಸತ್ಯವನ್ನು ಪುನಃ ಕಂಡುಕೊಳ್ಳುವ ಅವಕಾಶವಾಗಿದೆ. ಯಾವುದೇ ವಯಸ್ಸಿನಲ್ಲೂ ನಾವು ದೇವರ ಪುತ್ರರು ಮತ್ತು ಪುತ್ರಿಯರು ಎಂಬುದನ್ನು ಗುರುತಿಸಬಹುದು ಎಂದು ಜಗದ್ಗುರುಗಳು ನೆನಪಿಸುತ್ತಾರೆ.
ಯುವಜನರಿಗೆ ವಿಶೇಷ ಆಹ್ವಾನ
ಜಗದ್ಗುರುಗಳು ವಿಶೇಷವಾಗಿ ಯುವಜನರನ್ನು ಉದ್ದೇಶಿಸಿ, ಅಜ್ಜ-ಅಜ್ಜಿಯರನ್ನು, ವಯೋವೃದ್ಧ ಬಂಧುಗಳನ್ನು ಮತ್ತು ಅವರನ್ನು ಭೇಟಿ ಮಾಡಲು ಯಾರೂ ಇಲ್ಲದಿರುವ ಹಿರಿಯರನ್ನು ಭೇಟಿಯಾಗುವ ಸುಂದರ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವಂತೆ ಆಹ್ವಾನಿಸುತ್ತಾರೆ.
“ಈ ಸಂದೇಶದ ಮೂಲಕ ಮತ್ತು ನಿಮ್ಮ ಸಾನ್ನಿಧ್ಯದ ಮೂಲಕ ಜಗದ್ಗುರುಗಳ ಆತ್ಮೀಯತೆ ಮತ್ತು ಪ್ರೀತಿಯನ್ನು ಅವರಿಗೆ ತಲುಪಿಸಿ,” ಎಂದು ಅವರು ಹೇಳುತ್ತಾರೆ. ವಯೋವೃದ್ಧರಿಗೆ ಮಮತೆ, ಪ್ರೀತಿ ಮತ್ತು ಆತ್ಮೀಯತೆಯಿಂದ ಕೂಡಿದ ಭೇಟಿಯನ್ನು ನೀಡುವಂತೆ ಅವರು ಮನವಿ ಮಾಡುತ್ತಾರೆ.
ಧರ್ಮ ಸಭೆಯ ತನ್ನ ವಯೋವೃದ್ಧ ಸದಸ್ಯರ ನೋವನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಪುನರುಚ್ಚರಿಸಿದ ಜಗದ್ಗುರುಗಳು, ಯಾವುದೇ ವಯಸ್ಸಿನಲ್ಲೂ, ವಿಶೇಷವಾಗಿ ವೃದ್ಧಾಪ್ಯದಲ್ಲಿ, ದೇವರ “ಅವಿನಾಶಿ ಪ್ರೀತಿಯ” ಫಲಾನುಭವಿಗಳಾಗಿದ್ದೇವೆ ಎಂಬುದನ್ನು ಅರಿಯುವುದು ಅಪಾರ ಸಂತೋಷದ ಸಂಗತಿ ಎಂದು ಹೇಳಿದ್ದಾರೆ. ಧನ್ಯ ಜಗದ್ಗುರು ಪ್ರಥಮ ಜಾನ್ ಪಾಲರ ಮಾತುಗಳನ್ನು ಉಲ್ಲೇಖಿಸಿ, “ಕತ್ತಲೆ ಆವರಿಸಿದಂತಿದ್ದರೂ ದೇವರ ಕಣ್ಣುಗಳು ಸದಾ ನಮ್ಮ ಮೇಲಿವೆ, ಆತನು ನಮ್ಮ ತಂದೆ ಮಾತ್ರವಲ್ಲ, ತಾಯಿಯಂತೆಯೂ ಇದ್ದಾನೆ” ಎಂದು ಸ್ಮರಿಸುತ್ತಾರೆ.
ದೇವರ ಮಡಿಲಿಗೆ ಮರಳುವ ಆಹ್ವಾನ
ವಯಸ್ಸಾದರೂ ನಾವು ದೇವರ ಪುತ್ರರು ಮತ್ತು ಪುತ್ರಿಯರಾಗಿರುವುದನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಜಗದ್ಗುರು ಲಿಯೋರವರು ಒತ್ತಿಹೇಳುತ್ತಾರೆ. ಆದ್ದರಿಂದ ದೇವರ ಮಡಿಲಿಗೆ ಮರಳುವ ಆಹ್ವಾನವು ಯಾವುದೇ ವಯಸ್ಸಿನಲ್ಲೂ ಅರ್ಥಪೂರ್ಣವಾಗಿಯೇ ಉಳಿಯುತ್ತದೆ.
ಅನೇಕ ಜನರಿಗೆ ದೇವರ ಮೃದು ಪ್ರೀತಿಯ ಅನುಭವವು ಜೀವನದ ವಿವಿಧ ಹಂತಗಳಲ್ಲಿ, ಕೆಲವೊಮ್ಮೆ ಜೀವನದ ಅಂತಿಮ ಘಟ್ಟದಲ್ಲಿಯೂ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.
ಇಂದಿನ ಕಾಲದಲ್ಲಿ, ಹಿಂದಿನಿಗಿಂತ ಹೆಚ್ಚು ಜನರು ನಿಜವಾದ ನಂಬಿಕೆಯ ಅನುಭವವಿಲ್ಲದೆ ವೃದ್ಧಾಪ್ಯವನ್ನು ತಲುಪುತ್ತಿದ್ದಾರೆ ಎಂದು ಜಗದ್ಗುರುಗಳು ಗಮನಿಸುತ್ತಾರೆ. ಆದರೂ ದೇವರು ಅವರ ಸಮೀಪಕ್ಕೆ ಬರುತ್ತಲೇ ಇರುತ್ತಾನೆ.
“ಆತನ ಕಡೆಗೆ ತಿರುಗಲು ಎಂದಿಗೂ ತಡವಾಗುವುದಿಲ್ಲ. ಅದು ಪ್ರತಿಯೊಬ್ಬರಿಗೂ ಒಂದು ಮಹಾನ್ ವರವಾಗಬಹುದು,” ಎಂದು ಅವರು ಹೇಳುತ್ತಾರೆ.
ವೃದ್ಧಾಪ್ಯದಲ್ಲಿಯೂ ಹೊಸ ಜನ್ಮ
“ದುರ್ಬಲತೆಯನ್ನು ಭಯಪಡಬೇಡಿ,” ಎಂದು ಜಗದ್ಗುರುಗಳು ವಯೋವೃದ್ಧರಿಗೆ ಕರೆ ನೀಡುತ್ತಾರೆ. ವೃದ್ಧಾಪ್ಯದಲ್ಲಿ ಮನುಷ್ಯನು ದುರ್ಬಲನಾಗಿರಬಹುದು, ಆದರೆ ಅದೇ ಸಮಯದಲ್ಲಿ ದೇವರಿಂದ ವಿಶೇಷ ಕರೆಯನ್ನು ಪಡೆದವನಾಗಿಯೂ ಇರುತ್ತಾನೆ ಎಂದು ಅವರು ಹೇಳುತ್ತಾರೆ.
ಪುರುಷನಾಗಲಿ ಮಹಿಳೆಯಾಗಲಿ, ವೃದ್ಧಾಪ್ಯದಲ್ಲಿಯೂ ಹೊಸ ಜೀವನಕ್ಕೆ ಜನ್ಮ ನೀಡಬಹುದು ಎಂದು ಅವರು ಒತ್ತಿಹೇಳುತ್ತಾರೆ.
ಯುದ್ಧಗಳ ಹಿಂಸೆ ಮತ್ತು ಸಾಮಾಜಿಕ ಅಶಾಂತಿಯಿಂದ ಕಂಗೆಟ್ಟಿರುವ ಇಂದಿನ ಜಗತ್ತಿನಲ್ಲಿ, ತಮ್ಮ ಮೊಮ್ಮಕ್ಕಳು ಯಾವ ರೀತಿಯ ಜಗತ್ತಿನಲ್ಲಿ ಬೆಳೆಯಲಿದ್ದಾರೆ ಎಂಬ ಪ್ರಶ್ನೆ ಅನೇಕರ ಮನಸ್ಸನ್ನು ಕಾಡುತ್ತಿದೆ ಎಂದು ಜಗದ್ಗುರುಗಳು ಹೇಳುತ್ತಾರೆ. ಆದ್ದರಿಂದ ಶಾಂತಿ ಶೀಘ್ರದಲ್ಲೇ ಜಗತ್ತಿಗೆ ಬರಲೆಂದು ತಮ್ಮೊಂದಿಗೆ ಪ್ರಾರ್ಥಿಸಲು ಅವರು ವಯೋವೃದ್ಧರನ್ನು ಆಹ್ವಾನಿಸುತ್ತಾರೆ.
“ಆತನು ನಮ್ಮನ್ನು ಎಂದಿಗೂ ಮರೆಯುವುದಿಲ್ಲ”
ತಮ್ಮ ಸಂದೇಶದ ಕೊನೆಯಲ್ಲಿ, ವಿಶೇಷವಾಗಿ ಜಪಮಾಲೆ ಪ್ರಾರ್ಥನೆ ಸಲ್ಲಿಸುವಾಗ ತಮಗಾಗಿ ಪ್ರಾರ್ಥಿಸುತ್ತಿರುವ ಎಲ್ಲಾ ವಯೋವೃದ್ಧರಿಗೆ ಜಗದ್ಗುರುಗಳು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಾರೆ.
“ನನ್ನ ಹೃದಯದ ಆಳದಿಂದ ನಾನು ಈ ಕೃತಜ್ಞತೆಯನ್ನು ನಿಮಗೆ ಹಿಂದಿರುಗಿಸುತ್ತೇನೆ,” ಎಂದು ಅವರು ಹೇಳುತ್ತಾರೆ.
ಅಂತಿಮವಾಗಿ ಅವರು ಈ ಪ್ರಾರ್ಥನೆಯೊಂದಿಗೆ ಸಂದೇಶವನ್ನು ಮುಕ್ತಾಯಗೊಳಿಸುತ್ತಾರೆ:
“ನಮ್ಮನ್ನು ಎಂದಿಗೂ ಮರೆಯದ ಪ್ರಭುವು, ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯಲ್ಲಿ ನಮ್ಮನ್ನು ಸದಾ ನವೀಕರಿಸುತ್ತಿರಲಿ!”.
