Pope Leo XIV visits Spain

ಸಗ್ರಾದ ಫಮಿಲಿಯಾ ಬಸಿಲಿಕಾದಲ್ಲಿ ಜಗದ್ಗುರು ಲಿಯೋರವರು: ಶಾಂತಿ ಸ್ಥಾಪನೆಗಾಗಿ ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ ಎಂದು ಒತ್ತಿಹೇಳಿದರು.

ಕಲ್ಲು, ಬಣ್ಣ ಮತ್ತು ಬೆಳಕಿನಿಂದ ರೂಪುಗೊಂಡ ಒಂದು ಧರ್ಮೋಪದೇಶವೆಂದು ಬಸಿಲಿಕಾವನ್ನು ವರ್ಣಿಸಿದ ಜಗದ್ಗುರುಗಳು, ದೇವರಲ್ಲಿ ನಂಬಿಕೆಯಿಟ್ಟವರು ನಿರಪರಾಧಿಗಳನ್ನು ಕೊಲ್ಲಲು ಸಾಧ್ಯವಿಲ್ಲ ಹಾಗೆಯೇ ದುಃಖಪಡುವವರನ್ನು, ಕಣ್ಣೀರು ಸುರಿಸುವವರನ್ನು ಹಾಗೂ ಬಡತನದಿಂದ ಪಲಾಯನಗೈಯುವವರನ್ನು ನಿರ್ಲಕ್ಷಿಸಲು ಕೂಡ ಸಾಧ್ಯವಿಲ್ಲ ಎಂದು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಸ್ಪೇನಿನ ಪ್ರಸಿದ್ಧ ಸಗ್ರಾದ ಫಮಿಲಿಯಾ ಬಸಿಲಿಕಾಗೆ ಭೇಟಿ ನೀಡಿದ ಜಗದ್ಗುರು XIVನೇ ಲಿಯೋರವರು ಮೊದಲು ಪರಮಪವಿತ್ರ ಸಂಸ್ಕಾರದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಈ ಭವ್ಯ ದೇವಾಲಯದ ನಿರ್ಮಾಣದ ಹಿಂದಿನ ಮಹಾನ್ ವಾಸ್ತುಶಿಲ್ಪಿ ಆಂಟೋನಿ ಗೌಡಿಯ ಸಮಾಧಿಗೆ ಗೌರವ ಸಲ್ಲಿಸಿದರು. ವಾಸ್ತುಶಿಲ್ಪ, ಬೆಳಕು, ಬಣ್ಣ ಮತ್ತು ಸಂಕೇತಗಳ ಮೂಲಕ ಕ್ರೈಸ್ತ ನಂಬಿಕೆಯನ್ನು ವ್ಯಕ್ತಪಡಿಸಿದ ಗೌಡಿಯ ದೃಷ್ಟಿಕೋನವನ್ನು ಅವರು ಸ್ಮರಿಸಿದರು.

ಗೌಡಿಯವರ ನಿಧನದ ಶತಮಾನೋತ್ಸವ ಹಾಗೂ ಯೇಸು ಕ್ರಿಸ್ತನ ಗೋಪುರದ ಆಶೀರ್ವಾದ ಸಮಾರಂಭದ ಅಂಗವಾಗಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದ ಜಗದ್ಗುರುಗಳು, ಯೋಹಾನನ ಸುವಾರ್ತೆಯಲ್ಲಿನ “ನಾನು ಆತನೆಂದು ನೀವು ನಂಬದಿದ್ದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂಬ ಯೇಸುವಿನ ಮಾತುಗಳನ್ನು ಉಲ್ಲೇಖಿಸಿದರು. ಈ ಮಾತುಗಳು ಕಠಿಣವಾಗಿ ಕಂಡರೂ, ಅವು ರಕ್ಷಣೆಯ ಆಹ್ವಾನವೆಂದು ಅವರು ವಿವರಿಸಿದರು.

ನಿಜವಾದ ಕ್ರೈಸ್ತ ನಂಬಿಕೆ ಹಿಂಸೆ, ಯುದ್ಧ ಮತ್ತು ನಿರ್ಲಕ್ಷ್ಯದೊಂದಿಗೆ ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದು ಜಗದ್ಗುರುಗಳು ಒತ್ತಿಹೇಳಿದರು. “ಯೇಸುವಿನಲ್ಲಿ ನಂಬಿಕೆಯಿಟ್ಟು ಯುದ್ಧ ಮಾಡುವುದು ಸಾಧ್ಯವಿಲ್ಲ, ಯೇಸುವಿನಲ್ಲಿ ನಂಬಿಕೆಯಿಟ್ಟು ನಿರಪರಾಧಿಗಳನ್ನು ಕೊಲ್ಲುವುದು ಸಾಧ್ಯವಿಲ್ಲ, ಯೇಸುವಿನಲ್ಲಿ ನಂಬಿಕೆಯಿಟ್ಟು ದುಃಖಿಸುವವರನ್ನು, ಅಳುವವರನ್ನು ಮತ್ತು ಬಡತನದಿಂದ ಪಲಾಯನಗೈಯುವವರನ್ನು ತ್ಯಜಿಸುವುದು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಸ್ಪೇನಿನ ರಾಜ VIನೇ ಫೆಲಿಪೆ, ರಾಣಿ ಲೆಟಿಜಿಯಾ, ಹಾಗೂ ಪೆಡ್ರೊ ಸ್ಯಾಂಚೆಜ್ ಸೇರಿದಂತೆ ನಾಗರಿಕ ಮತ್ತು ಧಾರ್ಮಿಕ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸಗ್ರಾದ ಫಮಿಲಿಯಾ ತನ್ನ ಬಾಗಿಲುಗಳನ್ನು ಚಾಚಿದ ಕೈಗಳಂತೆ ಎಲ್ಲರಿಗೂ ತೆರೆದಿಟ್ಟಿದೆ ಎಂದು ಹೇಳಿದರು. ದೇವರ ವಾಕ್ಯ ಮತ್ತು ಪವಿತ್ರ ಯೂಕರಿಸ್ಟ್ ಮೂಲಕ ದೇವರ ಕುಟುಂಬವಾಗಿ ಒಂದಾಗುವ ಸ್ಥಳವೇ ಈ ಬಸಿಲಿಕಾ ಎಂದು ಅವರು ವಿವರಿಸಿದರು.

ಈ ಬಸಿಲಿಕಾದ ವಾಸ್ತುಶಿಲ್ಪದ ಆಳವಾದ ಆಧ್ಯಾತ್ಮಿಕ ಅರ್ಥವನ್ನು ವಿವರಿಸಿದ ಜಗದ್ಗುರು, ಧರ್ಮ ಸಭೆಯನ್ನು ಅನೇಕ ಕಲ್ಲುಗಳಿಂದ ನಿರ್ಮಿತವಾದ ಜೀವಂತ ಕಟ್ಟಡಕ್ಕೆ ಹೋಲಿಸಿದರು. ಕ್ರಿಸ್ತನೇ ಅದರ ಅಡಿಪಾಯ ಮತ್ತು ಗುರಿಯಾಗಿದ್ದು, ಇನ್ನೂ ಮುಂದುವರಿಯುತ್ತಿರುವ ಬಸಿಲಿಕಾದ ನಿರ್ಮಾಣವು ದೇವರು ನಿರಂತರವಾಗಿ ಪೂರ್ಣಗೊಳಿಸುತ್ತಿರುವ ಕ್ರೈಸ್ತ ಜೀವನದ ಪ್ರತೀಕವಾಗಿದೆ ಎಂದು ಹೇಳಿದರು. ಹೊಸದಾಗಿ ಆಶೀರ್ವದಿಸಲ್ಪಟ್ಟ ಯೇಸು ಕ್ರಿಸ್ತನ ಗೋಪುರದ ಮೇಲಿರುವ ಪ್ರಕಾಶಮಾನವಾದ ಶಿಲುಬೆಯು ವಿಮೋಚನೆ, ಭರವಸೆ ಮತ್ತು ದೇವರ ಪ್ರೀತಿಯ ಸಂಕೇತವಾಗಿ ನಗರಕ್ಕೆ ನಂಬಿಕೆಯ ಬೆಳಕಾಗುತ್ತದೆ ಎಂದರು.

ತಮ್ಮ ಪ್ರವಚನದ ಕೊನೆಯಲ್ಲಿ, ಸಗ್ರಾದ ಫಮಿಲಿಯಾದ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಜಗದ್ಗುರುಗಳು ಕೃತಜ್ಞತೆ ಸಲ್ಲಿಸಿದರು. ಈ ದೇವಾಲಯವು ಕೇವಲ ವಾಸ್ತುಶಿಲ್ಪದ ಅದ್ಭುತವಲ್ಲ, ಸುವಾರ್ತಾ ಪ್ರಚಾರದ ಶಕ್ತಿಯುತ ಸಾಧನವೂ ಆಗಿದೆ ಎಂದು ಹೇಳಿದರು. ಕ್ರೈಸ್ತರು ತಮ್ಮ ದೃಷ್ಟಿಯನ್ನು ಕ್ರಿಸ್ತನ ಕಡೆಗೆ ಮಾತ್ರವಲ್ಲ, ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಬಡವರು, ದುಃಖಿತರು ಮತ್ತು ನಿರ್ಲಕ್ಷಿತವರ ಕಡೆಗೂ ಹರಿಸಬೇಕು ಎಂದು ಕರೆ ನೀಡಿದರು. ಭರವಸೆ, ಪ್ರೀತಿ ಮತ್ತು ಸೇವೆಯ ಸಂದೇಶವನ್ನು ಜೀವನದಲ್ಲಿ ಸಾಕ್ಷ್ಯಪಡಿಸುವಂತೆ ಅವರು ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದರು.

10 ಜೂನ್ 2026, 21:21