ಕ್ಯಾನರಿ ದ್ವೀಪಗಳಲ್ಲಿ ಜಗದ್ಗುರುಗಳು: ಶಿಲುಬೆ ಮತ್ತು ಪವಿತ್ರ ಯೂಕರಿಸ್ಟ್ ಮೂಲಕ ಐಕ್ಯತೆಯಲ್ಲಿ ಸ್ಥಿರವಾಗಿರಿ.
ವ್ಯಾಟಿಕನ್ ವರದಿ
ಕ್ಯಾನರಿ ದ್ವೀಪಗಳ ಲಾಸ್ ಪಾಲ್ಮಾಸ್‌ನ ಸಂತ ಅನ್ನಾ ಕ್ಯಾಥೆಡ್ರಲ್‌ನಲ್ಲಿ ಬಿಷಪ್‌ಗಳು, ಯಾಜಕರು, ಸಹಧರ್ಮಗುರುಗಳು, ಧಾರ್ಮಿಕರು, ಗುರು ವಿದ್ಯಾರ್ಥಿಗಳು ಹಾಗೂ ವಿವಿಧ ಧರ್ಮಾಧ್ಯಕ್ಷೀಯ ಸೇವಕರನ್ನು ಭೇಟಿಯಾದ ಜಗದ್ಗುರು XIVನೇ ಲಿಯೋರವರು ಅಲ್ಲಿನ ಧರ್ಮ ಸಭೆಯ ಸಮುದಾಯದ ಜೀವಂತ ಸಾಕ್ಷ್ಯಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಬಡವರು, ದುಃಖಿತರು ಮತ್ತು ಸಂಕಷ್ಟದಲ್ಲಿರುವವರ ನೋವು-ನಲಿವುಗಳನ್ನು ತನ್ನದಾಗಿಸಿಕೊಳ್ಳುವ “ಜೀವಂತ ಧರ್ಮಸಭೆ” ಆಗಿರಬೇಕೆಂದು ಅವರು ಪ್ರೋತ್ಸಾಹಿಸಿದರು.
ತಮ್ಮ ಜಗದ್ಗುರುಗಳ ಸೇವೆಯ ಆರಂಭದಲ್ಲಿ ಹೇಳಿದ್ದ “ನಿಮ್ಮೊಂದಿಗೆ ನಾನು ಕ್ರೈಸ್ತನು, ನಿಮಗಾಗಿ ನಾನು ಬಿಷಪ್” ಎಂಬ ಮಾತುಗಳನ್ನು ಸ್ಮರಿಸಿದ ಜಗದ್ಗುರುಗಳು, ತಾವು ತಂದೆ ಮತ್ತು ಸಹೋದರನಾಗಿ ಈ ದ್ವೀಪಗಳಿಗೆ ಬಂದಿದ್ದೇನೆ ಎಂದು ಹೇಳಿದರು. ಎಫೆಸಿಯರಿಗೆ ಬರೆದ ಪತ್ರಿಕೆಯ ಸಂದೇಶವನ್ನು ಉಲ್ಲೇಖಿಸಿ, ಧರ್ಮ ಸಭೆಯಲ್ಲಿರುವ ವಿವಿಧ ವರಗಳು ಮತ್ತು ಸೇವೆಗಳನ್ನು ಪರಸ್ಪರ ಐಕ್ಯತೆಗಾಗಿ ಬಳಸಬೇಕು ಎಂದು ಕರೆ ನೀಡಿದರು. ಕ್ರಿಸ್ತನೇ ಮೂಲಾಧಾರವಾಗಿರುವ ಧರ್ಮ ಸಭೆಯನ್ನು ಎಲ್ಲರೂ ಸೇರಿ ಕಟ್ಟಬೇಕೆಂದು ಅವರು ಒತ್ತಿಹೇಳಿದರು.
ತಮ್ಮ ಸಂದೇಶದಲ್ಲಿ ಜಗದ್ಗುರುಗಳು ಎರಡು ಪ್ರಮುಖ ಆಧ್ಯಾತ್ಮಿಕ ಮನೋಭಾವಗಳನ್ನು ವಿವರಿಸಿದರು. ಮೊದಲನೆಯದಾಗಿ, ಕ್ರಿಸ್ತನ ಶಿಲುಬೆಯನ್ನು ಅಪ್ಪಿಕೊಳ್ಳುವ ಅಗತ್ಯವನ್ನು ತಿಳಿಸಿದರು. ಕ್ಯಾನರಿ ದ್ವೀಪಗಳನ್ನು ಸುತ್ತುವರೆದಿರುವ ಸಮುದ್ರವನ್ನು ಉದಾಹರಣೆಯಾಗಿ ಬಳಸಿದ ಅವರು, ಸಮುದ್ರವು ಮನೆ ಮತ್ತು ಭದ್ರತೆಯ ಸಂಕೇತವಾಗಿದ್ದರೂ, ಅದು ಸವಾಲು, ಅನಿಶ್ಚಿತತೆ ಮತ್ತು ದೂರದ ಪ್ರಯಾಣದ ಸಂಕೇತವೂ ಆಗಿದೆ ಎಂದರು. ಸಂತ ಆಗಸ್ಟಿನ್ ರವರ ಮಾತುಗಳನ್ನು ಉಲ್ಲೇಖಿಸಿ, “ಕ್ರಿಸ್ತನ ಶಿಲುಬೆಯನ್ನು ಹೊತ್ತಿಲ್ಲದೆ ಈ ಲೋಕದ ಸಮುದ್ರವನ್ನು ಯಾರೂ ದಾಟಲಾರರು” ಎಂದು ನೆನಪಿಸಿದರು.
ಸಂತರ ಜೀವನವನ್ನು ಮಾದರಿಯಾಗಿ ತೋರಿಸಿದ ಜಗದ್ಗುರುಗಳು, ಜೀವನದ ಬಿರುಗಾಳಿಗಳನ್ನು ಅವರು ಕ್ರಿಸ್ತನಲ್ಲಿ ವಿಶ್ವಾಸವಿಟ್ಟು ಎದುರಿಸಿದರು ಎಂದು ಹೇಳಿದರು. ತಮ್ಮ ಜೀವನದ ದೋಣಿಯಲ್ಲಿ ಯೇಸುವನ್ನು ಸೇರಿಸಿಕೊಂಡು, ಶಿಲುಬೆಯನ್ನು ಅಪ್ಪಿಕೊಂಡ ಕಾರಣವೇ ಅವರು ಭಯ ಮತ್ತು ಅನಿಶ್ಚಿತತೆಯ ಅಲೆಗಳನ್ನು ಜಯಿಸಲು ಸಾಧ್ಯವಾಯಿತು ಎಂದು ವಿವರಿಸಿದರು.
ಎರಡನೆಯದಾಗಿ, ಪವಿತ್ರ ಯೂಕರಿಸ್ಟ್ ಕೇಂದ್ರಿತ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುವಂತೆ ಜಗದ್ಗುರುಗಳು ಕರೆ ನೀಡಿದರು. ಯೂಕರಿಸ್ಟಿಕ್ ಆರಾಧನೆ ಮತ್ತು ಪವಿತ್ರ ಬಲಿಪೂಜೆ ಧರ್ಮ ಸಭೆಯ ಐಕ್ಯತೆಯನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು. ಕ್ರಿಸ್ತನೇ ಕ್ರೈಸ್ತ ಜೀವನದ ಕೇಂದ್ರಬಿಂದು, ಅವರ ಸುತ್ತ ನಾವು ಒಂದೇ ದೇಹವಾಗಿ ಒಂದಾಗುತ್ತೇವೆ ಎಂದು ತಿಳಿಸಿದರು. ಯೂಕರಿಸ್ಟ್‌ನಲ್ಲಿ ಭಾಗವಹಿಸುವುದು ದೇವರೊಂದಿಗಿನ ಸಂಬಂಧವನ್ನು ಮಾತ್ರವಲ್ಲ, ಪರಸ್ಪರ ಪ್ರೀತಿ ಮತ್ತು ಧರ್ಮ ಸಭೆಯ ಐಕ್ಯತೆಯನ್ನು ಗಾಢಗೊಳಿಸುತ್ತದೆ ಎಂದು ಅವರು ವಿವರಿಸಿದರು.
ತಮ್ಮ ಭಾಷಣದ ಕೊನೆಯಲ್ಲಿ, ಕ್ಯಾನರಿ ದ್ವೀಪಗಳ ಕ್ರೈಸ್ತ ಇತಿಹಾಸವನ್ನು ರೂಪಿಸಿದ ಅನೇಕ ಸಂತರು ಮತ್ತು ಪವಿತ್ರ ವ್ಯಕ್ತಿಗಳ ಸಾಕ್ಷ್ಯದಿಂದ ಪ್ರೇರಣೆ ಪಡೆಯುವಂತೆ ಜಗದ್ಗುರುಗಳು ಕರೆ ನೀಡಿದರು. ವಿಶ್ವಾಸ, ಭರವಸೆ ಮತ್ತು ಪ್ರೀತಿಯಲ್ಲಿ ದೃಢವಾಗಿ ಉಳಿಯುವಂತೆ ಪ್ರೋತ್ಸಾಹಿಸಿದ ಅವರು, ಈ ಮೂರು ಸದ್ಗುಣಗಳನ್ನು “ಆಧ್ಯಾತ್ಮಿಕ ಜೀವನದ ಆಕಾಶದಲ್ಲಿ ಹೊಳೆಯುವ ಮೂರು ನಕ್ಷತ್ರಗಳು” ಎಂದು ವರ್ಣಿಸಿದರು. ಸಮುದ್ರದ ನಕ್ಷತ್ರೆ ಎಂಬ ಬಿರುದಿನ ಕನ್ಯಾ ಮರಿಯಮ್ಮನ ರಕ್ಷಣೆಗೆ ಸ್ಥಳೀಯ ಧರ್ಮ ಸಭೆಯನ್ನು ಸಮರ್ಪಿಸಿ, ಇಂದಿನ ಸವಾಲುಗಳ ನಡುವೆಯೂ ಪವಿತ್ರಾತ್ಮನ ಕೃಪೆಯಿಂದ ಐಕ್ಯತೆ ಮತ್ತು ನಂಬಿಕೆಯಲ್ಲಿ ದೃಢವಾಗಿರಲು ಅವರು ಆಶೀರ್ವದಿಸಿದರು.
