ಜನಪ್ರಿಯ ಭಕ್ತಿಪರ ಸಂಪ್ರದಾಯಗಳು ಮತ್ತು ಸಮಾಜದ ಅಂಚಿನಲ್ಲಿರುವವರ ಮೇಲಿನ ಕಾಳಜಿ.
ವ್ಯಾಟಿಕನ್ ವರದಿ
ಖಾಸಗಿ ಭಕ್ತಾಚರಣೆಗಳಾಗಿ ನಮ್ಮನ್ನು ನಮ್ಮೊಳಗೆ ಮಾತ್ರ ಸೀಮಿತಗೊಳಿಸುವ ಆಧ್ಯಾತ್ಮಿಕ ಆತ್ಮಾವಲೋಕನವಲ್ಲ, ಅಥವಾ ಧರ್ಮ ಸಭೆಯ ಹಿಂದಿನ ಸಾಮಾಜಿಕ ಪ್ರಭಾವದ ಬಗ್ಗೆ ಭಾವನಾತ್ಮಕ ನೆನಪುಗಳೊಂದಿಗೆ ಕೇವಲ ಭೇಟಿ ನೀಡುವ ವಸ್ತುಸಂಗ್ರಹಾಲಯವೂ ಅಲ್ಲ, ಬದಲಾಗಿ ಅದು ನಿಜವಾದ ಒಂದು ಶಾಲೆ ಆಗಿರಬೇಕು. ನಮ್ಮನ್ನು ಬದ್ಧತೆ, ಪರಸ್ಪರ ಭೇಟಿ, ಸ್ವಾಗತ ಮತ್ತು ಸ್ವಯಂ ಅರ್ಪಣೆಯ ಜೀವನಕ್ಕೆ ತೆರೆದುಕೊಡುವ ಶಾಲೆ. ಮ್ಯಾಡ್ರಿಡ್‌ನ ಪ್ಲಾಜಾ ದೆ ಸಿಬೆಲೆಸ್‌ನಲ್ಲಿ ನಡೆದ ಪ್ರಭುವಿನ ಶರೀರ ಮತ್ತು ರಕ್ತದ ಹಬ್ಬದ ಪವಿತ್ರ ಬಲಿಪೂಜೆಯ ಪ್ರಭೊಧನೆಯಲ್ಲಿ, ಶತಮಾನಗಳಿಂದ ಸ್ಪೇನಿನ ದೇಶವನ್ನು ರೂಪಿಸಿರುವ ಧಾರ್ಮಿಕ ಪರಂಪರೆಯನ್ನು ಜಗದ್ಗುರು XIVನೇ ಲಿಯೋರವರು ಹೀಗೆ ವಿವರಿಸಿದರು. ಮೆರವಣಿಗೆಗಳು, ಜನಭಕ್ತಿ, ಕಲೆ, ಸಂಗೀತ ಮತ್ತು ವಾಸ್ತುಶಿಲ್ಪದ ಮೂಲಕ ವ್ಯಕ್ತವಾಗುವ ಈ ಭಕ್ತಿಯ ಜೀವನವನ್ನು ಅವರು ವಿಶೇಷವಾಗಿ ಸ್ಮರಿಸಿದರು.
"ಪವಿತ್ರ ಸಕ್ರಾಮೆಂಟ್‌ನ್ನು ಧರಿಸಿರುವ ಮೋನ್ಸ್ಟ್ರಾನ್ಸ್‌ನಲ್ಲಿ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗುವ ಕ್ರಿಸ್ತನೇ, ಬಡವರು, ಶೋಷಿತರು, ಏಕಾಂಗಿಗಳು ಮತ್ತು ಕೈಬಿಡಲ್ಪಟ್ಟವರೊಂದಿಗೆ ತನ್ನನ್ನು ತಾನು ಒಂದಾಗಿಸಿಕೊಳ್ಳುವ ಅದೇ ಕ್ರಿಸ್ತನು" ಎಂದು ಜಗದ್ಗುರುಗಳು ಹೇಳಿದರು. ಇದೇ ಕಾರಣಕ್ಕಾಗಿ ಸ್ಪೇನಿನಲ್ಲಿ ಧರ್ಮ ಸಭೆಯ ಬಹುಕಾಲದಿಂದ ಯೇಸುವಿನ ಶರೀರ ಮತ್ತು ರಕ್ತದ ಹಬ್ಬವನ್ನು 'ದಾನಧರ್ಮದ ದಿನ'ದೊಂದಿಗೆ ಜೋಡಿಸಿಕೊಂಡು ಆಚರಿಸುತ್ತಿದೆ. ಜನಭಕ್ತಿಯ ಪರಂಪರೆ ಇನ್ನೂ ಜೀವಂತವಾಗಿರುವ ಈ ದೇಶಕ್ಕೆ, ಅದು "ಭೂತಕಾಲದ ವಸ್ತುಸಂಗ್ರಹಾಲಯವಾಗಿ ಉಳಿಯದೆ, ಇಂದಿಗೂ ಜೀವಂತ ನಂಬಿಕೆಯ ಶಾಲೆಯಾಗಿರಲಿ" ಎಂಬ ಸ್ಪಷ್ಟ ಆಹ್ವಾನವನ್ನು ಜಗದ್ಗುರುಗಳು ನೀಡಿದರು.
ಆ ಶಾಲೆಯು ದೇವರ ಮುಂದೆಯೂ ಹಾಗೂ ನಮ್ಮ ನೆರೆಯವರ ಮುಂದೆಯೂ ಮೊಣಕಾಲೂರಲು ನಾವು ಕಲಿಸಬೇಕು, ಏಕೆಂದರೆ ದೇವರ ಮುಂದೆ ಮೊಣಕಾಲೂರಿ ತನ್ನ ಸಹೋದರನನ್ನು ತಿರಸ್ಕರಿಸುವುದು ಸಾಧ್ಯವಿಲ್ಲ. ಪ್ರೀತಿಯು ಉಚಿತ ಕೊಡುಗೆಯಾಗಿ ಹರಿದು ಬಂದು ನಮ್ಮಲ್ಲಿರುವ ಎಲ್ಲಾ ಸ್ವಾರ್ಥದ ಬಂಧನಗಳನ್ನು ಮುರಿಯುತ್ತದೆ ಎಂಬುದನ್ನು ಅದು ಕಲಿಸಬೇಕು. ದೇವರು ನಿಜವಾದ ಸಾನ್ನಿಧ್ಯವಾಗಿರುವಂತೆ, ಸಮಾಜದ ಸವಾಲುಗಳು ಮತ್ತು ವಾಸ್ತವತೆಗಳ ಮಧ್ಯೆ ನಾವೂ ಸಹ ಸಕ್ರಿಯವಾಗಿ ತೊಡಗಿಸಿಕೊಂಡು ಸಾಮೂಹಿಕ ಒಳಿತಿನ ನಿರ್ಮಾಣಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕೆಂಬುದನ್ನು ಅದು ಬೋಧಿಸಬೇಕು.
ಈ ಮಾತುಗಳು ತೀವ್ರ ಧ್ರುವೀಕರಣ ಮತ್ತು ಭಿನ್ನಾಭಿಪ್ರಾಯಗಳಿಂದ ಕೂಡಿರುವ ಇಂದಿನ ಸ್ಪೇನಿನ ಸಮಾಜದಲ್ಲಿ ಬದುಕುತ್ತಿರುವ ಕ್ರೈಸ್ತರ ಅನುಭವವನ್ನು ನೇರವಾಗಿ ಸ್ಪರ್ಶಿಸುತ್ತವೆ. ಮೊದಲನೆಯದಾಗಿ, ಪ್ರಭುವಿನ ಪೂಜ್ಯ ಶರೀರ ಮತ್ತು ರಕ್ತದ ಹಬ್ಬದ ಮೂಲ ಸಂದೇಶವನ್ನು ಅರಿತು ಬದುಕುವಂತೆ ಜಗದ್ಗುರುಗಳು ಕ್ರೈಸ್ತರನ್ನು ಆಹ್ವಾನಿಸುತ್ತಾರೆ. ನಮ್ಮ ಬಳಿಗೆ ಬರುವ ದೇವರು, ನೋವು ಅನುಭವಿಸುತ್ತಿರುವ, ಆಹಾರ ಅಥವಾ ಆಶ್ರಯವಿಲ್ಲದ, ಅಥವಾ ವಲಸಿಗನಾಗಿ ಬದುಕುತ್ತಿರುವ ಸಹೋದರ-ಸಹೋದರಿಯರಲ್ಲಿ ತನ್ನನ್ನು ಗುರುತಿಸಲು ನಮ್ಮನ್ನೂ ಕರೆಯುತ್ತಾನೆ. ಈ ದೃಷ್ಟಿಕೋನದಲ್ಲಿ ಧರ್ಮ ಸಭೆಯ ಸಾಮಾಜಿಕ ಮಹತ್ವವು ಸೇವೆಯಲ್ಲಿದೆ ಬಡವರ ಅಗತ್ಯಗಳಿಗೆ ಸ್ಪಂದಿಸುವುದು, ಸಮನ್ವಯವನ್ನು ಬೆಳೆಸುವುದು, ಧ್ರುವೀಕರಣವನ್ನು ನಿವಾರಿಸುವುದು, ನ್ಯಾಯಕ್ಕಾಗಿ ಶ್ರಮಿಸುವುದು ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ಕಟ್ಟುವುದು.
"ಯೂಕರಿಸ್ಟಿಕ್ ಯೇಸು" ಕುರಿತು ಮಾತನಾಡಿದ ಜಗದ್ಗುರುಗಳು, "ಅವರು ಅಡಗಿರುವ ಶಾಶ್ವತ ಬುಗ್ಗೆಯಂತಿದ್ದಾರೆ, ಅದು ನಿರಂತರವಾಗಿ ಹರಿದು ದಾಹವನ್ನು ತಣಿಸುತ್ತದೆ, ಆದರೆ ಕಣ್ಣು ಕುಕ್ಕಿಸುವುದಿಲ್ಲ, ಬಲವಂತವಾಗಿ ತನ್ನನ್ನು ಹೇರುವುದಿಲ್ಲ, ಅಥವಾ ಬಾಹ್ಯ ವೈಭವದ ಮೂಲಕ ತನ್ನನ್ನು ಪ್ರದರ್ಶಿಸುವುದಿಲ್ಲ" ಎಂದು ಹೇಳಿದರು. ಆದ್ದರಿಂದ ಪ್ರಭುವಿನ ಪೂಜ್ಯ ಶರೀರ ಮತ್ತು ರಕ್ತದ ಹಬ್ಬದ ಸಾರ್ವಜನಿಕ ಆಚರಣೆಯು ನಮ್ಮನ್ನು ವೈಯಕ್ತಿಕ ಭಕ್ತಿಯಲ್ಲಿ ಬಂಧಿಸದೆ, ನಮ್ಮ ಸಹೋದರ-ಸಹೋದರಿಯರು, ನಮ್ಮ ಕುಟುಂಬಗಳು, ಬಡವರು, ದುಃಖಿತರು ಮತ್ತು ಭರವಸೆ ಕಳೆದುಕೊಂಡವರ ಕಡೆಗೆ ಹೊರಡುವಂತೆ ಪ್ರೇರೇಪಿಸುತ್ತದೆ. ಯೂಕರಿಸ್ಟ್‌ನ ಅನುಗ್ರಹವು ನಮ್ಮನ್ನು ಪರಿವರ್ತಿಸಿ, ನಾವು ಭೇಟಿ ಮಾಡುವ ಪ್ರತಿಯೊಬ್ಬರಿಗೂ ಭರವಸೆಯ ಸಂಕೇತವಾಗುವಂತೆ ಇತಿಹಾಸವನ್ನು ಬದಲಾಯಿಸುವ ಕಾರ್ಯದಲ್ಲಿ ನಮ್ಮನ್ನು ಭಾಗಿಗಳನ್ನಾಗಿ ಮಾಡುತ್ತದೆ.
ಅದೇ ಸಮಯದಲ್ಲಿ, ಕ್ರೈಸ್ತರೂ ಸಹ ಧ್ರುವೀಕರಣ, ಮೇಲ್ನೋಟದ ಸರಳೀಕರಣಗಳು ಮತ್ತು ಗುರುತಿನ ರಾಜಕಾರಣದ ಬಲೆಗೆ ಸಿಲುಕುವ ಅಪಾಯದಿಂದ ಮುಕ್ತರಲ್ಲ. ಇವು ಜಗತ್ತನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತೆ ಕಂಡರೂ, ವಾಸ್ತವದಲ್ಲಿ ಕಲ್ಪಿತ ಶತ್ರುಗಳನ್ನು ಮತ್ತು ವಿಭಜನೆಗಳನ್ನು ಸೃಷ್ಟಿಸುತ್ತವೆ. ಆದ್ದರಿಂದ ಪ್ರಭುವಿನ ಪೂಜ್ಯ ಶರೀರ ಮತ್ತು ರಕ್ತದ ಮೆರವಣಿಗೆ ಐತಿಹಾಸಿಕ ಸ್ಮರಣೆ ಕೇವಲ ಭಾವನಾತ್ಮಕ ನೆನಪಾಗಿ ಉಳಿಯದೆ, ಇಂದಿನ ಜೀವನದಲ್ಲಿ, ನಮ್ಮ ಸಂಬಂಧಗಳಲ್ಲಿ ಮತ್ತು ಸಮಾಜದಲ್ಲಿ ಕಾರ್ಯರೂಪಕ್ಕೆ ಬರುವ ಆಹ್ವಾನವಾಗಬೇಕು. ಅಂದರೆ, ಮಾನವ ಹೃದಯವು ಬಯಸುವ ಸಮನ್ವಯ ಮತ್ತು ಶಾಂತಿಯ ದಾಹಕ್ಕೆ ಸ್ಪಂದಿಸುವ ಸೇವೆಯಾಗಿ ಅದು ರೂಪಾಂತರಗೊಳ್ಳಬೇಕು.
